ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಗರು ಪುಟ್ಟಿ ಫುಲ್‌ ಖುಷ್‌!

Last Updated 13 ಮಾರ್ಚ್ 2018, 8:17 IST
ಅಕ್ಷರ ಗಾತ್ರ

‘ಮೊನ್ನೆ ಯಾವ್ದೋ ಕಾಲೇಜಿಗೆ ಹೋಗಿದ್ದೆ. ಅಲ್ಲಿ ಸ್ಟುಡೆಂಟ್ಸ್‌ ನನ್ನ ನೋಡಿದ ಕೂಡ್ಲೇ ಪುನರ್ವಸು... ಪುನರ್ವಸು... ಅಂತ ಒಂದೇ ಸಮನೆ ಕೂಗೋಕೆ ಶುರುಮಾಡಿದ್ರು. ಫ್ಯಾನ್‌ ಫಾಲೊವರ್ಸ್‌ ಎಷ್ಟು ಹೆಚ್ಚಾಗಿದಾರೆ ಅಂದ್ರೆ ಒಬ್ಬೊಬ್ಳೆ ಹೊರಗಡೆ ಹೋಗೋದೇ ಕಷ್ಟ ಆಗ್ಬಿಟ್ಟಿದೆ. ಕಾರಿಗೆ ಪೆಟ್ರೋಲ್‌ ಹಾಕಿಸೋಕೆ ಹೊರಗೆ ಬಂದ್ರೂ ಜನ ಮುತ್ಕೋತಾರೆ...’

‘ಟಗರು’ ಚಿತ್ರದ ನಂತರ ತಮ್ಮ ಬದುಕಿನಲ್ಲಾದ ಬದಲಾವಣೆಗಳ ಬಗ್ಗೆ ಮಾನ್ವಿತಾ ಹರೀಶ್‌ ಉತ್ಸಾಹದಿಂದಲೇ ಹೇಳುತ್ತಲೇ ಇದ್ದರು. ಗೆಲುವಿನ ಹುಮ್ಮಸ್ಸು ಮತ್ತು ಜನರ ಪ್ರೀತಿಯ ಕುರಿತು ಕೃತಜ್ಞತೆ ಎರಡೂ ಅವರ ಮಾತಿನಲ್ಲಿ ತುಳುಕುತ್ತಿತ್ತು.

‘ಕೆಂಡಸಂಪಿಗೆ’ ಚಿತ್ರದಿಂದ ಜನಪ್ರಿಯರಾಗಿದ್ದರೂ ಆ ಚಿತ್ರದ ನಂತರ ಮಾನ್ವಿತಾ ಹರೀಶ್‌ಗೆ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿಕೊಳ್ಳಲು ಮಹತ್ವದ ಅವಕಾಶ ಸಿಕ್ಕಿರಲಿಲ್ಲ. ‘ಕನಕ ಚಿತ್ರದಲ್ಲಿ ಒಳ್ಳೆಯ ಪಾತ್ರವೇ ಸಿಕ್ಕಿದ್ದರೂ ಡಬ್ಬಿಂಗ್‌ ಬೇರೆಯವರು ಮಾಡಿದ್ದರಿಂದ ಪಾತ್ರದ ಸಮತೋಲನ ತಪ್ಪಿತು’ ಎಂಬ ಬೇಸರವೂ ಅವರಿಗಿತ್ತು.

ಆದರೆ ಆ ಎಲ್ಲ ಬೇಸರಗಳನ್ನು ಮರೆತು ಅವರೀಗ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಅದಕ್ಕೆ ಕಾರಣ ‘ಟಗರು’. ಈ ಚಿತ್ರದ ಪಾತ್ರಕ್ಕೆ ಜನರಿಂದ ಸಿಕ್ಕ ಸ್ಪಂದನ ಅವರನ್ನು ಸಂತೃಪ್ತಗೊಳಿಸಿದೆಯಂತೆ. ಈಗ ಕುಂತಲ್ಲಿ ನಿಂತಲ್ಲಿಯೆಲ್ಲ ಅವರಿಗೆ ‘ಮೆಂಟಲ್‌ ಹೋ ಜಾವಾ..’ ಹಾಡೇ ಕೇಳುತ್ತಿದೆ. ಟಕಿಲಾ ಶಾಟ್‌ ಅನ್ನು ಸಾಲ್ಟ್‌ ನೆಚ್ಚಿಕೊಂಡು ಕುಡಿದಂಥ ಅಮಲು ಅವರನ್ನು ಆವರಿಸಿದೆ. ಅಲ್ಲದೆ ಈ ಚಿತ್ರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಗರಿಂದ ‘ಟಗರು ಪುಟ್ಟಿ’ ಎಂಬ ಅಡ್ಡನಾಮವನ್ನೂ ಅವರು ಸಂಪಾದಿಸಿಕೊಂಡಿದ್ದಾರೆ.‌

‘ತುಂಬ ಪ್ರಬುದ್ಧವಾಗಿ ಅಭಿನಯಿಸಿದ್ದೀಯಾ ಎಂದು ತುಂಬ ಜನರು ಹೇಳುತ್ತಿದ್ದಾರೆ. ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಇದರಲ್ಲಿ ಸಾಕಷ್ಟು ಬೆಳೆದಿದ್ದೇನೆ. ಹಾಗಿದ್ದೂ ಇದು ನನ್ನ ಬೆಸ್ಟ್‌ ಎಂದು ನಾನು ಅಂದುಕೊಂಡಿಲ್ಲ. ಇದಕ್ಕಿಂತ ಉತ್ತಮವಾಗಿಯೂ ನಾನು ನಟಿಸಬಲ್ಲೆ. ನಟಿಸಬೇಕು ಎಂದು ಆಸೆಯೂ ಇದೆ’ ಎಂದು ಬೆಳೆಯುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ ಮಾನ್ವಿತಾ.

ಜನಪ್ರಿಯತೆ ಅಷ್ಟೇ ಅಲ್ಲ, ಅವಕಾಶಗಳೂ ಸಾಲು ಸಾಲಾಗಿ ಅವರನ್ನು ಅರಸಿಕೊಂಡು ಬರುತ್ತಿವೆಯಂತೆ. ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು ಭಾಷೆಗಳ ದೊಡ್ಡ ನಟರ ಜತೆಗೂ ನಟಿಸುವ ಅವಕಾಶ ತೆರೆದುಕೊಳ್ಳುತ್ತಿದೆ ಎಂದು ಅವರು ಖುಷಿಯಿಂದಲೇ ಹೇಳಿಕೊಳ್ಳುತ್ತಾರೆ.

‘ನಾನು ಬದುಕಿನಲ್ಲಿ ತುಂಬ ಪ್ಲ್ಯಾನ್‌ ಮಾಡುತ್ತಿದ್ದೆ. ಆದರೆ ಟಗರು ಸಿನಿಮಾ ಯಶಸ್ಸನ್ನು ನೋಡಿ ಮೂಕವಿಸ್ಮಿತಳಾಗಿದ್ದೇನೆ. ನಾವು ಏನೆಲ್ಲಾ ಯೋಜನೆ ಹಾಕಿಕೊಂಡರೂ ಅದು ಫಲಕಾರಿ ಆಗುತ್ತದೆ ಎಂದು ಹೇಳಲು ಬರುವುದಿಲ್ಲ. ಎಲ್ಲವನ್ನೂ ದೇವರು ಎಂಬ ಶಕ್ತಿಗೆ ಬಿಟ್ಟು ಅದು ನಡೆಸಿದ ಹಾಗೆ ನಡೆಯುವುದೇ ಒಳ್ಳೆಯದು ಎಂದು ಅನಿಸುತ್ತಿದೆ. ನಮ್ಮ ಬದುಕಿನ ಬಗ್ಗೆ ದೇವರೇ ಒಂದು ಪ್ಲ್ಯಾನ್‌ ಮಾಡಿರುತ್ತಾನೆ. ನಾವು ಮತ್ತೆ ತುಂಬ ತಲೆಕೆಡಿಸಿಕೊಂಡು ಪ್ಲ್ಯಾನ್‌ ಮಾಡಲು ಹೊರಟರೆ ಅವನ ಪ್ಲ್ಯಾನ್‌ ಮತ್ತು ನಮ್ಮ ಪ್ಲ್ಯಾನ್‌ ಎರಡೂ ಡಿಕ್ಕಿ ಆಗಬಹುದು. ಆದ್ದರಿಂದ ಪ್ಲ್ಯಾನ್‌ ಮಾಡುವ ತಲೆಬಿಸಿಯನ್ನು ಬಿಟ್ಟು ಬದುಕು ಹೇಗೆ ಎಲ್ಲಿಗೆ ಕೊಂಡೊಯ್ಯುತ್ತದೆಯೋ ಅತ್ತ ಹೋಗುವುದೇ ಸರಿ ಎಂದು ಅನಿಸಿದೆ’ ಎಂದು ಭಾವುಕವಾಗಿ ನುಡಿಯುವ ಅವರು ‘ಹಾಗೆಂದು ನನ್ನ ಬದ್ಧತೆ ಮತ್ತು ಪರಿಶ್ರಮದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ನನ್ನ ಕರ್ತವ್ಯವನ್ನು ನಾನು ಮಾಡಿಯೇ ಮಾಡುತ್ತೇನೆ’ ಎನ್ನಲು ಮರೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT