ರಾಜ್ಯಸಭಾ ಚುನಾವಣೆ: ಯಾವ ಪಕ್ಷ ಎಷ್ಟು ಕನ್ನಡ ಪರ?

ಗುರುವಾರ , ಮಾರ್ಚ್ 21, 2019
32 °C

ರಾಜ್ಯಸಭಾ ಚುನಾವಣೆ: ಯಾವ ಪಕ್ಷ ಎಷ್ಟು ಕನ್ನಡ ಪರ?

Published:
Updated:
ರಾಜ್ಯಸಭಾ ಚುನಾವಣೆ: ಯಾವ ಪಕ್ಷ ಎಷ್ಟು ಕನ್ನಡ ಪರ?

ಬೆಂಗಳೂರು: ರಾಜ್ಯಸಭಾ ಚುನಾವಣೆಯ ಹೊತ್ತಿನಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಸ್ವಾಭಿಮಾನದ ಶಬ್ದ ತ್ರಿವಳಿಗಳು ಮತ್ತೆ ಚರ್ಚೆಯ ಮುಖ್ಯವಾಹಿನಿಗೆ ಬಂದು ನಿಂತಿವೆ.

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಾರ್ಚ್‌ 23ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಯಾಗುವವರೆಗೆ ‘ಈ ಬಾರಿ ಕನ್ನಡಿಗರಿಗೆ’ ಎಂಬ ಹಕ್ಕೊತ್ತಾಯ ದೊಡ್ಡ ಕೂಗಿನಂತೆ ದಿಕ್ಕುದಿಕ್ಕುಗಳಿಗೆ ಅಪ್ಪಳಿಸುತ್ತಿತ್ತು. 2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆ ಹೊತ್ತಿನಲ್ಲಿ ಈ ಬೇಡಿಕೆಗೆ ರಾಜ್ಯವ್ಯಾಪಿ ಬೆಂಬಲ ವ್ಯಕ್ತವಾಗಿತ್ತು. ಹೀಗಾಗಿ, ಮೂರೂ ರಾಜಕೀಯ ಪಕ್ಷಗಳು ಈ ಬಾರಿ ಕನ್ನಡಿಗರಿಗೆ ಆದ್ಯತೆ ನೀಡಿ, ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುತ್ತವೆ ಎಂಬ ನಿರೀಕ್ಷೆಯೂ ಬಲವಾಗಿತ್ತು.

ಈ ಭಯದಿಂದಲೋ ಏನೋ ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್‌ ಎಚ್ಚರಿಕೆ ಹೆಜ್ಜೆಯಿಟ್ಟು ಅಚ್ಚ ಕನ್ನಡಿಗರಿಗೆ ಟಿಕೆಟ್ ನೀಡಿ, ಮೊದಲ ಸವಾಲನ್ನು ಗೆದ್ದಿದೆ. ಅನ್ಯ ರಾಜ್ಯದವರಿಗೆ ಮಣೆ ಹಾಕುವ ಚಾಳಿ ಆರಂಭಿಸಿದ ಅಪವಾದಕ್ಕೆ ಗುರಿಯಾಗಿದ್ದ ಜೆಡಿಎಸ್‌, ‘ಉದ್ಯಮಿ’ ಬಿ.ಎಂ. ಫಾರೂಕ್‌ ಅವರನ್ನು ಕಣಕ್ಕೆ ಇಳಿಸಿ, ತನ್ನ ಕಳಂಕ ತೊಳೆದುಕೊಳ್ಳಲು ಮುಂದಾಗಿದೆ.

20 ವರ್ಷಗಳಿಂದ ನಡೆಯುತ್ತಿರುವ ಬಹುತೇಕ ಚುನಾವಣೆಗಳಲ್ಲಿ  ಪರ ರಾಜ್ಯ ಹಾಗೂ ಕನ್ನಡ ಮಾತನಾಡಲು ಗೊತ್ತಿಲ್ಲದವರನ್ನೇ ಕಣಕ್ಕೆ ಇಳಿಸುತ್ತಾ ಬಂದಿರುವ ಬಿಜೆಪಿ, ಈ ಬಾರಿಯೂ ಅದನ್ನೇ ಮುಂದುವರಿಸಿರುವುದರಿಂದಾಗಿ ‘ಕನ್ನಡ ಅಸ್ಮಿತೆ’ಯ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

‘ವೆಂಕಯ್ಯ–ಸಾಕಯ್ಯ’

2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆ ವೇಳೆ ಕರ್ನಾಟಕದಿಂದ ನಾಲ್ಕನೇ ಬಾರಿ ಆಯ್ಕೆ ಬಯಸಿದ್ದ ಹಾಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು( ಆಂಧ್ರಪ್ರದೇಶ) ಅವರಿಗೆ ಟಿಕೆಟ್ ನೀಡಲು ಬಿಜೆಪಿ ಸಿದ್ಧತೆ ನಡೆಸಿತ್ತು. ಆದರೆ, ‘ವೆಂಕಯ್ಯ–ಸಾಕಯ್ಯ’ ಎಂಬ ಘೋಷಣೆಯಡಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ನಡೆದ ಆಂದೋಲನ, ಹೋರಾಟ ನಿರತ ಕನ್ನಡಿಗರ ವಿರೋಧದಿಂದಾಗಿ ವೆಂಕಯ್ಯ ಇತ್ತ ಮುಖ ಹಾಕಲಿಲ್ಲ. ರಾಜಸ್ಥಾನದಿಂದ ಅವರು ಸ್ಪರ್ಧಿಸಿ ಆಯ್ಕೆಯಾದರು. ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಮುನ್ನ ಅವರು ರಾಜೀನಾಮೆಯನ್ನೂ ನೀಡಿದರು.

1998ರಲ್ಲಿ ಮೊದಲ ಬಾರಿಗೆ ಕರ್ನಾಟಕದಿಂದ ಆಯ್ಕೆಯಾಗಿದ್ದ ವೆಂಕಯ್ಯ 2004 ಹಾಗೂ 2010ರಲ್ಲಿ ಇಲ್ಲಿಂದಲೇ ಮರು ಆಯ್ಕೆಯಾಗಿದ್ದರು.

ಹಾಗಂತ, 2016ರಲ್ಲಿ ಬಿಜೆಪಿ ಕನ್ನಡಿಗರನ್ನು ಕಣಕ್ಕೆ ಇಳಿಸಲಿಲ್ಲ. ಭಾರತದ ರಕ್ಷಣಾ ಸಚಿವೆ, ತಮಿಳುನಾಡಿನವರಾದ ನಿರ್ಮಲಾ ಸೀತಾರಾಮನ್ ಅವರನ್ನು ಸ್ಪರ್ಧೆಗೆ ಇಳಿಸಿ, ಗೆಲ್ಲಿಸಿತು.

ಕನ್ನಡಿಗರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಂದು ನಿನ್ನೆಯದಲ್ಲ. ಸಾಮಾಜಿಕ ಜಾಲತಾಣಗಳು ಆರಂಭವಾಗಿರದಿದ್ದ ಕಾಲದಲ್ಲಿಯೂ ಇಂತಹ ಕೂಗು ದೊಡ್ಡ ಮಟ್ಟದಲ್ಲಿ ಇತ್ತು.

ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯಮಲ್ಯ 2002ರಲ್ಲಿ ರಾಜ್ಯಸಭೆಗೆ ಸ್ಪರ್ಧಿಸಿದಾಗ ಕನ್ನಡದ ಪ್ರಶ್ನೆ ಮುಂಚೂಣಿಗೆ ಬಂದಿತ್ತು. ಮಂಗಳೂರಿನವರಾದರೂ ಕನ್ನಡವನ್ನು ಅಪ್ಪಿತಪ್ಪಿಯೂ ಉಚ್ಚರಿಸದ ವಿಜಯಮಲ್ಯ, ತಮ್ಮ ತೊದಲು ನುಡಿಗಳಲ್ಲಿ ‘ನಾನೂ ಕನ್ನಡಿಗ’ ಎಂದು ಪ್ರತಿಪಾದಿಸಿದ್ದರು. ತಲಾ ಮತಕ್ಕೆ ₹10 ಲಕ್ಷ ಕೊಟ್ಟು ರಾಜ್ಯಸಭಾ ಸ್ಥಾನವನ್ನು ಖರೀದಿಸಿದ್ದರು.

2010ರಲ್ಲಿ ಮತ್ತೊಮ್ಮೆ ಆಯ್ಕೆಯಾಗುವಾಗಲೂ ಇದೇ ಚಾಳಿಯನ್ನು ಮುಂದುವರಿಸಿ, ಗೆದ್ದಿದ್ದರು. ಮಲ್ಯ ಗೆಲ್ಲಲು ಜೆಡಿಎಸ್‌ ಪ್ರಧಾನವಾಗಿ ಬೆಂಬಲ ನೀಡಿತ್ತಾದರೂ ಬಿಜೆಪಿ, ಕಾಂಗ್ರೆಸ್ ಮತಗಳನ್ನು ಮಲ್ಯ ಪಡೆದಿದ್ದರು.

2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ತಮಿಳುನಾಡಿನ ಉದ್ಯಮಿ ಎಂ.ಎ.ಎಂ. ರಾಮಸ್ವಾಮಿ ಸ್ಪರ್ಧಿಸಿ ಗೆದ್ದಿದ್ದರು. ಕನ್ನಡಿಗರನ್ನು ಕಡೆಗಣಿಸಿ, ಜೂಜು ಕುದುರೆಗಳ ವ್ಯಾಪಾರಿ ಹಾಗೂ ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಮಾಲೀಕ ರಾಮಸ್ವಾಮಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಕನ್ನಡದ ಧ್ವನಿ:

2006ರಲ್ಲಿ ನಡೆದ ಚುನಾವಣೆಯಲ್ಲಿ ಕನ್ನಡದ ಅಸ್ಮಿತೆಯ ಪ್ರಶ್ನೆಯೇ ಪ್ರಧಾನವಾಗಿತ್ತು. ಈಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ರಾಜೀವ್ ಚಂದ್ರಶೇಖರ್ ಆಗ ಮೊದಲ ಬಾರಿಗೆ ಕರ್ನಾಟಕದಿಂದ ಆಯ್ಕೆ ಬಯಸಿದ್ದರು. ಜೆಡಿಎಸ್‌ ಅವರ ಬೆನ್ನಿಗೆ ನಿಂತಿತ್ತು.

ಕನ್ನಡ ಸಾಕ್ಷಿ ಪ್ರಜ್ಞೆಯಂತಿದ್ದ, ಸಾಹಿತಿ ಯು.ಆರ್. ಅನಂತಮೂರ್ತಿ ಅಂದು ರಾಜೀವ್ ಎದುರು ಸ್ಪರ್ಧಿಸಿದ್ದರು. ಯಾವ ಪಕ್ಷಗಳೂ ಅನಂತಮೂರ್ತಿಯವರ ಬೆಂಬಲಕ್ಕೆ ನಿಲ್ಲಲಿಲ್ಲ. ರಾಜೀವ್ ಗೆದ್ದಿದ್ದರು. ಅಂದು ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಬಿ. ಶಾಣಪ್ಪ ಕೂಡ ಗೆದ್ದಿದ್ದರು.

2011ರಲ್ಲಿ ರಾಜ್ಯಸಭೆಗೆ ಉಪಚುನಾವಣೆ ನಡೆಯಿತು. ಆಗ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಅಲ್ಪಾವಧಿಯ ಸದಸ್ಯ ಸ್ಥಾನಕ್ಕಾದರೂ ಕನ್ನಡಿಗರನ್ನು ಗೆಲ್ಲಿಸಿ, ಕಳಿಸಲು ಬಿಜೆಪಿ ಮುಂದಾಗಲಿಲ್ಲ. ಅದರ ಬದಲು ಚಿತ್ರನಟಿ ಹೇಮಮಾಲಿನಿ ಅವರನ್ನು ಕಣಕ್ಕೆ ಇಳಿಸಿತು. ಹೀಗೆ ಬೇರೆ ರಾಜ್ಯದವರನ್ನು ಕರೆತಂದು ನಿಲ್ಲಿಸಿದ್ದರಿಂದಾಗಿ ಕನ್ನಡಿಗರ ಸ್ವಾಭಿಮಾನ ಜಾಗೃತವಾಯಿತು. ಕನ್ನಡ ಪರ ಚಿಂತಕ, ವಿಮರ್ಶಕ ಕೆ. ಮರುಳಸಿದ್ದಪ್ಪ ಪಕ್ಷೇತರರಾಗಿ ಕಣಕ್ಕೆ ಇಳಿದಿರು. ಆಗಲೂ ಮರುಳಸಿದ್ದಪ್ಪ ಅವರನ್ನು ಗೆಲ್ಲಿಸಿ ಎಂಬ ಬೇಡಿಕೆ ಮೊಳಗಿತ್ತು.

2012ರಲ್ಲಿ ನಡೆದ ನಾಲ್ಕು ಸ್ಥಾನಕ್ಕೆ ಚುನಾವಣೆ ನಡೆಯಿತು. ಬಿಜೆಪಿ ಒಂದು ಸ್ಥಾನವನ್ನು ಕರ್ನಾಟಕದ ಸಜ್ಜನ ರಾಜಕಾರಣಿ ಬಸವರಾಜ ಪಾಟೀಲ ಸೇಡಂ ಅವರಿಗೆ ಬಿಟ್ಟುಕೊಟ್ಟಿತು. ಆದರೆ, ಮತ್ತೊಂದು ಸ್ಥಾನವನ್ನು ಕನ್ನಡಿಗರಿಗೆ ನೀಡುವ ಬದಲು ಆಂಧ್ರಪ್ರದೇಶದ ರಂಗಸಾಯಿ ರಾಮಕೃಷ್ಣ ಎಂಬುವರಿಗೆ ನೀಡಿ, ಗೆಲ್ಲಿಸಿತು. ರಾಮಕೃಷ್ಣ ಅವರು ಇವತ್ತಿನವರೆಗೂ ಕರ್ನಾಟಕದಲ್ಲಿ ಕಾಣಿಸಿಕೊಂಡ ನಿದರ್ಶನವಿಲ್ಲ.

ಅದೇ ಚುನಾವಣೆಯಲ್ಲಿ ಜೆಡಿಎಸ್‌, ಬಿಜೆಪಿ ಬೆಂಬಲದಿಂದಾಗಿ ರಾಜೀವ್ ಚಂದ್ರಶೇಖರ್‌ ಮರು ಆಯ್ಕೆಯಾಗಿದ್ದರು.

ಎಚ್ಚೆತ್ತ ಕಾಂಗ್ರೆಸ್?

ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಮತ್ತೆ ಕನ್ನಡ–ಕನ್ನಡಿಗ ಎಂಬ ಕೂಗು ಮತ್ತೆ ಪ್ರಧಾನವಾಗಿ ಕೇಳಿಬಂದಿದೆ.

ಈ ಬಾರಿ ಎರಡು ಸ್ಥಾನಗಳನ್ನು ಸಲೀಸಾಗಿ ಗೆಲ್ಲಿಸಿಕೊಳ್ಳುವ ಸಾಮರ್ಥ್ಯ ಕಾಂಗ್ರೆಸ್‌ಗೆ ಇದೆ. ಈ ಲೆಕ್ಕಾಚಾರದಲ್ಲಿ ಸ್ಯಾಮ್‌ ಪಿತ್ರೋಡಾ ಹಾಗೂ ಜನಾರ್ದನ ದ್ವಿವೇದಿ ಅವರನ್ನು ಕರ್ನಾಟಕದಿಂದ ಆಯ್ಕೆ ಮಾಡುವಂತೆ ಹೈಕಮಾಂಡ್‌ ಸೂಚಿಸಿತ್ತು.

‘ಕೆಲಸ ಮತ್ತು ಯೋಜನೆಗಳಿಂದಾಗಿ ಕನ್ನಡ ಪರ ಸರ್ಕಾರ ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಹೊತ್ತಿನಲ್ಲಿ ಹೊರರಾಜ್ಯದವರಿಗೆ ಮಣೆ ಹಾಕಿದರೆ ಚುನಾವಣೆಯಲ್ಲಿ ಅಡ್ಡಪರಿಣಾಮ ಬೀರಬಹುದು’ ಎಂದು ಹೈಕಮಾಂಡ್‌ಗೆ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡಿಗರನ್ನು ಕಣಕ್ಕೆ ಇಳಿಸುವ ಮೊದಲ ಹೆಜ್ಜೆಯಲ್ಲಿ ಯಶಸ್ವಿಯಾದರು. ಇದಕ್ಕೆ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಕೂಡ ಧ್ವನಿ ಸೇರಿಸಿದರು. ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದರಾಮಯ್ಯ ಹಿನ್ನಡೆ ಅನುಭವಿಸಿ, ಖರ್ಗೆ, ಪರಮೇಶ್ವರ ಮೇಲುಗೈ ಸಾಧಿಸಿದರು. ಆದರೆ, ಹೊರರಾಜ್ಯದವರನ್ನು ಹೊರಗಿಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಂತೂ ಹೌದು.

ಇತ್ತ ಬಿಜೆಪಿಯಲ್ಲಿ ಕೂಡ ಇಂತಹದೇ ಅಭಿಪ್ರಾಯ ವ್ಯಕ್ತವಾಗಿತ್ತು. ಪ‍ಕ್ಷದ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ ನಡೆದಾಗ ಬಹುಸಂಖ್ಯಾತರು ಉದ್ಯಮಿ ವಿಜಯಸಂಕೇಶ್ವರ ಹೆಸರು ಪ್ರಸ್ತಾಪಿಸಿದ್ದರು. ಕೆಲವು ಸದಸ್ಯರು ರಾಜೀವ್ ಚಂದ್ರಶೇಖರ್ ಹೆಸರು ಹೇಳಿದ್ದರು. ಕನ್ನಡಿಗರಿಗೆ ಕೊಡುವುದು ಸೂಕ್ತ ಎಂಬುದು ಪ್ರಮುಖರ ಅಭಿಮತವಾಗಿತ್ತು. ಹಾಗಿದ್ದರೂ ಸಂಕೇಶ್ವರ, ರಾಜೀವ್‌ ಹಾಗೂ ಶಂಕರಪ್ಪ ಅವರನ್ನು ಪಕ್ಷದ ವರಿಷ್ಠರಿಗೆ ಕಳುಹಿಸಲಾಗಿತ್ತು.

ಸಂಕೇಶ್ವರ ಅಥವಾ ಶಂಕರಪ್ಪ ಆಯ್ಕೆಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಒಲವು ತೋರಿದ್ದರು. ಆದರೆ, ಪಕ್ಷದ ವರಿಷ್ಠರು ರಾಜೀವ್ ಚಂದ್ರಶೇಖರ್ ಹೆಸರು ಸೂಚಿಸಿದರು.

‘ರಾಜೀವ್ ಕೂಡ ಕನ್ನಡಿಗರು. 12ವರ್ಷದಿಂದ ಕರ್ನಾಟಕ ಪ್ರತಿನಿಧಿಸುತ್ತಿರುವ ರಾಜೀವ್‌, ಬೆಂಗಳೂರಿನ ಮತದಾರ. ಇಲ್ಲಿಯೇ ಉದ್ಯಮ ಸ್ಥಾಪಿಸಿ, ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದಾರೆ’ ಎಂದೂ ಬಿಜೆಪಿ ಹೇಳುತ್ತಿದೆ. ಆದರೆ, ರಾಜೀವ್‌ ಕೇರಳದವರು ಎಂದು ಸಾಮಾಜಿಕ ಜಾಲತಾಣಿಗರು ಹುಯಿಲೆಬ್ಬಿಸಿದ್ದಾರೆ. ಮಾಧ್ಯಮ ಹಾಗೂ ಸಾರ್ವಜನಿಕ ವಲಯದಲ್ಲಿ ಇದು ಚರ್ಚೆಗೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry