ಇಂದಿರಾ ಕ್ಯಾಂಟೀನ್‌ ಉದ್ಘಾಟನೆ

7
ಇತರೆ ತಾಲ್ಲೂಕು ಕೇಂದ್ರಗಳಲ್ಲಿಯೂ ಶೀಘ್ರ ಆರಂಭ: ಮೋಹನಕುಮಾರಿ

ಇಂದಿರಾ ಕ್ಯಾಂಟೀನ್‌ ಉದ್ಘಾಟನೆ

Published:
Updated:
ಇಂದಿರಾ ಕ್ಯಾಂಟೀನ್‌ ಉದ್ಘಾಟನೆ

ಚಾಮರಾಜನಗರ: ನಗರದಲ್ಲಿನ ಕೂಲಿ ಕಾರ್ಮಿಕರು, ಬಡವರು, ವಿವಿಧ ಕೆಲಸಗಳಿಗಾಗಿ ಜಿಲ್ಲೆಯ ಹೊರಭಾಗದಿಂದ ಬರುವ ಜನರಿಗೆ  ಕಡಿಮೆ ದರದಲ್ಲಿ ಆಹಾರ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ಗೆ ಜಿಲ್ಲಾ ಕೇಂದ್ರದಲ್ಲಿ ಸೋಮವಾರ ಚಾಲನೆ ದೊರಕಿತು.

ಜಿಲ್ಲಾಡಳಿತ ಭವನದ ಆವರಣದಲ್ಲಿರುವ ರೇಷ್ಮೆ ಇಲಾಖೆ ಕಟ್ಟಡದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಕ್ಯಾಂಟೀನ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಎಂ.ಸಿ. ಮೋಹನಕುಮಾರಿ ಮತ್ತು ಶಾಸಕ ಸಿ. ಪುಟ್ಟರಂಗಶೆಟ್ಟಿ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.

ಬಳಿಕ, ಅವರು ಕ್ಯಾಂಟೀನ್‌ನಲ್ಲಿ ಇತರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆಗೆ ಉಪ್ಪಿಟ್ಟು, ಕೇಸರಿಬಾತ್ ಸೇವಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಮೊದಲ ಇಂದಿರಾ ಕ್ಯಾಂಟೀನ್‌ಅನ್ನು ಉದ್ಘಾಟಿಸಲಾಗಿದೆ. ₹88 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್‌ ನಿರ್ಮಿಸಲಾಗಿದೆ. ದಿನಕ್ಕೆ 500 ಜನರಿಗೆ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟ ದೊರಕಲಿದೆ. ಬಡವರು, ಕಾರ್ಮಿಕರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯಯುತ ತಿನಿಸು ದೊರಕಲಿದೆ ಎಂದರು.

ಆಹಾರ ತಯಾರಿಕೆ, ಪೂರೈಕೆ ಮುಂತಾದ ಎಲ್ಲ ಸೇವೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆಹಾರ ತಯಾರಕರಿಗೆ ಟೆಂಡರ್‌ ಕರೆಯಲಾಗಿದ್ದು, ಪ್ರತಿ ವರ್ಷ ಹೊಸ ಟೆಂಡರ್‌ ಕರೆಯಲಾಗುವುದು. ರುಚಿಕಟ್ಟಾದ ತಿನಿಸು, ಕುಡಿಯುವ ನೀರು ಮತ್ತು ಉತ್ತಮ ಸೇವೆ ಒದಗಿಸುವುದು ಗುತ್ತಿಗೆದಾರರ ಜವಾಬ್ದಾರಿ. ನಗರಸಭೆ ವ್ಯಾಪ್ತಿಯಲ್ಲಿ ಕ್ಯಾಂಟೀನ್‌ ಕಾರ್ಯನಿರ್ವಹಣೆ ನಡೆಯಲಿದೆ ಎಂದು ಹೇಳಿದರು.

ಗುಂಡ್ಲುಪೇಟೆ ಸೇರಿದಂತೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿಯೂ ಇಂದಿರಾ ಕ್ಯಾಂಟೀನ್‌ ಆರಂಭಗೊಳ್ಳಲಿದೆ. ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಅವುಗಳಿಗೆ ಚಾಲನೆ ದೊರಕಲಿದೆ ಎಂದು ತಿಳಿಸಿದರು.

ಶೀಘ್ರ ದೂಳು ಮುಕ್ತ: ನಗರದೆಲ್ಲೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ದೂಳಿನ ಪ್ರಮಾಣ ಹೆಚ್ಚಾಗಿದೆ. 7 ತಿಂಗಳಿನಿಂದ ನಿರಂತರ ಕೆಲಸಗಳು ನಡೆಯುತ್ತಿವೆ. ಈ ಕೆಲಸಗಳು ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಮೋಹನಕುಮಾರಿ ತಿಳಿಸಿದರು.

ಯುಜಿಡಿ ಕೆಲಸವೂ ನಡೆಯುತ್ತಿ ರುವುದರಿಂದ ರಸ್ತೆ ನಿರ್ಮಾಣ ಕಾರ್ಯವನ್ನು ತರಾತುರಿಯಲ್ಲಿ ಮಾಡುವಂತಿಲ್ಲ. ಮತ್ತೆ ರಸ್ತೆಯನ್ನು ಅಗೆಯುವಂತಹ ಸನ್ನಿವೇಶ ಎದುರಾಗಬಾರದು. ಹೀಗಾಗಿ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿ ಅಚ್ಚುಕಟ್ಟಾಗಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ. ಸದಾಶಿವಮೂರ್ತಿ, ನಗರಸಭೆ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಎಂ. ರಾಜಪ್ಪ, ಸದಸ್ಯೆ ರೇಣುಕಾ, ಚುಡಾ ಅಧ್ಯಕ್ಷ ಸುಹೇಲ್‌ ಆಲಿಖಾನ್‌, ಜಿಲ್ಲಾಧಿಕಾರಿ ಬಿ. ರಾಮು, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್, ಉಪ ವಿಭಾಗಾಧಿಕಾರಿ ಫೌಜಿಯಾ ತರುನ್ನುಂ, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಲತಾ ಜಯಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry