ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ...

Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಪರೀಕ್ಷೆ ಬರೆಯಲು ನಾನು ಸಂಪೂರ್ಣ ಸಿದ್ಧಳಾಗಿದ್ದೇನೆ. ಅಂದಂದಿನ ವಿಷಯಗಳ ಅಭ್ಯಾಸವನ್ನು ಅಂದೇ ಮಾಡಿ ಮುಗಿಸಿದ್ದೇನೆ. ಆದರೆ ಏಕೋ ಏನೋ ನಾಲ್ಕೈದು ದಿನಗಳಿಂದ ಮನಸ್ಸಿನಲ್ಲಿ ಏನೋ ಅಳುಕು, ಭಯ, ಪರೀಕ್ಷೆಯಲ್ಲಿ ಮರೆವಿನ ಆತಂಕ ಕಾಡುತ್ತಿದೆ. ಹೀಗಾಗಿ ಊಟ ಸೇರುತ್ತಿಲ್ಲ, ನಿದ್ರೆಯಲ್ಲಿದ್ದಾಗ ಒಮ್ಮೇಲೆ ಎಚ್ಚರವಾಗುತ್ತಿದೆ. ಒಮ್ಮೊಮ್ಮೆ ವಿಪರೀತ ತಲೆನೋವು...’ ಇದು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಸ್ಮೀತಾಳ ಕೊರಗು.

ಹೀಗೆ ಹತ್ತಾರು ವಿದ್ಯಾರ್ಥಿಗಳು ಪರೀಕ್ಷೆಗಳು ಹತ್ತಿರ ಬಂದಾಗ ನನ್ನಲ್ಲಿ ತಮ್ಮ ಕೊರಗು-ನೋವುಗಳನ್ನು ತೋಡಿಕೊಳ್ಳುತ್ತಾರೆ. ಈ ಮುಗ್ಧ ಮಕ್ಕಳು ಪರೀಕ್ಷೆಯ ಬಗ್ಗೆ ಆತಂಕ, ಭಯಗೊಂಡು ನಾನಾ ರೀತಿಯ ಒತ್ತಡಗಳಿಗೆ ಒಳಗಾಗುತ್ತಿರುವುದನ್ನು ಕಂಡಾಗ ತುಂಬಾ ವೇದನೆಯೆನಿಸುತ್ತದೆ.

ವಿದ್ಯಾರ್ಥಿಯ ಜೀವನದಲ್ಲಿ ಎಸ್ಎಸ್ಎಲ್‌ಸಿ- ಪಿಯುಸಿ ಪರೀಕ್ಷೆಗಳು ಎರಡು ಅತ್ಯಂತ ಮಹತ್ವದ ಘಟ್ಟಗಳಾಗಿವೆ. ಅವರ ಭಾವೀ ಜೀವನದ ಭವಿಷ್ಯ ನಿರ್ಧಾರವಾಗುವುದು ಈ ಹಂತದಲ್ಲಿಯೇ. ಹೀಗಾಗಿ ಅವರು ವೈಯಕ್ತಿಕವಾಗಿ, ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಒತ್ತಡಗಳಿಗೆ ಒಳಗಾಗುವುದು ಇಂದು ಅನಿವಾರ್ಯವಾಗಿ ಬಿಟ್ಟಿದೆ.

ಶೈಕ್ಷಣಿಕ ವರ್ಷದ ಆರಂಭದ ಸಮಸ್ಯೆಗಳು ಒಂದು ವಿಧವಾಗಿದ್ದರೆ ಮುಕ್ತಾಯ ಹಂತದ ಸಮಸ್ಯೆಗಳು ಭಿನ್ನವಾಗಿರುತ್ತವೆ. ಆರಂಭದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ವಿದ್ಯಾರ್ಥಿಗಳಲ್ಲಿ ಏನೋ ಒಂದು ಬಗೆಯ ಉತ್ಸಾಹವಿರುತ್ತದೆ. ಇದೇ ಆತ್ಮವಿಶ್ವಾಸಕ್ಕೆ ದಾರಿಮಾಡಿಕೊಟ್ಟು ಹಲವು ಸಮಸ್ಯೆಗಳಿಂದ ಆತ ಮುಕ್ತನಾಗುತ್ತಾನೆ. ಆದರೆ ಮುಕ್ತಾಯದ ಹಂತವು ಅತ್ಯಂತ ನಿರ್ಣಾಯಕ ಗಳಿಗೆಯಾಗಿರುವುದರಿಂದ(crucial moment) ಅವರಲ್ಲಿ, ಮರೆವು, ಭಯ, ಆತಂಕ ಹಾಗೂ ವಿಭಿನ್ನ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ.

ಪಾಲಕರಿಂದ ಎಷ್ಟೇ ಉತ್ತೇಜನ ದೊರೆತರೂ ಕೂಡ ಅವರು ಇದರಿಂದ ಮುಕ್ತರಾಗುವುದಿಲ್ಲ. ಬಹಳಷ್ಟು ವಿದ್ಯಾರ್ಥಿಗಳು ತಾವು ಭಯಪಡುತ್ತಿರುವುದು ಪರೀಕ್ಷೆಗೋ? ಅಥವಾ ಅಭ್ಯಾಸ ಮಾಡದಿರುವುದಕ್ಕೋ? ಎಂಬ ಗೊಂದಲದಲ್ಲಿ ಸಿಲುಕಿರುತ್ತಾರೆ. ಸಮಸ್ಯೆ ಗುರುತಿಸಿಕೊಂಡರೆ ಪರಿಹಾರ ಸಾಧ್ಯವಿದೆ. ಜಗತ್ತಿನಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಆದರೆ ನಾವೇ ಸಮಸ್ಯೆಯ ಒಂದು ಭಾಗವಾಗಿಬಿಟ್ಟರೆ ಪರಿಹಾರ ಅಸಾಧ್ಯ ಎಂಬುದನ್ನು ಮರೆಯಬಾರದು.

ಒಂದು ಕಡೆ ಪಾಲಕರು ಬಹಳ ಒತ್ತಡಕ್ಕೆ ಒಳಗಾದರೆ ಇನ್ನೊಂದೆಡೆಗೆ ಮಕ್ಕಳು ಒತ್ತಡ ಮತ್ತು ಭಯಕ್ಕೆ ಒಳಗಾಗಿರುತ್ತಾರೆ. ಒಂದು ಕಡೆ ಪಾಲಕರು ಮಕ್ಕಳ ಮೇಲೆ ಹೆಚ್ಚಿನ ಅಂಕಗಳನ್ನು ಪಡೆಯಲು ಒತ್ತಾಯಿಸಿದರೆ ಇನ್ನೊಂದು ಕಡೆ ಮಕ್ಕಳು ನಿಲುಕಲಾರದ ಗುರಿ ಇಟ್ಟುಕೊಂಡು ಆ ಗುರಿ ಮುಟ್ಟಲು ಆಗದೇ ಒತ್ತಡಕ್ಕೆ ಒಳಗಾಗುತ್ತಾರೆ. ಇನ್ನೂ ಕೆಲ ಮಕ್ಕಳು ಬೇರೆ ಮಕ್ಕಳ ಜೊತೆಗೆ ತಮ್ಮನ್ನು ಹೋಲಿಸಿಕೊಂಡು ಅವರಷ್ಟು ಅಂಕಗಳನ್ನು ನಾನು ಪಡೆದರೆ ಹೇಗೆ? ಅಂತ ಚಿಂತಿಸುತ್ತಾರೆ.

ಬಹುಶಃ ಎಲ್ಲ ಮಕ್ಕಳಿಗೆ ಒಳ್ಳೆ ಅಂಕ ಪಡೆಯಬೇಕು ಎಂಬ ಆಸೆ ಇರುತ್ತದೆ. ಇವತ್ತಿನ ಜೀವನದಲ್ಲಿ ಎಷ್ಟು ಅಂಕಗಳು ಪಡೆದರೂ ಸಾಲದು! ಎಷ್ಟೇ ಅಂಕಗಳನ್ನು ಪಡೆದರೂ ಸಹಿತ ತಮಗೆ ಬೇಕಾದ ಕಾಲೇಜಿಗೆ ಪ್ರವೇಶ ಸಿಗುತ್ತದೆ ಅನ್ನುವುದು ಖಚಿತವಿಲ್ಲ. ಪರೀಕ್ಷಾ ಕೇಂದ್ರೀಕೃತ ನಮ್ಮ ಸ್ಪರ್ಧಾತ್ಮಕ ಶಿಕ್ಷಣ ಪದ್ಧತಿ, ಮನೆಯವರ ಉನ್ನತ ಆಸೆ ಆಕಾಂಕ್ಷೆಗಳು, ಪರಿಸರದ ಒತ್ತಡ.

ಅತಿಯಾದ ಸ್ಪರ್ಧೆ, ಗುರಿಸಾಧನೆಯಲ್ಲಿನ ಅಳುಕುಗಳು ಇತ್ಯಾದಿ ಹಲವು ಸಂಗತಿಗಳ ಪ್ರಭಾವದಿಂದ ಇಂದಿನ ವಿದ್ಯಾರ್ಥಿಗಳು ಅತಿಯಾದ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಾರೆ. ಈ ಸಮಸ್ಯೆಗೆ ಪೂರಕವಾಗಿ ದೈಹಿಕವಾದ ಹೊಟ್ಟೆನೋವು, ತಲೆನೋವು, ವಾಂತಿಯಾಗುವಿಕೆ, ಅತಿ ಬೆವರುವಿಕೆ ಮುಂತಾದ ಸಮಸ್ಯೆಗಳು ಉಂಟಾಗಿ ಓದುವುದು ಬೇಡ, ಪರೀಕ್ಷೆಯೂ ಬೇಡ ಎಲ್ಲಿಯಾದರೂ ಓಡಿ ಹೋಗಲೆ ಎಂಬ ಭಾವನೆ ಅನೇಕ ವಿದ್ಯಾರ್ಥಿಗಳನ್ನು ಕಾಡುತ್ತದೆ.

ಸಾಮಾನ್ಯವಾಗಿ ಮಕ್ಕಳು ಅಂಕಗಳನ್ನು ಪಡೆಯಬೇಕೆಂದೇ ಪುಸ್ತಕದ ಮುಂದೆ ಕುಳಿತುಕೊಳ್ಳುತ್ತಾರೆ. ಆ ವಿಷಯವನ್ನು ತಿಳಿದುಕೊಳ್ಳಬೇಕು ಅನ್ನುವ ವಿಚಾರದಿಂದ ಓದಲು ಕುಳಿತರೆ ವಿಷಯ ಅರ್ಥವೂ ಆಗುತ್ತದೆ ಮತ್ತು ಅಂಕಗಳೂ ಬರುತ್ತವೆ. ಆದರೆ ಓದುವ ಗುರಿಯೇ ಅಂಕಗಳನ್ನು ಪಡೆಯುವುದಾದಾಗ ವಿಷಯವು ಅರ್ಥ ಆಗುವುದಿಲ್ಲ ಮತ್ತು ಭಯದಿಂದ ಮರೆವು ಆಗುತ್ತದೆ ಮತ್ತು ಅಂಕಗಳೂ ಕುಸಿಯುತ್ತವೆ.

ಇಂದಿನ ಪಾಲಕರು ತಮ್ಮ ಮಕ್ಕಳ ಸಾಮರ್ಥ್ಯ, ಆಸೆ ಆಕಾಂಕ್ಷೆಗಳನ್ನರಿಯದೆ ತಾವು ರೂಪಿಸಿಕೊಂಡ ಬಹು ದೊಡ್ಡ ಗುರಿಗಳನ್ನು ತಮ್ಮ ಮಕ್ಕಳ ಮೇಲೆ ಹೇರುತ್ತಾರೆ. ಇದಕ್ಕಾಗಿ ಅತಿಯಾದ ಮುದ್ದು -ಶಿಕ್ಷೆ ಮತ್ತು ಜಾಣ ಮಕ್ಕಳೊಂದಿಗೆ ಹೋಲಿಕೆ ಮಾಡುವುದರಿಂದಾಗಿ ಮಕ್ಕಳು ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇದರ ಪರಿಣಾಮವಾಗಿ ಅವರಲ್ಲಿ ನಡವಳಿಕೆ ಸಮಸ್ಯೆಗಳು, ಗೀಳು ರೋಗ, ಆತಂಕ ಹಾಗೂ ಖಿನ್ನತೆಗಳಂತಹ ಸಮಸ್ಯೆಗಳು ಕಾಡುತ್ತವೆ. ನಿರುತ್ಸಾಹಿಯಾದ ಮಗು ತನ್ನ ಬಗ್ಗೆ ಕೀಳರಿಮೆ ಬೆಳೆಸಿಕೊಂಡು ತೀವ್ರ ಆತಂಕಕ್ಕೆ ಒಳಗಾಗುತ್ತಾನೆ.

ಇಂತಹ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಸರಿಯಾದ ವ್ಯಕ್ತಿಗಳಿಂದ ಸೂಕ್ತ ಮಾರ್ಗದರ್ಶನ ಅಗತ್ಯ. ವಿದ್ಯಾರ್ಥಿಗಳಲ್ಲಿ ಒತ್ತಡದ ಅನಿವಾರ್ಯತೆ ಇದ್ದಾಗ್ಯೂ ಹೊಂದಿಕೊಳ್ಳುವ ಸಾಮರ್ಥ್ಯ ಹಾಗೂ ಕುಶಲತೆಗಳನ್ನು ಕರಗತಮಾಡಿಕೊಳ್ಳಬೇಕಾಗಿದೆ. ಒತ್ತಡ ಜೀವನಕ್ಕೆ ಒಂದು ಪುಟ ನೀಡುತ್ತದೆ. ಪರೀಕ್ಷೆ ಹಾಗೂ ಅದರ ಒತ್ತಡ ಇಲ್ಲವಾದರೆ ಪ್ರತಿಭೆ ಹೇಗೆ ಹೊರ ಹೊಮ್ಮಬೇಕು? ಹಿತ ಮಿತವಾದ ಒತ್ತಡ ಒಂದು ಪ್ರೇರಣೆಯಾಗಿ ಕೆಲಸ ಮಾಡುತ್ತದೆ.

ಪಾಲಕರಾಗಿ, ಶಿಕ್ಷಕರಾಗಿ ನಾವು ಈ ಪರೀಕ್ಷೆಯ ಒತ್ತಡದ ಸಮಯದಲ್ಲಿ ಮಕ್ಕಳಿಗೆ ಧೈರ್ಯ ತುಂಬಬೇಕು. ‘ಅಂಕಗಳು ಮಹತ್ವದ್ದಾದರೂ ಅಂಕಗಳೇ ಜೀವನವಲ್ಲ’ ಅನ್ನುವ ವಿಷಯದ ಬಗ್ಗೆ ತಿಳಿವಳಿಕೆ ನೀಡಬೇಕು. ಪರೀಕ್ಷೆ ಎದುರಿಸುವಾಗ ಯುದ್ಧಭೂಮಿಯ ಒಬ್ಬ ಸೈನಿಕನ ಗಟ್ಟಿ ಮನಃಸ್ಥಿತಿ ಹಾಗೆ ಇಂದಿನ ಮಕ್ಕಳ ಮನಃಸ್ಥಿತಿ ಆಗಬೇಕು.

–ಡಾ. ಆದಿತ್ಯ ಪಾಂಡುರಂಗಿ, ಮನಃಶಾಸ್ತ್ರಜ್ಞ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT