ಕ್ಷೇತ್ರದಲ್ಲಿ ಕೆಲಸ ಮಾಡುವೆ: ಶಾಸಕ ಅಂಬರೀಷ್‌

7

ಕ್ಷೇತ್ರದಲ್ಲಿ ಕೆಲಸ ಮಾಡುವೆ: ಶಾಸಕ ಅಂಬರೀಷ್‌

Published:
Updated:
ಕ್ಷೇತ್ರದಲ್ಲಿ ಕೆಲಸ ಮಾಡುವೆ: ಶಾಸಕ ಅಂಬರೀಷ್‌

ಮಂಡ್ಯ: ‘ಅನಾರೋಗ್ಯದಿಂದ ಕ್ಷೇತ್ರದ ಕಡೆ ಬರಲು ಸಾಧ್ಯವಾಗಲಿಲ್ಲ. ಈಗ ಚೇತರಿಸಿಕೊಂಡಿದ್ದು, ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ’ ಎಂದು ಶಾಸಕ ಅಂಬರೀಷ್‌ ಇಲ್ಲಿ ಸೋಮವಾರ ಹೇಳಿದರು. ಅಂಬೇಡ್ಕರ್‌ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಚುನಾವಣೆ ಸಂದರ್ಭದಲ್ಲಿ ಅಂಬರೀಷ್‌ ಕ್ಷೇತ್ರಕ್ಕೆ ಬರುತ್ತಿದ್ದಾರೆ ಎಂದು ತಪ್ಪು ತಿಳಿದುಕೊಳ್ಳಬಾರದು. ಆರೋಗ್ಯ ಸಮಸ್ಯೆ ಇದ್ದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡ ಹಲವು ಕಾರ್ಯ ಕ್ರಮಗಳಿಗೂ ಬರಲು ಆಗಲಿಲ್ಲ. ಈಗ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ಇನ್ನು ಮುಂದೆ ಕ್ಷೇತ್ರದಲ್ಲಿ ಇದ್ದು ಕೆಲಸ ಮಾಡುತ್ತೇನೆ’ ಎಂದರು.

‘ನಾನು ಮಂಡ್ಯಕ್ಕೆ ಬಾರದಿದ್ದರೂ ಹಲವು ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ. ಜಿಲ್ಲೆಯ ಜನರು ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ. ಪ್ರಪಂಚದಲ್ಲಿ ಎಲ್ಲೇ ಹೋದರೂ ನನ್ನನ್ನು ಮಂಡ್ಯದ ಗಂಡು ಎಂದೇ ಗುರುತಿಸುತ್ತಾರೆ. ಹೀಗಾಗಿ ಕ್ಷೇತ್ರವನ್ನು ಎಂದೂ ಮರೆಯುವುದಿಲ್ಲ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ರಾಜ್ಯಕ್ಕೆ ಮಹತ್ವ ಕೊಡುತ್ತಿಲ್ಲ. ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಬಿಜೆಪಿ ಸಂಸದರು ಇಲ್ಲದಿದ್ದರೂ ಆ ರಾಜ್ಯಗಳಿಗೆ ಪ್ರಧಾನಮಂತ್ರಿ ಬಹಳ ಮಹತ್ವ ಕೊಡುತ್ತಾರೆ. ಆದರೆ, ರಾಜ್ಯದಲ್ಲಿ 17 ಜನ ಬಿಜೆಪಿ ಸಂಸದರಿದ್ದಾರೆ, ಆದರೂ ಕೇಂದ್ರ ಸರ್ಕಾರ ನಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ. ಎಲ್ಲವನ್ನೂ ನಾವು ಹೋರಾಟ ಮಾಡಿ ಪಡೆದುಕೊಳ್ಳಬೇಕಾಗಿದೆ. ಇದು ನಮ್ಮ ದುರ್ದೈವ’ ಎಂದು ಹೇಳಿದರು.

ಟಿಕೆಟ್‌ ನೀಡಿದರೆ ಸ್ಪರ್ಧೆ: ಸುದ್ದಿಗಾರರ ಜತೆ ಮಾತನಾಡಿ ‘ನನಗೆ ಟಿಕೆಟ್‌ ನೀಡುವ ವಿಚಾರ ಇನ್ನೂ ಅಂತಿಮವಾಗಿಲ್ಲ. ಪಕ್ಷದ ಹೈಕಮಾಂಡ್‌ ತೀರ್ಮಾನಿಸುತ್ತದೆ. ಬೇರೆಯವರಿಗೆ ಬಿಟ್ಟುಕೊಡುವಂತೆ ಸೂಚನೆ ಬಂದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧ. ಟಿಕೆಟ್‌ ಕೊಟ್ಟರೆ ಸ್ಪರ್ಧಿಸುತ್ತೇನೆ. ಟಿಕೆಟ್‌ ನೀಡದಿದ್ದರೂ ಬೇಸರವಿಲ್ಲ. ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry