ರಸ್ತೆಗೆ ಮೀಸಲಿಟ್ಟ ಭೂಮಿ ಪರರ ಪಾಲು!

7
ನೈಸ್‌ ಸಂಸ್ಥೆಯ ಅಕ್ರಮ : ಕ್ರಮ ಕೈಗೊಳ್ಳಲು ಪದ್ಮನಾಭರೆಡ್ಡಿ ಒತ್ತಾಯ

ರಸ್ತೆಗೆ ಮೀಸಲಿಟ್ಟ ಭೂಮಿ ಪರರ ಪಾಲು!

Published:
Updated:
ರಸ್ತೆಗೆ ಮೀಸಲಿಟ್ಟ ಭೂಮಿ ಪರರ ಪಾಲು!

ಬೆಂಗಳೂರು: 'ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಹಾಗೂ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಬೇರೆಯವರಿಗೆ ಖಾತೆಮಾಡಿಕೊಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಪಡೆಯಬೇಕು' ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದರು.

ಮಂಗಳವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಮಾತನಾಡಿದ ಅವರು, ‘ಕೆಂಗೇರಿ ಹೋಬಳಿಯ ಪಂತರಪಾಳ್ಯದ ಸರ್ವೆ ನಂಬರ್‌ 12ರ 30 ಗುಂಟೆಯನ್ನು ರಸ್ತೆ ನಿರ್ಮಾಣಕ್ಕಾಗಿ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಸಂಸ್ಥೆಗೆ ನೀಡಲಾಗಿತ್ತು. ಆದರೆ, ಈ ಜಾಗವನ್ನು ನೈಸ್‌ ಸಂಸ್ಥೆಯು ಸತ್ಯನಾರಾಯಣ ರಾವ್‌ ಎಂಬುವರಿಗೆ ಮಾರಾಟ ಮಾಡಿತ್ತು. ಇದಕ್ಕೆ ಖಾತಾ ಮಾಡಿಕೊಡಬಹುದು ಎಂದು ಆರ್‌.ಆರ್‌.ನಗರ ವಲಯದ ಕಾನೂನು ವಿಭಾಗದವರು ಹೇಳಿದ್ದರು. ಆದರೆ, ಖಾತಾ ಮಾಡಿಕೊಡಲು ಸಾಧ್ಯವಿಲ್ಲ ಎಂದು ಕೇಂದ್ರ ಕಚೇರಿಯ ಕಾನೂನು ವಿಭಾಗದ ತಜ್ಞರು ಅಭಿಪ್ರಾಯಪಟ್ಟಿದ್ದರು. ಇದನ್ನು ಲೆಕ್ಕಿಸದೆ ಖಾತೆ ಮಾಡಿಕೊಡಲಾಗಿದೆ’ ಎಂದು ಆರೋಪಿಸಿದರು.

‘ಈ ವಿಷಯದ ಬಗ್ಗೆ ಈ ಹಿಂದೆಯೇ ಕೌನ್ಸಿಲ್‌ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಈ ಪ್ರಕರಣ ಸಂಬಂಧ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಆದರೆ, ಈವರೆಗೂ ಖಾತೆಯನ್ನು ಹಿಂಪಡೆದಿಲ್ಲ. ಇದನ್ನು ಕೂಡಲೇ ರದ್ದುಪಡಿಸಿ, ಭೂಮಿಯನ್ನು ವಶಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ನೈಸ್‌ ರಸ್ತೆಯು ಹೊಸೂರು ಮುಖ್ಯರಸ್ತೆಗೆ ಸಂದಿಸುವ ಜಾಗದಲ್ಲಿ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ. ಇಲ್ಲಿ ಎಡಭಾಗದಲ್ಲಿ ವೈಟ್‌ ಫೆದರ್‌ ಕಲ್ಯಾಣ ಮಂಟಪವಿದ್ದು, ಒಂದೂವರೆ ಎಕರೆ ಹೊಂದಿದೆ. ನೈಸ್‌ ರಸ್ತೆ ಹಾಗೂ ಸಂಪರ್ಕ ರಸ್ತೆಯ ನಡುವೆ ಸುಮಾರು ಎರಡು ಎಕರೆ ಖಾಲಿ ಜಾಗವಿದ್ದು, ಇಲ್ಲಿ ಕಲ್ಯಾಣ ಮಂಟಪದ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಈ ಮಂಟಪಕ್ಕೆ ಪ್ರತಿದಿನ ಸುಮಾರು ₹25 ಲಕ್ಷ ಬಾಡಿಗೆ ಪಡೆಯಲಾಗುತ್ತಿದೆ. ಆದರೆ, ರಸ್ತೆಯ ಉದ್ದೇಶಕ್ಕಾಗಿ ಈ ಭೂಮಿಯನ್ನು ರೈತರಿಂದ 2003ರ ಏಪ್ರಿಲ್‌ 8ರಂದು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಇದನ್ನು ಕೂಡಲೇ ವಶಕ್ಕೆ ಪಡೆದು, ಬಡವರ ಮದುವೆಗಳಿಗೆ ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

‘ಕಲ್ಯಾಣ ಮಂಟಪಕ್ಕೆ ಸಾವಿರಾರು ಮಂದಿ ಬರುವುದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ವಶಕ್ಕೆ ಪಡೆದ ಭೂಮಿಯಲ್ಲಿ ರಸ್ತೆ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

‘ನೈಸ್‌ ರಸ್ತೆಯ ಅಕ್ಕಪಕ್ಕ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಸಂಸ್ಥೆ ನಡೆಸಿರುವ ಅಕ್ರಮಗಳ ಬಗ್ಗೆ ಸದನ ಸಮಿತಿಯು ವರದಿ ನೀಡಿದೆ. ಅದರನ್ವಯ ಕ್ರಮ ಕೈಗೊಳ್ಳಬೇಕು. ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯನ್ನು ಬಿಟ್ಟು, ಉಳಿದ ಜಾಗವನ್ನು ವಶಕ್ಕೆ ಪಡೆದು ರೈತರಿಗೆ ವಾಪಸ್‌ ನೀಡಬೇಕು. ಇಲ್ಲವೇ, ರಾಜ್ಯ ಸರ್ಕಾರದ ಅಧೀನಕ್ಕೆ ನೀಡಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಎಂ.ಚಂದ್ರಪ್ಪ, ‘ನಮ್ಮ ಪಕ್ಷಕ್ಕೆ ನೈಸ್‌ ಸಂಸ್ಥೆಯ ಮುಖ್ಯಸ್ಥ ಅಶೋಕ್‌ ಖೇಣಿ ಸೇರ್ಪಡೆಗೊಂಡಿದ್ದಾರೆ ಎಂಬ ಕಾರಣಕ್ಕೆ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನ ಬಿ.ಎನ್‌. ಮಂಜುನಾಥ ರೆಡ್ಡಿ, ‘ಕಾನೂನು ಇಲಾಖೆ ಅಭಿಪ್ರಾಯದ ವಿರುದ್ಧವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಕಾನೂನು ತಜ್ಞರು ನೀಡುವ ಅಭಿಪ್ರಾಯವನ್ನು ದಾಖಲು ಮಾಡಬೇಕು. ವೈಟ್‌ ಫೆದರ್‌ ಕಲ್ಯಾಣ ಮಂಟಪವನ್ನು ತಾತ್ಕಾಲಿಕವಾಗಿ ನಿರ್ಮಿಸಿದ್ದು, ಯಾವುದೇ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ದೂರಿದರು.

ಬಿಜೆಪಿಯ ಕೆ.ನರಸಿಂಹ ನಾಯಕ್‌, ‘ಖಾತಾ ವರ್ಗಾವಣೆ ಮಾಡಿಕೊಡಬೇಕಾದರೆ ತಳಹಂತದಿಂದ ಮೇಲಿನ ಹಂತದ ಅಧಿಕಾರಿಗಳು ಸಹಿ ಮಾಡಿರುತ್ತಾರೆ. ಹೀಗಾಗಿ, ಎಲ್ಲರನ್ನೂ ಹೊಣೆಗಾರರನ್ನಾಗಿ ಮಾಡಬೇಕು. ಜಂಟಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಮೇಯರ್‌ ಆರ್‌.ಸಂಪತ್‌ ರಾಜ್‌, ‘ಬೊಮ್ಮನಹಳ್ಳಿ ವಲಯದಿಂದ ಕಡತ ತರಿಸಿಕೊಂಡು ಪರಿಶೀಲಿಸುತ್ತೇನೆ. ಖಾತಾ ವರ್ಗಾವಣೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುತ್ತೇವೆ’ ಎಂದು ಅವರು ಹೇಳಿದರು.

***

‘ಏಳು ವರ್ಷಗಳ ಹಿಂದೆ ಮೃತಪಟ್ಟಿದ್ದ ಪಾಲಿಕೆಯ ಮಾಜಿ ಸದಸ್ಯ ನಟರಾಜ್‌ ಅವರ ಕುಟುಂಬದವರು ರಸ್ತೆ ಬದಿಯಲ್ಲಿ ಬಾಳೆಹಣ್ಣು ಮಾರಿ ಜೀವನ ಸಾಗಿಸುತ್ತಿದ್ದಾರೆ ಎಂದು ಉಮೇಶ್‌ ಶೆಟ್ಟಿ ಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೆ, ಪಾಲಿಕೆ ಸದಸ್ಯರ ಒಂದು ತಿಂಗಳ ಗೌರವಧನವನ್ನು ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಇದನ್ನು ಖಂಡಿಸಿ ನಟರಾಜ್‌ ಪತ್ನಿ ಪತ್ರ ನೀಡಿದ್ದಾರೆ. ಶಾಸಕ ದಿನೇಶ್‌ ಗುಂಡೂರಾವ್‌ ಅವರು ನನಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿದ್ದಾರೆ. ನಾನು ಚೆನ್ನಾಗಿದ್ದೇನೆ. ಸದಸ್ಯರ ಗೌರವಧನ ಬೇಡ ಎಂದು ಮನವಿ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ನ ಲತಾ ಕುವರ್‌ ರಾಥೋಡ್‌ ತಿಳಿಸಿದರು.

ಬಿಜೆಪಿ ಉಮೇಶ್‌ ಶೆಟ್ಟಿ, ‘ಮಾನವೀಯ ದೃಷ್ಟಿಯಿಂದ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ನಟರಾಜ್‌ ಪತ್ನಿ ಪತ್ರ ಬರೆದಿದ್ದರೆ ಅದನ್ನು ಮೇಯರ್‌ಗೆ ನೀಡಲಿ’ ಎಂದು ಒತ್ತಾಯಿಸಿದರು.

ಪದ್ಮನಾಭರೆಡ್ಡಿ, ‘ನಟರಾಜ್‌ ತಂದೆ ಬಾಳೆಹಣ್ಣು ಮಾರುತ್ತಿದ್ದರು ಎಂದು ಆಡಳಿತ ಪಕ್ಷದ ನಾಯಕರಾಗಿದ್ದ ಸತ್ಯನಾರಾಯಣ ಅವರೇ ಈ ಹಿಂದೆ ಹೇಳಿದ್ದರು. ಗೌರವಧನ ಅಗತ್ಯವಿಲ್ಲ ಎಂದರೆ ನಿರ್ಣಯವನ್ನು ಕೈಬಿಡಿ’ ಎಂದು ಆಗ್ರಹಿಸಿದರು.

ಮೇಯರ್‌, ‘ನಾನು ಹಾಗೂ ಉಪಮೇಯರ್‌ ಅವರು ನಟರಾಜ್‌ ಮನೆಗೆ ಭೇಟಿ ನೀಡಿದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಉತ್ತರಿಸಿದರು.

**

‘ಪೌರಕಾರ್ಮಿಕರಿಗೆ ಸಂಬಳ ನೀಡಿಲ್ಲ’

ಪೌರಕಾರ್ಮಿಕರು, ವಾಟರ್‌ಮನ್‌ಗಳಿಗೆ 2 ತಿಂಗಳ ಸಂಬಳ ನೀಡಿಲ್ಲ ಎಂದು ಬಿಜೆಪಿಯ ಶಾರದಾ ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಪದ್ಮನಾಭರೆಡ್ಡಿ, ‘ನಮ್ಮ ವಾರ್ಡ್‌ನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿರುವ 9 ಪೌರಕಾರ್ಮಿಕರಿಗೆ ಸಂಬಳ ನೀಡಿಲ್ಲ. ಅಲ್ಲದೆ, ಪ್ರತಿದಿನ ಮೂರು ಬಾರಿ ಬಯೋಮೆಟ್ರಿಕ್‌ ಯಂತ್ರದಲ್ಲಿ ಬೆರಳಚ್ಚು ನೀಡಬೇಕಿದೆ. ಆದರೆ, ಬಯೋಮೆಟ್ರಿಕ್‌ ಕೇಂದ್ರಗಳು ಒಂದೆರಡು ಕಿ.ಮೀ. ದೂರದಲ್ಲಿ ಇರುವುದರಿಂದ ಪೌರ ಕಾರ್ಮಿಕರಿಗೆ ತೊಂದರೆ ಉಂಟಾಗುತ್ತಿದೆ’ ಎಂದರು.

ಕಾಂಗ್ರೆಸ್‌ನ ಜಿ.ಪದ್ಮಾವತಿ, ‘ಆಟೊ ಚಾಲಕರಿಗೆ ನಾಲ್ಕು ತಿಂಗಳಿಂದ ಸಂಬಳ ನೀಡಿಲ್ಲ’ ಎಂದರು.

ಬಿಜೆಪಿಯ ನೇತ್ರಾ ಪಲ್ಲವಿ, ‘ಯಲಹಂಕ ವಲಯದಲ್ಲಿ ಕಸದ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ಜಂಟಿ ಆಯುಕ್ತರ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

ಯುಗಾದಿ ಹಬ್ಬ ಬರುತ್ತಿದ್ದು, ಬಾಕಿ ವೇತನವನ್ನು ಕೂಡಲೇ ನೀಡುವಂತೆ ಎಲ್ಲ ಸದಸ್ಯರು ಒತ್ತಾಯಿಸಿದರು.

**

ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವುದರೊಳಗೆ ವಿವಿಧ ಕಾಮಗಾರಿಗಳಿಗೆ ಟೆಂಡರ್‌ ಹಾಗೂ ಕಾರ್ಯಾದೇಶ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಬಿಜೆಪಿಯ ಬಿ.ಎಸ್‌.ಸತ್ಯನಾರಾಯಣ, ‘ನಾನು ಮೇಯರ್‌ ಆಗಿದ್ದ ವೇಳೆ ಏಕಗವಾಕ್ಷಿಯಡಿ ಕಡತಗಳನ್ನು ವಿಲೇವಾರಿ ಮಾಡಲಾಗಿತ್ತು. ಅದೇ ಮಾದರಿ ಅನುಸರಿಸಬೇಕು. ಪ್ರತಿದಿನ ಎರಡು ವಲಯಗಳಿಗೆ ಭೇಟಿ ನೀಡಿ, ಎಲ್ಲ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಮೇಯರ್‌, ‘ಬುಧವಾರದಿಂದಲೇ ಈ ಕಾರ್ಯ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

**

ಸದಸ್ಯರ ಪ್ರಶ್ನೆ– ಸ್ಪಂದನ

* ಕುಮಾರಿ ಪಳನಿಕಾಂತ್‌: ದಯಾನಂದನಗರ ವಾರ್ಡ್‌ನಲ್ಲಿ ನಿರ್ಮಿಸಿರುವ ಅಂಬೇಡ್ಕರ್‌ ಡೇ ಕೇರ್‌ ಕೇಂದ್ರಕ್ಕೆ ಲೋಕೋಪಯೋಗಿ ಇಲಾಖೆಯು ₹1.84 ಲಕ್ಷ ಬಾಡಿಗೆ ನಿಗದಿಪಡಿಸಿದೆ. ಆದರೆ, ಖಾಸಗಿ ಸಂಸ್ಥೆಗೆ ಕೇವಲ ₹7,000ಕ್ಕೆ ಬಾಡಿಗೆ ನೀಡಲಾಗಿದೆ.

* ಮೇಯರ್‌: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ.

* ಎಂ.ನಾಗರಾಜು: ಹೊಸಕೆರೆಹಳ್ಳಿ ಬಳಿ ನೈಸ್‌ ರಸ್ತೆಯ ಎಡಭಾಗದಲ್ಲಿ ಸುಮಾರು 5 ಎಕರೆ ಜಾಗದಲ್ಲಿ ಕ್ರಿಕೆಟ್‌ ಮೈದಾನ ನಿರ್ಮಿಸಲಾಗಿದೆ. ದಿನಕ್ಕೆ ₹1 ಲಕ್ಷಕ್ಕೆ ಬಾಡಿಗೆ ನೀಡಲಾಗುತ್ತಿದೆ.

* ಮೇಯರ್‌: ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.

* ಬಿಜೆಪಿ ಸದಸ್ಯ: ಜಯಮಹಲ್‌ ರಸ್ತೆ ವಿಸ್ತರಣೆಗಾಗಿ ಹಸ್ತಾಂತರಿಸಬಹುದಾದ ಅಭಿವೃದ್ಧಿ ಹಕ್ಕು ನೀಡಬೇಕು. ಕಾಮಗಾರಿಯನ್ನು ಕೈಗೊಳ್ಳಬೇಕು.

* ಮೇಯರ್‌: ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಈ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry