ರೈತರ ಸಾಲಮನ್ನಾ: ಫಡಣವೀಸ್‌

7

ರೈತರ ಸಾಲಮನ್ನಾ: ಫಡಣವೀಸ್‌

Published:
Updated:
ರೈತರ ಸಾಲಮನ್ನಾ: ಫಡಣವೀಸ್‌

ಮುಂಬೈ: 2001–09ನೇ ಅವಧಿಯಲ್ಲಿ ಸಾಲ ಮರುಪಾವತಿ ಮಾಡದ ರೈತರ ಸಾಲವನ್ನು 2008ರ ಯೋಜನೆ ಅಡಿ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ವಿಧಾನಸಭೆಗೆ ಮಂಗಳವಾರ ಹೇಳಿದ್ದಾರೆ.

2008ರಲ್ಲಿ ಜಾರಿಗೊಂಡ ‘ಛತ್ರಪತಿ ಶಿವಾಜಿ ಮಹಾರಾಜ್ ಸನ್ಮಾನ್ ಯೋಜನೆ’ ಅಡಿ ಈ ರೈತರ ಸಾಲವನ್ನು ಮನ್ನಾ ಮಾಡಲಾಗುವುದು ಎಂದರು. ‘ಈ ಸಾಲಮನ್ನಾ ಯೋಜನೆ ಕುರಿತಂತೆ ಕಳೆದ ಜೂನ್‌ ತಿಂಗಳಿನಲ್ಲಿ ಬಿಜೆಪಿ ಸರ್ಕಾರ ಘೋಷಣೆ ಮಾಡಿತ್ತು. ಅದನ್ನು ಈಗ ಜಾರಿಗೆ ತರಲಾಗಿದೆ. ‘2016–17ನೇ ಸಾಲಿನಲ್ಲಿ ಸಾಲ ಪಡೆದವರ ಬಗ್ಗೆ ಶೀಘ್ರದಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಅವರಿಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚಿಂತಿಸಲಾಗುವುದು. ಛತ್ರಪತಿ ಯೋಜನೆಗೆ ಸಂಬಂಧಿಸಿದ ಚರ್ಚೆಗೆ ಸಚಿವರು ಮತ್ತು ರೈತ ಮುಖಂಡರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು’ ಎಂದರು.

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ  ನಾಸಿಕ್‌ನಿಂದ ಮುಂಬೈವರೆಗೆ ಸುಮಾರು 180 ಕಿ.ಮೀ ಕಾಲ್ನಡಿಗೆಯಲ್ಲಿ ರೈತರು ಸೋಮವಾರ ಪ್ರಯಾಣ ಬೆಳೆಸಿದ ಬೆನ್ನಲ್ಲೇ ಮುಖ್ಯಮಂತ್ರಿಗಳು ಈ ವಿಷಯ ಪ್ರಸ್ತಾಪಿಸಿದ್ದಾರೆ. ರೈತರ ಹಲವು ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸರ್ಕಾರ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆಯನ್ನು ಸೋಮವಾರ ಹಿಂದಕ್ಕೆ ಪಡೆದಿದ್ದರು.

ಅರಣ್ಯ ಭೂಮಿ ಹಕ್ಕುಗಳ ವರ್ಗಾವಣೆ ಬಗ್ಗೆ ರೈತರು ಇಟ್ಟಿರುವ ಬೇಡಿಕೆಗಳ ಕುರಿತು ಮಾತನಾಡಿದ ಫಡಣವೀಸ್‌, ‘ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಆರು ತಿಂಗಳ ಕಾಲಾವಕಾಶ ಬೇಕಾಗಿದೆ. ಬುಲೆಟ್‌ ಟ್ರೇನ್‌ ಹಾಗೂ ಸಮೃದ್ಧಿ ಮಹಾಮಾರ್ಗ (ಮುಂಬೈ ಮತ್ತು ನಾಗಪುರವನ್ನು ಸಂಪರ್ಕಿಸುವ ಮಾರ್ಗ) ಯೋಜನೆಗಳಿಗೆ ಭೂ ಒತ್ತುವರಿ ಮಾಡುವ ಸಂದರ್ಭದಲ್ಲಿ ರೈತರ ಜೊತೆ ಸಮಾಲೋಚಿಸಿಯೇ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry