ಚಾಲಕರಹಿತ ಕಾರ್ ನಿಯಂತ್ರಿಸುವ ಮೊಬೈಲ್

7

ಚಾಲಕರಹಿತ ಕಾರ್ ನಿಯಂತ್ರಿಸುವ ಮೊಬೈಲ್

Published:
Updated:
ಚಾಲಕರಹಿತ ಕಾರ್ ನಿಯಂತ್ರಿಸುವ ಮೊಬೈಲ್

ಮೊಬೈಲ್‌ ಬಳಕೆಯ ಅನಂತ ಸಾಧ್ಯತೆಗಳ ಬಗ್ಗೆ ವಿಶ್ವದಾದ್ಯಂತ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಲೇ ಇವೆ. ಒಂದು ಕಾಲದಲ್ಲಿ ಕೇವಲ ಸಂವಹನ ಸಾಧನವಾಗಿದ್ದ ಮೊಬೈಲ್‌ ಇಂದು ಸಾವಿರಾರು ಉಪಯೋಗಗಳಿಗೆ ಬಳಕೆಯಾಗುತ್ತಿದೆ. ಮೊಬೈಲ್‌ನ ಮೌಲ್ಯವರ್ಧನೆಯಾಗುತ್ತಲೇ ಇದೆ. ಸದ್ಯ ತಂತ್ರಜ್ಞಾನ ಲೋಕದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ಹೆಚ್ಚು ಸದ್ದು ಮಾಡುತ್ತಿದೆ. ಇದಿಲ್ಲದೆ ಯಾವುದೂ ಇಲ್ಲ ಎಂಬಂತೆ ಆಗುತ್ತಿದೆ. ಎಲ್ಲದರಲ್ಲೂ ‘ಎಐ’ ಬಳಕೆಯಾಗುತ್ತಿದೆ. ಕೃತಕ ಬುದ್ಧಿಮತ್ತೆಯ ಮೊಬೈಲ್‌ ಕೂಡ ಈಗ ಈ ಪಟ್ಟಿಗೆ ಸೇರ್ಪಡೆಯಾಗುತ್ತಿದೆ.

ಹುವಾವೆ ಕಂಪನಿಯು ಇತ್ತೀಚೆಗೆ ಬಾರ್ಸಿಲೋನಾದಲ್ಲಿ ನಡೆದ ಜಾಗತಿಕ ಮೊಬೈಲ್‌ ಕಾಂಗ್ರೆಸ್‌ನಲ್ಲಿ ಕೃತಕ ಬುದ್ಧಿಮತ್ತೆಯ ಮೊಬೈಲ್‌ ಅನ್ನು ಪ್ರದರ್ಶನ ಮಾಡಿತು. ಇದರಲ್ಲಿ ಅಂತಹದೇನೂ ವಿಶೇಷವಿಲ್ಲ ಬಿಡಿ. ಆದರೆ, ಈ ಮೊಬೈಲ್‌ ಚಾಲಕರಹಿತ ಕಾರನ್ನು ನಿಯಂತ್ರಣ ಮಾಡುತ್ತದೆ. ಕಾರು ಚಲಾಯಿಸಲು ಈ ಮೊಬೈಲ್‌ ಬಳಸಿರುವ ಬಗ್ಗೆ ಪ್ರಾತ್ಯಕ್ಷಿತೆಯನ್ನೂ ತೋರಿಸಿ ಕಂಪನಿ ಅಚ್ಚರಿ ಮೂಡಿಸಿದೆ.

ಹುವಾವೆ ತನ್ನ ‘ರೋಡ್‌ ರೀಡರ್‌’ ಹೆಸರಿನ ಪ್ರಾಜೆಕ್ಟ್‌ ಅಡಿ ಈ ಪ್ರಯೋಗ ನಡೆಸಿದೆ. ಇದಕ್ಕಾಗಿ ‘ಮೇಟ್‌ 10 ಪ್ರೊ’ ಎಂಬ ಸಾಧನ ಬಳಸಲಾಗಿದೆ. ರಸ್ತೆಯಲ್ಲಿ ಕಾರು ಸಾಗುವಾಗ ಎದುರಾಗುವ ನಾಯಿ, ಬೆಕ್ಕು, ಚೆಂಡು ಮತ್ತು ಬೈಸಿಕಲ್‌ ಸೇರಿದಂತೆ ಹಲವು ವಸ್ತುಗಳನ್ನು ಈ ಸಾಧನ ಗುರುತಿಸುತ್ತದೆ. ಇದಕ್ಕಿರುವ ಬುದ್ಧಿವಂತಿಕೆಯಿಂದ ಕಾರು ಯಾವುದಕ್ಕೂ ಡಿಕ್ಕಿ ಹೊಡೆಯದಂತೆ ತಡೆಯುತ್ತದೆ. ಅಲ್ಲದೆ ಯಾವುದೇ ವಸ್ತು ಇಲ್ಲವೇ ಪ್ರಾಣಿ ಅಡ್ಡಬಂದರೆ ಏನು ಮಾಡಬೇಕು ಎಂಬ ಬಗ್ಗೆ ಸೂಕ್ತವಾದ ತೀರ್ಮಾನ ಕೈಗೊಳ್ಳುತ್ತದೆ.

(ಕೃತಕಬುದ್ಧಿ ಮೊಬೈಲ್ ನಿಯಂತ್ರಣದಲ್ಲಿ ಸಾಗುತ್ತಿರುವ ಹುವಾಯಿ ಕಂಪನಿಯ ಕಾರು)

ಸಾಮಾನ್ಯವಾಗಿ ಚಾಲಕರಹಿತ ಕಾರುಗಳಿಗಿರುವ ದೊಡ್ಡ ಶಕ್ತಿ ಎಂದರೆ ರಸ್ತೆಯ ಮೇಲಿನ  ಮತ್ತು ಪಕ್ಕದ ವಸ್ತುಗಳನ್ನು ಸರಿಯಾಗಿ ಗುರುತಿಸುವುದು. ಹುವಾವೆ ಇದೀಗ ಪೋರ್ಸೆ ಪನಮೇರಾ ಕಾರನ್ನು ಈ ಪ್ರಯೋಗಕ್ಕೆ ಬಳಸಿದೆ. ಈ ಕಾರು ತನ್ನ ಸುತ್ತಲಿನ ಎಲ್ಲ ಚಟುವಟಿಕೆಗಳನ್ನೂ ಅರ್ಥೈಸಿಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸ್ವಯಂಚಾಲಿತವಾಗಿ ವಸ್ತುಗಳನ್ನು ಗುರುತಿಸುವ ಇದರೊಂದಿಗೆ ಕೃತಕ ಬುದ್ಧಿಮತ್ತೆಯ ಮೊಬೈಲ್ ಸೇರಿರುವುದರಿಂದ ‘ಮೇಟ್‌ 10 ಪ್ರೊ’ ಸಾಧನ ಮತ್ತಷ್ಟು ಶಕ್ತಿ ‍ಪಡೆದುಕೊಂಡಿದೆ.

‘ನಮ್ಮ ಸ್ಮಾರ್ಟ್‌ಫೋನ್‌ ಈಗಾಗಲೇ ವಸ್ತುಗಳನ್ನು ಸುಸ್ಪಷ್ಟವಾಗಿ ಗುರುತಿಸುತ್ತದೆ. ಇದು ಕೇವಲ ಚಾಲಕ ರಹಿತ ಕಾರಿನ ಚಾಲನೆಗೆ ಮಾತ್ರವಲ್ಲದೆ ಕೃತಕ ಬುದ್ಧಿಮತ್ತೆ  ತಂತ್ರಜ್ಞಾನದ ಮತ್ತಷ್ಟು ಸಾಧ್ಯತೆಗಳ ಬಗ್ಗೆಯೂ ಯೋಚಿಸುವಂತೆ ಮಾಡಿದೆ’ ಎಂದು  ಹುವಾವೆ ಕಂಪನಿಯ ಪಶ್ಚಿಮ ಯುರೋಪ್‌ ಸಿಎಂಒ ಆಂಡ್ರ್ಯೂ ಗಿರಿಹೆ ಹೇಳುತ್ತಾರೆ.

ಕೃತಕ ಬುದ್ಧಿಮತ್ತೆಯ ಲಕ್ಷಣಗಳನ್ನು ಹೊಂದಿರುವ ಮೊಬೈಲ್‌ ಚಿಪ್‌ಗಳು ಈಗಾಗಲೇ ಬಂದಿವೆ. ಇವುಗಳಲ್ಲಿ ಆ್ಯ‍ಪಲ್‌ನ ಎ11 ಬಯೋನಿಕ್, ಹುವಾವೆಯ ಕಿರಿನ್‌ 970 ಹಾಗೂ ಸ್ಯಾಮ್ಸಂಗ್‌ನ ಎಕ್ಸಿನೊಸ್‌ 9810 ಮುಖ್ಯವಾದವು. ಇದೀಗ ಈ ಕೃತಕ ಬುದ್ಧಿಮತ್ತೆ ಚಾಲಕರಹಿತ ಕಾರಿಗೂ ಬಳಕೆಯಾಗುತ್ತಿದೆ.

ಚಾಲಕರಹಿತ ಕಾರುಗಳಲ್ಲಿ ಸಾಮಾನ್ಯವಾಗಿ ಕ್ಯಾಮೆರಾ, ರಡಾರ್ ಮತ್ತು ಲಿಡರ್‌ಗಳನ್ನು ಬಳಸಿ ಕಾರುಗಳು ಯಾವುದೇ ವಸ್ತು ಮತ್ತು ಪ್ರಾಣಿಗಳಿಗೆ ಡಿಕ್ಕಿಯಾಗುವುದನ್ನು ತಡೆಯಲಾಗುತ್ತದೆ. ಆದರೆ ಕೃತಕಬುದ್ಧಿಮತ್ತೆಯ ಮೊಬೈಲ್ ಬಳಕೆಯಿಂದ ಕಾರು ಚಲಿಸುವ ಪಥವನ್ನು ಸ್ವಯಂಚಾಲಿತವಾಗಿ ಗುರುತಿಸುವುದು ಇನ್ನೂ ಸರಳವಾಗಲಿದೆ.

ಹುವಾವೆ ಮತ್ತಷ್ಟು ಯೋಜನೆಗಳು

ಚೀನಾದ ಬೈದು ಕಂಪನಿ ಜತೆಗೂಡಿ ಹಲವು ಯೋಜನೆಗಳಿಗೆ ಹುವಾವೆ ಕಂಪನಿಯು ಡಿಸೆಂಬರ್‌ನಲ್ಲಿ ಒಪ್ಪಂದ ಮಾಡಿಕೊಂಡಿದೆ. ಮೊಬೈಲ್ ಕೃತಕಬುದ್ಧಿಮತ್ತೆ  ವ್ಯವಸ್ಥೆ ರೂಪಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶ. ಇಲ್ಲದೆ ಬೈದು ಹಾಗೂ ಹುವಾವೆ ಜತೆಗೂಡಿ ಮೊಬೈಲ್‌ಗಳಲ್ಲಿ ಧ್ವನಿ ಮತ್ತು ಚಹರೆ ಗುರುತಿಸುವ ಸುಧಾರಿತ ಸ್ಮಾರ್ಟ್‌ ಸಾಧನಗಳನ್ನು ಸಿದ್ಧಪಡಿಸುತ್ತಿವೆ. ಅಲ್ಲದೆ ಇದಕ್ಕೆ ಸೂಕ್ತವಾಗುವಂತಹ ‘ಎಆರ್’ ತಂತ್ರಾಂಶ ಮತ್ತು ಹಾರ್ಡ್‌ವೇರ್‌ ರೂಪಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry