ಸೋತಾಗ ಸಾವರಿಸಿಕೊಳ್ಳಿ

7

ಸೋತಾಗ ಸಾವರಿಸಿಕೊಳ್ಳಿ

Published:
Updated:
ಸೋತಾಗ ಸಾವರಿಸಿಕೊಳ್ಳಿ

ಆಗಿದ್ದಾಗಲಿ ಮರೆತುಬಿಡಿ: ಹೀಗೆ ಹೇಳುವುದು ತುಂಬಾ ಸುಲಭ. ಅದೇ ನೆನಪುಗಳನ್ನು ಮರೆಯುವುದು ಕಷ್ಟ. ಆದರೆ ನಿಮ್ಮ ಖುಷಿಗಾಗಿ ಮನಸು ಗಟ್ಟಿಮಾಡಿಕೊಂಡು ಸಿಗದ ಪ್ರೀತಿಯನ್ನು ಮರೆತು ಬಿಡಿ. ಹಳೆಯ ನೆನಪುಗಳನ್ನು ಮೆಲುಕು ಹಾಕಿ ಕೊರಗುವುದಕ್ಕಿಂತ ಭವಿಷ್ಯದ ಬಗ್ಗೆ ಯೋಚಿಸಿ.

ಅಭಿವ್ಯಕ್ತಿಸಿ: ಮನಸ್ಸಿನಲ್ಲಿ ನೋವಿದ್ದರೂ, ಅದನ್ನು ಹೊರಗೆ ತೋರಿಸದೆ ಸಂತೋಷವಾಗಿದ್ದೇನೆ ಎಂದು ನಟಿಸಬೇಡಿ. ನೋವು ತೋಡಿಕೊಳ್ಳುವುದರಿಂದ ಮನಸಿಗೆ ಸಮಾಧಾನ ಸಿಗುತ್ತದೆ. ಮನಸಿನಲ್ಲಿಯೇ ಕೊರಗುವುದರಿಂದ ಖಿನ್ನತೆಗೊಳಗಾಬಹುದು. ಮನೆಯವರೊಂದಿಗೆ ಅಥವಾ ಆಪ್ತ ಸ್ನೇಹಿತರೊಂದಿಗೆ ನೋವು ಹಂಚಿಕೊಳ್ಳಿ, ಅವರ ಸಾಂತ್ವನದ ಮಾತುಗಳು ನಿಮಗೆ ಸಮಾಧಾನ ನೀಡಬಹುದು.

ನೋವು ಸಹಜ ಎನ್ನುವುದು ನೆನಪಿರಲಿ: ದೇಹಕ್ಕೆ ಆಗುವ ನೋವಿಗಿಂತ ಮನಸಿಗೆ ಆಗುವ ನೋವು ತಡೆಯುವುದು ಕಷ್ಟ. ಆದರೆ ಅದೇ ನೆನಪಿನಲ್ಲಿ ಕಾಲ ಕಳೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ರೀತಿಯ ಹಲವು ನೋವುಗಳನ್ನು ಎದುರಿಸುವುದು ಸಹಜ ಎಂದು ಮನಸನ್ನು ಗಟ್ಟಿಮಾಡಿಕೊಳ್ಳಿ. ಬದುಕಿನ ಹಲವು ಕಷ್ಟಗಳ ಮುಂದೆ ಈ ನೋವು ಗೌಣ ಎನ್ನುವುದು ಅರಿವಿರಲಿ.

ಬರೆಯಲು ಪ್ರಾರಂಭಿಸಿ: ವಿರಹದ ಒಂಟಿತನವನ್ನು ನಿಭಾಯಿಸುವ ಮೊದಲ ಹೆಜ್ಜೆ ಆತ್ಮಾವಲೋಕನ. ನೋವನ್ನು ನಿರ್ಲಕ್ಷಿಸುವ ಬದಲು ನಿಮ್ಮ ಭಾವನೆಗಳನ್ನು ಬರಹದ ಮೂಲಕ ಅಭಿವ್ಯಕ್ತಿಸಿ. ನಿಮ್ಮ ಭಾವನೆಗಳನ್ನು ಮುಕ್ತವಾಗಿ, ಪ್ರಾಮಾಣಿಕವಾಗಿ ಬರೆಯುವುದರಿಂದ ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರೀತಿ ಸೋತ ನಂತರ, ಕನಿಷ್ಠ ಮೂರು ದಿನ, 20 ನಿಮಿಷ ನಿಮಗೆ ಅನಿಸಿದ್ದನ್ನು ಬರೆಯಿರಿ.

ನಿಮ್ಮನ್ನು ನೀವು ಪ್ರೀತಿಸಿ: ಯಾರೋ ನಿಮ್ಮನ್ನು ತಿರಸ್ಕರಿಸಿದರು ಎಂದ ಮಾತ್ರಕ್ಕೆ ನಿಮಗೆ ನಿಮ್ಮ ಮೇಲಿನ ಪ್ರೀತಿ ಕಡಿಮೆಯಾಗದಿರಲಿ. ನಿಮ್ಮನ್ನು ನೀವು ಪ್ರೀತಿಸುವುದರಿಂದ ಆತ್ಮವಿಶ್ವಾಸದಿಂದಿರಬಹುದು.

ಪ್ರಾಮಾಣಿಕವಾಗಿದ್ದೀರಿ ಎಂಬ ಭಾವನೆ ಇರಲಿ: ಬ್ರೇಕ್‌ಅಪ್‌ ನಂತರ ಆತ್ಮವಿಶ್ವಾಸದಲ್ಲಿ ಏರುಪೇರಾಗುವುದು ಸಹಜ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ. ನಿಮ್ಮ ಸಾಮರ್ಥ್ಯವನ್ನು ಅರಿಯಿರಿ. ಯಾರೋ ನಿಮ್ಮನ್ನು ಅರ್ಥ ಮಾಡಿಕೊಳ್ಳದೇ ಬಿಟ್ಟು ಹೋದರೆ, ನೀವು ಸರಿಯಿಲ್ಲ ಎಂದರ್ಥವಲ್ಲ. ನೀವು ಪ್ರಾಮಾಣಿಕವಾಗಿದ್ದೀರೆಂದು ಆಗಾಗ್ಗೆ ನೆನಪಿಸಿಕೊಳ್ಳಿ. ನಿಮ್ಮನ್ನು ಪ್ರೀತಿಸುವ ಜನರೊಂದಿಗೆ ಬೆರೆಯಿರಿ. ಒಳ್ಳೆಯ ವ್ಯಕ್ತಿಗೆ ಇನ್ನು ಹಲವು ಅವಕಾಶಗಳು ಇರುತ್ತವೆ ಎಂಬುದು ನೆನಪಿರಲಿ.

ಗಟ್ಟಿಯಾಗಿರಿ: ಒಂದಾಗುವುದು ಸಾಧ್ಯವೇ ಇಲ್ಲ ಎನಿಸಿ ದೂರಾಗಿದ್ದರೆ ಮಾಜಿ ಪ್ರೇಮಿಯಿಂದ ದೂರವೇ ಇರಿ. ಅವರೊಂದಿಗೆ ಸಂಪರ್ಕದಲ್ಲಿರುವುದರಿಂದ ನಿಮ್ಮಲ್ಲಿ ಮತ್ತೊಮ್ಮೆ ನಿರೀಕ್ಷೆ ಹುಟ್ಟಿಸಬಹುದು. ಇಲ್ಲದ ವಸ್ತುವನ್ನು ಇದೆ ಎಂದು ಹುಡುಕಲು ಪ್ರಾರಂಭಿಸಿ, ಆ ವಸ್ತು ಸಿಗದಿದ್ದಾಗ ಮತ್ತಷ್ಟು ನೋವಾಗುತ್ತದೆ. ಹಾಗಾಗಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ಹಳೆ ಪ್ರೀತಿಯನ್ನು ಮರೆಯಿರಿ. ನಿಮ್ಮ ಫೋನಿನಿಂದ ಆ ವ್ಯಕ್ತಿಯ ನಂಬರ್‌ ತೆಗೆದುಬಿಡಿ. ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಹಿಂಬಾಲಿಸಬೇಡಿ.

ನೆನಪಿಸುವ ವಸ್ತುಗಳೂ ಬೇಡ: ಇಬ್ಬರೂ ಜೊತೆಗಿದ್ದಾಗ ಹಲವು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡಿರುತ್ತೀರಿ.  ಒಟ್ಟಿಗೆ ಫೋಟೊ ತೆಗೆಸಿಕೊಂಡಿರಬಹುದು. ಅವುಗಳನ್ನು ಕಣ್ಣಿಗೆ ಕಾಣಿಸದಂತೆ ಎತ್ತಿಡಿ. ಉಡುಪುಗಳನ್ನು ಯಾರಿಗಾದರೂ ದಾನ ಮಾಡಿ. ಈ ವಸ್ತುಗಳು ಪದೇಪದೇ ಕಣ್ಣಿಗೆ ಬೀಳುವುದರಿಂದ ದುಃಖ, ಒಂಟಿತನ, ಕೋಪದ ಭಾವನೆಗಳನ್ನು ಮೂಡಿಸುತ್ತದೆ.

ಬ್ಯುಸಿ ಆಗಿಬಿಡಿ: ಮನಸಿಗೆ ನೋವಾಯಿತೆಂದು ಒಂಟಿಯಾಗಿರುವುದು, ಸೋಮಾರಿಗಳಾಗಿ ಮಲಗುವುದರಿಂದ ಒತ್ತಡವಾಗುತ್ತದೆ. ಹಾಗಾಗಿ ಕ್ರಿಯಾಶೀಲರಾಗಿರಿ. ನಿಮ್ಮನ್ನು ನೀವು ಬ್ಯುಸಿಯಾಗಿಸಿ. ಪುಸ್ತಕ, ವ್ಯಾಯಾಮ, ಕಲೆ... ಹೀಗೆ ಯಾವುದಾದರೂ ಸೃಜನಾತ್ಮಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ.

ಚಿಕ್ಕ ಖುಷಿಯನ್ನು ಅನುಭವಿಸಿ: ಪ್ರೀತಿ ದೂರಾಯಿತೆಂದು ಜೀವನದಲ್ಲಿ ಸಿಗುವ ಚಿಕ್ಕ, ಚಿಕ್ಕ ಖುಷಿಯನ್ನು ಅಲಕ್ಷಿಸದಿರಿ. ಸ್ನೇಹಿತರೊಂದಿಗೆ ಮಾತನಾಡುವಾಗ ಅವರು ತಮಾಷೆ ಮಾಡಿದರೂ, ನೀವೇ ಒಂದು ಮೂಡ್‌ನಲ್ಲಿದ್ದರೆ ಅವರಿಗೂ ನೋವಾಗುತ್ತದೆ. ಮನೆಯವರೊಂದಿಗೆ ಕೂತು ಊಟ ಮಾಡಿ. ಮನೆಯಲ್ಲಿ ಮಕ್ಕಳಿದ್ದರೆ ಅವರ ಜೊತೆಗೆ ಆಟವಾಡಿ. ಈ ಪುಟ್ಟ ಖುಷಿಗಳು ನೋವು ಮರೆಸುವ ಪ್ರಭಾವಶಾಲಿ ಮದ್ದು.

(ವಿವಿಧ ಮೂಲಗಳಿಂದ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry