‘ಕರ್ತವ್ಯದ ನಿರ್ವಹಣೆಯಷ್ಟೇ ನಮ್ಮ ಜವಾಬ್ದಾರಿ’

ಸೋಮವಾರ, ಮಾರ್ಚ್ 25, 2019
28 °C

‘ಕರ್ತವ್ಯದ ನಿರ್ವಹಣೆಯಷ್ಟೇ ನಮ್ಮ ಜವಾಬ್ದಾರಿ’

Published:
Updated:
‘ಕರ್ತವ್ಯದ ನಿರ್ವಹಣೆಯಷ್ಟೇ ನಮ್ಮ ಜವಾಬ್ದಾರಿ’

ಶಿಕ್ಷಣ ಸಂಸ್ಥೆಗಳನ್ನು ನಡೆಸುವಾಗ ಅಥವಾ ನುಡಿಸಿರಿ–ವಿರಾಸತ್‌ನಂತಹ ಬೃಹತ್‌ ಕಾರ್ಯಕ್ರಮಗಳು ನಡೆಯುವಾಗ ‘ಸಮಾಜಕ್ಕೆ ಒಳಿತೇ ಆಗಲಿ’ ಎಂಬ ಪ್ರಾರ್ಥನೆ ಸದಾ ಮನಸ್ಸಿನಲ್ಲಿ ಇರುತ್ತದೆಯೇ ಹೊರತು, ನಾನಿದನ್ನೆಲ್ಲ ಮಾಡುತ್ತಿದ್ದೇನೆ ಎಂಬ ಹೊರೆಯನ್ನು ಹೊತ್ತುಕೊಳ್ಳುವುದಿಲ್ಲ. ಹಾಗಾಗಿ ಕೆಲಸದಲ್ಲಿ ಎದುರಾಗುವ ಚಿಕ್ಕಪುಟ್ಟ ಟೆನ್ಷನ್‌ಗಳು ಹಾಗೆಯೇ ಸರಿದು ಹೋಗುತ್ತವೆ.

ಶಿಕ್ಷಣ ಕ್ಷೇತ್ರವಾಗಲೀ, ಸಾಂಸ್ಕೃತಿಕ ಕ್ಷೇತ್ರದಲ್ಲಾಗಲೀ, ಯಾರೋ ಕಟ್ಟಿದ ಕನಸನ್ನು ನನಸು ಮಾಡುವುದಷ್ಟೇ ನನ್ನ ಕೆಲಸ ಎಂದು ಭಾವಿಸುತ್ತೇನೆ. ತಮ್ಮ ಮಕ್ಕಳ ಬಗ್ಗೆ ಅಪ್ಪ–ಅಮ್ಮ ಕಟ್ಟುವ ಕನಸುಗಳು ಈ ಸಂಸ್ಥೆಯ ಮೂಲಕ ನನಸಾಗಬೇಕು, ‘ತಾವು ಇಂತಹ ಸಾಧನೆ ಮಾಡಬೇಕು’ ಎಂಬ ಆಸೆ ಹೊತ್ತ ಎಲ್ಲ ಮಕ್ಕಳ ಕನಸುಗಳೂ ನನಸಾಗಬೇಕು ಎಂಬ ಆಶಯದಿಂದ, ಸೇನಾಧಿಪತಿಯಾಗಿ ಕೆಲಸ ಮಾಡುತ್ತೇನೆ. ಹೀಗಾಗಿ ‘ನಾನೊಬ್ಬ ಸೆಲೆಬ್ರಿಟಿ’ ಎಂದು ಗುರುತಿಸುವುದೇ ಸರಿ ಅಲ್ಲ ಎಂಬುದು ನನ್ನ ಅನಿಸಿಕೆ.

ಹಾಗೆಂದು ನನಗೆ ಸಿಟ್ಟೇ ಬರುವುದಿಲ್ಲ, ಟೆನ್ಷನ್‌ನಲ್ಲಿ ರೇಗಾಡುವುದೇ ಇಲ್ಲ ಎಂದೇನೂ ಇಲ್ಲ. ಎಷ್ಟೇ ಸಮಯಪ್ರಜ್ಞೆ ಅಥವಾ ಬದ್ಧತೆಗಳೂ ಇದ್ದರೂ ಇತರರಲ್ಲೂ ಅಷ್ಟೇ ಬದ್ಧತೆ ಇರುವುದಿಲ್ಲ. ಹಾಗಾದಾಗ ಇಷ್ಟೆಲ್ಲ ಪೂರ್ವಯೋಜನೆ ಮಾಡಿದರೂ ಎಲ್ಲ ಹಾಳಾಗುತ್ತಿದೆಯಲ್ಲಾ ಎಂದು ಕೋಪ ಬರುವುದುಂಟು. ಆಗ ನಾನು ಅನಿವಾರ್ಯವಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ನಿಷ್ಠುರ ನಡೆ ಅನುಸರಿಸುತ್ತೇನೆ. ಅಂತಹ ಸ್ಥಿತಿಯಲ್ಲಿ ಒಂದೆರಡು ಮಾತು ರೇಗಿದರೂ ಒಳಮನಸ್ಸು ಹೇಳುತ್ತಲೇ ಇರುತ್ತದೆ. ‘ನಿನ್ನ ಕರ್ತವ್ಯ ನಿಭಾಯಿಸುವುದಷ್ಟೇ ನಿನ್ನ ಜವಾಬ್ದಾರಿ’ ಎಂಬ ಒಳಧ್ವನಿ ಕೇಳಿಸುತ್ತದೆ. ಮತ್ತೆರಡು ಕ್ಷಣಕ್ಕೆ ಕೋಪ ತಣ್ಣಗಾಗಿರುತ್ತದೆ.

ಹೀಗೆ ಹಲವಾರು ಪ್ರತಿಕೂಲ ಪರಿಸ್ಥಿತಿಗಳು ಬಂದಾಗ ಪರಿತಪಿಸುವಾಗ ಇನ್ನೂ ಒಂದು ಯೋಚನೆ ನನ್ನೊಳಗೆ ಹಾದು ಹೋಗುತ್ತದೆ. ನಾನು ಈ ಮೂಡುಬಿದಿರೆಯಲ್ಲಿ ನೆಲೆಸಲು ನಿರ್ಧರಿಸಿದ್ದು, ಶಿಕ್ಷಣಸಂಸ್ಥೆಗಳನ್ನು ಕಟ್ಟಿದ್ದು, ಕಾರ್ಯಕ್ರಮಗಳೆಲ್ಲಾ ಒಂದೊಂದಾಗಿ ಕೈಗೂಡಿದ್ದು ನನ್ನ ನಿರ್ಧಾರಗಳಿಂದಲ್ಲ. ನಾನು ಇಂತಹ ಕೆಲಸ ಮಾಡಬೇಕು ಎಂದು ದೇವರು ಬಯಸಿದ್ದಾರೆ. ಹಾಗಾಗಿ ದೇವರು ನನ್ನನ್ನು ಈ ದಾರಿಯಲ್ಲಿ ನಡೆಸುತ್ತಿದ್ದಾರೆ – ಎಂಬ ಬಲವಾದ ಭಾವನೆಯೊಂದು ನನ್ನ ಅಂತರಂಗದಲ್ಲಿದೆ. ದೇವರು ಎಂದರೆ ಅವ್ಯಕ್ತ ಶಕ್ತಿ ಅಲ್ಲವೇ? ಈ ನಂಬಿಕೆಗೆ ತಾರ್ಕಿಕತೆ ಇದೆಯೋ ಇಲ್ಲವೋ ಗೊತ್ತಿಲ್ಲ! ಆದರೆ ಈ ನಂಬಿಕೆಯು ನನ್ನೊಳಗೆ ಒಂದು ಸಮಾಧಾನವನ್ನು ಸೃಷ್ಟಿಸಿದೆ. ಪ್ರತಿಕೂಲ ಸನ್ನಿವೇಶಗಳಲ್ಲಿ, ಆರೋಪಗಳು ಎದುರಾದಾಗ ಅವನ್ನೂ ನಾನು ದಾಟಬೇಕೆಂದು ದೇವರೇ ಬಯಸುತ್ತಿದ್ದಾನೆ ಎಂದು ನಂಬುತ್ತೇನೆ. ಹಾಗಾಗಿ ಆ ಸಂದರ್ಭಗಳಲ್ಲಿ ಹೆಚ್ಚು ತಾಳ್ಮೆಗೆಡದೆ ಇರುವುದು ಸಾಧ್ಯವಾಗಿದೆ. ಅದಕ್ಕಿರುವ ಏಕೈಕ ದಾರಿ ಎಂದರೆ ಪಾರದರ್ಶಕವಾದ ನಡೆ. ಒತ್ತಡಗಳನ್ನು ಸೃಷ್ಟಿಸುವ ದೇವರು, ಅದನ್ನು ದಾಟುವ ದಾರಿಯನ್ನೂ ತೋರಿಸುತ್ತಾನೆ ಅಲ್ಲವೇ?

ಟೆನ್ಷನ್‌ಗಳನ್ನು ಕಡಿಮೆ ಮಾಡಿಕೊಳ್ಳಲು ರೆಸಾರ್ಟ್‌ಗಳಿಗೆ ಹೋಗುವುದು, ಐಶಾರಾಮವಾಗಿ ದಿನ ಕಳೆಯುವುದು ನನ್ನಿಂದ ಸಾಧ್ಯವೇ ಇಲ್ಲ. ಅರ್ಧದಿನ ಸುಮ್ಮನೇ ಕುಳಿತರೆ ಬಹುಶಃ ನನಗೆ ಟೆನ್ಷನ್‌ ಆದೀತು. ‘ಸ್ವಲ್ಪ ಸಮಯವನ್ನು ಮನೋರಂಜನೆಗೆ ಮೀಸಲಿಡಿ’ ಎಂದು ಹಲವರು ಸಲಹೆ ನೀಡುವುದುಂಟು. ಪ್ರವಾಸದ ಸಮಯದಲ್ಲಿ ಕಿಟಕಿಯಲ್ಲಿ ಕಾಣುವ ಸುಂದರ ದೃಶ್ಯಗಳು, ನಮ್ಮ ಕಾಲೇಜಿನ ಮಕ್ಕಳ ಕಲಾಪ್ರಸ್ತುತಿಗಳು, ಹಿಡಿದ ಕೆಲಸ ಮುಕ್ತಾಯವಾದಾಗ ಆಗುವ ಮನೋಲ್ಲಾಸ – ಇವೆಲ್ಲ ನನ್ನ ಪಾಲಿಗೆ ಖುಷಿಯನ್ನೇ ಕೊಡುತ್ತವೆ. ಒಂದಿನಿತು ಟೆನ್ಷನ್‌ಗೆ ಅವಕಾಶವೇ ಉಳಿದಿರುವುದಿಲ್ಲ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ನೀಡುವ ಕಲಾಪ್ರದರ್ಶನಗಳನ್ನು ಐನೂರು ಬಾರಿ ನೋಡಿ, ಐನೂರೊಂದನೇ ಬಾರಿ ನೋಡುವಾಗಲೂ ನಾನು ಮೊದಲ ಸಾರಿ ನೋಡುವ ತನ್ಮಯತೆಯಲ್ಲಿಯೇ ನೋಡುತ್ತೇನೆ. ಆಗ ನನ್ನನ್ನು ಯಾರಾದರೂ ಮಾತನಾಡಿಸಿದರೆ ತುಂಬ ಕಿರಿಕಿರಿ ಆಗುತ್ತದೆ. ಹೀಗೆ ತೀವ್ರವಾಗಿ ನೋಡುವ ಖುಷಿಯೇ ಮುಂದಿನ ಕೆಲಸಗಳಲ್ಲಿ ಎದುರಾಗುವ ಒತ್ತಡವನ್ನು ನಿಭಾಯಿಸಲು ಪ್ರೇರಣೆಯೂ ಹೌದು.

ಭಾರತೀಯ ಕಲಾಪ್ರಕಾರಗಳಲ್ಲಿಯೇ ಒಂದು ಶಕ್ತಿ ಇದೆ. ಅವು ವ್ಯಕ್ತಿಯ ಮನಸ್ಸಿನೊಳಗೆ ಒಂದು ಲಯವನ್ನು ಸೃಷ್ಟಿಸಬಲ್ಲ, ಈ ಲೋಕದ ಸೃಷ್ಟಿಯಲ್ಲಿ ಸೌಂದರ್ಯವನ್ನು ಗುರುತಿಸಬಲ್ಲ ಸಾಮರ್ಥ್ಯವನ್ನು ಹೊಂದಿವೆ. ನನಗೆ ಬಾಲ್ಯದಲ್ಲೇ ಭರತನಾಟ್ಯ ಶಿಕ್ಷಣ ದೊರೆತಿದೆ. ಕ್ರೀಡೆಯಲ್ಲಿಯೂ ಮುಂದಿದ್ದೆ. ಈ ಶಿಕ್ಷಣವು ನನ್ನೊಳಗೆ ಹೊಸದೊಂದು ಕಣ್ಣನ್ನು ತೆರೆಯುವಂತೆ ಮಾಡಿದೆ. ಒಳಿತಿನ ಕಡೆಗೆ ಸಾಗುವುದೇ ಜೀವನ ಎಂಬ ಸೂತ್ರವೊಂದು ಉತ್ತಮ ಮೌಲ್ಯಗಳನ್ನು ಗುರುತಿಸುವ, ಅವುಗಳನ್ನು ಅಳವಡಿಸಿಕೊಳ್ಳುವ ಆರಾಧಿಸುವ ಶಕ್ತಿಯನ್ನು ನನಗೆ ನೀಡಿದೆ. ಹಾಗಾಗಿ ಭಾರತೀಯ ಕಲೆಗಳ ಬಗ್ಗೆ ನನ್ನಲ್ಲಿ ಕುತೂಹಲ ವಿಸ್ಮಯ, ಆರಾಧನಾ ಭಾವ ಇದ್ದೇ ಇದೆ.‌

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry