ಕನಸಿನ ವ್ಯಾಪಾರಿಗಳ ಬಲೆಯಲ್ಲಿ ಮುಸ್ಲಿಮರು

6
ಈ ಜಗತ್ತು ರಚನಾತ್ಮಕ ಕಾರ್ಯಸೂಚಿಯುಳ್ಳವರದ್ದೇ ಹೊರತು ಕೇವಲ ಕನಸುಗಾರರದ್ದಲ್ಲ

ಕನಸಿನ ವ್ಯಾಪಾರಿಗಳ ಬಲೆಯಲ್ಲಿ ಮುಸ್ಲಿಮರು

Published:
Updated:
ಕನಸಿನ ವ್ಯಾಪಾರಿಗಳ ಬಲೆಯಲ್ಲಿ ಮುಸ್ಲಿಮರು

‘ತಮ್ಮದೇ ಮಾತಿನ ಸುಳಿಯೊಳಗೆ ಸಿಲುಕುವುದು’ ಎಂಬ ಇಂಗ್ಲಿಷ್ ನಾಣ್ಣುಡಿಯೊಂದಿದೆ. ಮುಸ್ಲಿಮರು ಜಗತ್ತಿನಾದ್ಯಂತ ಇಂಥದ್ದೊಂದು ಸುಳಿಯೊಳಗೆ ಸಿಲುಕುತ್ತಿದ್ದಾರೆ. ಅನೇಕ ಇಸ್ಲಾಮಿಕ್ ಆಂದೋಲನಗಳು, ಜಮಾತ್‌ಗಳು, ಸಂಸ್ಥೆಗಳು ‘ಇಸ್ಲಾಮಿಕ್ ಸ್ಟೇಟ್’, ‘ಶರೀಯಾ ಆಡಳಿತ’, ‘ಖಿಲಾಫತ್’ ಮತ್ತು ‘ಉಮ್ಮಾ ಸ್ಟೇಟ್’‌ನಂಥ ಪರಿಕಲ್ಪನೆಗಳನ್ನು ಉತ್ತೇಜಿಸುತ್ತಿವೆ. ಇವೆಲ್ಲವೂ ಅತಿ ಆದರ್ಶ ಎಂದು ಕರೆಯಬಹುದಾದ ಪರಿಕಲ್ಪನೆಗಳು. ಅತೀವ ಬಡತನವನ್ನು ಎದುರಿಸುತ್ತಿರುವ, ಸತತವಾಗಿ ಶೋಷಣೆಗೆ ಗುರಿಯಾಗಿರುವ, ನಿರ್ಲಕ್ಷ್ಯದ ತೀವ್ರ ಪರಿಣಾಮವನ್ನು ಎದುರಿಸುತ್ತಿರುವ ಮುಸ್ಲಿಂ ಸಮುದಾಯದ ಬಹುಸಂಖ್ಯಾತರ ಮಟ್ಟಿಗೆ ಇವೆಲ್ಲವೂ ಸಂಪೂರ್ಣ ಅಪ್ರಾಯೋಗಿಕ ಸಂಗತಿಗಳು. ಏಕೆಂದರೆ ಅವರಿಗಿರುವ ಕಷ್ಟಗಳ ಪ್ರಮಾಣ ಎಷ್ಟಿದೆಯೆಂದರೆ ಅವುಗಳನ್ನು ಎದುರಿಸುವುದರ ಬಗ್ಗೆ ಚಿಂತಿಸುವುದಕ್ಕೆ ಒಂದು ಬದುಕು ಸಾಕಾಗದು ಎಂಬ ಸ್ಥಿತಿ ಇದೆ. ಇಷ್ಟಾಗಿಯೂ ಮುಸ್ಲಿಂ ಸಮುದಾಯದಲ್ಲಿ ಧರ್ಮನಿರಪೇಕ್ಷತೆ, ಪ್ರಜಾಪ್ರಭುತ್ವ, ರಾಷ್ಟ್ರಪ್ರಭುತ್ವ, ಬಹುಸಂಸ್ಕೃತಿ, ಲಿಂಗ ಸಮಾನತೆ, ಅಲ್ಪಸಂಖ್ಯಾತರ ಹಕ್ಕುಗಳು, ಮಾಧ್ಯಮ ಸ್ವಾತಂತ್ರ್ಯ, ಮಾನವ ಹಕ್ಕುಗಳು ಮುಂತಾದ ಪರಿಕಲ್ಪನೆಗಳನ್ನು ಕುರುಡಾಗಿ ವಿರೋಧಿಸುವವರ ಸಂಖ್ಯೆಯೂ ದೊಡ್ಡದೇ. ಕೆಲವು ದೇಶಗಳಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರ ಹಕ್ಕುಗಳ ಪ್ರಯೋಜನ ಪಡೆಯುತ್ತಿದ್ದರೂ ಆ ಪರಿಕಲ್ಪನೆಯನ್ನು ವಿರೋಧಿಸುವ ಮುಸ್ಲಿಮರ ಸಂಖ್ಯೆಯೇನೂ ಸಣ್ಣದಲ್ಲ.

ಸದ್ಯಕ್ಕೆ ಜಗತ್ತಿನ ಏಕಮಾತ್ರ ಸೂಪರ್ ಪವರ್ ಆಗಿರುವ ಅಮೆರಿಕಕ್ಕೆ ಶತ್ರುಗಳ್ಯಾರೂ ಉಳಿದಿಲ್ಲ. ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಸಾಪೇಕ್ಷವಾದ ಶಾಂತಿಯನ್ನು ಹೊಂದಿರುವ ದೇಶ ಅಮೆರಿಕ. ಅದು ತನ್ನ ಆಯುಧೋದ್ಯಮವನ್ನು ನಿರಂತರವಾಗಿ ಲಾಭದಾಯಕವಾಗಿ ನಡೆಸುವುದಕ್ಕಾಗಿ ಶತ್ರುಗಳ ಹುಡುಕಾಟದಲ್ಲಿ ಸತತವಾಗಿ ತೊಡಗಿಸಿಕೊಂಡಿದೆ. ಅದರ ಸದ್ಯದ ಗುರಿ ಮುಸ್ಲಿಮರು. ಅವರೊಳಗಿನ ಬಲಪಂಥೀಯ ಗುಂಪುಗಳನ್ನು ಪರೋಕ್ಷವಾಗಿ ಉತ್ತೇಜಿಸಿ ‘ಇಸ್ಲಾಮಿಕ್ ಸ್ಟೇಟ್’, ‘ಶರೀಯಾ ಆಡಳಿತ’ದಂಥ ಪರಿಕಲ್ಪನೆಗಳನ್ನು ತಾರಸ್ಥಾಯಿಯಲ್ಲಿ ಪ್ರತಿಪಾದಿಸುವಂತೆ ಮಾಡುತ್ತಿದೆ. ಇದಕ್ಕಾಗಿಯೇ ತೆರೆಯ ಹಿಂದೆ ಕೆಲಸ ಮಾಡುತ್ತಿರುವ ಕೆಲವು ಏಜನ್ಸಿಗಳು ಮುಸ್ಲಿಂ ಯುವಕರನ್ನು ಕೆರಳಿಸಿ ಹೊಸ ಸಮರಘೋಷವನ್ನು ಅವರ ಭಾಷೆಯಾಗುತ್ತಿರುವಂತೆ ಮಾಡುತ್ತಿರುವುದಷ್ಟೇ ಅಲ್ಲದೇ ಆಯುಧ ಹಿಡಿಯಲು ಪ್ರೇರೇಪಿಸುತ್ತಿವೆ.

ಇದರ ಮೊದಲ ಹಂತ ದುರ್ಬೋಧನೆ. ಇದೊಂದು ನಿರ್ದಿಷ್ಟ ಮಟ್ಟಕ್ಕೆ ತಲುಪಿದಾಗ ಈ ಯುವಕರನ್ನು ಆಯುಧ ಕೈಗೆತ್ತಿಕೊಂಡು ಹಿಂಸಾತ್ಮಕ ಪ್ರತೀಕಾರಕ್ಕೆ ಮುಂದಾಗುವಂತೆ ಪುಸಲಾಯಿಸಲಾಗುತ್ತದೆ. ಒಮ್ಮೆ ಅವರು ಅದನ್ನು ಮಾಡಿದರೆ ಸಾಕು. ಹೀಗೆಲ್ಲಾ ಮಾಡಲು ಪುಸಲಾಯಿಸಿದವರೇ ಅವರನ್ನು ಬಂಧಿಸಿ ವಶಕ್ಕೆ ಪಡೆದು ಅವರನ್ನು ಸಶಸ್ತ್ರ ಭಯೋತ್ಪಾದಕರೆಂದು ಜಗತ್ತಿನೆದುರು ಅನಾವರಣಗೊಳಿಸುತ್ತಾರೆ. ಇವರು ಹೇಗೆ ದೇಶಕ್ಕೆ, ವಿಶ್ವಕ್ಕೆ ಅಪಾಯಕಾರಿಗಳು ಎಂಬ ಕಥನವೊಂದು ಸಿದ್ಧವಾಗುತ್ತದೆ (ಈ ಭಯೋತ್ಪಾದಕರ ಉತ್ಪಾದನಾ ಪ್ರಕ್ರಿಯೆಯ ಬಗ್ಗೆ ಹೆಚ್ಚು ತಿಳಿಯಲು ಟ್ರಿವರ್ ಆರೋನ್ಸನ್ ಅವರ ‘ದ ಟೆರರ್ ಫ್ಯಾಕ್ಟರಿ’ ಪುಸ್ತಕವನ್ನು ಪರಾಮರ್ಶಿಸಬಹುದು. ಇದನ್ನು ನ್ಯೂಯಾರ್ಕ್‌ನ ಐಜಿ ಪಬ್ಲಿಷಿಂಗ್ ಪ್ರಕಟಿಸಿದೆ). ಇವೆಲ್ಲವನ್ನೂ ಮಾಡುವುದರ ಹಿಂದಿನ ಉದ್ದೇಶ ಒಂದೇ. ವೋಟುಗಳ ಧ್ರುವೀಕರಣ. ಅಭಿವೃದ್ಧಿಯನ್ನು ಒಂದು ಕಾರ್ಯಸೂಚಿಯನ್ನಾಗಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ ಶಕ್ತಿ ರಾಜಕೀಯ ಪಕ್ಷಗಳಿಗಿಲ್ಲ. ಹಸಿವು, ನಿರುದ್ಯೋಗ, ಅನಕ್ಷರತೆ, ಅಪೌಷ್ಟಿಕತೆ ಮತ್ತು ಪರಿಸರ ನಾಶದಂಥ ಸಂಕೀರ್ಣ ಸಮಸ್ಯೆಗಳ ವಿಚಾರದಲ್ಲಿ ಐದು ವರ್ಷದ ಅವಧಿಯಲ್ಲಿ ಏನನ್ನೂ ಮಾಡಲು ಅವುಗಳಿಗೆ ಸಾಧ್ಯವಿಲ್ಲ ಎಂದು ಎಲ್ಲಾ ರಾಜಕೀಯ ಪಕ್ಷಗಳಿಗೆ ಗೊತ್ತಿದೆ. ವೋಟುಗಳ ಧ್ರುವೀಕರಣ ಅವರ ಗೆಲುವಿನ ಹಾದಿಯನ್ನು ಸುಗಮಗೊಳಿಸುತ್ತದೆ.

ಮುಸ್ಲಿಂ ಯುವಕರು ಈ ಕನಸಿನ ವ್ಯಾಪಾರಿಗಳು ನೀಡುವ ಸುಂದರ ಸಮರಘೋಷಗಳಿಂದ ದೂರವಿರಬೇಕು. ಈ ಬಗೆಯ ಪ್ರಲೋಭನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದರ ಬದಲಿಗೆ ತಮ್ಮ ಶಿಕ್ಷಣ, ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಗಳಿಸುವುದಕ್ಕೆ ಬೇಕಾಗಿರುವುದನ್ನು ಮಾಡಬೇಕು. ಉತ್ತಮ ಉದ್ಯೋಗಿಗಳಾಗಿ, ಯಶಸ್ವಿ ಉದ್ಯಮಿಗಳಾಗಿ ತಮ್ಮ ಕುಟುಂಬಗಳನ್ನು ಸಾಕುವ ಮತ್ತು ಕಷ್ಟದಲ್ಲಿರುವ ಇತರರ (ಮುಸ್ಲಿಮೇತರರು ಸೇರಿದಂತೆ) ಸಹಾಯಕ್ಕೆ ಮುಂದಾಗಬೇಕು.

ಮುಹಮ್ಮದ್ ಆಲಿ ಜಿನ್ನಾ ಕೂಡಾ ತಮ್ಮದೇ ಮಾತಿನ ಸುಳಿಯೊಳಗೆ ಸಿಲುಕಿದ್ದರು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಅವರು ದ್ವಿರಾಷ್ಟ್ರ ಸಿದ್ಧಾಂತವನ್ನು ಚೌಕಾಶಿಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಹೊರಟಿದ್ದರು. ಆದರೆ ಹಿಂದೂ ರಾಷ್ಟ್ರೀಯವಾದಿಗಳು ಮತ್ತು ಕಾಂಗ್ರೆಸ್, ಜಿನ್ನಾರನ್ನು ಅವರದೇ ಮಾತುಗಳಲ್ಲಿ ಕಟ್ಟಿಹಾಕಿದವು. ಭಾರತವನ್ನು ಒಂದು ಸಡಿಲಬಂಧದ ಒಕ್ಕೂಟ ರಾಷ್ಟ್ರವನ್ನಾಗಿ ಕಟ್ಟುವ ‘ಕ್ಯಾಬಿನೆಟ್ ಮಿಶನ್ ಪ್ರಸ್ತಾವನೆ’ಯನ್ನು ಜವಾಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ನಿರಾಕರಿಸಿದ್ದನ್ನೂ ಇದೇ ದೃಷ್ಟಿಯಲ್ಲಿ ನೋಡಬಹುದು. ಜಿನ್ನಾರಿಗೆ ಪಾಕಿಸ್ತಾನ ಸಿಕ್ಕಿತು. ಹೀಗೆ ಪಡೆದುಕೊಂಡ ದೇಶವನ್ನು ಒಂದು ಬಲವಾದ ರಾಷ್ಟ್ರ ಪ್ರಭುತ್ವವಾಗಿ ಬೆಳೆಯುವಂಥ ಮಾರ್ಗದರ್ಶನ ನೀಡಲೂ ಅವರಿಗೆ ಸಾಧ್ಯವಾಗಲಿಲ್ಲ. ಪಾಕಿಸ್ತಾನವೀಗ ಒಂದು ವಿಫಲ ರಾಷ್ಟ್ರವಾಗಿದೆ. ಅದು ಎರಡು ಸೂಪರ್ ಪವರ್‌ಗಳ ನಡುವೆ ಓಲಾಡುತ್ತಾ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಎಪ್ಪತ್ತು ವರ್ಷಗಳ ಕಾಲ ಅಮೆರಿಕದ ಆಣತಿಯಂತೆ ನಡೆಯುತ್ತಿದ್ದ ದೇಶವೀಗ ಚೀನಾದ ತಾಳಕ್ಕೆ ಹೆಜ್ಜೆ ಹಾಕುತ್ತಿದೆ.

ಜಿನ್ನಾ ಅತ್ಯುನ್ನತ ಶಿಕ್ಷಣವನ್ನು ಪಡೆದಿದ್ದ ಬುದ್ಧಿವಂತ ವಕೀಲ. ಆದರೆ ಅವರು ಜವಾಹರಲಾಲ್ ನೆಹರೂ ಅವರಂತೆ ದೂರದೃಷ್ಟಿಯುಳ್ಳ ಕನಸುಗಾರನಾಗಿರಲಿಲ್ಲ. ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಗೆ ಬುದ್ಧಿವಂತಿಕೆಯ ಜೊತೆಗೆ ಕಾಣ್ಕೆ, ಸಹನೆ, ಚರಿತ್ರೆ, ಸಮಾಜ ಮತ್ತು ವೈವಿಧ್ಯದ ಸೂಕ್ಷ್ಮ ಗ್ರಹಿಕೆಗಳೂ ಅಗತ್ಯ. ಜಿನ್ನಾ ಅವರಿಗೆ ಈ ಗುಣಗಳಿರಲಿಲ್ಲ. ಒಂದರ್ಥದಲ್ಲಿ ಅವರು ಸೊಕ್ಕಿನ ಮನುಷ್ಯ ಅಥವಾ ‘ನನಗೆಲ್ಲಾ ಗೊತ್ತು’ ಪರಿಕಲ್ಪನೆಯ ಅನುಯಾಯಿ ಎನ್ನಬಹುದೇನೋ. ಇಷ್ಟರ ಮಧ್ಯೆಯೂ ಅವರು ನೀಡಬಹುದಾದ ಮಾರ್ಗದರ್ಶನವನ್ನು ಪಡೆಯಲಾಗದ್ದು ಪಾಕಿಸ್ತಾನದ ದುರದೃಷ್ಟವೆನ್ನಬಹುದು. ಜಿನ್ನಾ ತಮ್ಮ ಕನಸಿನ ದೇಶ ಪಡೆದ ಕೆಲವೇ ಕಾಲದಲ್ಲಿ ನಿಧನರಾದರು.

ಇದು ಇತರರನ್ನು ದೂಷಿಸುತ್ತಾ ಕುಳಿತುಕೊಳ್ಳಬೇಕಾದ ಕಾಲವಲ್ಲ. ಭವಿಷ್ಯವನ್ನು ಬದಲಾಯಿಸಬಲ್ಲ ಬುದ್ಧಿವಂತ ಮತ್ತು ಕಾಣ್ಕೆಯುಳ್ಳ ಸಮುದಾಯವನ್ನಾಗಿ ನಮ್ಮ ಹೊಸತಲೆಮಾರನ್ನು ಬೆಳೆಸಬೇಕಾಗಿದೆ. ಇಲ್ಲಿ ‘ಸಮುದಾಯ’ ಎಂದರೆ ಕೇವಲ ನಾವೀಗ ಕಾಣುತ್ತಿರುವ ಭಾವನಾತ್ಮಕ ಬಂಧವಲ್ಲ. ಈ ತಲೆಮಾರಿನ ಯುವಕರು ಜಗತ್ತನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ರಾಷ್ಟ್ರ ನಿರ್ಮಾಣದ ಹೊಸ ಪರಿಕಲ್ಪನೆಗಳನ್ನು ಅರಿತು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಯಾರನ್ನು ನಾವು ಎಷ್ಟೇ ಟೀಕಿಸಿದರೂ ಅದರಿಂದ ನಮ್ಮ ಪ್ರಗತಿ ಸಾಧ್ಯವಾಗುವುದಿಲ್ಲ. ಹಾಗೆಯೇ ನಮ್ಮ ಚರಿತ್ರೆಯನ್ನು ದಿವ್ಯತೆಗೇರಿಸುವುದು ಅಥವಾ ಭೂತಕಾಲವನ್ನು ರಮ್ಯಗೊಳಿಸಿ ನೆನಪಿಸಿಕೊಳ್ಳುವುದು ನಮ್ಮ ಮುನ್ನಡೆಗೆ ಸಹಕರಿಸುವುದಿಲ್ಲ. ಈ ಜಗತ್ತು ರಚನಾತ್ಮಕ ಕಾರ್ಯಸೂಚಿಯುಳ್ಳವರದ್ದೇ ಹೊರತು ಕೇವಲ ಕನಸುಗಾರರದ್ದಲ್ಲ. ರಚನಾತ್ಮಕ ಕಾರ್ಯಸೂಚಿಯೊಂದನ್ನು ಇಟ್ಟುಕೊಂಡು ಕೆಲಸ ಮಾಡುವುದರಿಂದ ತಕ್ಷಣದ ಫಲಿತಾಂಶಗಳೇನೂ ದೊರೆಯುವುದಿಲ್ಲ. ಸಮಾವೇಶಗಳು, ಸಮಾರಂಭಗಳು, ಸಂಕಿರಣಗಳು, ಇಜ್ತೆಮಾಗಳನ್ನು ಸಂಘಟಿಸುವುದು ಸುಲಭ. ತಕ್ಷಣಕ್ಕೆ ಏನೋ ಆದಂತೆ ಕಾಣಿಸಿದರೂ ಅದು ನಿಜವಲ್ಲ.

ಮಾತುಗಳನ್ನಾಡುವುದು ಸುಲಭ. ಇದೇ ಕಾರಣದಿಂದ ಭಾಷಣಕಾರರು ಆಲಂಕಾರಿಕ ಶಬ್ದಗಳನ್ನು ಬಳಸಿ ಮುಗ್ಧ ಜನಸಮುದಾಯವನ್ನು ತಕ್ಷಣಕ್ಕೆ ಆಕರ್ಷಿಸುತ್ತಾರೆ. ಈ ಮಾತುಗಳ ಜಾಲದಿಂದ ಹೊರಬಂದು ಹೆಚ್ಚು ಕಾಲ ಉಳಿಯುವ ಮತ್ತು ಹೆಚ್ಚು ಆಳವಾಗಿ ಪ್ರಭಾವಿಸುವ ಬರಹವನ್ನು ಅಪ್ಪಿಕೊಳ್ಳಬೇಕು. ಸಾಮಾನ್ಯವಾಗಿ ಭಾಷಣಕಾರರು ತಮ್ಮೆದುರು ಇರುವ ಸಭಿಕರನ್ನು ಆಕರ್ಷಿಸಲು ಬೇಕಾಗಿರುವ ಮಾತುಗಳನ್ನು ಬಳಸುತ್ತಾರೆ. ನಿಂತ ನಿಲುವಿನಲ್ಲಿ ಜಗತ್ತನ್ನೇ ತಿರುಗಿಸುವ ಶಕ್ತಿ ಇದೆಯೆಂಬ ಭಾವ ಹುಟ್ಟಿಸುತ್ತಾರೆ. ಅವರ ಸುತ್ತಲಿನ ಜಗತ್ತನ್ನೊಮ್ಮೆ ನೋಡಿದರೆ ಅವರ ನಿಜ ಶಕ್ತಿಯೇನೆಂದು ಅರಿವಾಗುತ್ತದೆ. ಅವರೇ ಕಟ್ಟಿಕೊಂಡಿರುವ ಮಾತಿನ ಮನೆಯನ್ನು ಬಿಟ್ಟರೆ ಬೇರೇನೂ ಅವರ ಬಳಿ ಇರುವುದಿಲ್ಲ. ಅವರ ಬಳಿ ಒಂದು ರಚನಾತ್ಮಕ ಕಾರ್ಯಸೂಚಿಯಾಗಲೀ ಅದನ್ನು ಕಾರ್ಯರೂಪಕ್ಕೆ ತರಬಹುದಾದ ಸಾಂಸ್ಥಿಕ ಶಕ್ತಿಯಾಗಲೀ ಕಾಣಿಸುವುದಿಲ್ಲ. ಈ ಬಗೆಯ ಭಾಷಣಕಾರರ ಸುತ್ತ ಒಂದು ಅವಾಸ್ತವಿಕ ಪ್ರಭಾವಳಿ ಇರುತ್ತದೆ. ಜನರು ಅವರ ನೆನಪಿನ ಶಕ್ತಿಗೆ, ಪದಬಳಕೆಯ ಸಾಮರ್ಥ್ಯಕ್ಕೆ ಮತ್ತು ವಾದ ಮಂಡಿಸುವ ವೈಖರಿಗೆ ಮರುಳಾಗುತ್ತಾರೆ (ಝಾಕಿರ್ ನಾಯ್ಕ್ ಅವರನ್ನೇ ನೋಡಿ). ಅವರು ಟಿ.ವಿ. ತೆರೆಗಳಲ್ಲಿ ಕಾಣಿಸಿಕೊಳ್ಳುವ ಬಗೆ, ಅವರೇ ಪ್ರಕಟಿಸುವ ನಿಯತಕಾಲಿಕಗಳು, ವಿಡಿಯೊಗಳು ಮತ್ತು ಎದುರಾಳಿಗಳನ್ನು ವಾದದಲ್ಲಿ ಸೋಲಿಸುವ ರೀತಿಗಳೆಲ್ಲವೂ ಅವರಿಗೆ ಜನಪ್ರಿಯತೆಯನ್ನು ತಂದುಕೊಡುತ್ತವೆ. ಆದರೆ ಸಮುದಾಯ ಅದರಿಂದ ಏನನ್ನೂ ಪಡೆಯುವುದಿಲ್ಲ.

ನಿಜವಾದ ಕೆಲಸ ಮಾಡುವವರು ಈ ಬಗೆಯ ಅವಾಸ್ತವಿಕ ಪ್ರಭಾವಳಿಯ ಬಗ್ಗೆ ಆಸಕ್ತರಾಗಿರುವುದಿಲ್ಲ. ದಶಕಗಳ ಕಾಲ ತಾವು ಆರಿಸಿಕೊಂಡ ಕ್ಷೇತ್ರದಲ್ಲಿ ಕೆಲಸ ಮಾಡಿ ದೂರಗಾಮಿ ಪರಿಣಾಮವುಳ್ಳ ಕೆಲಸಗಳನ್ನು ಸಾಧ್ಯ ಮಾಡಿರುತ್ತಾರೆ. ಅವರ ಕೆಲಸದ ಮಹತ್ವ ಎಷ್ಟೋ ಬಾರಿ ದಶಕಗಳ ನಂತರ ಅರ್ಥವಾಗುತ್ತದೆ. ಡಾ.ಬಿ.ಆರ್‌. ಅಂಬೇಡ್ಕರ್ ಅವರ ಬದುಕು ಇದಕ್ಕೆ ಅತ್ಯುತ್ತಮ ಉದಾಹರಣೆ. ತಮ್ಮ ಜೀವಿತಾವಧಿಯಲ್ಲಿ ಅವರು ಎಷ್ಟು ಮಂದಿಗೆ ಈ ಪರಿಕಲ್ಪನೆಗಳನ್ನು ಅರ್ಥ ಮಾಡಿಸಿದರು ಎಂಬುದು ಈಗ ಮುಖ್ಯವಲ್ಲ. ಆದರೆ ಅವರ ಕಾಣ್ಕೆ ಇಂದು ಭಾರತದ ಬೌದ್ಧಿಕ ಜಗತ್ತನ್ನೇ ವ್ಯಾಪಿಸಿದ ಆಲವಾಗಿ ಬೆಳೆದು ನಿಂತಿದೆ. ಗಾಂಧೀಜಿ ಮತ್ತು ನೆಹರೂ ಅವರಂಥ ಕಾಣ್ಕೆಯುಳ್ಳ ವ್ಯಕ್ತಿತ್ವಗಳೇ ಕಿರಿದಾಗಿ ಕಾಣಿಸುವಷ್ಟರ ಮಟ್ಟಿಗೆ ಇಂದು ಅಂಬೇಡ್ಕರ್ ಬೆಳೆದು ನಿಂತಿದ್ದರೆ ಅದಕ್ಕೆ ಮುಖ್ಯಕಾರಣ ಅವರ ರಚನಾತ್ಮಕ ಕಾರ್ಯಸೂಚಿ ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಅವರು ಮಾಡಿದ ಕೆಲಸ.

ಸೂಕ್ಷ್ಮ ಅಧ್ಯಯನ, ರಚನಾತ್ಮಕ ಯೋಜನೆ ಮತ್ತು ಕಠಿಣ ಪರಿಶ್ರಮಕ್ಕೆ ಪರ್ಯಾಯಗಳಿಲ್ಲ. ದಿಢೀರ್ ಯಶಸ್ಸು ಯಾವತ್ತೂ ಸಾಧ್ಯವಿಲ್ಲ. ಚರಿತ್ರೆಯನ್ನು ವಿಮರ್ಶಾತ್ಮಕವಾಗಿ ನೋಡಬೇಕೇ ಹೊರತು ಹಿಂದೆ ಮಾಡಿದ್ದನ್ನೇ ಮತ್ತೆ ಮಾಡಲು ಹೊರಡುವುದಲ್ಲ. ಅಂದು ಯಾವುದೋ ಒಂದು ಯಶಸ್ಸನ್ನು ಸಾಧಿಸಿದ್ದರೆ ಅದು ಬೇರೆಯದೇ ಸಂದರ್ಭವಾಗಿತ್ತು ಎಂಬುದೂ ನಮಗೆ ನೆನಪಿರಬೇಕು. ನಾವೀಗ 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ. ನಮ್ಮ ಅಭೀಪ್ಸೆಗಳು, ಪ್ರೇರಣೆಗಳು ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ಪರಿಕರಗಳು, ವಿಧಾನಗಳು ಮತ್ತು ತಂತ್ರಗಳು ಕೂಡಾ ನಮ್ಮ ಕಾಲ ಮತ್ತು ಸಾಮಾಜಿಕ ಸಂದರ್ಭಕ್ಕೆ ಪ್ರಸ್ತುತವಾಗಿರಬೇಕು. ಅಂದರೆ ಗುರಿ ಸಾಧಿಸಲು ಧರ್ಮ ಮತ್ತು ನೈತಿಕತೆಯನ್ನು ಬಿಟ್ಟುಕೊಟ್ಟು ಸಾಗಬೇಕೆಂದಲ್ಲ. ಅದನ್ನು ಜಗತ್ತಿನ ಎಲ್ಲ ಮೂಲಗಳಿಂದಲೂ ಪಡೆದೇ ಅಭಿವೃದ್ಧಿಯ ಹಾದಿಯಲ್ಲಿ ಸಾಗಬೇಕು.

ಲೇಖಕ: ಬಿ.ಬಿ.ಸಿ.ಯಲ್ಲಿ ಪತ್ರಕರ್ತರಾಗಿದ್ದವರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry