ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ ಸ್ಥಾನ ಭದ್ರಪಡಿಸುವ ಹಂಬಲ

ಟ್ವೆಂಟಿ–20 ಕ್ರಿಕೆಟ್: ನಿರಂತರ ಎರಡು ಪಂದ್ಯ ಗೆದ್ದು ಭರವಸೆಯಲ್ಲಿರುವ ಭಾರತ
Last Updated 13 ಮಾರ್ಚ್ 2018, 19:41 IST
ಅಕ್ಷರ ಗಾತ್ರ

ಕೊಲಂಬೊ: ನಿರಂತರ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡದವರು ನಿದಾಸ್ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬುಧವಾರ ಬಾಂಗ್ಲಾದೇಶವನ್ನು ಎದುರಿಸಲಿದ್ದಾರೆ.

ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತರೂ ನಂತರ ಬಾಂಗ್ಲಾದೇಶ ಮತ್ತು ಶ್ರೀಲಂಕಾವನ್ನು ಮಣಿಸಿರುವ ಭಾರತ ಈಗ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿದೆ. ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯರನ್ನು ಆರು ವಿಕೆಟ್‌ಗಳಿಂದ ಮಣಿಸಿರುವ ಭಾರತದ ಆತ್ಮವಿಶ್ವಾಸ ಹೆಚ್ಚಿದೆ.

ಟೂರ್ನಿಯ ಮೂರನೇ ಪಂದ್ಯದಲ್ಲಿ ಶ್ರೀಲಂಕಾದ ಸವಾಲನ್ನು ಮೆಟ್ಟಿ ನಿಂತ ಬಾಂಗ್ಲಾದೇಶವೂ ಈಗ ವಿಶ್ವಾಸದಲ್ಲಿದೆ. ಆದ್ದರಿಂದ ಬುಧವಾರದ ಪಂದ್ಯದಲ್ಲಿ ಜಿದ್ದಾಜಿದ್ದಿನ ಹಣಾಹಣಿ ನಿರೀಕ್ಷಿಸಲಾಗಿದೆ.

ಈ ಪಂದ್ಯದಲ್ಲಿ ಗೆದ್ದರೆ ಭಾರತ ಫೈನಲ್‌ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಬಾಂಗ್ಲಾದೇಶ ಫೈನಲ್‌ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ನಾಯಕನ ವೈಫಲ್ಯ: ಆತಂಕ: ಹಂಗಾಮಿ ನಾಯಕ ರೋಹಿತ್ ಶರ್ಮಾ ನಿರಂತರ ಮೂರನೇ ಪಂದ್ಯದಲ್ಲೂ ವೈಫಲ್ಯ ಕಂಡಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ. ಸುರೇಶ್‌ ರೈನಾ ಕೂಡ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಶಿಖರ್ ಧವನ್‌ ಮತ್ತು ಮನೀಷ್ ಪಾಂಡೆ ಉತ್ತಮ ಲಯದಲ್ಲಿರುವುದು ಮತ್ತು ಕಳೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಮಿಂಚಿರುವುದು ಭಾರತ ಪಾಳಯದಲ್ಲಿ ಭರವಸೆ ಮೂಡಿಸಿದೆ.

ಕೆ.ಎಲ್‌.ರಾಹುಲ್ ಕಳೆದ ಪಂದ್ಯದಲ್ಲಿ ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ಆದರೂ ಅವರಿಗೆ ಮತ್ತೊಂದು ಅವಕಾಶ ಸಿಗುವುದೇ ಎಂಬ ಕುತೂಹಲ ಈಗ ಮೂಡಿದೆ. ಇಂಥ ಪ್ರಯೋಗಕ್ಕೆ ಮುಂದಾದರೆ ರಿಷಭ್‌ ಪಂತ್ ಈ ಪಂದ್ಯದಲ್ಲೂ ಬೆಂಚು ಕಾಯಬೇಕಾದೀತು.

‌ಯುವ ಬೌಲರ್‌ಗಳಾದ ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಕಳೆದ ಪಂದ್ಯದಲ್ಲಿ ಉತ್ತಮ ದಾಳಿ ನಡೆಸಿದ್ದು ಇದೇ ಲಯವನ್ನು ಮುಂದುವರಿಸುವ ಕಾತರದಲ್ಲಿದ್ದಾರೆ

ಅನಿರೀಕ್ಷಿತ ಆಘಾತ ನೀಡಬಲ್ಲ ಬಾಂಗ್ಲಾ
ಅನಿರೀಕ್ಷಿತ ಆಘಾತ ನೀಡಬಲ್ಲ ಬಾಂಗ್ಲಾದೇಶ ಕಳೆದ ಪಂದ್ಯದಲ್ಲಿ ಸವಾಲಿನ ಮೊತ್ತವನ್ನು ಸುಲಭವಾಗಿ ಬೆನ್ನತ್ತಿ ಶ್ರೀಲಂಕಾವನ್ನು ಮಣಿಸಿ ಗಮನ ಸೆಳೆದಿದೆ. ಹೀಗಾಗಿ ಈ ತಂಡವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.

ಪಂದ್ಯ ಆರಂಭ: ಸಂಜೆ 7.00
ನೇರ ಪ್ರಸಾರ: ಸ್ಟಾರ್ ‘ಡಿ’ ಸ್ಪೋರ್ಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT