ಇಎಲ್‌ಎಸ್‌ಎಸ್‌ ಹೂಡಿಕೆ: ಮುಂದುವರಿಕೆ ಸರಿಯೇ?

ಬುಧವಾರ, ಮಾರ್ಚ್ 20, 2019
25 °C

ಇಎಲ್‌ಎಸ್‌ಎಸ್‌ ಹೂಡಿಕೆ: ಮುಂದುವರಿಕೆ ಸರಿಯೇ?

Published:
Updated:
ಇಎಲ್‌ಎಸ್‌ಎಸ್‌ ಹೂಡಿಕೆ: ಮುಂದುವರಿಕೆ ಸರಿಯೇ?

ಷೇರುಗಳಿಗೆ ಸಂಬಂಧಿಸಿದ ಉಳಿತಾಯ ಯೋಜನೆಯು (Equity Linked Savings Scheme –ELSS) ತೆರಿಗೆ ಉಳಿಸುವ ಮ್ಯೂಚುವಲ್‌ ಫಂಡ್‌ಗಳಾಗಿದ್ದು, ಹೂಡಿಕೆಯಿಂದ ಲಾಭ ಇದೆ. ಆದರೆ ಮೂರು ವರ್ಷಗಳವರೆಗೆ ‘ಲಾಕ್‌ ಇನ್‌’ (ನಿರ್ಬಂಧಿತ) ಅವಧಿ ಮುಗಿದ ನಂತರ ಏನು ಮಾಡಬೇಕು ಎನ್ನುವ ಪ್ರಶ್ನೆ ಅನೇಕ ಹೂಡಿಕೆದಾರರನ್ನು ಕಾಡುತ್ತಿರುತ್ತದೆ.

ಈ ಪ್ರಶ್ನೆಗೆ ಒಂದು ಖಚಿತ ಉತ್ತರ ನೀಡುವುದಕ್ಕೂ ಮುನ್ನ, ‘ಇಎಲ್‌ಎಸ್‌ಎಸ್‌’ ಹೂಡಿಕೆಯೊಂದು ಒಳ್ಳೆಯ ಗಳಿಕೆ ತಂದುಕೊಡಲು ಬೇಕಾಗುವ ಸಮಯಾವಕಾಶ ಎಷ್ಟು ಎಂಬುದರ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ. ಷೇರುಗಳ ಮಾರಾಟದ ಮೇಲಿನ ನಿರ್ದಿಷ್ಟ ಅವಧಿಯ ನಿರ್ಬಂಧಕ್ಕೆ ಹಣಕಾಸು ಮಾರುಕಟ್ಟೆಯಲ್ಲಿ ‘ಲಾಕ್‌ ಇನ್‌’ ಎನ್ನುತ್ತಾರೆ.

ಷೇರು ಸೂಚ್ಯಂಕವು ನಿರಂತರವಾಗಿ ಏರುಪೇರು ಕಾಣುತ್ತಲೇ ಇರುತ್ತದೆ. ಆದ್ದರಿಂದ ಷೇರುಗಳಲ್ಲಿನ ಹೂಡಿಕೆಯು ಗಮನಾರ್ಹ ಗಳಿಕೆ ದಾಖಲಿಸಬೇಕಾದರೆ, ಹೂಡಿಕೆ ಯಾವತ್ತೂ ದೀರ್ಘಾವಧಿಯಾಗಿರಬೇಕು. ‘ಷೇರು ಮಾರುಕಟ್ಟೆಯು ಅಲ್ಪಾವಧಿಯಲ್ಲಿ ಸೌಂದರ್ಯ ಸ್ಪರ್ಧೆಯಂತೆಯೂ, ದೀರ್ಘಾವಧಿಯಲ್ಲಿ ಭಾರ ಅಳೆಯುವ ಮಾಪಕದಂತೆಯೂ ಕಾಣುತ್ತದೆ’ ಎಂಬ ಮಾತಿದೆ. ಆದ್ದರಿಂದ ಷೇರು ಸಂಬಂಧಿತ ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ, ಹೂಡಿಕೆದಾರರು ಎಚ್ಚರವಾಗಿರಬೇಕು ಮತ್ತು ಅಲ್ಪಾವಧಿಗೆ ಹೂಡಿಕೆಯನ್ನು ಮಾಡಲೇಬಾರದು.

ಹಾಗಿದ್ದರೆ ಇಲ್ಲಿ ‘ದೀರ್ಘಾವಧಿ’ ಎಂಬ ಪದದ ವ್ಯಾಖ್ಯಾನವೇನು ಎನ್ನುವ ಪ್ರಶ್ನೆ ಎದುರಾಗುತ್ತದೆ. ಮಾರುಕಟ್ಟೆಯಲ್ಲಿ ಉಂಟಾಗುವ ಬದಲಾವಣೆಗಳು, ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಒಟ್ಟು ಗಳಿಕೆ ಎಂಬ ಮೂರು ಅಂಶಗಳ ಜೊತೆಗೆ ಈ ಪದದ ವ್ಯಾಖ್ಯಾನ ತಳುಕು ಹಾಕಿಕೊಂಡಿದೆ.

ಯಾವುದೇ ಕಂಪನಿಯ ವಹಿವಾಟು ಸದಾಕಾಲ ಏರುಮುಖವಾಗಿಯೇ ಇರುವುದಿಲ್ಲ. ಹಲವು ಆಂತರಿಕ ವಿಚಾರಗಳಿಗೆ ಸಂವಾದಿಯಾಗಿ ವಹಿವಾಟು ಏರಿಳಿತ ಕಾಣುತ್ತದೆ. ಆದ್ದರಿಂದ ಆ ಕಂಪನಿಯ ಷೇರು ಸ್ಥಿರತೆಗೆ ಒಂದಿಷ್ಟು ಕಾಲಾವಕಾಶ ಬೇಕಾಗುತ್ತದೆ. ಹೂಡಿಕೆ ವಿಶ್ಲೇಷಕರು ಬೇರೆ ಬೇರೆ ಸಂಗತಿಗಳನ್ನು ಗಮನದಲ್ಲಿಟ್ಟು ಕಂಪನಿಯ ಏರಿಳಿತ ಅಂದಾಜು ಮಾಡುತ್ತಿರುತ್ತಾರೆ. ಅವುಗಳು ಯಾವಾಗಲಾದರೂ ಬದಲಾಗುವ ಸಾಧ್ಯತೆಯೂ ಇರುತ್ತದೆ. ದೀರ್ಘಾವಧಿ ಮತ್ತು ಅಲ್ಪಾವಧಿಯ ಲಾಭ–ನಷ್ಟಗಳಿಗೆ ಇದೂ ಒಂದು ಕಾರಣವಾಗುತ್ತದೆ.

ಹೂಡಿಕೆದಾರರ ಮನಸ್ಥಿತಿಯಲ್ಲಾಗುವ ಬದಲಾವಣೆಯೂ ಇಲ್ಲಿ ಕೆಲಸ ಮಾಡುತ್ತದೆ. ಇಡೀ ಮಾರುಕಟ್ಟೆ ತೇಜಿಯಲ್ಲಿರುವ ಸಮಯದಲ್ಲಿ ಒಂದು ಕಂಪನಿಯ ಷೇರುಗಳಿಗೆ ವಿಶ್ಲೇಷಕರು ಹೆಚ್ಚಿನ ಮೌಲ್ಯ ನಿಗದಿ ಮಾಡಿದರೂ ದೊಡ್ಡ ವಿಚಾರ ಅನ್ನಿಸುವುದಿಲ್ಲ. ಸೂಚ್ಯಂಕ ಕುಸಿದಾಗ ಇವುಗಳ ಮೌಲ್ಯವೂ ಅದೇ ಪ್ರಮಾಣದಲ್ಲಿ ಕುಸಿಯುತ್ತದೆ. ಮಾರುಕಟ್ಟೆಯ ಈ ಅಂಶಗಳ ಹಿನ್ನೆಲೆಯಲ್ಲಿ ಯೋಚಿಸಿದರೆ, ದೀರ್ಘಾವಧಿಯ ಹೂಡಿಕೆ ಇಂಥ ಏರುಪೇರುಗಳನ್ನು ಸಹಿಸುವ ಶಕ್ತಿಯನ್ನು ಕೊಡುತ್ತದೆ. ಅನುಭವ ಹಾಗೂ ಇತಿಹಾಸದ ಆಧಾರದಲ್ಲಿ ಹೇಳುವುದಾದರೆ, ಇಂಥ ಹೂಡಿಕೆಗೆ ಕನಿಷ್ಠ ಐದು ವರ್ಷಗಳ ಕಾಲಾವಧಿ ಕೊಡಬೇಕಾಗುತ್ತದೆ. ಕೆಲವೊಮ್ಮೆ 7 ರಿಂದ 10 ವರ್ಷಗಳ ಅವಧಿಯೂ ಬೇಕಾಗಬಹುದು.

ಅದೃಷ್ಟ ಜತೆಗಿದ್ದರೆ ಅಲ್ಪಾವಧಿಯಲ್ಲೂ ‌ಕೆಲವೊಮ್ಮೆ ಒಳ್ಳೆಯ ಲಾಭ ಮಾಡಿಕೊಳ್ಳಬಹುದು. ಆದರೆ, ಮಾರುಕಟ್ಟೆ ಏರಿಳಿತದ ಸಂಪೂರ್ಣ ಲಾಭ ಪಡೆಯಬೇಕಾದರೆ ಹೂಡಿಕೆಗೆ ಹೆಚ್ಚಿನ ಕಾಲಾವಕಾಶ ಕೊಡುವುದು ಅಗತ್ಯ.

ಈ ಮೇಲಿನ ಕೆಲವು ವಿಚಾರಗಳನ್ನು ಮನನ ಮಾಡಿದರೆ, ಆರಂಭದಲ್ಲಿ ನಾವು ಎತ್ತಿರುವ ಪ್ರಶ್ನೆಗೆ ಉತ್ತರ ಲಭಿಸುತ್ತದೆ. ‘ಇಎಲ್‌ಎಸ್‌ಎಸ್‌’ಗೆ ಮೂರು ವರ್ಷಗಳ ‘ಲಾಕ್‌ ಇನ್‌’ ಅವಧಿ ಇರುತ್ತದೆ. ಈ ಅವಧಿ ಮುಗಿದ ಮೇಲೆ ಹಣ ಹಿಂತೆಗೆದುಕೊಳ್ಳಬಹುದು. ಆದರೆ, ಈ ಹೂಡಿಕೆಗೆ ನ್ಯಾಯ ಒದಗಿಸಿ, ಗಳಿಕೆ ಹೆಚ್ಚಿಸಿಕೊಳ್ಳಬೇಕಾದರೆ ಹೂಡಿಕೆದಾರರು ಅದಕ್ಕೆ ಇನ್ನಷ್ಟು ಕಾಲಾವಕಾಶ ಕೊಡುವುದು ಅಗತ್ಯ.

‘ಲಾಕ್‌ಇನ್‌’ ಅವಧಿ ಮುಗಿದ ಬಳಿಕ ಯಾವಾಗ ಬೇಕಾದರೂ ಹಣ ವಾಪಸ್‌ ಪಡೆಯಲು ಅವಕಾಶ ಇದ್ದೇ ಇರುತ್ತದೆ. ಆದರೆ, ಸಾಕಷ್ಟು ಕಾಲಾವಕಾಶ ಕೊಡದೆ ಹೂಡಿಕೆಯನ್ನು ಹಿಂತೆಗೆದುಕೊಂಡರೆ ಇನ್ನಷ್ಟು ಗಳಿಕೆಯ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಆಧರಿಸಿಯೇ ಯಾರೊಬ್ಬರೂ ಹೂಡಿಕೆ ನಿರ್ಧಾರಕ್ಕೆ ಬರಬಾರದು. ಹೂಡಿಕೆ ಮಾಡುವ ಮುನ್ನ ಇತರ ಹಲವಾರು ಸಂಗತಿಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲು ಮರೆಯಬಾರದು. ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆಯು ಷೇರು ಮಾರುಕಟ್ಟೆಯಲ್ಲಿನ ಲಾಭ – ನಷ್ಟ ಆಧರಿಸಿರುತ್ತದೆ ಎನ್ನುವ ಸಂಗತಿಯನ್ನು ಹೂಡಿಕೆದಾರರು ಮನದಟ್ಟು ಮಾಡಿಕೊಂಡೇ ಮುಂದುವರೆಯಬೇಕು.

(ಆ್ಯಕ್ಸಿಸ್‌ ಮ್ಯೂಚುವಲ್‌ ಫಂಡ್‌ನ ಸಿಇಒ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry