ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೈಪಾಸ್ ನಿರ್ಮಾಣಕ್ಕೆ ಸರ್ವೆ ನಡೆಯಲಿ’

ಖಾನಾಪುರ– ತಾಳಗುಪ್ಪ ರಾಜ್ಯ ಹೆದ್ದಾರಿ: ನಗರದೊಳಗೆ ಹಾದು ಹೋಗಲು ನಾಗರಿಕರ ವಿರೋಧ
Last Updated 13 ಮಾರ್ಚ್ 2018, 9:55 IST
ಅಕ್ಷರ ಗಾತ್ರ

ಶಿರಸಿ: ‘ಪ್ರಸ್ತಾಪಿತ ಸಿದ್ದಾಪುರ-ಯಲ್ಲಾಪುರ-ತಾಳಗುಪ್ಪ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿ, ಶಿರಸಿ ನಗರದ ಹೊರಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಸರ್ವೆ ನಡೆಸಬೇಕು’ ಎಂದು ಸಾರ್ವಜನಿಕರು ಸೋಮವಾರ ಇಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

‘ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿಯು, ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ರಾಷ್ಟ್ರೀಯ ಹೆದ್ದಾರಿಯ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸುವ ಕಾರ್ಯ ಪ್ರಾರಂಭವಾಗಿದೆ. ಈ ಮಾರ್ಗವು ಶಿರಸಿ ನಗರದೊಳಗೆ ಹಾದು ಹೋದರೆ, ರಸ್ತೆಯ ಎರಡು ಬದಿಯಲ್ಲಿರುವ ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯ, ದೇವಸ್ಥಾನ, ಚರ್ಚ್‌ಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗುತ್ತದೆ. ಇದರಿಂದ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಘಾಸಿ ಆಗುವುದಲ್ಲದೇ, ಶೈಕ್ಷಣಿಕ ಸಂಸ್ಥೆಗಳಿಗೂ ಧಕ್ಕೆಯಾಗುತ್ತದೆ. ಅನೇಕ ಸರ್ಕಾರಿ ಕಚೇರಿಗಳ ಕಟ್ಟಡ ಕೂಡ ತೆರವುಗೊಳಿಸಬೇಕಾಗುವುದರಿಂದ, ನಗರ ಹೊರವಲಯದಲ್ಲಿ ಬೈಪಾಸ್ ರಸ್ತೆ ಮೂಲಕ ಈ ಹೆದ್ದಾರಿಯನ್ನು ಕೊಂಡೊಯ್ಯಲು ಸರ್ವೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಯೋಜಿತ ರಾಷ್ಟ್ರೀಯ ಹೆದ್ದಾರಿಯು, ಕಾರವಾರ ನೌಕಾನೆಲೆಗೆ ಸಂಪರ್ಕ ಕಲ್ಪಿಸುವುದರಿಂದ ರಕ್ಷಣಾ ಸಾಮಗ್ರಿ ಹಾಗೂ ಸಮೀಪದ ಕೈಗಾ ಅಣು ಸ್ಥಾವರಕ್ಕೆ ಬೇಕಾಗುವ ಸಂಗ್ರಹಗಳನ್ನು ಸಾಗಿಸಲು ಬಳಕೆಯಾಗುವ ಉದ್ದೇಶ ಹೊಂದಿದೆ. ಹೀಗಿರುವಾಗ, ನಗರ

ದೊಳಗೆ ಈ ರಸ್ತೆ ಹಾದು ಹೋದರೆ ವೇಗ ಮಿತಿ ಹೇರಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನಗಳು ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ನಗರದೊಳಗೆ ಈ ವೇಗದಲ್ಲಿ ಸಂಚರಿಸಿದರೆ ಅಪಘಾತದ ಸಾಧ್ಯತೆ ಹೆಚ್ಚಿರುತ್ತದೆ. ವೇಗದ ಮಿತಿ ಕಡಿಮೆ ಮಾಡಿದರೆ ಹೆದ್ದಾರಿ ಉದ್ದೇಶ ಸಫಲವಾಗುವುದಿಲ್ಲ.ಹಾಗಾಗಿ ಸಾರ್ವಜನಿಕರ ಹಿತಾಸಕ್ತಿಯನ್ನು ಪರಿಗಣಿಸಿ, ಬೈಪಾಸ್ ಮೂಲಕ ಹೆದ್ದಾರಿ ನಿರ್ಮಿಸಬೇಕು’ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ವಿ.ಎಂ. ಭಟ್ ಜೊತೆ ವಿಷಯ ಚರ್ಚಿಸಿದ ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಅವರು, ‘ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದರು.

ಜಿ.ಪಂ.ಸದಸ್ಯ ಜಿ.ಎನ್.ಹೆಗಡೆ ಮುರೇಗಾರ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ, ಪ್ರಮುಖರಾದ ಎಂ.ಎಸ್.ಹೆಗಡೆ ಕೊಪ್ಪ, ಗುರುಪಾದ ಹೆಗಡೆ, ಶ್ರೀನಿವಾಸ ಹೆಗಡೆ, ಸುಭಾಷ ಮಂಡೂರ, ರಮೇಶ ಶೆಟ್ಟಿ ಹಾಜರಿದ್ದರು.

*
ನಗರದ ಭವಿಷ್ಯದ ದೃಷ್ಟಿಯಿಂದ ಬೈಪಾಸ್ ರಸ್ತೆ ನಿರ್ಮಾಣ ತೀರಾ ಅಗತ್ಯವಿದೆ. ಸರ್ಕಾರ ಆದ್ಯತೆಯ ಮೇಲೆ ಯೋಜನೆ ಕೈಗೆತ್ತಿಕೊಳ್ಳಬೇಕು.
-ಜಿ.ಎನ್.ಹೆಗಡೆ ಮುರೇಗಾರ,
ಜಿಲ್ಲಾ ಪಂಚಾಯ್ತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT