ಮಹಿಳೆಯರಿಗೆ ಹೆಚ್ಚು ಅವಕಾಶವಿರುವ ನೀತಿ ಬೇಕಿದೆ

ಸೋಮವಾರ, ಮಾರ್ಚ್ 25, 2019
28 °C
ಆಸ್ಟ್ರೇಲಿಯಾದ ಲಾ ತ್ರೋಬ್‌ ವಿಶ್ವವಿದ್ಯಾಲಯದ ಪ್ರೊ.ಜೆನ್ನಿಫರ್‌ ಗ್ರೇವ್ಸ್‌ ಅಭಿಮತ

ಮಹಿಳೆಯರಿಗೆ ಹೆಚ್ಚು ಅವಕಾಶವಿರುವ ನೀತಿ ಬೇಕಿದೆ

Published:
Updated:
ಮಹಿಳೆಯರಿಗೆ ಹೆಚ್ಚು ಅವಕಾಶವಿರುವ ನೀತಿ ಬೇಕಿದೆ

ಬೆಂಗಳೂರು: ವಿಜ್ಞಾನ ಸಂಶೋಧನಾ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಮತ್ತು ಪ್ರೋತ್ಸಾಹ ನೀಡುವ ನೀತಿಗಳು ರೂಪುಗೊಳ್ಳಬೇಕಿದೆ ಎಂದು ಆಸ್ಟ್ರೇಲಿಯಾದ ಲಾ ತ್ರೋಬ್‌ ವಿಶ್ವವಿದ್ಯಾಲಯದ ಪ್ರೊ.ಜೆನ್ನಿಫರ್‌ ಗ್ರೇವ್ಸ್‌ ಅಭಿಪ್ರಾಯಪಟ್ಟರು.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಭೌತವಿಜ್ಞಾನ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಭಾರತೀಯ ವಿಜ್ಞಾನ ಅಕಾಡೆಮಿ ಮಂಗಳವಾರ ಆಯೋಜಿಸಿದ್ದ ‘ವಿಜ್ಞಾನದಲ್ಲಿ ಮಹಿಳೆ’ ಕುರಿತ ಸಂವಾದದಲ್ಲಿ ಮಾತನಾಡಿದರು.

'ನಮ್ಮ ದೇಶದಲ್ಲಿ ಹೆರಿಗೆ ರಜೆ ಸೌಲಭ್ಯ ಇರಲಿಲ್ಲ. ನಾನು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ಪುಟ್ಟ ಮಗುವನ್ನು ಪ್ರಯೋಗಾಲಯಕ್ಕೆ ಕರೆದೊಯ್ಯಬೇಕಾದ ಸ್ಥಿತಿ ಇತ್ತು. ಪತಿ ಕೂಡ ಇನ್ನೂ ವ್ಯಾಸಂಗ ಮುಗಿಸಿರಲಿಲ್ಲ. ಒಬ್ಬರ ಆದಾಯದಲ್ಲಿ ಜೀವನ ನಡೆಸಬೇಕಿತ್ತು. ನಿಜಕ್ಕೂ ಆ ಸಂದರ್ಭದಲ್ಲಿ ಹೆರಿಗೆ ರಜೆಯ ಸೌಲಭ್ಯ ಇರಬೇಕಿತ್ತು ಎನಿಸಿದ್ದು ಸಹಜ. ಹೆರಿಗೆ, ಕುಟುಂಬ ಜವಾಬ್ದಾರಿ ಕಾರಣಕ್ಕೆ ಬಿಡುವು ಪಡೆಯುವ ಮಹಿಳೆಯರಿಗೆ ಪುನಃ ಸಂಶೋಧನೆ, ಶೈಕ್ಷಣಿಕ ಚಟುವಟಿಕೆಗಳಿಗೆ ವಾಪಸಾಗಲು ಕುಟುಂಬ ಮತ್ತು ಸಂಸ್ಥೆಗಳಿಂದಲೂ  ಬೆಂಬಲ ಇರಬೇಕು’ ಎಂದರು.

ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಉಪಾಧ್ಯಕ್ಷೆ ಹಾಗೂ ಐಐಎಸ್‌ಸಿಯ ಪ್ರೊ.ರೋಹಿಣಿ ಗೋಡಬೋಲೆ ಮಾತನಾಡಿ, ‘ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು ತಮ್ಮ ಮಕ್ಕಳು, ಮನೆ, ಕುಟುಂಬದ ಜವಾಬ್ದಾರಿ ನಿಭಾಯಿಸಿಕೊಂಡು ಶೈಕ್ಷಣಿಕ ವಲಯದಲ್ಲಿ, ಸಂಶೋಧನಾ ಚಟುವಟಿಕೆಯಲ್ಲಿ  ಮುಂದುವರಿಯಬೇಕೆಂದು ಸಮಾಜ ಬಯಸುತ್ತದೆ. ಅವರು ಒಳ್ಳೆಯ ವಿಜ್ಞಾನಿ, ಪ್ರಾಧ್ಯಾಪಕಿ ಹಾಗೂ ವೈದ್ಯೆಯಾಗಬೇಕೆಂದು ಆ ಕುಟುಂಬ ಬಯಸುವಂತೆಯೇ ಆಕೆಯ ಕಷ್ಟಗಳಿಗೆ ಹೆಗಲುಕೊಡುವ, ಆಕೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮನಸ್ಥಿತಿ ಕುಟುಂಬದ ಪುರುಷರಿಗೂ ಇರಬೇಕಾಗುತ್ತದೆ’ ಎಂದರು.

‘ಪುಣೆಯ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ (ಐಐಎಸ್‌ಸಿಆರ್‌) ತನ್ನಲ್ಲಿರುವ ಮಹಿಳಾ ಬೋಧಕರು ಮತ್ತು ಸಂಶೋಧಕರ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲೇ ಪ್ರಕಟಿಸಿದೆ. ಇದು ಆ ಸಂಸ್ಥೆಯಲ್ಲಿ ಮಹಿಳೆಯರು ಹೆಚ್ಚಿದ್ದಾರೆ ಮತ್ತು ಮಹಿಳಾ ಸ್ನೇಹಿಯಾಗಿದೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ. ಉಳಿದ ಸಂಸ್ಥೆಗಳು ಇದೇ ಮಾದರಿ ಅನುಸರಿಸಬೇಕಿದೆ’ ಎಂದರು.

ಐಐಎಸ್‌ಸಿಯ ಪ್ರೊ.ದೀಪಿಕಾ ಚಕ್ರವರ್ತಿ ಮಾತನಾಡಿ, ‘ವಿಜ್ಞಾನ ಸಂಸ್ಥೆಯಲ್ಲಿನ ಒಂದು ಬೋಧಕ ಹುದ್ದೆಗೆ 200 ಅರ್ಜಿಗಳು ಬಂದಿದ್ದವು. ಈ ಪೈಕಿ ಒಬ್ಬ ಮಹಿಳೆ ಮಾತ್ರ ಅರ್ಜಿ ಸಲ್ಲಿಸಿದ್ದಳು. ಸಂಶೋಧನಾ ಕೇಂದ್ರಗಳಲ್ಲಿ ಮಹಿಳೆಯರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಅಧ್ಯಯನ ಸಂಸ್ಥೆಗಳು ಇನ್ನಷ್ಟು ಮಹಿಳಾಸ್ನೇಹಿಯಾಗುವ ಮತ್ತು ಮಹಿಳೆಯರಿಗೆ ಹೆಚ್ಚು ಉತ್ತೇಜನ ನೀಡುವ ಸಂಸ್ಥೆಗಳಾಗಿ ಬದಲಾಗುವ ಅವಶ್ಯಕತೆ ಇದೆ’ ಎಂದರು.

ಉನ್ನತ ಅಧ್ಯಯನ ಸಂಸ್ಥೆಗಳಲ್ಲಿ ಬೋಧಕ ಸಿಬ್ಬಂದಿ ಆಯ್ಕೆ ಸಮಿತಿ, ಪಿಎಚ್‌.ಡಿ ಆಯ್ಕೆ ಸಮಿತಿಗಳಲ್ಲಿ ಒಬ್ಬ ಮಹಿಳೆಯಾದರೂ ಇರಬೇಕು. ಆಗ ಸಂಸ್ಥೆಯಲ್ಲಿ ಸಹಜವಾಗಿಯೇ ಮಹಿಳಾಸ್ನೇಹಿ ವಾತಾವರಣ ನಿರ್ಮಾಣವಾಗುತ್ತದೆ. ಮಹಿಳೆಯರಿಗೆ ಹೆಚ್ಚು ಅವಕಾಶಗಳ ಬಾಗಿಲು ತೆರೆಯುತ್ತದೆ ಎಂದು ಐಐಎಸ್‌ಸಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ನಮ್ರತಾ ಗುಂಡಯ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry