ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ಡಿ.ಕೆ.ಶಿವಕುಮಾರ್‌

7
ಬಿಜೆಪಿ ವಿರುದ್ಧ ವಾಗ್ದಾಳಿ * ಕಬ್ಬಾಳಮ್ಮನ ಮೇಲೆ ಅಣೆ ಮಾಡಿದ ಸಚಿವ ಡಿ.ಕೆ ಶಿವಕುಮಾರ್

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ಡಿ.ಕೆ.ಶಿವಕುಮಾರ್‌

Published:
Updated:
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ಡಿ.ಕೆ.ಶಿವಕುಮಾರ್‌

ಕನಕಪುರ: ‘ಕ್ಷೇತ್ರದ ಜನರು ಕೇಳಿದಕ್ಕಿಂತ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಮಗೆ ಮೋಸ ಮಾಡಿದರೆ ಹೆತ್ತ ತಾಯಿಗೆ ಮೋಸ ಮಾಡಿದಂತೆ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಎಚ್ಚರಿಸಿದರು.

ತಾಲ್ಲೂಕಿನ ಸಾತನೂರು ಹೋಬಳಿ ಕಂಚನಹಳ್ಳಿ ಗ್ರಾಮದಲ್ಲಿ ಕೆರೆಗೆ ಬಾಗಿನ ಸಮರ್ಪಣೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ಕ್ಷೇತ್ರದಿಂದ ಜನರು ವಲಸೆ ಹೋಗುವುದನ್ನು ತಪ್ಪಿಸಲು ತಾಲ್ಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವುದು, ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್‌ ಪೂರೈಕೆ, ಹೈನುಗಾರಿಕೆ, ರೇಷ್ಮೆಕೃಷಿಗೆ ಹೆಚ್ಚಿನ ಉತ್ತೇಜನ ಹಾಗೂ ಬೆಂಬಲ ನೀಡಿದ್ದೇನೆ. ಕೆರೆಯಲ್ಲಿನ ನೀರು ಬಳಕೆಯಲ್ಲಿ ಜಾತಿ, ಧರ್ಮ, ಪಕ್ಷ  ನೋಡುವುದು ಬೇಡ’ ಎಂದರು.

‘ಪಕ್ಕದ ರಾಮನಗರ ಕ್ಷೇತ್ರದಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ಕನಕಪುರ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲೂ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಿದ್ದೇನೆ. ಸಂಪರ್ಕ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿ ಪಡಿಸಿದ್ದೇನೆ’ ಎಂದರು.

‘ಬಿಜೆಪಿ ಮುಖಂಡರು ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಅವರ ಆಸೆ ಖಂಡಿತವಾಗಿಯೂ ನೆರವೇರುವುದಿಲ್ಲ. ಕಬ್ಬಾಳಮ್ಮನ ಆಣೆ ಮುಂದೆಯೂ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ರಾಜ್ಯ ವ್ಯಾಪಿ ಪಕ್ಷದ ಪ್ರವಾಸ, ಪ್ರಚಾರವಿರುವುದರಿಂದ ಇಲ್ಲಿಗೆ ಹೆಚ್ಚಿನ ಸಮಯ ಭೇಟಿ ನೀಡಲು ಸಾಧ್ಯವಾಗುವುದಿಲ್ಲ.  ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಳವಳ್ಳಿಯಲ್ಲಿ ಪಕ್ಷದ ಅಭ್ಯರ್ಥಿ ಶಿವಕುಮಾರ್‌ ಎಂದೇ ತಿಳಿದು ಮತ ನೀಡಬೇಕು’ ಎಂದು ಮನವಿ ಮಾಡಿದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಕೆಲವರು ಮಣ್ಣಿಮ ಮಕ್ಕಳೆಂದು ಹೇಳುತ್ತಾರೆ. ರೈತರ ಪರವಾಗಿ ಕಣ್ಣೀರು ಸುರಿಸುತ್ತಾರೆ. ಅದರಿಂದ ಖಂಡಿತವಾಗಿಯೂ ರೈತರ ಸಮಸ್ಯೆ ಪರಿಹಾರವಾಗುವುದಿಲ್ಲ. ಬಿಜೆಪಿಯವರು ಖಾಲಿ ಮಾತನಾಡುವ ಗಿರಾಕಿಗಳು. ಒಣಬೇಸಾಯಕ್ಕೆ ಕಾಂಗ್ರೆಸ್‌ ಸರ್ಕಾರ ಹೆಕ್ಟೇರ್‌ಗೆ ₹5 ರಿಂದ ₹10 ಸಾವಿರ ನೀಡುವುದನ್ನು ವಿರೋಧಿಸುತ್ತಿದ್ದಾರೆ ಎಂದು ದೂರಿದರು.

ಸಚಿವ ಶಿವಕುಮಾರ್‌ ತಮಗೆ ಕೊಟ್ಟ ಖಾತೆ ಸಮರ್ಥವಾಗಿ ನಿಭಾಯಿಸಿದ್ದಾರೆ. ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ಲೋಪ ಬರದಂತೆ ನೋಡಿಕೊಂಡಿದ್ದಾರೆ. ಇಲಾಖೆಯಲ್ಲಿ ದೊಡ್ಡ ಬದಲಾವಣೆ ತಂದಿದ್ದಾರೆ. ಅದರ ಕೀರ್ತಿ ಈ ಕ್ಷೇತ್ರದ ಜನರಿಗೆ ಸಲ್ಲುತ್ತದೆ ಎಂದರು.

‘ಎಚ್‌ಡಿಕೆ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿದ್ದಾರಾ'

ರಾಮನಗರ:
‘ಚುನಾವಣೆಯ ನಿಧಿಗಾಗಿ ಅಶೋಕ್‌ ಖೇಣಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿರುವುದು ಸರಿಯಲ್ಲ. ಹಾಗಿದ್ದರೆ ರಾಜ್ಯಸಭೆ ಚುನಾವಣೆಯಲ್ಲಿ ಅವರೇನು ಸಾಮಾನ್ಯ ಕಾರ್ಯಕರ್ತನನ್ನು ಸ್ಪರ್ಧೆಗೆ ನಿಲ್ಲಿಸಿದ್ದಾರೆಯೇ?’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

ಇಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಸದ್ಯಕ್ಕೆ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪಕ್ಷವು ಅಂತಿಮಗೊಳಿಸಿದೆ. ಎಷ್ಟು ಸ್ಥಾನಗಳಿಗೆ ಸ್ಪರ್ಧಿಸಬೇಕು ಎಂದು ಹೈಕಮಾಂಡ್‌ ತೀರ್ಮಾನಿಸುತ್ತದೆ’ ಎಂದರು.

ಸಿದ್ದಗಂಗಾ ಮಠದಲ್ಲಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಶಾಮನೂರು ಶಿವಶಂಕರಪ್ಪ ಭೇಟಿಯ ಕುರಿತು ಪ್ರತಿಕ್ರಿಯಿಸಿ ‘ಸಮುದಾಯದ ಕಾರ್ಯಕ್ರಮಗಳಲ್ಲಿ ಇಂತಹ ಭೇಟಿಗಳು ಸಾಮಾನ್ಯ. ಕೆಲವು ಕಡೆ ನಾನು, ಕುಮಾರಸ್ವಾಮಿ ಒಂದೇ ವೇದಿಕೆ ಹಂಚಿಕೊಂಡಿದ್ದೇವೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದರು.

ಚನ್ನಪಟ್ಟಣದಿಂದ ಸಂಬಂಧಿ ಶರತ್‌ಚಂದ್ರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು ‘ಅಲ್ಲಿಂದ ಯಾರು ಬೇಕಾದರೂ ಅಭ್ಯರ್ಥಿಯಾಗಬಹುದು. ಅರ್ಜಿ ಹಾಕದವರಿಗೂ ಟಿಕೆಟ್‌ ನೀಡಬಹುದು. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ವ್ಯಕ್ತಿಗಿಂತ ಪಕ್ಷ ಮುಖ್ಯ’ ಎಂದರು.

*

ಯಾರದೋ ಸಿಟ್ಟು ನನ್ನ ಮೇಲೆ ತೋರಿಸಬೇಡಿ. ಸ್ಥಳೀಯ ಮುಖಂಡರಲ್ಲಿರುವ ಭಿನ್ನಾಭಿಪ್ರಾಯ ಬದಿಗೊತ್ತಿ ಗೆಲುವಿಗೆ ಶ್ರಮಿಸಬೇಕು.

-ಡಿ.ಕೆ.ಶಿವಕುಮಾರ್‌, ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry