ಗಾಯಾಳು ರಕ್ಷಣೆಗೆ ಧಾವಿಸದ ದಾರಿಹೋಕರು!

7

ಗಾಯಾಳು ರಕ್ಷಣೆಗೆ ಧಾವಿಸದ ದಾರಿಹೋಕರು!

Published:
Updated:
ಗಾಯಾಳು ರಕ್ಷಣೆಗೆ ಧಾವಿಸದ ದಾರಿಹೋಕರು!

ಬೆಂಗಳೂರು: ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯದ ದಾರಿಹೋಕರು, ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುವ ಮೂಲಕ ಅಮಾನವೀಯತೆ ಪ್ರದರ್ಶಿಸಿದ ಪ್ರಸಂಗ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಮಂಗಳವಾರ ನಡೆಯಿತು.

ರಾಜರಾಜೇಶ್ವರಿನಗರದ ಪಂಚಶೀಲಾಲೇಔಟ್ ನಿವಾಸಿ ಮದನ್‌ಲಾಲ್ (34),  ಬೆಳಿಗ್ಗೆ 9.30ರ ಸುಮಾರಿಗೆ ಕೆಲಸದ ನಿಮಿತ್ತ ಬೈಕ್‌ನಲ್ಲಿ ನಾಗರಬಾವಿ ಕಡೆಗೆ ಹೋಗುತ್ತಿದ್ದರು. ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಅವರ ಬೈಕ್‌ಗೆ ಹಿಂದಿನಿಂದ ಲಾರಿ ಗುದ್ದಿತು. ಕೆಳಗೆ ಬಿದ್ದಾಗ ಸವಾರನ ಕಾಲುಗಳ ಮೇಲೆ ಲಾರಿಯ ಚಕ್ರ ಹರಿಯಿತು.

ಅವರ ಚೀರಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದರು. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಬದಲು ವಿಡಿಯೊ ಮಾಡಿಕೊಳ್ಳುತ್ತಿದ್ದರು. 20 ನಿಮಿಷಗಳ ನಂತರ ಸ್ಥಳಕ್ಕೆ ಬಂದ ಬ್ಯಾಟರಾಯನಪುರ ಸಂಚಾರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಪುಟ್ಟಸ್ವಾಮಿ ಹಾಗೂ ಕಾನ್‌ಸ್ಟೆಬಲ್ ಸೋಮಸುಂದರ್, ಆ ಮಾರ್ಗದಲ್ಲಿ ಬಂದ ಸರಕು ಸಾಗಣೆ ಆಟೊವನ್ನು ಅಡ್ಡಗಟ್ಟಿ ಅದರಲ್ಲೇ ಗಾಯಾಳುವನ್ನು ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ದರು. ಮದನ್ ಅಪಾಯದಿಂದ ಪಾರಾಗಿದ್ದಾರೆ.

ಪೊಲೀಸರ ಈ ಕಾರ್ಯವೈಖರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಜನ, ಗಾಯಾಳುವಿಗೆ ಸ್ಪಂದಿಸದವರ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. ಆರೋಪಿ ಚಾಲಕ ಪಾಲಾಕ್ಷ ಅವರನ್ನು ಬಂಧಿಸಿರುವ ಪೊಲೀಸರು, ಲಾರಿಯನ್ನು ಜಪ್ತಿ ಮಾಡಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಸೋಮಸುಂದರ್, ‘ಅಪಘಾತ ಸಂಭವಿಸಿದ ಕೂಡಲೇ ಜನ ಹೇಗೋ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಬಹುದಿತ್ತು. ಅದನ್ನು ಬಿಟ್ಟು ಆಂಬುಲೆನ್ಸ್‌ಗೆ ಕರೆ ಮಾಡಿ, ನಂತರ ಗಾಯಾಳುವಿನ ನರಳಾಟವನ್ನು ವಿಡಿಯೊ ಮಾಡುತ್ತ ನಿಂತಿದ್ದರು. ನಾವು ಸ್ಥಳಕ್ಕೆ ಹೋದಾಗಲೂ ‘ಸ್ವಲ್ಪ ಸಮಯದಲ್ಲೇ ಆಂಬುಲೆನ್ಸ್ ಬರುತ್ತದೆ ಕಾಯಿರಿ’ ಎಂದರು. ಆದರೆ, ತೀವ್ರ ರಕ್ತಸ್ರಾವವಾಗುತ್ತಿದ್ದ ಕಾರಣ ಸರಕು ಸಾಗಣೆ ಆಟೊದಲ್ಲೇ ಆಸ್ಪತ್ರೆಗೆ ಕರೆದೊಯ್ದೆವು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry