ಆಧಾರ್‌ ಕೇಂದ್ರಗಳಲ್ಲಿ ಸಾಲು ಸಾಲು ಜನ

7
ಬೆಳಿಗ್ಗೆ 6 ಗಂಟೆಯಿಂದಲೇ ಜನ ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರು

ಆಧಾರ್‌ ಕೇಂದ್ರಗಳಲ್ಲಿ ಸಾಲು ಸಾಲು ಜನ

Published:
Updated:
ಆಧಾರ್‌ ಕೇಂದ್ರಗಳಲ್ಲಿ ಸಾಲು ಸಾಲು ಜನ

ದೊಡ್ಡಬಳ್ಳಾಪುರ: ಆರ್.ಟಿ.ಇ.ಗೆ (ಕಡ್ಡಾಯ ಶಿಕ್ಷಣ ಹಕ್ಕು) ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆಯ ದಿನವಾಗಿದೆ. ಈ ನಡುವೆ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಿಸುವುದು ಕಡ್ಡಾಯ ಎನ್ನುವ ನಿಯಮದಿಂದಾಗಿ, ನೂರಾರು ಪೋಷಕರು ಆಧಾರ್ ಕಾರ್ಡ್ ಕೇಂದ್ರಗಳ ಮುಂದೆ ಬೆಳಗಿನಿಂದಲೇ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ನಗರದ ಹೊಸ ಕರಗದ ಗುಡಿ ರಸ್ತೆಯ ಬಳಿಯಿರುವ ಆಧಾರ್ ಕಾರ್ಡ್ ಸೇವಾ ಕೇಂದ್ರದಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಜನ ಸಾಲುಗಟ್ಟಿ ನಿಂತಿದ್ದರು. ಹಚ್ಚಿನ ಜನಸಂದಣಿಯಿಂದಾಗಿ ಮೊದಲು ಬಂದವರು ಟೋಕನ್ ಪಡೆಯಬೇಕಾದ್ದರಿಂದ ಜನ ಮೊದಲೇ ಬಂದು ನಿಂತಿದ್ದರು.

‘ನಮ್ಮ ಮಗನ ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ನಮೂದಾಗಿದೆ. ಆದರೆ ನನ್ನ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ಇಲ್ಲದಿರುವುದರಿಂದ ಆನ್‌ಲೈನ್‌ನಲ್ಲಿ ನೋಂದಣಿ ಮಾಡಲು ಆಗುತ್ತಿಲ್ಲ. ಅದಕ್ಕಾಗಿ ಇಲ್ಲಿ ಬಂದು ಮೊಬೈಲ್ ಸಂಖ್ಯೆ ಜೋಡಿಸಲಾಗುತ್ತಿದೆ’ ಎಂದು ಪೋಷಕ ಮನೋಹರ್ ತಿಳಿಸಿದರು.

ನಗರದಲ್ಲಿ ಕೆಲವೇ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತಿವೆ. ಎಲ್ಲ‌ ಕಡೆ ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿದೆ. ಇಂದು ಬಹಳಷ್ಟು ವಹಿವಾಟುಗಳಿಗೆ ಆಧಾರ್ ಕಡ್ಡಾಯವಾಗಿರುವುದರಿಂದ ಹೊಸ ಕಾರ್ಡ್‌ಗಷ್ಟೇ ಅಲ್ಲದೇ ತಿದ್ದುಪಡಿ ಮಾಡಲು ಜನ ಬರುತ್ತಿರುತ್ತಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಹೆಚ್ಚಿನ ಕೇಂದ್ರಗಳನ್ನು ತೆರೆಯಬೇಕು’ ಎನ್ನುತ್ತಾರೆ ಬೆಸ್ತರ ಪೇಟೆ ನಿವಾಸಿ ಮಂಜುಳಾ.

ಬೇರೆ ದಿನ ಮಾಡಿಸಿಕೊಳ್ಳಿ: ಆಧಾರ್ ಲಿಂಕ್ ಬ್ಯಾಂಕ್‌ಗಳಲ್ಲಿಯೂ ಮಾಡಲಾಗುತ್ತಿದ್ದು, ಅದು ಸೀಮಿತವಾಗಿದೆ. 5 ವರ್ಷದ ಮಕ್ಕಳಿಗೆ ಬಯೋಮೆಟ್ರಿಕ್ ಮಾಡಬೇಕಾಗಿರುವುದರಿಂದ ಹಾಗೂ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜನ ಮುಗಿ ಬೀಳುತ್ತಿದ್ದಾರೆ. ಯಾವುದೇ ಆಧಾರ್ ಕಾರ್ಡ್‌ಗಳನ್ನು ಬೇರೆ ಸಮಯದಲ್ಲಿಯೂ ತಿದ್ದುಪಡಿ ಮಾಡಿಕೊಳ್ಳುವ ಅವಕಾಶವಿದ್ದು, ಇತರೆ ಸಮಯದಲ್ಲಿ ಮಾಡಿಸಿಟ್ಟುಕೊಂಡರೆ ಈ ರೀತಿ ಸಾಲುಗಟ್ಟಿ ನಿಲ್ಲುವುದು ತಪ್ಪಲಿದೆ ಎನ್ನುತ್ತಾರೆ ಜಿ.ಸೇವಾ ಆಧಾರ್ ಕಾರ್ಡ್ ಕೇಂದ್ರದ ಮುಖ್ಯಸ್ಥ ಹರೀಶ್.

ಸರ್ಕಾರ ಪ್ರತಿ ವರ್ಷ ಹೊಸ ನಿಯಮಗಳನ್ನು ಮಾಡಿ, ವಿನಾಕಾರಣ ಅಲೆಯುವಂತೆ ಮಾಡುತ್ತಿದೆ. ಆರ್.ಟಿ.ಇಗೆ ಅರ್ಜಿ ಸಲ್ಲಿಸುವ ನಿಯಮಗಳನ್ನು ಸರಳೀಕರಿಸಬೇಕು ಎಂದು ಪೋಷಕ ಶ್ರೀನಿವಾಸ್ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry