‘ನೀತಿ ಆಯೋಗ ಆರ್‌ಎಸ್‌ಎಸ್‌ ಚಿಂತಕರ ಚಾವಡಿಯಂತೆ’

ಬುಧವಾರ, ಮಾರ್ಚ್ 20, 2019
31 °C
ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಸಂಸ್ಥಾಪನಾ ಅಧ್ಯಕ್ಷೆ ಡಾ.ಶಾಂತಾ ಸಿನ್ಹಾ

‘ನೀತಿ ಆಯೋಗ ಆರ್‌ಎಸ್‌ಎಸ್‌ ಚಿಂತಕರ ಚಾವಡಿಯಂತೆ’

Published:
Updated:
‘ನೀತಿ ಆಯೋಗ ಆರ್‌ಎಸ್‌ಎಸ್‌ ಚಿಂತಕರ ಚಾವಡಿಯಂತೆ’

ಬೆಂಗಳೂರು: ‘ಸಾರ್ವಜನಿಕ ನೀತಿ ರೂಪಿಸಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಚಿಂತಕರ ಚಾವಡಿ ಅತ್ಯಂತ ಅವಶ್ಯ’ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಸಂಸ್ಥಾಪನಾ ಅಧ್ಯಕ್ಷೆ ಡಾ.ಶಾಂತಾ ಸಿನ್ಹಾ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ ನಡೆದ ಸೆಂಟರ್‌ ಫಾರ್‌ ಬಜೆಟ್‌ ಅಂಡ್‌ ಪಾಲಿಸಿ ಸ್ಟಡೀಸ್‌ (ಸಿಬಿಪಿಎಸ್‌) 20ನೇ ವರ್ಷಾಚರಣೆ ಸಮಾರಂಭದಲ್ಲಿ ‘ಚಿಂತಕರ ಚಾವಡಿಯಂತಿರುವ ಸಂಸ್ಥೆಗಳ ಪಾತ್ರ’ ಕುರಿತು ಉಪನ್ಯಾಸ ನೀಡಿದರು.

‘ದೇಶವು ಹಲವು ದಶಕಗಳಿಂದ ಯೋಜನಾ ಆಯೋಗದಂತಹ ಚಿಂತಕರ ಚಾವಡಿ ಹೊಂದಿತ್ತು. ಆದರೆ, ಈಗ ಇದಕ್ಕೆ ಕೊನೆಗಾಣಿಸಲಾಗಿದೆ. ಇದರ ಜಾಗಕ್ಕೆ ನೀತಿ ಆಯೋಗ ತರಲಾಗಿದೆ. ಆದರೆ, ಇದು ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ, ಇದರಿಂದ ಸಮಾಜಕ್ಕೆ ಹಾಗೂ ಜನರಿಗೆ ಯಾವ ರೀತಿ ಅನುಕೂಲವಾಗುತ್ತಿದೆ ಎನ್ನುವುದು ರಹಸ್ಯವಾಗಿಯೇ ಉಳಿದಿದೆ. ನೀತಿ ಆಯೋಗ ಆರ್‌ಎಸ್‌ಎಸ್‌ ಚಿಂತಕರ ಚಾವಡಿಯಂತಾಗಿದೆ’ ಎಂದು ಟೀಕಿಸಿದರು.

ರಾಷ್ಟ್ರ ನಿರ್ಮಾಣ ಮಾಡಬೇಕಾದರೆ, ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕಾದರೆ ಸಂಶೋಧನೆ ಮತ್ತು ಸಾಕ್ಷ್ಯಾಧಾರ ಸಹಿತ ಮಾರ್ಗದರ್ಶನ ನೀಡುವ ಸೆಂಟರ್‌ ಫಾರ್‌ ಬಜೆಟ್‌ ಅಂಡ್‌ ಪಾಲಿಸಿ ಸ್ಟಡೀಸ್‌ನಂತಹ ಸಂಸ್ಥೆಗಳು ಬೇಕು. ಆದರೆ, ಇಂದು ಕೆಲವು ಸಂಸ್ಥೆಗಳು ತಮ್ಮ ಕೆಲಸ ಸಾಧಿಸಲು, ಅನುದಾನ ಪಡೆಯಲು ಸಚಿವಾಲಯ, ಅಧಿಕಾರಶಾಹಿಯ ಸುತ್ತ ಗಿರಕಿ ಹೊಡೆಯುತ್ತಿವೆ. ಸಾರ್ವಜನಿಕ ನೀತಿಗಳನ್ನು ರೂಪಿಸಲು ಮತ್ತು ಅವುಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರದ ಮೇಲೆ ಪ್ರಭಾವ ಬೀರಲು ಇವುಗಳು ಮಹತ್ವದ ಪಾತ್ರ ವಹಿಸಬೇಕಿದೆ ಎಂದರು.

ಸಿಬಿಪಿಎಸ್‌ ಕಾರ್ಯವೈಖರಿ ಪ್ರಶಂಸಿಸಿದ ಅವರು, ದೆಹಲಿ ಕೇಂದ್ರಿತವಾಗಿ ಕುಳಿತು ಕೆಲಸ ಮಾಡಬೇಡಿ. ತೆಲಂಗಾಣ, ಒಡಿಶಾ, ಬಿಹಾರ, ಕಾಶ್ಮೀರ, ಮೇಘಾಲಯ ರಾಜ್ಯಗಳತ್ತಲೂ ಗಮನ ಹರಿಸಿ ಸಾರ್ವಜನಿಕ ನೀತಿ ರೂಪಿಸುವಲ್ಲಿ ಅಲ್ಲಿನ ಸರ್ಕಾರಗಳಿಗೆ ಸಾಕ್ಷ್ಯಾಧಾರ ಸಮೇತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಸಿಬಿಪಿಎಸ್‌ ನಿರ್ದೇಶಕಿ ಜೋತ್ಸ್ನಾ ಝಾ ಮಾತನಾಡಿ, ‘ಸರ್ಕಾರೇತರ ಸಂಸ್ಥೆಗಳು ಇಂದು ಸಂಪನ್ಮೂಲ, ಸೌಲಭ್ಯಗಳ ಕೊರತೆ ಎದುರಿಸುತ್ತಿವೆ. ನಿಶ್ಚಿತ ದೇಣಿಗೆಗಳು ಲಭಿಸುತ್ತಿಲ್ಲ. ವಿದೇಶಗಳಿಂದ ಬರುವ ದೇಣಿಗೆಗೂ ಕೇಂದ್ರ ಸರ್ಕಾರ ಹಲವು ನಿರ್ಬಂಧ ಹೇರಿದೆ. ಅನೇಕ ಸವಾಲುಗಳೊಂದಿಗೆ ಅಸ್ತಿತ್ವ ಉಳಿಸಿಕೊಂಡು, ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಸರ್ಕಾರೇತರ ಸಂಸ್ಥೆಗಳು ಮಾಡಬೇಕಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry