ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರದಿ ತಿರಸ್ಕರಿಸಿ ಇಲ್ಲವೇ ಪ್ರತಿಭಟನೆ ಎದುರಿಸಿ’

Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಶಿವಯೋಗ ಮಂದಿರ (ಬಾಗಲಕೋಟೆ): ಲಿಂಗಾಯತ ಸ್ವತಂತ್ರ ಧರ್ಮ ಮನ್ನಣೆ ವಿಚಾರವಾಗಿ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ಸಮಿತಿ ವರದಿಯನ್ನು ತಿರಸ್ಕರಿಸುವಂತೆ, ಮಂಗಳವಾರ ಇಲ್ಲಿ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ನಡೆದ ಗುರು–ವಿರಕ್ತ ಮಠಾಧೀಶರ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿತು.

ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದಲ್ಲಿ ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳಲು ಸಭೆ ತೀರ್ಮಾನಿಸಿತು. ಈ ಬಗ್ಗೆ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಲು ಇದೇ ವೇಳೆ ನಿರ್ಧರಿಸಲಾಯಿತು.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ‘ಸಮಾಜದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಅವರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇವೆ; ಬೇಡಿಕೊಳ್ಳುತ್ತೇವೆ. ಅವರು ಅದಕ್ಕೆ ಮನ್ನಣೆ ನೀಡದೇ ಹಟಮಾರಿ ಧೋರಣೆ ಮುಂದುವರಿಸಿದರೆ ನಾವೇನು ಎಂಬುದನ್ನು ತೋರಿಸಲಿದ್ದೇವೆ’ ಎಂದರು.

‘ಸಿದ್ದರಾಮಯ್ಯ ಅವರಿಗೆ ಸಮಾಜದ ಬಗ್ಗೆ ಕಾಳಜಿ ಇದ್ದರೆ ವೀರಶೈವ–ಲಿಂಗಾಯತ ಬೇರೆ ಬೇರೆ ಅಲ್ಲ ಎರಡೂ ಒಂದೇ ಎಂದು ಘೋಷಿಸಲಿ. ಈ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿರುವ ಸಮುದಾಯದ ಮುಖಂಡರು ಅವರ ಮನವೊಲಿಸಲಿ. ಇಲ್ಲದಿದ್ದರೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸಂವಿಧಾನ ತಜ್ಞರ ಪ್ರಕಾರ ದೇಶದಲ್ಲಿ ಹೊಸ ಧರ್ಮ ಘೋಷಣೆಗೆ ಅವಕಾಶವಿಲ್ಲ. ಯಾವುದೇ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ. ಆದರೆ ಕೇವಲ ಚುನಾವಣೆ ಕಾರಣಕ್ಕೆ ಜನರನ್ನು ಮರುಳು ಮಾಡುವ ಕೆಲಸ ನಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಮಿತಿ ಆರು ತಿಂಗಳು ಕಾಲಾವಕಾಶ ಕೇಳಿದ್ದರೂ ಸರ್ಕಾರ ಒತ್ತಾಯದಿಂದ ತರಾತುರಿಯಲ್ಲಿ ವರದಿ ಪಡೆದಿದೆ. ಸಚಿವರಾದ ಎಂ.ಬಿ.ಪಾಟೀಲ ಹಾಗೂ ವಿನಯ ಕುಲಕರ್ಣಿ ಧರ್ಮ ಒಡೆಯುವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಸಮಾಜದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ತಜ್ಞರ ಸಮಿತಿಯದು ಅಜ್ಞಾನದ ನಿರ್ಣಯ’ ಎಂದು ಟೀಕಿಸಿದರು.

‘ಈ ಹಿಂದೆ ವೀರಶೈವ ಮಹಾಸಭಾದ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಎಲ್ಲರೂ ಒಂದಾಗಿ ಬಂದರೆ ವೀರಶೈವ ಸ್ವತಂತ್ರ ಧರ್ಮದ ಪ್ರಸ್ತಾವವನ್ನು ಕೇಂದ್ರಕ್ಕೆ ಕಳುಹಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಈಗ ಒಂದು ಗುಂಪಿನ ಅಭಿಪ್ರಾಯಕ್ಕೆ ಮಾತ್ರ ಮನ್ನಣೆ ನೀಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿದರು.

ಶಿವಯೋಗ ಮಂದಿರದ ಅಧ್ಯಕ್ಷ ಡಾ.ಸಂಗನಬಸವ ಸ್ವಾಮೀಜಿ ಸೇರಿದಂತೆ 30ಕ್ಕೂ ಹೆಚ್ಚು ಗುರು–ವಿರಕ್ತ ಮಠಾಧೀಶರು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ರಂಭಾಪುರಿ ಶ್ರೀ ಮನವೊಲಿಸುತ್ತೇವೆ’ (ಕಲಬುರ್ಗಿ ): ‘ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ವಿಷಯವಾಗಿ ರಂಭಾಪುರಿ ಶ್ರೀ ಅವರಲ್ಲಿ ತಪ್ಪುಗ್ರಹಿಕೆ ಇರಬಹುದು. ನಾವು ಅವರ ಮನವೊಲಿಸುತ್ತೇವೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

‘ನ್ಯಾಯಮೂರ್ತಿ ನಾಗಮೋಹನದಾಸ್‌ ಸಮಿತಿಯ ವರದಿಯ ಬಗ್ಗೆ ಸಂಪುಟದಲ್ಲಿ ಮೂರು ಗಂಟೆ ಚರ್ಚೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಸಲಹೆಯನ್ನೂ ಕೇಳಿದ್ದಾರೆ. ಬುಧವಾರದ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದ್ದು, ಬಹುಮತದ ಆಧಾರದ ಮೇಲೆ ಸೂಕ್ತ ತೀರ್ಮಾನವಾಗಲಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಂಪುಟ ಸಭೆಯಲ್ಲಿ ಏನು ನಿರ್ಧಾರವಾಗಲಿದೆ ಎಂಬುದನ್ನು ನಾನು ಈಗಲೇ ಹೇಗೆ ಹೇಳಲಿ’ ಎಂದು ಪ್ರತಿಕ್ರಿಯಿಸಿದರು.

‘ಶೈವ ಪದ ಹಿಂದೂ ಧರ್ಮದ ಭಾಗ ಎಂಬ ಕಾರಣಕ್ಕೇ ಹಿಂದೆ ಈ ಪ್ರಸ್ತಾವ ತಿರಸ್ಕೃತವಾಗಿದೆ. ವೀರಶೈವ–ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ಕೇಂದ್ರ ಸಮ್ಮತಿಸಿದರೆ ಆ ಪದ ಬಳಕೆಗೆ ವಿರೋಧ ಇಲ್ಲ’ ಎಂದರು.

ಕಾನೂನು ಹೋರಾಟ ಆರಂಭಿಸಲಿದ್ದೇವೆ

‘ವೀರಶೈವ ಪರಂಪರೆಯ ಮಠಾಧೀಶರಾಗಿದ್ದುಕೊಂಡು ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ನಡೆಸುತ್ತಿರುವವರ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಆರಂಭಿಸಲಿದ್ದೇವೆ. ಆ ನಿಟ್ಟಿನಲ್ಲಿ ದಾಖಲೆ ಸಂಗ್ರಹದಲ್ಲಿ ತೊಡಗಿದ್ದೇವೆ’ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

‘ವೀರಶೈವ ಅಧ್ಯಯನ ಸಂಸ್ಥೆಯ ಧರ್ಮಕರ್ತರು ಎಂಬ ಹೆಸರಿನಲ್ಲಿ ಗದುಗಿನ ತೋಂಟದಾರ್ಯ ಶ್ರೀಗಳು ಮಠಕ್ಕೆ ಸೇರಿದ ಜಾಗವನ್ನು ಯಮನೂರಪ್ಪ ಬಾರಕೇರ ಎಂಬುವ
ವರಿಗೆ ಮಾರಾಟ ಮಾಡಿದ್ದಾರೆ’ ಎಂದು ಇದೇ ವೇಳೆ ಆರೋಪಿಸಿದ ದಿಂಗಾಲೇಶ್ವರ ಸ್ವಾಮೀಜಿ, ದಾಖಲೆ ಪತ್ರ ಪ್ರದರ್ಶಿಸಿದರು.

‘ವೀರಶೈವ ಮಠಾಧಿಪತಿಗಳಾಗಿ ತಮ್ಮ ಮಠಗಳಿಂದ ಬರುವ ಆದಾಯ ಹಾಗೂ ಉತ್ಪನ್ನಗಳನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ ಗದುಗಿನ ತೋಂಟದಾರ್ಯ ಶ್ರೀ, ನಾಗನೂರ ರುದ್ರಾಕ್ಷಿಮಠದ ಶ್ರೀ, ಮಾತೆ ಮಹಾದೇವಿ ಮೊದಲಾದವರು ಮಠದ ಹಣವನ್ನು ಕೆಟ್ಟ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಈ ಸಮಾಜಘಾತುಕ ಕೆಲಸವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಅಂತಹವರು ವೀರಶೈವ ಪರಂಪರೆಯ ಪೀಠಗಳನ್ನು ಮೊದಲು ತ್ಯಜಿಸಲಿ’ ಎಂದು ಆಗ್ರಹಿಸಿದರು.

ಧೈರ್ಯ, ಶಕ್ತಿ ಇದ್ದರೆ ಹೋರಾಟ ಮಾಡಲಿ (ಗದಗ ವರದಿ) : ‘ತೋಂಟದಾರ್ಯ ಮಠಕ್ಕೆ ಸೇರಿದ ವೀರಶೈವ ಅಧ್ಯಯನ ಸಂಸ್ಥೆಯ ಅಂದಾಜು 700 ಚದರ ಅಡಿ ಜಾಗವನ್ನು, ಅದರಲ್ಲಿ ಹಲವು ವರ್ಷಗಳಿಂದ ಭೋಗ್ಯದಾರನಾಗಿರುವ ದಲಿತ ಸಮುದಾಯದ ಯಮನೂರಪ್ಪ ಬಾರಕೇರ ಎಂಬುವವರಿಗೆ ಕಾಯ್ದೆ ಪ್ರಕಾರ ಮಾರಾಟ ಮಾಡಲಾಗಿದೆ. ಇದು ಟ್ರಸ್ಟ್‌ನ ದೈನಂದಿನ ವ್ಯವಹಾರ. ದಿಂಗಾಲೇಶ್ವರ ಸ್ವಾಮಿಗೆ ಧೈರ್ಯ ಮತ್ತು ಶಕ್ತಿ ಇದ್ದರೆ ಇದರ ವಿರುದ್ಧ ಯಾವುದೇ ಹೋರಾಟವನ್ನಾದರೂ ಮಾಡಬಹುದು’ ಎಂದು ಬಾಲೆಹೊಸೂರಿನ ದಲಿತ ದೌರ್ಜನ್ಯ ವಿರೋಧಿ ಒಕ್ಕೂಟದ ಅಧ್ಯಕ್ಷ ನಾರಾಯಣಸ್ವಾಮಿ ಮತ್ತು ತೋಂಟದಾರ್ಯ ಮಠದ ಆಸ್ತಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಬಿ ಬಡ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕಾಂಗ್ರೆಸ್‌ನಿಂದ ಮಠಾಧೀಶರ ಖರೀದಿ’  ಅಥವಾ   ‘ಮೀಸಲಾತಿಗಾಗಿ ಭಿಕ್ಷೆ ಬೇಡುವುದು ಸಲ್ಲ’
ಹುಬ್ಬಳ್ಳಿ: ‘ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಕವಾಡುತ್ತಿದ್ದಾರೆ. ಕಪ್ಪುಹಣ ನೀಡಿ ಕೆಲವು ಮಠಾಧೀಶರನ್ನು ಅವರು ಖರೀದಿಸಿದ್ದಾರೆ’ ಎಂದು ಬಿಜೆಪಿ ಮುಖಂಡ ವಿಜಯ ಸಂಕೇಶ್ವರ ಮಂಗಳವಾರ ಇಲ್ಲಿ ಆರೋಪಿಸಿದರು.

‘ಯಡಿಯೂರಪ್ಪ ನೇತೃತ್ವದ ಸರ್ಕಾರ ಮಠಗಳಿಗೆ ಸಾಕಷ್ಟು ನೆರವು ನೀಡಿತ್ತು. ಆದರೆ, ಆಗ ಯಾವ ಮಠಾಧೀಶರಿಗೆ ಅವರಿಂದ ಲಾಭ ಸಿಕ್ಕಿಲ್ಲವೋ ಅಂಥವರು ಈಗ ಲಿಂಗಾಯತ ಧರ್ಮದ ಪರ ಮಾತನಾಡುತ್ತಿದ್ದಾರೆ. ಮಠಾಧೀಶರೂ ಈಗ ದುಡ್ಡಿನ ದಾಹ ಹೊಂದಿದ್ದಾರೆ’ ಎಂದು ಸಂಕೇಶ್ವರ ದೂರಿದರು.

‘ನ್ಯಾಯಮೂರ್ತಿ ನಾಗಮೋಹನದಾಸ್‌ ಸಮಿತಿ ವರದಿಯನ್ನು ನಾನು ಒಪ್ಪುವುದಿಲ್ಲ. ಲಿಂಗಾಯತರು ಕೈಎತ್ತಿ ನೀಡುವಂಥವರು. ಅವರು ಮೀಸಲಾತಿಗಾಗಿ ಭಿಕ್ಷೆ ಬೇಡಬಾರದು’ ಎಂದು ವಿಜಯ ಸಂಕೇಶ್ವರ ಹೇಳಿದರು.

‘ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. ಬೇಕಾದರೆ, ಇವೆರಡನ್ನೂ ಒಳಗೊಂಡ ಪ್ರತ್ಯೇಕ ಧರ್ಮವಾಗಲಿ’ ಎಂದು ಅವರು ಅಭಿಪ್ರಾಯಪಟ್ಟರು.

ಸಾಮೂಹಿಕ ನಿರ್ಧಾರ: ಸಿದ್ದರಾಮಯ್ಯ
ಹಾವೇರಿ: ‘ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸಿನ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ. ಇದು ಸಾಮೂಹಿಕ ಜವಾಬ್ದಾರಿಯೇ ಹೊರತು, ವೈಯಕ್ತಿಕ ತೀರ್ಮಾನದ ವಿಚಾರ ಅಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಣೆಬೆನ್ನೂರು ತಾಲ್ಲೂಕಿನ ಅಸುಂಡಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಕ ಆಡುತ್ತಿದ್ದಾರೆ’ ಎಂಬ ಉದ್ಯಮಿ ವಿಜಯ ಸಂಕೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದೊಂದು ರಾಜಕೀಯ ಪ್ರೇರಿತ, ಆಧಾರ ರಹಿತ ಹಾಗೂ ಬೇಜವಾಬ್ದಾರಿ ಹೇಳಿಕೆಯಾಗಿದೆ ಎಂದರು.

‘ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವ ವಿಚಾರವಾಗಿ ಮಾರ್ಚ್‌ 14ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ದಾವಣಗೆರೆಯಲ್ಲಿ ಅವರು ಸ್ಪಷ್ಟಪಡಿಸಿದರು.

‘ನಮ್ಮ ಹೋರಾಟದಲ್ಲಿ ಮೂಗು ತೂರಿಸಲು ನೀವ್ಯಾರು?’
ಹುಬ್ಬಳ್ಳಿ
: ‘ಲಿಂಗಾಯತ ಸ್ವತಂತ್ರ ಧರ್ಮವಾಗಲು ಬಿಡುವುದಿಲ್ಲ ಎನ್ನಲು ನೀವ್ಯಾರು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಹೊರಟ್ಟಿ ಆರ್.ಎಸ್.ಎಸ್. ಮುಖಂಡರನ್ನು ಪ್ರಶ್ನಿಸಿದ್ದಾರೆ.

‘ಆರ್.ಎಸ್.ಎಸ್ ನ ಪ್ರಧಾನ ಕಾರ್ಯದರ್ಶಿ ಸುರೇಶ ಭೈಯ್ಯಾಜಿ ಅವರು ನಮ್ಮ ಹೋರಾಟದಲ್ಲಿ ಮೂಗು ತೂರಿಸುವುದನ್ನು ಬಿಡಲಿ’ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ಲಿಂಗಾಯತ-ವೀರಶೈವ ಒಡೆಯಲು ಬಿಡಬೇಡಿ. ಅದೇನಾಗುತ್ತದೋ ನಾನೂ ನೋಡುತ್ತೇನೆ’ ಎಂದು ಬಿ.ಎಸ್. ಯಡಿಯೂರಪ್ಪ ತುಮಕೂರಿನಲ್ಲಿ ಹೇಳಿದ್ದಾರೆ. ಮೊದಲು ತಾವು ವೀರಶೈವರೋ, ಲಿಂಗಾಯತರೋ ಎಂಬುದನ್ನು ಅವರು ಸ್ಪಷ್ಟಪಡಿಸಲಿ’ ಎಂದೂ ಹೇಳಿದರು.

‘ನಾನು ಲಿಂಗಾಯತ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಅದೇ ರೀತಿ, ಯಡಿಯೂರಪ್ಪ ಅವರು ತಾವು ವೀರಶೈವ ಎಂದು ಹೇಳಲಿ ನೋಡೋಣ?’ ಎಂದು ಹೊರಟ್ಟಿ ಸವಾಲು ಹಾಕಿದರು.

‘ಲಿಂಗಾಯತರು ಮೀಸಲಾತಿಗಾಗಿ ಭಿಕ್ಷೆ ಬೇಡಬಾರದು’ ಎಂಬ ವಿಜಯ ಸಂಕೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹೊರಟ್ಟಿ, ‘ಎಲ್ಲ ಜಾತಿ, ಧರ್ಮದವರೂ ಮೀಸಲಾತಿಗಾಗಿ ಹೋರಾಡುತ್ತಾರೆ. ಅದು ಎಲ್ಲರ ಹಕ್ಕು’ ಎಂದರು.

‘ಬಡ್ತಿಯಲ್ಲಿ ಮೀಸಲಾತಿ ನೀಡಬಾರದು ಎಂದು  ‘ಅಹಿಂಸಾ’ ಒಕ್ಕೂಟದ ಶೇ 82 ನೌಕರರು ಹೋರಾಡುತ್ತಿದ್ದಾರೆ. ಈ ರೀತಿ, ಯಾರೇ ಆಗಲಿ ಅನ್ಯಾಯದ ವಿರುದ್ಧ ಹೋರಾಡಿದರೆ ಭಿಕ್ಷೆ ಬೇಡಿದಂತೆಯೇ?’ ಎಂದು ಅವರು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT