ಚಂದನವನದಲ್ಲಿ ಮಸ್ಕತ್‌ ಬ್ಯೂಟಿ

7

ಚಂದನವನದಲ್ಲಿ ಮಸ್ಕತ್‌ ಬ್ಯೂಟಿ

Published:
Updated:
ಚಂದನವನದಲ್ಲಿ ಮಸ್ಕತ್‌ ಬ್ಯೂಟಿ

ಮುಗುಳುನಗೆಯನ್ನು ತುಂಬಿಕೊಂಡು ಜೀಕುವ ತುಟಿಬಟ್ಟಲು, ನೂರು ಭಾವಗಳನ್ನು ತುಳುಕಿಸುವ ಕಂಗಳು. ಮಿಸ್‌ ಮಂಗಳೂರು ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಇವರು ತಮ್ಮ ಆಪ್ತ ವಲಯದಲ್ಲಿ ‘ಪ್ರಿನ್ಸೆಸ್‌’ ಎಂಬ ಉಪಮೆಯಿಂದಲೇ ಜನಪ್ರಿಯರು. ವೈದ್ಯಶಾಸ್ತ್ರ ಓದುವ ಉಮೇದು ಇರಿಸಿಕೊಂಡು ಮಸ್ಕತ್‌ನಿಂದ ಮಂಗಳೂರಿಗೆ ಬಂದ ದಿಶಾ ದಿನಕರ್‌ ಎಂಬ ಚೆಂದುಳ್ಳಿ ಚೆಲುವೆಯ ಕಂಪು ಈಗ ಚಂದನವನದಲ್ಲಿ ಸುಳಿದಾಡುತ್ತಿದೆ.

ನೋಡುವ ಕಂಗಳಿಗೆ ಮುದನೀಡುವಂತಹ ಚೆಲುವು ಹೊಂದಿರುವ ದಿಶಾ ದಿನಕರ್‌ ಸ್ಯಾಂಡಲ್‌ವುಡ್‌ನ ಹೊಸ ಫಸಲು. ಅವರು ನಾಯಕಿಯಾಗಿ ಕಾಣಿಸಿಕೊಂಡಿರುವ ‘ಹುತ್ತದ ಸುತ್ತ’ ಮತ್ತು ‘ಲೌಡ್‌ ಸ್ಪೀಕರ್‌’ ಎಂಬ ವಿಶಿಷ್ಟ ಹೆಸರಿನ ಸಿನಿಮಾಗಳು ಸದ್ಯದಲ್ಲೇ ತೆರೆಕಾಣಲಿವೆ. ಅಂದಹಾಗೆ, ದಿಶಾ ಅವರ ಸಿನಿಜರ್ನಿ ಶುರುವಾಗಿದ್ದು ಮಾಲಿವುಡ್‌ನಿಂದ.

2015ರಲ್ಲಿ ತೆರೆಕಂಡಿದ್ದ ಸುನೀಲ್‌ ವಿ. ಫಣಿಕ್ಕರ್‌ ನಿರ್ದೇಶನದ ‘ಒನ್‌ಡೇ’ ಎಂಬ ಸಿನಿಮಾದಲ್ಲಿ ಇವರು ನಟಿಸಿದ್ದರು. ಈ ಸಿನಿಮಾ ಬಿಡುಗಡೆ ಆದ ನಂತರ ಓದಿನ ಸಲುವಾಗಿ ಎರಡು ವರ್ಷ ಬಿಡುವು ತೆಗೆದುಕೊಂಡಿದ್ದ ದಿಶಾ ಈಗ ಎಂಬಿಬಿಎಸ್‌ ಮುಗಿಸಿ ಮಂಗಳೂರಿನ ಒಮೆಗಾ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್‌ ಆಗಿದ್ದಾರೆ. ವೈದ್ಯ ವೃತ್ತಿಯ ಜತೆಜತೆಗೆ ಸಿನಿಮಾಗಳಿಗೂ ಬಣ್ಣ ಹಚ್ಚುತ್ತಿದ್ದಾರೆ.

‘ನಾನು ಹುಟ್ಟಿ ಬೆಳೆದಿದ್ದೆಲ್ಲಾ ಮಸ್ಕತ್‌ನಲ್ಲಿ. ಚಿಕ್ಕಂದಿನಿಂದಲೂ ಫ್ಯಾಷನ್‌ ಕ್ಷೇತ್ರದ ಬಗ್ಗೆ ಒಲವಿತ್ತು. ಶಾಲಾ, ಕಾಲೇಜು ದಿನಗಳಲ್ಲಿ ರ‍್ಯಾಂಪ್ ಮಾಡಿದ್ದಿದೆ. ಡಾನ್ಸ್‌ ಮೇಲೂ ತುಂಬ ಒಲವಿತ್ತು. ಮೆಡಿಕಲ್‌ ಓದುವ ಸಲುವಾಗಿ ಮಂಗಳೂರಿಗೆ ಬಂದೆ. ನನ್ನ ತಂದೆ ವಿಟ್ಲದವರು. ಮಸ್ಕತ್‌ನಲ್ಲಿ ಎಂಜಿನಿಯರ್‌ ಆಗಿರುವುದರ ಜತೆಗೆ ಸ್ವಂತ ಉದ್ಯಮ ಹೊಂದಿದ್ದಾರೆ. ಅಪ್ಪನ ಪ್ರೀತಿಯ ಮಗಳು ನಾನು.

ಮಂಗಳೂರಿಗೆ ಬಂದ ಸಂದರ್ಭದಲ್ಲಿ ಸ್ಥಳೀಯ ವಾಹಿನಿಯವರು ಏರ್ಪಡಿಸಿದ್ದ ರಿಯಾಲಿಟಿ ಶೋ ಒಂದರಲ್ಲಿ ಕುತೂಹಲದಿಂದ ಪಾಲ್ಗೊಂಡೆ. ಗೆಲುವು ಸಿಕ್ಕಿತು. ಆಮೇಲೆ 2012ರಲ್ಲಿ ನಡೆದ ಮಿಸ್‌ ಮಂಗಳೂರು ಸ್ಪರ್ಧೆಯಲ್ಲಿ ಭಾಗವಹಿಸಿದೆ. ಕಿರೀಟ ನನ್ನ ಮುಡಿಗೇರಿತು. ಅಲ್ಲಿಂದ ನನಗೆ ಜಾಹೀರಾತು ಕ್ಷೇತ್ರದಲ್ಲಿ ಅವಕಾಶಗಳ ದಿಡ್ಡಿ ಬಾಗಿಲು ತೆರೆದುಕೊಂಡಿತು.

ಮಂಗಳೂರು, ಬೆಂಗಳೂರು, ಕೇರಳದ ಕೆಲವೊಂದು ಉತ್ಪನ್ನಗಳಿಗೆ ರಾಯಭಾರಿ ಆದೆ. ಆ್ಯಡ್‌ ಶೂಟ್‌ಗಳಲ್ಲಿ ಪಾಲ್ಗೊಂಡೆ. ಜಾಹೀರಾತುಗಳಲ್ಲಿ ಮಿಂಚುತ್ತಿದ್ದ ನನಗೆ ಮಾಲಿವುಡ್‌ನಿಂದ ಅವಕಾಶ ಸಿಕ್ಕಿತು. ‘ಒನ್‌ಡೇ’ ನನ್ನ ಡೆಬ್ಯೂ ಸಿನಿಮಾ. ಜಾಹೀರಾತು ಕ್ಷೇತ್ರವನ್ನೇ ಚಿಮ್ಮು ಹಲಗೆಯಾಗಿಸಿಕೊಂಡು ಸಿನಿಮೋದ್ಯಮಕ್ಕೆ ಬಂದೆ. ಈಗ ಕೈತುಂಬ ಅವಕಾಶಗಳು ಸಿಗುತ್ತಿವೆ’ ಎಂದು ಖುಷಿಯಿಂದ ಹೇಳುತ್ತಾರೆ ‘ಲೌಡ್‌ ಸ್ಪೀಕರ್’ ಚೆಲುವೆ ದಿಶಾ.

ವೈದ್ಯಕೀಯ ನನ್ನಿಷ್ಟದ ಕ್ಷೇತ್ರ ಎನ್ನುವ ದಿಶಾ ಅವರಿಗೆ ಮುಂದೆ ಚರ್ಮಶಾಸ್ತ್ರ ವಿಷಯದಲ್ಲಿ ಉನ್ನತ ಅಧ್ಯಯನ ಮಾಡುವ ಕನಸಿದೆ. ಇದರ ಜತೆಗೆ ಮಿಡಲ್‌ ಈಸ್ಟ್‌ನಲ್ಲಿ ಸ್ವಂತದ್ದೊಂದು ಆಸ್ಪತ್ರೆ ತೆರೆದು ಕೆಲವು ವರ್ಷಗಳಾದರೂ ವೈದ್ಯ ಸೇವೆ ಮಾಡುವ ಆಸೆ ಇದೆ. ಎಲ್ಲೆ ಕೆಲಸ ಮಾಡಿದರೂ ಕೊನೆಗೆ ನಾನು ಮರಳಿ ಬರುವುದು ತಾಯಿನಾಡಿಗೇ ಎನ್ನುವ ದಿಶಾ ಈಗ ವಿಟ್ಲದಲ್ಲೊಂದು ಕ್ಲಿನಿಕ್‌ ಕೂಡ ತೆರೆದಿದ್ದಾರೆ.

‘ಶಿವ ತೇಜಸ್‌ ನಿರ್ದೇಶನದ ‘ಲೌಡ್‌ ಸ್ಪೀಕರ್‌’ ಮಲ್ಟಿಸ್ಟಾರ್‌ ಸಿನಿಮಾ. ಇದರಲ್ಲಿ ನಾನು ಲೀಡ್‌ ರೋಲ್‌ ಮಾಡಿದ್ದೇನೆ. ‘ಧೈರ್ಯಂ’ ಸಿನಿಮಾ ನಿರ್ಮಿಸಿದ್ದ ಡಾ. ಕೆ.ರಾಜು ಚಿತ್ರದ ನಿರ್ಮಾಪಕರು. ಈ ಸಿನಿಮಾದಲ್ಲಿ ನಾನು ರಿಯಲ್‌ ಲೈಫ್‌ ತರಹವೇ ಡಾಕ್ಟರ್‌ ಪಾತ್ರ ನಿರ್ವಹಿಸಿದ್ದೇನೆ. ಚಿತ್ರದಲ್ಲಿ ಭರ್ಜರಿ ಕಾಮಿಡಿ ಇದೆ. ಹಾಗಂತ ಇದು ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾ ಅಲ್ಲ.

‘ಲೌಡ್‌ ಸ್ಪೀಕರ್‌’ ಪಕ್ಕಾ ಕೌಟುಂಬಿಕ ಮನರಂಜನಾ ಚಿತ್ರ. ಕತೆಯಲ್ಲಿ ಫ್ರೆಶ್‌ನೆಸ್‌ ಇದೆ. ಹಾಗಾಗಿ, ಈ ಚಿತ್ರ ಯುವಜನರ ಹೃದಯಕ್ಕೆ ತುಂಬ ಇಷ್ಟವಾಗಲಿದೆ. ಈ ಸಿನಿಮಾ ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಲ್ಲಿ ತೆರೆಕಾಣಲಿದೆ. ‘ಹುತ್ತದ ಸುತ್ತ’ ಸಿನಿಮಾ ನಾಯಕಿ ಪ್ರಧಾನ ಚಿತ್ರ. ಇದರಲ್ಲಿ ನಾನು ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಇದು. ಮೆಲ್ವಿನ್‌ ಚಿತ್ರದ ನಿರ್ದೇಶಕರು’ ಎಂದು ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ನೀಡುತ್ತಾರೆ ದಿಶಾ.

ದಿಶಾ ಅವರು ಈಗ ನಟಿಸಿರುವ ಕನ್ನಡದ ಎರಡೂ ಸಿನಿಮಾಗಳ ಬಗ್ಗೆಯೂ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಇದರ ಜತೆಗೆ ಈಗಾಗಲೇ ಅವರಿಗೆ ತೆಲುಗು ಮತ್ತು ತಮಿಳು ಸಿನಿಮಾಗಳಿಂದಲೂ ಆಫರ್‌ಗಳು ಬರುತ್ತಿವೆ. ಪರಭಾಷಾ ಚಿತ್ರಗಳಲ್ಲಿ ನಟಿಸುವುದರ ಕುರಿತಂತೆ ಈಗಾಗಲೇ ಬೆಂಗಳೂರಿನಲ್ಲಿ ಮೊದಲ ಹಂತದ ಮಾತುಕತೆ ಮುಗಿಸಿರುವ ಅವರು ಸ್ಕ್ರಿಪ್ಟ್‌ ಇಷ್ಟ ಆದರೆ ಟಾಲಿವುಡ್‌ ಹಾಗೂ ಕಾಲಿವುಡ್‌ನಲ್ಲೂ ಸದ್ಯದಲ್ಲೇ ಕಾಣಿಸಿಕೊಳ್ಳುತ್ತೇನೆ ಎನ್ನುತ್ತಾರೆ. ಓದಿನ ಕಾರಣದಿಂದ ಕೋಸ್ಟಲ್‌ವುಡ್‌ ಅವಕಾಶಗಳನ್ನು ನಿರಾಕರಿಸಿದ್ದ ದಿಶಾ ಇನ್ನು ಮುಂದೆ ಕೋಸ್ಟಲ್‌ವುಡ್‌ ಸಿನಿಮಾಗಳಲ್ಲೂ ನಟಿಸುವ ಉತ್ಸಾಹ ಹೊಂದಿದ್ದಾರೆ.

‘ಮಿಸ್‌ ಮಂಗಳೂರು ಕಿರೀಟ ಗೆದ್ದ ನಂತರ ಕೋಸ್ಟಲ್‌ವುಡ್‌ನಿಂದ ಆಫರ್‌ಗಳು ಬಂದಿದ್ದವು. ಆಗ ಎಂಬಿಬಿಎಸ್‌ ಓದುತ್ತಿದ್ದ ಕಾರಣ ನಟಿಸಲು ಒಲ್ಲೆ ಅಂತ ಹೇಳಿದ್ದೆ. ಈಗ ಓದು ಮುಗಿದಿದೆ. ಪ್ರಾಕ್ಟೀಸ್‌ ಶುರು ಮಾಡಿದ್ದೇನೆ. ಎಂ.ಡಿ. ಮಾಡುವುದಕ್ಕೂ ಮುನ್ನ ಸಿನಿಮಾ ಕ್ಷೇತ್ರದಲ್ಲಿ ಒಂದಿಷ್ಟು ವರ್ಷಗಳ ಕಾಲ ತೊಡಗಿಸಿಕೊಳ್ಳುವ ಸಂಕಲ್ಪ ಮಾಡಿದ್ದೇನೆ. ಈಗ ಅವಕಾಶ ಸಿಕ್ಕರೆ ಕೋಸ್ಟಲ್‌ವುಡ್‌ ಸಿನಿಮಾಗಳಲ್ಲಿ ಖಂಡಿತವಾಗಿಯೂ ನಟಿಸುತ್ತೇನೆ. ಸಿನಿಮಾ ಕಾರಣಕ್ಕಾಗಿ ವೈದ್ಯವೃತ್ತಿಯನ್ನೂ ಬಿಡುವುದಕ್ಕೆ ನಾನು ಸಿದ್ಧಳಿಲ್ಲ.

ಎರಡೂ ಕ್ಷೇತ್ರವನ್ನೂ ಸರಿದೂಗಿಸಿಕೊಂಡು ಹೋಗುವ ನಿರ್ಧಾರ ಮಾಡಿದ್ದೇನೆ. ಮಸ್ಕತ್‌ನಲ್ಲಿ ಆಸ್ಪತ್ರೆ ತೆರೆಯುವ ಮುನ್ನ, ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಮುನ್ನ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಬೇಕು, ಉತ್ತಮ ಪಾತ್ರಗಳನ್ನು ನಿರ್ವಹಿಸಿ ಜನರ ಮೆಚ್ಚುಗೆ ಗಳಿಸಬೇಕು ಎಂಬ ಕನಸು ಹೊಂದಿದ್ದೇನೆ’ ಎನ್ನುವಾಗ ದಿಶಾ ಅವರ ಮುಖದಲ್ಲಿ ಜೋಡಿ ದೀಪದ ಹೊಳಪು ಪ್ರಕಾಶಿಸುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry