ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜ್ರದ ಉಂಗುರ ತೊಡಿಸಿ ಶಾಸಕರಿಗೆ ಸನ್ಮಾನ

ಬೆನಕನಹಳ್ಳಿ: ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ
Last Updated 13 ಮಾರ್ಚ್ 2018, 7:45 IST
ಅಕ್ಷರ ಗಾತ್ರ

ಹೊನ್ನಾಳಿ: ‘ನನ್ನ ರಾಜಕೀಯ ಇತಿಹಾಸದಲ್ಲಿ ಹಕ್ಕುಪತ್ರ ವಿತರಣೆಯಂತಹ ಕಾರ್ಯಕ್ರಮ ಅಪರೂಪ ಮತ್ತು ವಿಶೇಷವಾಗಿದೆ’ ಎಂದು ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯಪಟ್ಟರು.

ಹುಟ್ಟೂರು ಬೆನಕನಹಳ್ಳಿಯಲ್ಲಿ 333 ಬಗರ್‌ಹುಕುಂ ಸಾಗುವಳಿದಾರರಿಗೆ ಸೋಮವಾರ ಸಾಗುವಳಿ ಚೀಟಿ ವಿತರಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ 159 ಚುನಾವಣಾ ಭರವಸೆಗಳನ್ನು ಈಡೇರಿಸಿದ್ದಾರೆ. ಅವುಗಳಲ್ಲಿ ಇದೂ ಒಂದಾಗಿದೆ. ತಾಲ್ಲೂಕಿನಲ್ಲಿ ಒಟ್ಟು 1,900 ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲಾಗಿದೆ. ಬಾಕಿ ಉಳಿದಿರುವ ಶೇ 10ರಷ್ಟು ಸಾಗುವಳಿದಾರರಿಗೂ ಶೀಘ್ರವೇ ಹಕ್ಕುಪತ್ರ ನೀಡಲಾಗುವುದು’ ಎಂದರು.

‘ನಮ್ಮ ಸರ್ಕಾರ ಸಾಗುವಳಿ ಚೀಟಿ ವಿತರಿಸದಂತೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆದರೆ, ಸರ್ಕಾರ ಕಾನೂನು ತೊಡಕುಗಳನ್ನು ಸರಿಪಡಿಸಿಕೊಂಡು ಸಾಗುವಳಿ ಚೀಟಿ ನೀಡುತ್ತಿದೆ’ ಎಂದು ಹೇಳಿದರು.

‘ದೇಶದಲ್ಲಿ ಉಳುವವನೇ ಭೂ ಒಡೆಯ, ವಾಸಿಸುವವನೇ ನೆಲದೊಡೆಯ ಎಂಬ ಕಾನೂನನ್ನು ಜಾರಿಗೆ ತಂದಿರುವುದು ನಮ್ಮ ರಾಜ್ಯದಲ್ಲಿ ಮಾತ್ರ’ ಎಂದು ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು.

‘ತಾಲ್ಲೂಕಿನ ಅಭಿವೃದ್ಧಿಗೆ ರಾಜ್ಯದ 38 ಇಲಾಖೆಗಳಿಗೂ ಭೇಟಿ ನೀಡಿ ಅನುದಾನ ತಂದು ಕೆಲಸ ಮಾಡಿದ್ದೇನೆ. ತಾಲ್ಲೂಕಿನ ಬಹುತೇಕ ರಸ್ತೆ ಅಭಿವೃದ್ಧಿ, ಕುಡಿಯುವ ಶುದ್ಧ ನೀರಿನ ಘಟಕಗಳ ಸ್ಥಾಪನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಸಾಕಷ್ಟು ಸಾಧನೆ ಮಾಡಿದ ತೃಪ್ತಿಯಿದೆ’ ಎಂದರು.

ತಹಶೀಲ್ದಾರ್ ಎನ್.ಜೆ. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಗರ್‌ಹುಕುಂ ಸಮಿತಿ ಸದಸ್ಯ ಕ್ಯಾಸಿನಕೆರೆ ಶೇಖರಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರುದ್ರೇಶಪ್ಪ, ಗ್ರಾಮದ ಹಿರಿಯ ಮುಖಂಡ ಟಿ.ಜಿ. ಮಲ್ಲೇಶಪ್ಪ ಹಾಗೂ ಗಣೇಶ್ ಮಾತನಾಡಿದರು.

ವಜ್ರದುಂಗುರ ಉಡುಗೊರೆ: ಗ್ರಾಮಸ್ಥರು ಶಾಂತನಗೌಡರಿಗೆ ವಜ್ರದ ಉಂಗುರವನ್ನು ತೊಡಿಸಿ ಸನ್ಮಾನಿಸಿದರು. ಜೊತೆಗೆ ತಹಶೀಲ್ದಾರ್ ನಾಗರಾಜ್ ಹಾಗೂ ಕಂದಾಯ ಇಲಾಖೆಯ ಮಂಜುನಾಥ್ ಇಂಗಳಗೊಂದಿ, ಪರಮೇಶ್ ನಾಯ್ಕ, ಸಂತೋಷ್ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ಬೆನಕನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಜಗದೀಶ್, ಸದಸ್ಯರಾದ ಮಂಜುಳಾ ಗಣೇಶ್, ರೂಪಾ, ಮಂಜೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT