ಗ್ರಾಮ ಪಂಚಾಯಿತಿ ನೌಕರರ ವಿಜಯೋತ್ಸವ

7
ವಿದ್ಯುನ್ಮಾನ ವ್ಯವಸ್ಥೆಯಡಿ ಹಣ ವರ್ಗಾವಣೆ ಮೂಲಕ ನೌಕರರ ವೇತನ ಪಾವತಿಗೆ ಸರ್ಕಾರದ ಆದೇಶ

ಗ್ರಾಮ ಪಂಚಾಯಿತಿ ನೌಕರರ ವಿಜಯೋತ್ಸವ

Published:
Updated:
ಗ್ರಾಮ ಪಂಚಾಯಿತಿ ನೌಕರರ ವಿಜಯೋತ್ಸವ

ಚಿಕ್ಕಬಳ್ಳಾಪುರ: ಗ್ರಾಮ ಪಂಚಾ ಯಿತಿಗಳಲ್ಲಿ ಕಾರ್ಯ ನಿರ್ವಹಿ ಸುತ್ತಿರುವ ಎಲ್ಲ ನೌಕರರಿಗೆ ‘ಇ–ಎಫ್‌ಎಂಎಸ್‌’ (ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಮೂಲಕ ವೇತನ ಪಾವತಿ ಮಾಡಲು ರಾಜ್ಯ ಸರ್ಕಾರ ಕ್ರಮಕೈಗೊಂಡ ಕಾರಣ ನಗರದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ವಿಜಯೋತ್ಸವ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಜಿ.ಸಿದ್ಧಗಂಗಪ್ಪ, ‘ಪಂಚಾಯಿತಿ ನೌಕರರು ಸಂಬಳವನ್ನು ಬ್ಯಾಂಕ್ ಖಾತೆಗೆ ಪಾವತಿಸುವಂತೆ ಒತ್ತಾಯಿಸಿ ನೌಕರರು ಕಳೆದ 25 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದುದರ ಫಲವಾಗಿ ಇದೀಗ ಸರ್ಕಾರ ಇ-ಎಫ್‌ಎಂಎಸ್‌ ವ್ಯವಸ್ಥೆ ಜಾರಿಗೆ ತಂದಿದೆ’ ಎಂದು ಹೇಳಿದರು.

‘ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಜಲಗಾರ, ಜವಾನ, ಬಿಲ್ ವಸೂಲಿಗಾರ, ಕಂಪ್ಯೂಟರ್ ಆಪರೇಟರ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದ 1,720 ನೌಕರರಿಗೆ ಸರ್ಕಾರ ಕನಿಷ್ಠ ಕೂಲಿ ಜಾರಿಗೊಳಿಸಿ ಕನಿಷ್ಠ ವೇತನ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಿರುವುದು ನೌಕರರ ಪಾಲಿಗೆ ಐತಿಹಾಸಿಕ ವಿಜಯ. ಇದರಿಂದ ಗ್ರಾಮ ಪಂಚಾಯಿತಿ ಆದಾಯವನ್ನು ಆಧರಿಸಿ ಆರೇಳು ತಿಂಗಳಿಗೊಮ್ಮೆ ಸಂಬಳ ಪಡೆಯಬೇಕಾದ ಸಂಕಷ್ಟ ತಪ್ಪಿದೆ’ ಎಂದು ತಿಳಿಸಿದರು.

‘ಈ ಹಿಂದೆ ನೌಕರರಿಗೆ ಸಂಬಳ ಪಡೆಯಲು ಇದ್ದ ಪಡಿಪಾಟಲುಗಳು ಇವತ್ತು ನಿವಾರಣೆಯಾಗಿವೆ. ಸಂಬಳ ನೇರವಾಗಿ ಖಾತೆಗೆ ಜಮೆ ಆಗುವುದರಿಂದ ನೌಕರರಲ್ಲಿ ನೆಮ್ಮದಿ ಮೂಡಿದೆ. ನಾವು ಇಷ್ಟಕ್ಕೆ ಸುಮ್ಮನಾಗಬಾರದು. ಇನ್ನೂ ಈಡೇರಬೇಕಾಗಿರುವ ಸಮಸ್ಯೆಗಳತ್ತ ಗಮನ ಹರಿಸಿ ಹೋರಾಟ ರೂಪಿಸಬೇಕಿದೆ’ ಎಂದರು.

ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ, ‘ಗ್ರಾಮ ಪಂಚಾಯಿತಿ ನೌಕರರಿಗೆ ದೊರೆತಿರುವ ಈ ಸೌಲಭ್ಯ ದೊಡ್ಡ ಗೆಲುವಾಗಿದೆ. ಕಷ್ಟಪಟ್ಟು ಸಾರ್ವಜನಿಕರ ಸೇವೆ ಮಾಡುವ ನೌಕರರ ಹೋರಾಟಕ್ಕೆ ಜಯ ದೊರೆತಿದೆ’ ಎಂದು ಹೇಳಿದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ಸಿಐಟಿಯು ನೇತೃತ್ವದಲ್ಲಿ ಹೋರಾಟ ನಡೆಸಿದ ಕಾರಣಕ್ಕೆ ಇವತ್ತು ನಮಗೆ ತಾತ್ಕಾಲಿಕ ಗೆಲುವು ದೊರೆತಿದೆ. ಅಸಮಾನತೆಯ ವಿರುದ್ಧ ಹೋರಾಟವೇ ವಿನಾ ಬೇರೆ ದುರುದ್ದೇಶವಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಹಗಲಿರುಳು ಶ್ರಮಿಸುವ ನಮ್ಮ ಸೇವೆಯನ್ನು ಇಷ್ಟು ವರ್ಷಗಳ ನಂತರ ಸರ್ಕಾರ ಗುರುತಿಸಿದೆ’ ಎಂದು ತಿಳಿಸಿದರು.

ಮುಖಂಡರಾದ ಗೋವಿಂದರೆಡ್ಡಿ, ಪಾಪಣ್ಣ, ಎನ್ ನಾರಾಯಣಸ್ವಾಮಿ, ಜಿ.ಎನ್.ನಾಗರಾಜು, ಸುದರ್ಶನ, ಕೆ.ಎನ್.ಪಾಪಣ್ಣ, ವೆಂಕಟರಾಮಯ್ಯ, ಅಶೋಕ್ ಉಪಸ್ಥಿತರಿದ್ದರು.

ಹೋರಾಟಕ್ಕೆ ಸಂದ ಗೆಲುವು

ಶಿಡ್ಲಘಟ್ಟ:
ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸರ್ಕಾರದಿಂದ ವೇತನ ಪಾವತಿ ಮಾಡುವ ಆದೇಶವು ತಮ್ಮ ಹೋರಾಟಕ್ಕೆ ಸಂದ ಜಯ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಎ.ಸುದರ್ಶನ್‌ ತಿಳಿಸಿದರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಗ್ರಾಮ ಪಂಚಾಯಿತಿ ನೌಕರರೊಂದಿಗೆ ಸೋಮವಾರ ವಿಜಯೋತ್ಸವ ಆಚರಿಸಿ ಅವರು ಮಾತನಾಡಿದರು.

‘ಸಂಘಟನೆಯಿಂದ ಕನಿಷ್ಠ ವೇತನಕ್ಕಾಗಿ ಹೋರಾಟ ನಡೆಸಿದ್ದೇವೆ. ಹೋರಾಟದಲ್ಲಿ ನೌಕರರು ಪೊಲೀಸರ ಲಾಠಿ ಏಟು ತಿಂದಿದ್ದಾರೆ. ಕೆಲವರು ಜೈಲು ಸೇರಿದ್ದರು. ಅವರೆಲ್ಲರ ತ್ಯಾಗ, ಹೋರಾಟದ ಫಲವಾಗಿ ಸರ್ಕಾರ ಬೇಡಿಕೆ ಈಡೇರಿಸಿದೆ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ದೇವಪ್ಪ, ಗಂಗಪ್ಪ, ಜನಾರ್ದನ್‌, ಚನ್ನಪ್ಪ, ರಾಮೇಗೌಡ, ರಾಮಕೃಷ್ಣಪ್ಪ, ಶಶಿಕುಮಾರ್‌, ಮುನಿಯಪ್ಪ ಇದ್ದರು.

*

ಇದು ನಮಗೆ ತಾತ್ಕಾಲಿಕ ಗೆಲುವು, ಈ ಸಂಭ್ರಮ ಇಲ್ಲಿಗೆ ಕೊನೆಗೊಳ್ಳಬಾರದು. ಅನೇಕ ವಿಚಾರಗಳಲ್ಲಿ ನಾವು ಹೋರಾಟ ಮುಂದುವರಿಸಬೇಕಾಗಿದೆ.

- ಜಿ.ಸಿದ್ಧಗಂಗಪ್ಪ,

ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry