ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಗೆ ಶಸ್ತ್ರ ಖರೀದಿ ಅನುದಾನ ಕಡಿತ

ಸಂಸತ್‌ ಸಮಿತಿಗೆ ಲೆ. ಜ. ಶರತ್‌ಚಂದ್‌ ಹೇಳಿಕೆ
Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: 2018–19ನೇ ಸಾಲಿನ ಬಜೆಟ್‌ನಲ್ಲಿ ಸಶಸ್ತ್ರ ಪಡೆಯ ಖರೀದಿಗೆ ನೀಡಿದ ಅನುದಾನವು ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆಗಳಿಗೂ ಸಾಲುವಷ್ಟಿಲ್ಲ. ಹೊಸ ಖರೀದಿಗೆ ಅವಕಾಶವೇ ಇಲ್ಲ ಎಂದು ಭಾರತೀಯ ಸೇನೆಯ ಉಪಮುಖ್ಯಸ್ಥ ಲೆ. ಜ. ಶರತ್‌ಚಂದ್‌ ಅವರು ಸಂಸತ್ತಿನ ರಕ್ಷಣಾ ಸ್ಥಾಯಿ ಸಮಿತಿಗೆ ತಿಳಿಸಿದ್ದಾರೆ.

‘2018–19ರ ಬಜೆಟ್‌ ನಮ್ಮ ಭರವಸೆಯನ್ನು ಕುಗ್ಗಿಸಿದೆ. ನಮ್ಮ ಈವರೆಗಿನ ಸಾಧನೆಗೆ ಸ್ವಲ್ಪ ಹಿನ್ನಡೆಯಾಗಿದೆ’ ಎಂದು ಹೇಳಿದರು.

ಆಧುನೀಕರಣಕ್ಕೆ ₹21,338 ಕೋಟಿ ನಿಗದಿ ಮಾಡಲಾಗಿದೆ. ಆದರೆ, ಈಗಾಗಲೇ 125 ಖರೀದಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳ ಪಾವತಿಗೇ ಈ ಮೊತ್ತ ಸಾಕಾಗದು. ಇದಲ್ಲದೆ, ತುರ್ತು ಖರೀದಿ ಅಗತ್ಯ ಇದೆ. 10 ದಿನಗಳ ತೀವ್ರ ಯುದ್ಧಕ್ಕೆ ಬೇಕಾಗುವ ಮದ್ದುಗುಂಡು ಮತ್ತು ಇತರ ಮದ್ದುಗುಂಡು ಖರೀದಿ ಮಾಡಬೇಕಾಗುತ್ತದೆ. ಖರೀದಿಗೆ ಸಂಬಂಧಿಸಿ ಸೇನೆಗೆ ₹12,296 ಕೋಟಿ ಕೊರತೆಯಾಗಿದೆ ಎಂದು ಶರತ್‌ಚಂದ್‌ ವಿವರಿಸಿದ್ದಾರೆ.

ಹಣದ ಕೊರತೆಯಿಂದ ಆಗಬಹುದಾದ ಹಲವು ಸಮಸ್ಯೆಗಳತ್ತವೂ ಅವರು ಬೆಳಕು ಚೆಲ್ಲಿದ್ದಾರೆ. ಸಮಯಕ್ಕೆ ಸರಿಯಾಗಿ ಹಣ ಪಾವತಿ ಆಗದಿದ್ದರೆ ಅದು ಕಾನೂನು ಸಮರಕ್ಕೆ ಕಾರಣವಾದೀತು. ಅಷ್ಟೇ ಅಲ್ಲದೆ, ಕಾಲ ಕಾಲಕ್ಕೆ ಶಸ್ತ್ರಾಸ್ತ್ರದ ನಿರ್ವಹಣೆ ಮಾಡದಿದ್ದರೆ ಅವುಗಳ ಉಪಯೋಗವೇ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣ ಆಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಮೂಲಸೌಕರ್ಯ ವಿಭಾಗದಲ್ಲಿಯೂ ಸೇನೆಗೆ ನಿಗದಿ ಮಾಡಿದ ಹಣ ಸುಮಾರು ₹902 ಕೋಟಿಯಷ್ಟು ಕಡಿಮೆಯಾಗಿದೆ. ಇದರಿಂದಾಗಿ ಚೀನಾ ಗಡಿಯಲ್ಲಿ ರಸ್ತೆ ನಿರ್ಮಾಣ ಹಾಗೂ ರೋಹ್ಟಂಗ್‌ ಸುರಂಗ ನಿರ್ಮಾಣಕ್ಕೆ ಅಡಚಣೆ ಆಗಲಿದೆ. ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಗುಂಡಿನ ಹಾರಾಟ ನಿರಂತರವಾಗಿ ನಡೆಯುತ್ತಿದೆ. ದೋಕಲಾದಲ್ಲಿ ಚೀನಾ ಜತೆಗೆ 72 ದಿನಗಳ ಮುಖಾಮುಖಿ ಇತ್ತೀಚೆಗಷ್ಟೇ ನಡೆದಿತ್ತು. ಇಂತಹ ಸಂದರ್ಭದಲ್ಲಿಯೇ ಅನುದಾನವನ್ನು ಕಡಿತ ಮಾಡಲಾಗಿದೆ.

2016ರ ಸೆಪ್ಟೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಅದಾದ ಬಳಿಕ, ₹14,097 ಕೋಟಿ ಮೊತ್ತದ ಮದ್ದುಗುಂಡು ಮತ್ತು ಇತರ ಸಲಕರಣೆಗಳನ್ನು ಖರೀದಿ ಮಾಡುವ ಅಧಿಕಾರವನ್ನು ಸೇನೆಗೆ ನೀಡಲಾಗಿತ್ತು.

ಆದರೆ, ಇದಕ್ಕೆ ಬಜೆಟ್‌ನಲ್ಲಿ ಅನುದಾನ ನೀಡಲಾಗಿಲ್ಲ. ಹಾಗಾಗಿ ಇಂತಹ ಖರೀದಿಗೂ ಈಗ ಮೀಸಲಿಟ್ಟಿರುವ ಹಣದಲ್ಲಿಯೇ ಹೊಂದಾಣಿಕೆ ಮಾಡಿಕೊಳ್ಳಬೇಕು. ಖರೀದಿ ಯೋಜನೆಗಳನ್ನು ಮರುರೂಪಿಸುವುದು ಅಗತ್ಯವಾಗಿದೆ ಎಂದು ಶರತ್‌ಚಂದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT