ಸೋಮವಾರ, ಮಾರ್ಚ್ 27, 2023
22 °C
ಸಾವಿರಾರು ಪ್ರಯಾಣಿಕರಿಗೆ ಕಷ್ಟ

65 ವಿಮಾನ ಯಾನಗಳು ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

65 ವಿಮಾನ ಯಾನಗಳು ರದ್ದು

ನವದೆಹಲಿ: ದೋಷಪೂರಿತವಾದ ಪ್ರಾಟ್‌ ಅಂಡ್‌ ವೈಟ್ನಿ ಎಂಜಿನ್‌ಗಳನ್ನು ಹೊಂದಿರುವ ವಿಮಾನಗಳ ಯಾನ ರದ್ದತಿ ಮುಂದುವರಿದಿದೆ. ಇಂಡಿಗೊ ಮತ್ತು ಗೋಏರ್‌ ವಿಮಾನ ಯಾನ ಸಂಸ್ಥೆಗಳ ಕನಿಷ್ಠ 65 ಯಾನಗಳನ್ನು ಮಂಗಳವಾರ ಸ್ಥಗಿತ ಮಾಡಲಾಗಿದ್ದು ಸಾವಿರಾರು ಪ್ರಯಾಣಿಕರ ಪ್ರಯಾಣ ವೇಳಾಪಟ್ಟಿಗಳು ಏರುಪೇರಾಗಿವೆ.

ದಿನಕ್ಕೆ ಸಾವಿರಕ್ಕೂ ಹೆಚ್ಚು ಯಾನಗಳನ್ನು ನಿರ್ವಹಿಸುವ ಇಂಡಿಗೊ ಸಂಸ್ಥೆಯ 47 ಮತ್ತು ಗೋಏರ್‌ನ 18 ಯಾನಗಳನ್ನು ಮಂಗಳವಾರ ರದ್ದು ಮಾಡಲಾಗಿದೆ.

ನಾಗರಿಕ ವಿಮಾನ ಯಾನ ನಿರ್ದೇಶನಾಲಯದ (ಡಿಜಿಸಿಎ) ಆದೇಶದಂತೆ ಪ್ರಾಟ್‌ ಅಂಟ್‌ ವೈಟ್ನಿ ಎಂಜಿನ್‌ ಹೊಂದಿರುವ ವಿಮಾನಗಳ 14 ಯಾನ

ಗಳನ್ನು (ಇಂಡಿಗೊ 11 ಮತ್ತು ಗೋಏರ್‌ 3) ಸೋಮವಾರವೇ ರದ್ದು ಮಾಡಲಾಗಿತ್ತು.

‘ಜಗತ್ತಿನಾದ್ಯಂತ ಒಟ್ಟು 43 ಪ್ರಾಟ್‌ ಅಂಡ್‌ ವೈಟ್ನಿ ಎಂಜಿನ್‌ಗಳನ್ನು ಹೊಂದಿರುವ ವಿಮಾನಗಳಿವೆ. ಅವುಗಳಲ್ಲಿ 19 ಭಾರತದಲ್ಲಿವೆ. ಈ ಎಂಜಿನ್‌ಗಳು ಸುರಕ್ಷಿತ ಎಂದು ಪರಿಗಣಿಸಲಾಗದು. ಅವುಗಳ ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ. ಸುರಕ್ಷಿತ ಎಂದು ಕಂಡು ಬಂದರೆ ಮಾತ್ರ ಅವುಗಳ ಹಾರಾಟಕ್ಕೆ ಅವಕಾಶ ಕೊಡಲಾಗುವುದು’ ಎಂದು ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ್‌ ಸಿನ್ಹಾ ತಿಳಿಸಿದ್ದಾರೆ.

ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ, ಹೈದರಾಬಾದ್‌, ಬೆಂಗಳೂರು, ಪಟ್ನಾ, ಶ್ರೀನಗರ, ಭುವನೇಶ್ವರ, ಅಮೃತಸರ, ಶ್ರೀನಗರ ಮತ್ತು ಗುವಾಹಟಿಯಿಂದ ವಿವಿಧೆಡೆಗೆ ಹೋಗಬೇಕಿದ್ದ ವಿಮಾನಗಳು ರದ್ದಾಗಿವೆ.

ರದ್ದುಗೊಂಡ ವಿಮಾನಗಳಲ್ಲಿ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರಿಗೆ ಬೇರೆ ವಿಮಾನಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಪ್ರಯಾಣ ರದ್ದು ಮಾಡುವವರ ಟಿಕೆಟ್‌ನ ಸಂಪೂರ್ಣ ಹಣವನ್ನು ಹಿಂದಿರುಗಿಸಲಾಗುವುದು ಎಂದು ‘ಗೋಏರ್‌’ ತಿಳಿಸಿದೆ.

ದೇಶೀಯ ವಿಮಾನ ಯಾನದಲ್ಲಿ ಶೇ 40ರಷ್ಟು ಪಾಲನ್ನು ಇಂಡಿಗೊ ಹೊಂದಿದ್ದರೆ ಶೇ 10ರಷ್ಟು ಪಾಲು ಗೋಏರ್‌ ಸಂಸ್ಥೆಯದ್ದಾಗಿದೆ. ಹಾಗಾಗಿ ವಿಮಾನ ಯಾನಗಳ ರದ್ದತಿಯಿಂದ ದೊಡ್ಡ ಸಂಖ್ಯೆಯ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ.

ಕಾರಣ ಏನು

ಅಹಮದಾಬಾದ್‌ನಿಂದ ಲಖನೌಗೆ ಹೋಗುತ್ತಿದ್ದ ವಿಮಾನ ಹಾರಾಟ ಆರಂಭಿಸಿದ 40 ನಿಮಿಷದಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಸೋಮವಾರ ಅಹಮದಾಬಾದ್‌ಗೆ ಹಿಂದಿರುಗಿತ್ತು. ಫೆಬ್ರುವರಿಯಿಂದ ಇದೇ ರೀತಿಯ ಸಮಸ್ಯೆ ಪ್ರಾಟ್‌ ಎಂಟ್‌ ವೈಟ್ನಿ ಎಂಜಿನ್‌ ಇರುವ ಹಲವು ವಿಮಾನಗಳಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಈ ಎಂಜಿನ್‌ ಹೊಂದಿರುವ ವಿಮಾನಗಳ ಹಾರಾಟವನ್ನು ನಿಷೇಧಿಸಿ ಡಿಜಿಸಿಎ ಸೋಮವಾರ ಆದೇಶ ಹೊರಡಿಸಿದೆ. 

ಇದೇ ಕಾರಣಕ್ಕಾಗಿ ಫೆಬ್ರುವರಿಯಲ್ಲಿ ಮೂರು ವಿಮಾನಗಳ ಯಾನ ರದ್ದು ಮಾಡಲಾಗಿತ್ತು. ದೋಷಪೂರಿತವಾದ ಎಲ್ಲ ಎಂಜಿನ್‌ಗಳನ್ನು ಜೂನ್‌ನೊಳಗೆ ಬದಲಾಯಿಸಿಕೊಡುವುದಾಗಿ ಪ್ರಾಟ್‌ ಅಂಟ್‌ ವೈಟ್ನಿ ಸಂಸ್ಥೆ ಹೇಳಿದೆ.

**

ಪ್ರಯಾಣಿಕರ ಸುರಕ್ಷತೆಯ ಕಾರಣಕ್ಕಾಗಿ ವಿಮಾನಗಳನ್ನು ರದ್ದು ಮಾಡಲಾಗಿದೆ. ವಿಮಾನಯಾನ ಸಂಸ್ಥೆಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿವೆ. ಏನೇ ಆದರೂ ಪ್ರಯಾಣಿಕರ ಸುರಕ್ಷೆ ವಿಚಾರದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ

- ಸುರೇಶ್‌ ಪ್ರಭು, ನಾಗರಿಕ ವಿಮಾನಯಾನ ಸಚಿವ  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.