ಮದುವೆ, ನಾಮಕರಣಗಳಿಗೂ ಭವನ

7
ದಶಕದಿಂದ ನನೆಗುದಿಗೆ ಬಿದ್ದಿದ್ದ ಭವನಕ್ಕೆ ಚಾಲನೆ; ಸಚಿವ ಎಚ್‌.ಆಂಜನೇಯ ಅಭಿಮತ

ಮದುವೆ, ನಾಮಕರಣಗಳಿಗೂ ಭವನ

Published:
Updated:
ಮದುವೆ, ನಾಮಕರಣಗಳಿಗೂ ಭವನ

ಮಂಡ್ಯ: ‘ಎಲ್ಲ ಸಮಾಜಗಳ ಸಮಾವೇಶಗಳು, ನಾಡಹಬ್ಬ, ಮದುವೆ, ನಾಮಕರಣ ಮುಂತಾದ ಕಾರ್ಯಕ್ರಮಗಳಿಗೆ ಅಂಬೇಡ್ಕರ್‌ ಭವನವನ್ನು ಬಾಡಿಗೆ ನೀಡಲಾಗುವುದು’ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಎಚ್‌. ಆಂಜನೇಯ ಹೇಳಿದರು.

ಸುಭಾಷ್‌ ನಗರದಲ್ಲಿ ನಿರ್ಮಾಣ ಮಾಡಲಾಗಿರುವ ಅಂಬೇಡ್ಕರ್‌ ಭವನ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು.

‘ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಂಬೇಡ್ಕರ್‌ ಭವನ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಭವನದ ಕಾಮಗಾರಿಗೆ ₹ 9 ಕೋಟಿ, ನಗರಸಭೆ ₹ 3 ಕೋಟಿ ಹಣ ನೀಡಿದೆ. ರಾಜ್ಯದಲ್ಲೇ ಉತ್ತಮವಾದ ಭವನ ಮಂಡ್ಯಕ್ಕೆ ಸಿಕ್ಕಿದೆ. ಜನರು ಸದುಪಯೋಗ ಮಾಡಿಕೊಳ್ಳಬೇಕು. ಭವನ ಕೇವಲ ಒಂದು ವರ್ಗಕ್ಕೆ, ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಸಮಾಜದ ಜನರು ತಮ್ಮ ಸಮುದಾಯದ ಕಾರ್ಯಕ್ರಮಗಳಿಗಾಗಿ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ. ಡಾ.ಬಿ.ಆರ್‌.ಅಂಬೇಡ್ಕರ್‌, ಬಾಬು ಜಗಜೀವನರಾಂ‌, ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರಿನಲ್ಲಿ ನೂರಾರು ವಸತಿ ಶಾಲೆಗಳನ್ನು ಸ್ಥಾಪಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಅಂಬೇಡ್ಕರ್‌ ಅವರು ಲಂಡನ್‌ನಲ್ಲಿ ಅಧ್ಯಯನ ಮಾಡಿದ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಮಾದರಿಯಲ್ಲಿ ಬೆಂಗಳೂರಿನಲ್ಲಿ 44 ಎಕರೆ ಜಾಗದಲ್ಲಿ ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆ ಸ್ಥಾಪನೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಶಿಕ್ಷಣ, ಸಂಘಟನೆ, ಹೋರಾಟ: ‘ಯಾವುದೇ ಸಮಾಜ ಅಭಿವೃದ್ಧಿ ಸಾಧಿಸಬೇಕಾದರೆ ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಮಹತ್ವ ನೀಡಬೇಕು ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಹೇಳಿದ್ದಾರೆ. ಶೋಷಿತರು ಎಲ್ಲಾ ಸಮಾಜಗಳಲ್ಲಿ ಇದ್ದಾರೆ. ಅವರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಮೊದಲು ಶಿಕ್ಷಣ ಪಡೆಯಬೇಕು. ಸಮಾಜದ ಸಂಘಟನೆ ಮಾಡಬೇಕು. ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಬೇಕು. ಅಂಬೇಡ್ಕರ್‌ ನೀಡಿರುವ ಸಂವಿಧಾನದ ಹಾದಿಯಲ್ಲಿ ಎಲ್ಲರೂ ನಡೆಯಬೇಕು. ಆದರೆ ಕೆಲವರು ಸಂವಿಧಾನ ಬದಲಿಸುವ ಮಾತುಗಳನ್ನಾಡುತ್ತಿರುವುದು ದುರದೃಷ್ಟಕರ’ ಎಂದು ಹೇಳಿದರು.

‘ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಅವರು ನಗರದಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿನಿಲಯ ನಿರ್ಮಾಣ ಮಾಡಲಾಗಿದೆ. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಅವಕಾಶ ನೀಡಲಾಗಿದೆ. ಒಂದು ವೇಳೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸರ್ಕಾರಿ ಸೌಲಭ್ಯ ನೀಡಲು ನಿರಾಕರಿಸಿದರೆ ಅವರನ್ನು ಜೈಲಿಗೆ ಕಳುಹಿಸುವ ಅವಕಾಶ ಇದೆ’ ಎಂದು ಹೇಳಿದರು.

ಶಾಸಕ ಅಂಬರೀಷ್‌ ಮಾತನಾಡಿ, ‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಮನಷ್ಯ ಮನುಷ್ಯನಾಗಿ ವರ್ತಿಸಬೇಕು ಎಂದು ಸಂವಿಧಾನದಲ್ಲಿ ಹೇಳಿದ್ದಾರೆ. ಎಲ್ಲರೂ ಸಂವಿಧಾನಕ್ಕೆ ಅರ್ಥ ಬರುವ ಹಾಗೆ ನಡೆದುಕೊಳ್ಳಬೇಕು. ದಿವಂಗತ ಕೆ.ಎನ್‌.ನಾಗೇಗೌಡರ ಕಾಲದಲ್ಲೇ ಅಂಬೇಡ್ಕರ್‌ ಭವನಕ್ಕೆ ಶಂಕುಸ್ಥಾಪನೆ ನೆರವೇರಿತ್ತು. ಹಲವು ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈಗ ಕಾಮಗಾರಿ ಪೂರ್ಣಗೊಂಡಿರುವುದು ಸಂತಸ ತಂದಿದೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಮಾತನಾಡಿ, ‘ನಾನು ಉಸ್ತುವಾರಿ ಸಚಿವನಾಗಿ ಮಂಡ್ಯಕ್ಕೆ ಬಂದಾಗ ಅಂಬೇಡ್ಕರ್‌ ಭವನ ಕಾಮಗಾರಿ ಯಾವಾಗ ಮುಗಿಯುತ್ತದೆ? ಮೈಷುಗರ್‌ ಸಮಸ್ಯೆಗಳಿಗೆ ಪರಿಹಾರ ಯಾವಾಗ ಎಂಬ ಪ್ರಶ್ನೆಗಳು ಎದುರಾಗಿದ್ದವು. ಈಗ ಎರಡೂ ಕೆಲಸಗಳನ್ನು ಮಾಡಿದ್ದೇವೆ. ಮೈಷುಗರ್‌ ಆರಂಭವಾಗಿದೆ. ಈಗ ಅಂಬೇಡ್ಕರ್‌ ಭವನವೂ ಪೂರ್ಣಗೊಂಡಿದೆ. ಉತ್ತಮ ಪರಿಸರದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲಾಗಿದ್ದು ಜನರು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್‌ ಸದಸ್ಯರಾದ ಡಿ.ವೀರಯ್ಯ, ಕೆ.ಟಿ.ಶ್ರೀಕಂಠೇಗೌಡ, ಚಾಮರಾಜನಗರದ ನಳಂದ ವಿಶ್ವವಿದ್ಯಾಲಯದ ಪ್ರತಿನಿಧಿ ಬಂತಬೋಧಿ ದತ್ತ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುನಾವರ್‌ ಖಾನ್‌, ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್‌, ದಸಂಸ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎಂ.ಬಿ.ಶ್ರೀನಿವಾಸ್‌ ಹಾಜರಿದ್ದರು.

ಹೋರಾಟಗಾರರ ಬಂಧನ

ಸಚಿವ ಆಂಜನೇಯ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಹೋರಾಟಗಾರರನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸರು ಬಂಧಿಸಿದ್ದರು.

ಬುದ್ಧ ಭಾರತ ಫೌಂಡೇಷನ್‌ ಅಧ್ಯಕ್ಷ, ವಕೀಲ ಜೆ. ರಾಮಯ್ಯ, ಅಂಬೇಡ್ಕರ್‌ ಪೀಪಲ್ಸ್‌ ಪಾರ್ಟಿ ಮುಖಂಡ ಸಿ.ಎಂ.ಕೃಷ್ಣ, ಮುಖಂಡರಾದ ಶ್ರೀಕಂಠ, ಪ್ರವೀಣ್, ವೆಂಕಟೇಶ್ ಅವರನ್ನು ಪೊಲೀಸರು ಬಂಧಿಸಿದ್ದರು. ‘ಪ್ರತಿಭಟನೆ ನಡೆಸುವುದು ಸಂವಿಧಾನ ನೀಡಿರುವ ಹಕ್ಕು. ನಮ್ಮನ್ನು ಬಂಧಿಸುವ ಮೂಲಕ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಇದು ಬಹಳ ಕೆಟ್ಟ ಬೆಳವಣಿಗೆ’ ಎಂದು ಜೆ.ರಾಮಯ್ಯ ಹೇಳಿದರು.

ಹೈಟೆಕ್‌ ಮಾರುಕಟ್ಟೆ ನಿರ್ಮಾಣಕ್ಕೆ ₹ 25 ಕೋಟಿ

‘ನಗರದಲ್ಲಿ ಹೈಟೆಕ್‌ ಮಾರುಕಟ್ಟೆ ನಿರ್ಮಾಣ ಮಾಡಲು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ ₹ 25 ಕೋಟಿ ನೀಡಲಾಗುವುದು’ ಎಂದು ನಿಗಮದ ಅಧ್ಯಕ್ಷ ಕೃಷ್ಣಮೂರ್ತಿ ಹೇಳಿದರು.

‘ನಗರಸಭೆ ಅಗತ್ಯ ದಾಖಲಾತಿ ನೀಡಬೇಕು. ನಿವೇಶನ, ಕಟ್ಟಡದ ಯೋಜನೆ ದಾಖಲೆಗಳನ್ನು ನಿಗಮಕ್ಕೆ ನೀಡಿದರೆ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು. ಇಂತಹ ಕಾಮಗಾರಿಗಳಿಗಾಗಿ ನಿಗಮದಲ್ಲಿ ₹ 500 ಕೋಟಿ ಹಣ ಇದೆ’ ಎಂದು ಹೇಳಿದರು.‌

ನರೇಂದ್ರಸ್ವಾಮಿ ಅರ್ಧದಲ್ಲೇ ನಿರ್ಗಮನ

ಮಳವಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಕಾರ್ಯಕ್ರಮ ನಡೆಯುವಾಗ ಅರ್ಧದಲ್ಲೇ ನಿರ್ಗಮಿಸಿದರು.

ಅವರು ವೇದಿಕೆಗೆ ಬಂದಾಗ ಮುಖಂಡರು ಮುಂದಿನ ಸಾಲಿನಲ್ಲಿ ಕೂರುವಂತೆ ಒತ್ತಾಯಿಸಿದರು. ಆದರೆ ಅವರು ಎರಡನೇ ಸಾಲಿನಲ್ಲಿ ಕುಳಿತರು. ಸಚಿವ ಎಚ್‌.ಆಂಜನೇಯ ಮಾತನಾಡುವಾಗ ಅವರು ನಿರ್ಗಮಿಸಿದರು.

ಅಂಬೇಡ್ಕರ್‌ ಭವನ ಉದ್ಘಾಟನಾ ಸಮಾರಂಭವನ್ನು ಅಧಿಕಾರಿಗಳು ಸರಿಯಾಗಿ ಆಯೋಜನೆ ಮಾಡಿಲ್ಲ. ಜನಪ್ರತಿನಿಧಿಗಳಿಗೆ ಆಹ್ವಾನ ನೀಡದೇ ಕಾಟಾಚಾರಕ್ಕಾಗಿ ಆಯೋಜನೆ ಮಾಡಿದ್ದಾರೆ. ಶಾಸಕರಿಗೆ ಕಡೆಯ ಕ್ಷಣದಲ್ಲಿ ಆಹ್ವಾನ ನೀಡಿದ್ದಾರೆ. ಭಾನುವಾರ ರಾತ್ರಿ ಆಹ್ವಾನ ಪತ್ರಿಕೆ ಕಳುಹಿಸಿದ್ದಾರೆ. ಹೀಗಾಗಿ ನರೇಂದ್ರಸ್ವಾಮಿ ಅವರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry