ಪೊಲೀಸ್‌ ವ್ಯವಸ್ಥೆ ಸುಧಾರಣೆ ಕಾಗದದಲ್ಲೇ ಉಳಿದ ಶಿಫಾರಸು

7

ಪೊಲೀಸ್‌ ವ್ಯವಸ್ಥೆ ಸುಧಾರಣೆ ಕಾಗದದಲ್ಲೇ ಉಳಿದ ಶಿಫಾರಸು

Published:
Updated:
ಪೊಲೀಸ್‌ ವ್ಯವಸ್ಥೆ ಸುಧಾರಣೆ ಕಾಗದದಲ್ಲೇ ಉಳಿದ ಶಿಫಾರಸು

ರಾಜಕೀಯ ಹಸ್ತಕ್ಷೇಪದಿಂದ ಪೊಲೀಸ್‌ ಇಲಾಖೆ ವರ್ಚಸ್ಸು ಕುಗ್ಗುತ್ತಿದೆ ಎಂದು ಆರೋಪಿಸಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಆರ್‌.ಪಿ. ಶರ್ಮಾ, ರಾಜ್ಯದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಬರೆದಿರುವ ಪತ್ರ ರಾಜಕೀಯ ವಲಯದಲ್ಲಿ ಕಿಡಿ ಹೊತ್ತಿಸಿದೆ. ಇಂಥ ಆರೋಪ ಹೊಸದೇನಲ್ಲ. ಎಲ್ಲ ಕಾಲದಲ್ಲೂ ಕೇಳಿಬಂದಿದೆ. ಇದಕ್ಕೆ ಕಾಂಗ್ರೆಸ್‌ ಅಥವಾ ಬಿಜೆಪಿ ಆಡಳಿತ ಎಂಬ ಭೇದವಿಲ್ಲ. ಎಲ್ಲ ಪಕ್ಷಗಳ ಮನೋಭಾವವೂ ಒಂದೇ. ಶರ್ಮಾ ಅವರದ್ದು ವೈಯಕ್ತಿಕ ಅಭಿಪ್ರಾಯವೇ ಇರಬಹುದು. ಐಪಿಎಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷರೂ ಆಗಿರುವ ಅವರು ಲೆಟರ್‌ಹೆಡ್‌ ದುರ್ಬಳಕೆ ಮಾಡಿಕೊಂಡಿರಲೂಬಹುದು.

ಆದರೆ, ಅವರು ಪ್ರಸ್ತಾಪಿಸಿರುವ ವಿಷಯಗಳು ಮಾತ್ರ ಗಂಭೀರ ಸ್ವರೂಪದವು ಎಂಬುದರಲ್ಲಿ ಎರಡು ಮಾತಿಲ್ಲ. ಪೊಲೀಸ್‌ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ತಂದು ಸ್ವಾಯತ್ತತೆ ನೀಡುವುದಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ನಿವೃತ್ತ ಡಿಜಿಪಿ ಪ್ರಕಾಶ್‌ ಸಿಂಗ್‌ 1996ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್‌ 2006ರಲ್ಲಿ ಮಹತ್ವದ ತೀರ್ಪು ನೀಡಿದೆ. ಈ ಇಲಾಖೆ ಸುಧಾರಣೆಗೆ ಏಳು ನಿರ್ದೇಶನಗಳನ್ನು ನೀಡಿದೆ. ಇಲಾಖೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಕನಿಷ್ಠ ಎರಡು ವರ್ಷ ಅದೇ ಹುದ್ದೆಯಲ್ಲಿ ಮುಂದುವರಿಸಬೇಕು. ಪೊಲೀಸ್‌ ಇಲಾಖೆಯ ನೀತಿ– ನಿಯಮಗಳನ್ನು ರೂಪಿಸುವ ಸಂಬಂಧ ರಾಜ್ಯ ಸುರಕ್ಷತಾ ಆಯೋಗ ರಚಿಸಬೇಕು. ನೇಮಕಾತಿ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಮಂಡಳಿ ಸ್ಥಾಪಿಸಬೇಕು. ಪೊಲೀಸ್‌ ಇಲಾಖೆಗೆ ಪ್ರತ್ಯೇಕ ಕಾಯ್ದೆ ಇರಬೇಕು. ಕೇಂದ್ರ ಸರ್ಕಾರವು ಒಂದು ಮಾದರಿ ಕಾಯ್ದೆಯನ್ನು ರೂಪಿಸಿ, ರಾಜ್ಯಗಳಿಗೆ ಕಳುಹಿಸಬೇಕು ಎಂದು ಕೋರ್ಟ್‌ ಹೇಳಿದೆ. ತೀರ್ಪು ಹೊರಬಿದ್ದು 12 ವರ್ಷಗಳೇ ಕಳೆದರೂ ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಳ್ಳದೆ ಇರುವುದು ದುರದೃಷ್ಟಕರ. ‘ಪೊಲೀಸ್‌ ಇಲಾಖೆಯ ಸುಧಾರಣೆ ನಡೆಯುತ್ತಲೇ ಇದೆ. ನಮ್ಮ ಆದೇಶಗಳಿಗೆ ಯಾರೂ ಕಿವಿಗೊಡುತ್ತಿಲ್ಲ’ ಎಂದು ಕಳೆದ ವರ್ಷ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ ಅಸಮಾಧಾನ ಹೊರಹಾಕಿತ್ತು. ಆಗಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ನೇತೃತ್ವದ ಪೀಠದ ಈ ಮಾತುಗಳು ನಮ್ಮ ರಾಜಕಾರಣಿಗಳ ಮನಃಸ್ಥಿತಿಗೆ ಹಿಡಿದ ಕೈಗನ್ನಡಿ.

ಪೊಲೀಸ್‌ ಸುಧಾರಣೆ ಕುರಿತು ಧರ್ಮವೀರ ಆಯೋಗವೂ ಅನೇಕ ಶಿಫಾರಸುಗಳನ್ನು ಮಾಡಿದೆ. ಆದರೆ, ಎಲ್ಲ ನಿರ್ದೇಶನಗಳು, ಶಿಫಾರಸುಗಳು ದೂಳು ಹಿಡಿಯುತ್ತಿವೆ. ಇಂದಿರಾ ಗಾಂಧಿ ಆಳ್ವಿಕೆ 1970ರ ದಶಕದಲ್ಲಿ ಕೊನೆಗೊಂಡು, ಜನತಾ ಪಕ್ಷ ಅಧಿಕಾರಕ್ಕೆ ಬಂದಿದ್ದಾಗ ಸುಧಾರಣೆ ಪ್ರಕ್ರಿಯೆ ಆರಂಭವಾಗಿತ್ತು. ಆದರೆ, ಮತ್ತೆ ಮುಂದುವರಿಯಲಿಲ್ಲ. ಇದನ್ನು ಹೊರತುಪಡಿಸಿದರೆ ಮತ್ತೆ ಎಲ್ಲೂ, ಯಾವ ರಾಜ್ಯದಲ್ಲೂ ಇಂಥ ಪ್ರಯತ್ನಗಳು ನಡೆದಿಲ್ಲ ಎನ್ನುವುದು ವಿಷಾದನೀಯ. ರಾಜಕೀಯ ಹಸ್ತಕ್ಷೇಪದಿಂದಾಗಿ ತನಿಖೆಗಳು ದಾರಿತಪ್ಪುತ್ತಿವೆ. ಇದರಿಂದ ಪೊಲೀಸರ ಬಗ್ಗೆ ತಪ್ಪು ಭಾವನೆ ಮೂಡಿದೆ ಎಂದು ಶರ್ಮಾ ಹೇಳಿರುವುದರಲ್ಲಿ ಅತಿಶಯೋಕ್ತಿ ಏನೂ ಇಲ್ಲ. ಆದರೆ, ಅವರು ಪತ್ರ ಬರೆದಿರುವ ಸಮಯ ಹಾಗೂ ವಿಧಾನ ಅನುಮಾನಗಳಿಗೆ ಕಾರಣವಾಗಿದೆ. ಯಾವುದೋ ಪಕ್ಷದ ದಾಳವಾಗಿ ಬಳಕೆಯಾಗುತ್ತಿದ್ದಾರೇನೊ ಎಂಬ ಸಂಶಯ ಮೂಡುತ್ತದೆ. ಪೊಲೀಸ್‌ ಇಲಾಖೆಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಇರಬೇಕು. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇನ್ನಾದರೂ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಲೋಚಿಸುವ ಅಗತ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry