ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ನಿರ್ಧಾರಕ್ಕೆ ಮಹಿಳೆ ಹೆಚ್ಚು ಸಮರ್ಥಳು

Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುವ ಸಂಸ್ಥೆಗಳ ಚುಕ್ಕಾಣಿ ಹಿಡಿಯುವುದರಿಂದ, ಕ್ರೀಡಾ ಕ್ಷೇತ್ರದಲ್ಲಿ ಪದಕಗಳನ್ನು ಗೆಲ್ಲುವವರೆಗೆ, ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುವುದರಿಂದ ಮನೆ–ಮಕ್ಕಳು, ಸಂಸಾರ ನಿರ್ವಹಣೆಯವರೆಗೆ... ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿದ್ದಾರೆ. ಅವರ ಕಠಿಣ ಪರಿಶ್ರಮ, ಅರ್ಪಣಾ ಭಾವವು ವಿಶ್ವದಾದ್ಯಂತ ಇನ್ನೂ ಲಕ್ಷಾಂತರ ಮಂದಿಗೆ ಪ್ರೇರಣೆ ನೀಡುತ್ತದೆ. ಇಂದಿನ ದಿನಮಾನಗಳಲ್ಲಿ ‘ಮಹಿಳೆಯರು ಪುರುಷರನ್ನು ಮೀರಿಸುವಂತಹ ಸಾಧನೆ ಮಾಡುತ್ತಿದ್ದಾರೆ’ ಎಂಬುದರಲ್ಲಿ ಅನುಮಾನವೇ ಇಲ್ಲ.

ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಮಹಿಳೆ ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳುತ್ತ, ಕುಟುಂಬದ ಏಳಿಗೆಗೆ ಶ್ರಮಿಸುವುದರ ಜತೆಗೆ ಒಟ್ಟಾರೆ ಅರ್ಥವ್ಯವಸ್ಥೆಗೂ ಮಹತ್ವದ ಕಾಣಿಕೆ ಕೊಡುತ್ತಿದ್ದಾಳೆ. ಸದ್ಯಕ್ಕೆ ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ)   ಶೇ 17ರಷ್ಟು ಕಾಣಿಕೆ ಮಹಿಳೆಯರಿಂದಲೇ ಬರುತ್ತಿದೆ.

ಭಾರತೀಯ ಸಾಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಯಲ್ಲಿ ಹಣಕಾಸಿನ ಜವಾಬ್ದಾರಿಯನ್ನು ಪುರುಷರೇ ನಿರ್ವಹಿಸಿಕೊಂಡು ಬಂದಿದ್ದಾರೆ. ಈ ಸ್ಥಿತಿ ಈಗ ಬದಲಾಗುತ್ತಿದೆ. ಭಾರತದ ಇಂದಿನ ಮಹಿಳೆ, ತನ್ನ ಹಣಕಾಸಿನ ಅಗತ್ಯಗಳಿಗಾಗಿ ತಂದೆ, ಸಹೋದರ ಅಥವಾ ಪತಿಯನ್ನು ಅವಲಂಬಿಸುವುದಿಲ್ಲ. ತನ್ನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುತ್ತಾ, ಕುಟುಂಬದ ಆರ್ಥಿಕ ಅಭಿವೃದ್ಧಿಗೂ ನೆರವಾಗುತ್ತಿದ್ದಾಳೆ. ಹಣಕಾಸಿನ ನಿರ್ವಹಣೆ, ಹೂಡಿಕೆ ಮುಂತಾದ ವಿಚಾರಗಳಲ್ಲೂ ಆಕೆ ಮಹತ್ವದ ಪಾತ್ರ ವಹಿಸುತ್ತಿದ್ದಾಳೆ. ಇದು ಭಾರತದ ಕೌಟುಂಬಿಕ ವ್ಯವಸ್ಥೆಯಲ್ಲಾಗುತ್ತಿರುವ ಸಕಾರಾತ್ಮಕ ಬೆಳವಣಿಗೆ.

ಮಹಿಳೆಯಲ್ಲಾಗಿರುವ ಈ ಬದಲಾವಣೆಯಿಂದ ನಮ್ಮ ಕುಟುಂಬಗಳು ಬಲಗೊಳ್ಳುತ್ತಿವೆ. ಹಣಕಾಸಿನ ನಿರ್ವಹಣೆಯ ವಿಚಾರದಲ್ಲಿ ಮಹಿಳೆಯು ಪುರುಷರಿಗಿಂತ ಹಲವು ಪಟ್ಟು ಸಮರ್ಥಳು. ನಮ್ಮ ತಾಯಂದಿರು ಇದಕ್ಕೆ ಒಳ್ಳೆಯ ಉದಾಹರಣೆ. ಪತಿಯ ಸೀಮಿತ ಆದಾಯದಲ್ಲೂ ಕುಟುಂಬದ ಖರ್ಚುವೆಚ್ಚಗಳನ್ನು ನಿಭಾಯಿಸುವ ಅವರು, ಅದರಲ್ಲೇ ಒಂದಿಷ್ಟು ಉಳಿತಾಯವನ್ನೂ ಮಾಡುವುದನ್ನು ನಾವು ನೋಡುತ್ತ ಬಂದಿದ್ದೇವೆ.

ಹಣ ಹೂಡಿಕೆ ವಿಚಾರದಲ್ಲಿ ಮಹಿಳೆಯರು, ಪುರುಷರಿಗಿಂತ ಹೆಚ್ಚು ಜಾಣತನದಿಂದ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ವಿದೇಶಗಳಲ್ಲಿ ನಡೆದ ಅನೇಕ ಅಧ್ಯಯನಗಳಿಂದ ದೃಢಪಟ್ಟಿದೆ.  ಪುರುಷರಿಗಿಂತ ಮಹಿಳೆಯರು  ಹೆಚ್ಚು ಹಣ ಉಳಿಸುತ್ತಾರೆ. ಅವರ ಹೂಡಿಕೆ ನಿರ್ಧಾರಗಳು ಹೆಚ್ಚು ಲಾಭವನ್ನೂ ತಂದುಕೊಡುತ್ತವೆ ಎನ್ನುವುದು ಫಿಡೆಲಿಟಿ ಇನ್‌ವೆಸ್ಟಮೆಂಟ್ಸ್‌ನ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

ರೊತ್‌ಸ್ಟೀನ್‌ ಕಾಸ್‌ ಇನ್‌ಸ್ಟಿಟ್ಯೂಟ್‌ ನಡೆಸಿದ ಅಧ್ಯಯನವೂ, ‘ಮಹಿಳೆಯರು ನಿರ್ವಹಿಸುವ ಹೂಡಿಕೆ ಯೋಜನೆಗಳ ನಿಧಿಗಳು ಒಳ್ಳೆಯ ಅಭಿವೃದ್ಧಿ ದಾಖಲಿಸುತ್ತಿವೆ’ ಎಂದು ಸಾಬೀತುಪಡಿಸಿದೆ. ಅನೇಕ ಪುರುಷರಲ್ಲಿ ಇದು ಅಚ್ಚರಿ ಮೂಡಿಸಬಹುದು. ಈ ಸಾಧನೆಗೆ ಕಾರಣ ಸರಳವಾಗಿದೆ. ಹಣಕಾಸಿನ ನಿರ್ವಹಣೆಯ ವಿಚಾರದಲ್ಲಿ ಮಹಿಳೆಯರು ಪುರುಷರಿಗಿಂತ ಬುದ್ಧಿವಂತರು.

ಖರ್ಚು–ವೆಚ್ಚ ಸರಿದೂಗಿಸುವ ಸಾಮರ್ಥ್ಯ

ಕುಟುಂಬದ ಖರ್ಚು ವೆಚ್ಚಗಳನ್ನು ಸರಿದೂಗಿಸುವುದರಲ್ಲಿ ಮಹಿಳೆಯರು ಹೆಚ್ಚು ಪರಿಣತರು ಎಂಬುದು ಬಾರಿಬಾರಿಗೆ ಸಾಬೀತಾಗಿರುವ ಸತ್ಯ. ಕುಟುಂಬದ ವಿಚಾರವನ್ನೇ ತೆಗೆದುಕೊಳ್ಳಿ. ಒಟ್ಟಾರೆ ಖರ್ಚುವೆಚ್ಚಗಳನ್ನು ಸರಿಯಾಗಿ ನಿರ್ವಹಿಸಿ, ಕುಟುಂಬಕ್ಕೆ ಗೌರವಯುತ ಬದುಕನ್ನು ಕೊಡುವುದರಲ್ಲಿ ಮಹಿಳೆಯರು ನಿಸ್ಸೀಮರು.

ಪುನಃ ನಮ್ಮ ತಾಯಿ ಅಥವಾ ಅಜ್ಜಿಯರನ್ನು ನೆನಪಿಸಿಕೊಳ್ಳೋಣ. ಅವರು ಉಳಿತಾಯದ ಹಣವನ್ನು ಆಹಾರ ಪದಾರ್ಥಗಳಿಗೆ ಇಷ್ಟು, ಬಟ್ಟೆಬರೆಗೆ ಇಷ್ಟು, ಇತರ ವೆಚ್ಚಗಳಿಗೆ ಇಂತಿಷ್ಟು... ಎಂದು ಬೇರೆ ಬೇರೆ ಡಬ್ಬಿಗಳಲ್ಲಿ ಸಂಗ್ರಹಿಸಿಡುವುದನ್ನು ನಾವು ನೋಡಿದ್ದೇವೆ. ಈ ಪದ್ಧತಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುತ್ತದೆ. ಜತೆಗೆ ಪ್ರತಿ ತಿಂಗಳೂ ನಿಗದಿತ ಮೊತ್ತ ಉಳಿತಾಯ ಆಗುತ್ತಿರುವುದನ್ನು ಖಚಿತಪಡಿಸುತ್ತದೆ.

ದೀರ್ಘಾವದಿಯ ಮುನ್ನೋಟ

ಮಹಿಳೆಯರು ದೀರ್ಘ ಕಾಲದವರೆಗೂ ಹಣವನ್ನು ಉಳಿತಾಯ ಮಾಡಿ, ಪೂರ್ವನಿರ್ಧಾರಿತ ಗುರಿಯ ಈಡೇರಿಕೆಗೆ ಬಳಸುವುದನ್ನು ನೋಡಿದ್ದೇವೆ. ಇದು ಮಹಿಳೆಯರಲ್ಲಿ ಮಾತ್ರ ಕಂಡುಬರುವ  ಹಣ ಹೂಡಿಕೆಯ ವಿಶೇಷ ಗುಣವಾಗಿದೆ. ಅವರು ಅಲ್ಪಾವಧಿಯ ಲಾಭದ ಆಮಿಷಕ್ಕೆ ಒಳಗಾಗುವುದಿಲ್ಲ. ಸಂಪತ್ತಿನ ಕ್ರೋಡೀಕರಣಕ್ಕೆ ದೀರ್ಘಾವಧಿಯ ಹೂಡಿಕೆ ಅನಿವಾರ್ಯ ಎಂಬುದು ಸಾಮಾನ್ಯ ಅರ್ಥಶಾಸ್ತ್ರಜ್ಞನಿಗೂ ತಿಳಿದಿರುವ ಸತ್ಯ. ಮಹಿಳೆಯರು ಇದನ್ನು ಸಮರ್ಥವಾಗಿ ಕೃತಿಗೆ ಇಳಿಸುತ್ತಾರೆ.

ಶಿಸ್ತುಬದ್ಧ ನಿರ್ವಹಣೆ

ದೊಡ್ಡ ಮೊತ್ತವನ್ನು ಉಳಿತಾಯ ಮಾಡಿ, ಜೀವನದ ಗುರಿಗಳನ್ನು ಸಾಧಿಸಬೇಕಾದರೆ ಶಿಸ್ತುಬದ್ಧ ಆರ್ಥಿಕ ನಿರ್ವಹಣೆ ಅನಿವಾರ್ಯ. ಆರ್ಥಿಕ ಶಿಸ್ತಿನ ವಿಚಾರದಲ್ಲಿ ಮಹಿಳೆಯರೇ ಶ್ರೇಷ್ಠರು ಎಂಬುದು ನಿರ್ವಿವಾದ. ಆದಾಯದಲ್ಲಿ ಅವರು ಒಂದಿಷ್ಟನ್ನು ಬೇರೆಯಾಗಿ ಎತ್ತಿಡುತ್ತಾರೆ. ಹೀಗೆ ಉಳಿಸಿದ ಹಣವನ್ನು ಹಿಂದೆಲ್ಲ ಅವರು ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದರು. ಈಗ ಅವರಲ್ಲೂ ಜಾಗೃತಿ ಮೂಡಿ, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.

ಕಲಿಕೆಗೆ ಆಸಕ್ತಿ

ಕುಟುಂಬಕ್ಕೆ ಭದ್ರ ಭವಿಷ್ಯವನ್ನು ರೂಪಿಸುವುದು ಯಾವತ್ತೂ ಮಹಿಳೆಯರ ಆದ್ಯತೆಯಾಗಿರುತ್ತದೆ. ಈ ಗುರಿ ಸಾಧಿಸಲು ಎಲ್ಲೆಲ್ಲಿ ಹೂಡಿಕೆಯ ಅವಕಾಶಗಳಿವೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಅವರು ಹೆಚ್ಚು ಆಸಕ್ತಿ ತೋರಿಸುತ್ತಾರೆ.

ಸಾಮಾನ್ಯವಾಗಿ ಪುರುಷರೇ ಹಣಕಾಸಿನ ನಿರ್ವಹಣೆ ಮಾಡುತ್ತಿದ್ದರೂ, ಮಹಿಳೆಯರು ಸಹ ಈಗ ಆ ಕ್ಷೇತ್ರದಲ್ಲಿ ಪರಿಣತಿ ಪಡೆಯುತ್ತಿದ್ದಾರೆ. ಈ ಕಲಿಕಾ ಆಸಕ್ತಿ ಅವರಲ್ಲಿ ಹೆಚ್ಚು ಆತ್ಮವಿಶ್ವಾಸ ತುಂಬುತ್ತಿದೆ. ಜತೆಗೆ ತಮ್ಮ ಹಣವನ್ನು ತಾವೇ ನಿರ್ವಹಿಸುವ ಸಾಮರ್ಥ್ಯವನ್ನೂ ನೀಡುತ್ತಿದೆ.

ವಿಶ್ಲೇಷಣಾತ್ಮಕ ದೃಷ್ಟಿಕೋನ

ಹಣಕಾಸಿನ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರು ಪುರುಷರಿಗೆ ಶಕ್ತಿ ತುಂಬುತ್ತಿದ್ದಾರೆ. ಈ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ವಿಶ್ಲೇಷಣಾತ್ಮಕವಾಗಿಯೂ ಇರುತ್ತಾರೆ. ಪುರುಷರು ‘ಧೈರ್ಯ ಪ್ರದರ್ಶನ’ ಮಾಡಲು ಮುಂದಾದರೆ ಮಹಿಳೆಯರು ಕಾಯ್ದು, ಅಂಕಿ ಅಂಶಗಳ ಆಧಾರದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುತ್ತಾಳೆ. ಈ ಕಾರಣಕ್ಕೇ ಮಹಿಳೆಯರು ದೀರ್ಘಾವಧಿಯ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ಒಳ್ಳೆಯ ಆದಾಯ ತಂದುಕೊಡುತ್ತದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಬೇರೆಬೇರೆ ಕಾರಣಗಳಿಗೆ ಮಹಿಳೆಯರನ್ನು ಅಭಿನಂದಿಸಲಾಗುತ್ತದೆ. ಎಲ್ಲ ಸಾಧನೆಗಳ ಜತೆಗೆ, ಹಣಕಾಸಿನ ನಿರ್ವಹಣೆಯ ವಿಚಾರದಲ್ಲೂ ಅವರು ಅಭಿನಂದನಾರ್ಹರು. ಇದು ಒಟ್ಟಾರೆ ಸಮಾಜದ ಶಾಂತಿ, ಅಭಿವೃದ್ಧಿಗೆ ಪೂರಕವಾದುದು.

(ಆ್ಯಕ್ಸಿಸ್‌ ಸೆಕ್ಯುರಿಟೀಸ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT