ವೇಗ ಹೆಚ್ಚಿಸಲಿದೆ 5ಜಿ

7

ವೇಗ ಹೆಚ್ಚಿಸಲಿದೆ 5ಜಿ

Published:
Updated:
ವೇಗ ಹೆಚ್ಚಿಸಲಿದೆ 5ಜಿ

ದೇಶದ ದೂರ ಸಂಪರ್ಕ ಕ್ಷೇತ್ರದ ಅಭಿವೃದ್ಧಿ ಕೆಲವು ವರ್ಷಗಳಿಂದೀಚೆಗೆ ಗಮನಾರ್ಹ ವೇಗ ಪಡೆದುಕೊಳ್ಳುತ್ತಿದೆ. ಅದರಲ್ಲೂ ತಂತಿ ರಹಿತ ಸಂವಹನ ಸಂಪರ್ಕವು ಹೊಸ, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಮೊಬೈಲ್‌ಗಳ ಬಳಕೆಯಲ್ಲಿ ಈವರೆಗೆ ನಾಲ್ಕು ತಲೆಮಾರುಗಳ ತಂತ್ರಜ್ಞಾನವನ್ನು ನೋಡಿದ್ದೇವೆ.

ಒಂದು ತಲೆಮಾರಿನ ತಂತ್ರಜ್ಞಾನ ಹಿಂದಿನ ತಲೆಮಾರಿನ ತಂತ್ರಜ್ಞಾನಕ್ಕಿಂತ ಹೊಸ ರೂಪ ಪಡೆದುಕೊಂಡು, ಮತ್ತಷ್ಟು ಅಭಿವೃದ್ಧಿಯಾಗಿ ಬಳಕೆಗೆ ಬಂದಿದೆ. ಈಗ ಐದನೇ ತಲೆಮಾರಿನ 5G ಸಂಪರ್ಕ ವ್ಯವಸ್ಥೆ ಬಳಕೆಗೆ ಮುಕ್ತವಾಗಲು ತುದಿಗಾಲಲ್ಲಿ ನಿಂತಿದೆ.

ಈಚೆಗಷ್ಟೇ ದೇಶದ ಪ್ರಮುಖ ದೂರ ಸಂಪರ್ಕ ಸಂಸ್ಥೆಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್‌, ಚೀನಾದ ಸಂವಹನ ಸಂಪರ್ಕ ಉಪಕರಣಗಳ ತಯಾರಿಕಾ ಸಂಸ್ಥೆ ಹುವಾವೇ ಜತೆ ಭಾರತದಲ್ಲಿ 5ಜಿ ನೆಟ್‌ವರ್ಕ್‌ನ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಪರೀಕ್ಷೆಯಲ್ಲಿ ಇದರ ವೇಗ ಸೆಕೆಂಡಿಗೆ 3ಗಿಗಾಬೈಟ್‌ವರೆಗೆ ತಲುಪಿತ್ತು.

ಪ್ರಸ್ತುತ ಬಳಕೆಯಲ್ಲಿರುವ 4ಜಿ ನೆಟ್‌ವರ್ಕ್‌ ಸಾಮರ್ಥ್ಯ 100ಎಂಬಿಪಿಎಸ್‌ನಿಂದ 1ಜಿಬಿವರೆಗೆ ಇದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ವೇಗ, ಸಮರ್ಥವಾಗಿ ಅಂತರ್ಜಾಲ ಬಳಕೆ ಮಾಡುವ ಸೌಲಭ್ಯವನ್ನು ಈ ನೆಟ್‌ವರ್ಕ್‌ ಕಲ್ಪಿಸಿದೆ. ಇದರಿಂದ ಗುಣಮಟ್ಟದ ಕರೆ, ಹೆಚ್ಚು ವೇಗದ ಡೇಟಾ, ಐಪಿ ಆಧಾರಿತ ಹಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಅಲ್ಲದೆ ಈ ತಂತ್ರಜ್ಞಾನದಿಂದ LTE, Wimaxನಂತಹ ಸೌಲಭ್ಯಗಳೂ ಬಳಕೆಗೆ ಬಂದಿವೆ.

5ಜಿ ನೆಟ್‌ವರ್ಕ್‌ ತಂತ್ರಜ್ಞಾನ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದರೆ, 4ಜಿ ನೆಟ್‌ವರ್ಕ್‌ನ ಸೌಲಭ್ಯಗಳ ಜತೆಗೆ, OFDM, MC-CDMA, LAS-CDMA, UWB, LMDS ನೆಟ್‌ವರ್ಕ್ ಮತ್ತು IPV6ನಂತಹ ಹಲವು ಸೌಲಭ್ಯಗಳು ಸಿಗಲಿವೆ. ಅಲ್ಲದೆ ಸಂವಹನ ವೇಗ 4ಜಿಗಿಂತ 100ಪಟ್ಟು ಹೆಚ್ಚಾಗಲಿದೆ.

ಇದರಿಂದ ಪರಸ್ಪರ ಸಂವಹನ ಸಾಧಿಸುವ ಡಿಜಿಟಲ್‌ ಉಪಕರಣಗಳು (IOT), ಆಗ್ಯುಮೆಂಟ್‌ ರಿಯಾಲಿಟಿ, ವರ್ಚುವಲ್ ರಿಯಾಲಿಟಿಯಂತಹ ತಂತ್ರಜ್ಞಾನ ಬಳಕೆ ಮತ್ತಷ್ಟು ಹೆಚ್ಚಾಗಲಿದೆ. ಇನ್ನು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಭಾರತ ಅಗ್ರಸ್ಥಾನಕ್ಕೂ ಏರಬಹುದು.

ಬೆಂಗಳೂರಿನಲ್ಲಿ ಮಹೀಂದ್ರ ಘಟಕ

ದೇಶದ ಮೊದಲ 5ಜಿ ಪರೀಕ್ಷೆ ಯಶಸ್ವಿಯಾದ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಸಂಸ್ಥೆ ಟೆಕ್‌ ಮಹೀಂದ್ರಾ ಬೆಂಗಳೂರಿನಲ್ಲಿ  ವಿಶೇಷ ಘಟಕ ಸ್ಥಾಪಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ಅಮೆರಿಕದ ಕಂಪ್ಯೂಟರ್ ಚಿಪ್‌ ತಯಾರಿಕಾ ಸಂಸ್ಥೆ ಇಂಟೆಲ್‌ ಜತೆ ಕೈ ಜೋಡಿಸಿದ್ದು, 2019ರ ವೇಳೆಗೆ 5ಜಿ ನೆಟ್‌ವರ್ಕ್‌ ಸೇವೆಗಳನ್ನು ಬಳಕೆಗೆ ತರಲು ಮುಂದಾಗಿದೆ.

5ಜಿ ನೆಟ್‌ವರ್ಕ್‌ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ಉದ್ದೇಶದಿಂದ ಸಂಸ್ಥೆಯು ಈಗಾಗಲೇ 30,000 ಉದ್ಯೋಗಿಗಳಿಗೆ ಕೌಶಲ ತರಬೇತಿ ಕೂಡ ನೀಡಿದೆ. ಉಳಿದ 75,000 ಉದ್ಯೋಗಿಗಳೂ ಈ ವರ್ಷದಲ್ಲೇ ತರಬೇತಿ ನೀಡುವುದಾಗಿ ತಿಳಿಸಿದೆ.

5ಜಿ ನೆಟ್‌ವರ್ಕ್ ವಿಶೇಷ

* ಏಕ ಕಾಲದಲ್ಲಿ ಒಂದೇ ಆ್ಯಕ್ಸೆಸ್‌ ಪಾಯಿಂಟ್‌ನಿಂದ ವಿವಿಧ ಡಿವೈಸ್‌ಗಳಿಗೆ ಅಡೆತಡೆಯಿಲ್ಲದ ಸಂಪರ್ಕ

* ಕಡಿಮೆ ಬ್ಯಾಟರಿ ಬಳಕೆ

* ಮಿಲಿವೇಟರ್‌ ವೇವ್ ಬ್ಯಾಂಡ್ ಅಳವಡಿಕೆ

* ವೈ–ಫೈ ಸಂಪರ್ಕದಲ್ಲಿ ಸೆಕೆಂಡ್‌ಗೆ 10ಜಿಬಿವರೆಗೆ ವೇಗ

* ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ

* ಎರಡೂವರೆ ಗಂಟೆ ಅವಧಿಯ ಚಲನಚಿತ್ರ 5 ಸೆಕೆಂಡುಗಳಲ್ಲಿ ಡೌನ್‌ಲೋಡ್‌ ಆಗುತ್ತದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry