7

‘ನನಗೆ ಮಕ್ಕಳಿದ್ದಾರೆ, ಅಷ್ಟ ಮಠಾಧೀಶರಿಗೂ ಮಕ್ಕಳಿದ್ದಾರೆ’

Published:
Updated:
‘ನನಗೆ ಮಕ್ಕಳಿದ್ದಾರೆ, ಅಷ್ಟ ಮಠಾಧೀಶರಿಗೂ ಮಕ್ಕಳಿದ್ದಾರೆ’

ಉಡುಪಿ: ’ನನಗೂ ಮಕ್ಕಳಿದ್ದಾರೆ, ಅಷ್ಟ ಮಠದ ಎಲ್ಲ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ’ ಎಂದು ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಹೇಳಿರುವ ದೃಶ್ಯಗಳನ್ನು ‘ಬಿ ಟಿವಿ‘ ವಾಹಿನಿ ಮಂಗಳವಾರ ಪ್ರಸಾರ ಮಾಡಿದೆ.

ಆದರೆ ಪ್ರಸಾರವಾಗಿರುವ ವಿಡಿಯೊ ನಕಲಿ, ಇದರಲ್ಲಿ ಸತ್ಯಾಂಶವಿಲ್ಲ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆಸಿರುವ ಸ್ವಾಮೀಜಿ, ಈಗ ಹೆಚ್ಚೇನೂ ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಮಾರುವೇಷದ ಕಾರ್ಯಾಚರಣೆಯಲ್ಲಿ ವಾಹಿನಿ ವರದಿಗಾರರು ಕೇಳುವ ಪ್ರಶ್ನೆಗಳಿಗೆ ಸ್ವಾಮೀಜಿ ಉತ್ತರಿಸಿರುವುದನ್ನು ‍ಪ್ರಸಾರ ಮಾಡಲಾಗಿದೆ. ‘ಎಂಟನೇ ವಯಸ್ಸಿಗೆ ಸನ್ಯಾಸ ಕೊಡುತ್ತಾರೆ, ಆಗ ನಮಗೆ ಬುದ್ಧಿ– ಲೋಕಜ್ಞಾನ ಇರುವುದಿಲ್ಲ. ಪ್ರಾಯ ಬಂದ ಮೇಲೆ ಆಸೆ ಬರುವುದು ಸಹಜ. ಮನುಷ್ಯನಿಗೆ ಆಸೆಗಳೆ ಇರಲ್ವ? ಅದನ್ನು ಸಹಿಸಿಕೊಳ್ಳೋದು ಹೇಗೆ. ಅಷ್ಟ ಮಠದ ಎಲ್ಲ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ.  ಅದೆಲ್ಲ ಉಡುಪಿ ಜನರಿಗೆ ಗೊತ್ತಿರುವ ವಿಷಯ. ಅದು ಬಯಲಾದರೆ ಉಡುಪಿ ಮರ್ಯಾದೆ ಹೋಗುತ್ತದೆ’ ಎಂದು ಶ್ರೀಗಳು ವಿಡಿಯೊದಲ್ಲಿ ಹೇಳಿದ್ದರು.

ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಪೀಠಾಧಿಪತಿಯಾದ ಅವರು ‘ಈ ಬಾರಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದು ಶನಿವಾರ ಹೇಳಿದ್ದರು. ‘ಬಿಜೆಪಿಯಿಂದ ಟಿಕೆಟ್ ನೀಡಿದರೆ ಆ ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ’ ಎಂದೂ ತಿಳಿಸಿದ್ದರು.

ಮೇಲ್ನೋಟಕ್ಕೆ ಈ ವಿಡಿಯೊ ಹಳೆ ವಿಡಿಯೊದಂತಿದೆ ಎಂಬ ಮಾತು ಉಡುಪಿ ಸುತ್ತಮುತ್ತ ಮಂಗಳವಾರ ಸಂಜೆ ಕೇಳಿಬಂದಿತ್ತು. ಬಹಳ ಹೊತ್ತು ತಮ್ಮ ಎರಡೂ ಮೊಬೈಲ್‌ಗಳನ್ನು ಸ್ವಿಚ್‌ ಆಫ್‌ ಮಾಡಿದ್ದ ಸ್ವಾಮೀಜಿ ಅವರು ರಾತ್ರಿ 8.30ರ ಸುಮಾರಿಗೆ ಸಂಪರ್ಕಕ್ಕೆ ಬಂದು ಚುಟುಕಾಗಿ ಪ್ರತಿಕ್ರಿಯೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry