ಚಂದ್ರನ ಮೇಲೆ 4ಜಿ

7

ಚಂದ್ರನ ಮೇಲೆ 4ಜಿ

Published:
Updated:
ಚಂದ್ರನ ಮೇಲೆ 4ಜಿ

ರಜಾದಿನಗಳನ್ನು ಕಳೆಯಲು ಚಂದ್ರಲೋಕಕ್ಕೆ ಹೋಗುವಂತಾದರೆ, ಅಲ್ಲೂ ಮೊಬೈಲ್‌ ನೆಟ್‌ವರ್ಕ್‌ ಇದ್ದರೆ, ಅಲ್ಲಿಂದ ಫೇಸ್‌ಬುಕ್ ಮತ್ತು ವಾಟ್ಸ್ಆ್ಯಪ್ ನೋಡುವಂತಿದ್ದರೆ, ಉತ್ತಮ ಗುಣಮಟ್ಟದ ಚಿತ್ರ ಹಾಗೂ ವಿಡಿಯೊಗಳನ್ನು ಕಳಿಸುವಂತಿದ್ದರೆ, ಭೂಮಿಯ ಮೇಲಿನ ಆಗುಹೋಗುಗಳ ಬಗ್ಗೆ ಮಾಹಿತಿ ತಿಳಿಯುವಂತಿದ್ದರೆ... ಹೀಗೆ ನೂರೆಂಟು ಬಗೆಯ ಕನಸುಗಳನ್ನು ಕಾಣಬಹುದೇನೊ.

ಹೌದು, ಮೇಲ್ನೋಟಕ್ಕೆ ಇದು ಕನಸಿನಂತೆ ತೋರುತ್ತದೆ. ಆದರೆ, ಇದು ಕೂಡ ನನಸಾಗುವ ದಿನಗಳು ಹತ್ತಿರ ಬಂದಿವೆ. ಚಂದ್ರನ ಮೇಲೂ 4ಜಿ ನೆಟ್‌ವರ್ಕ್‌ ಸಿಗುವ ಸಮಯ ಸಮೀಪಿಸುತ್ತಿದೆ.

ಬ್ರಿಟನ್‌ನ ಟೆಲಿಕಾಂ ದಿಗ್ಗಜ ಕಂಪನಿ ವೊಡಾಫೋನ್ ಚಂದ್ರನ ಮೇಲೆ 4ಜಿ ಜಾಲವನ್ನು ಸ್ಥಾಪಿಸಲು ಮುಂದಾಗಿದೆ. ಮುಂದಿನ ವರ್ಷ ಈ ಯೋಜನೆ ಆರಂಭವಾಗಲಿದೆ. ಜರ್ಮನಿ ಮೂಲದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಗುಂಪು ‘ಪಿಟಿ ಸೈಂಟಿಸ್ಟ್‌’ನ ಮಿಷನ್‌ ಒಂದಕ್ಕೆ ಈ 4ಜಿ ಸೇವೆ ಆರಂಭಿಸಲಾಗುತ್ತಿದೆ. ನೋಕಿಯಾ ಕಂಪನಿಯನ್ನು ತಂತ್ರಜ್ಞಾನ ಪಾಲುದಾರನನ್ನಾಗಿ ಈ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ. ಆಡಿ ಕಂ‍ಪನಿ ಸಹ ಕೈಜೋಡಿಸಿದೆ.

‘ಚಂದ್ರನ ಮೇಲೆ ‘ನಾಸಾ’ದ ಬಾಹ್ಯಾಕಾಶ ಯಾತ್ರಿಗಳು ನಡೆದಾಡಿ ಮಾಹಿತಿ ಸಂಗ್ರಹಿಸಿ 50 ವರ್ಷಗಳು ಗತಿಸಿವೆ. ಇದೀಗ ಚಂದ್ರನ ಮೇಲೆ ‘4ಜಿ’ ಸೇವೆ ದೊರೆಯುವ ದಿನಗಳೂ ಸಮೀಪಿಸುತ್ತಿವೆ. ಚಂದ್ರನ ಮೇಲೆ 2019ರಲ್ಲಿ ನಮ್ಮ ಸಂಪರ್ಕ ಜಾಲ ಇರುತ್ತದೆ’ ಎಂದು ವೊಡಾಫೋನ್ ಕಂಪನಿಯ ವಕ್ತಾರರೊಬ್ಬರು ಹೇಳಿದ್ದಾರೆ. ಖಾಸಗಿ ಹೂಡಿಕೆಯಲ್ಲಿ ಚಂದ್ರನ ಮೇಲೆ ಕೈಗೊಳ್ಳುತ್ತಿರುವ ಮೊದಲ ಯೋಜನೆ ಇದಾಗಿದೆ.

ಸ್ಪೇಸ್‌ ಎಕ್ಸ್ ಫಾಲ್ಕನ್‌ 9 ರಾಕೆಟ್‌ನಿಂದ ಕೇಪ್‌ಕೆನವರಲ್‌ನಿಂದ ಚಂದ್ರನ ಮೇಲಿನ ಮಿಷನ್‌ ಮುಂದಿನ ವರ್ಷ ಉಡಾವಣೆಯಾಗಲಿದೆ. ವೊಡಾಫೋನ್‌ ಪರೀಕ್ಷೆ ಮಾಡಿರುವ ಪ್ರಕಾರ ಮೂಲ ಸ್ಪೇಷನ್‌ನಿಂದ (ಬೇಸ್‌ ಸ್ಟೇಷನ್‌) 4ಜಿ ಪ್ರಸಾರ ಮಾಡುವ ಸಾಮರ್ಥ್ಯ ಹೊಂದಿದೆ. ಇದು 1800 MHz ತರಂಗಾಂತರ ಬ್ಯಾಂಡ್‌ನಲ್ಲಿರುತ್ತದೆ. ಅಲ್ಲಿಂದ ಮೊದಲ ಬಾರಿಗೆ ಚಂದ್ರನ ಅಂಗಣದ ಲೈವ್‌ ಎಚ್‌.ಡಿ. ವಿಡಿಯೊ ಕಳಿಸಿಕೊಡಲಿದೆ. ಬರ್ಲಿನ್‌ನಲ್ಲಿರುವ ಮಿಷನ್‌ ಕಂಟ್ರೋಲ್‌ ಕೇಂದ್ರದ ಮೂಲಕ ಈ ಯೋಜನೆಯನ್ನು ನಿರ್ವಹಿಸಲಾಗುತ್ತದೆ.

1972ರಲ್ಲಿ ಚಂದ್ರನ ಮೇಲೆ ಮಾನವ ಮೊದಲ ಬಾರಿಗೆ ಕಾಲೂರಿದ್ದ. ಆನಂತರ ಯಾವುದೇ ಗಗನಯಾತ್ರಿಗಳು ಚಂದ್ರನ ಅಂಗಣದಲ್ಲಿ ಕಾಲಿಟ್ಟಿಲ್ಲ.  1972ರಲ್ಲಿ ನಾಸಾದ ಅಪೊಲೊ 17 ರೋವರ್‌ಗಳನ್ನು ಅಲ್ಲೇ ಬಿಡಲಾಗಿದೆ. ಈಗ ಚಂದ್ರನ ಮೇಲಿನ ಮಿಷನ್‌ನಲ್ಲಿ ಇದರ ಬಗ್ಗೆಯೂ ಅಧ್ಯಯನ ಮಾಡಲಾಗುತ್ತದೆ.

‘ಸೌರ ಮಂಡಲದ ಸಮಗ್ರ ಅಧ್ಯಯನ ಮಾಡಬೇಕು ಎಂಬುದು ನಮ್ಮಮುಂದಿನ ಗುರಿಯಾಗಿದೆ’ ಎಂದು ಪಿಟಿ ಸೈಂಟಿಸ್ಟ್‌ನ ಸಿಇಒ ರಾಬರ್ಟ್ ಬೊಹ್ಮೆ ಹೇಳಿದ್ದಾರೆ.

‘ಚಂದ್ರನ ಸಮಗ್ರ ಅಧ್ಯಯನದ ಜತೆಗೆ ಈ ನಮ್ಮ ಮಿಷನ್‌ ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಗಗನಯಾನದಲ್ಲಿ ದತ್ತಾಂಶ ಜಾಲದ ಸುಧಾರಣೆ, ಸಂಸ್ಕರಣ, ಸಂವಹನ ಮೂಲಸೌಕರ್ಯ ಸುಧಾರಿಸಲು ಅನುಕೂಲವಾಗಲಿದೆ’ ಎನ್ನುತ್ತಾರೆ ನೋಕಿಯಾದ ಮುಖ್ಯ ತಾಂತ್ರಿಕ ಅಧಿಕಾರಿ ಮಾರ್ಕಸ್ ವೆಲ್ಡನ್‌.

 

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 2

  Sad
 • 0

  Frustrated
 • 0

  Angry