ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ‘ಚಂದ್ರಿಕೆ’ಯಲ್ಲಿ ಕಾಂಗ್ರೆಸ್ ‘ಗೂಡು’

ಶಿಡ್ಲಘಟ್ಟ: ಮೊದಲಿನಿಂದಲೂ ಇಲ್ಲಿ ‘ಕೈ’ ಪರ ಒಲುವು ಹೆಚ್ಚು, ಪಕ್ಷೇತರರಿಗೆ ಮಣೆ ಹಾಕದ ಮತದಾರ, ಪರಿಶಿಷ್ಟರ ಮತಗಳತ್ತ ಎಲ್ಲರ ಚಿತ್ತ
Last Updated 14 ಮಾರ್ಚ್ 2018, 8:21 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟಕ್ಕೂ ಮತ್ತು ರೇಷ್ಮೆ ಉದ್ಯಮಕ್ಕೂ ದೊಡ್ಡ ನಂಟು. ಏಷ್ಯಾದ ಎರಡನೇ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಇಲ್ಲಿದೆ. ಇಲ್ಲಿನ ರೇಷ್ಮೆ ದಾರ ಸೂರತ್‌ನಲ್ಲಿ ಜರಿ ರೂಪ ಪಡೆದರೆ, ಕಂಚಿಯಲ್ಲಿ ಸೀರೆಯಾಗಿ ರೂಪಾಂತರ ಹೊಂದುತ್ತದೆ. ವಿದೇಶಕ್ಕೆ ರಫ್ತಾಗಿ ಹತ್ತಾರು ರೂಪು ತಳೆಯುತ್ತದೆ.

ದೇಶದ ಅತಿ ಪುರಾತನ ಪ್ರಮುಖ ‘ವಸ್ತ್ರೋದ್ಯಮ’ಕ್ಕೆ ತನ್ನದೇಯಾದ ಕೊಡುಗೆ ನೀಡುತ್ತಿರುವ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ‘ಚಂದ್ರಿಕೆ’ಯನ್ನು ಶೋಧಿಸಿ ನೋಡಿದರೆ ಇಲ್ಲಿ ‘ಕಾಂಗ್ರೆಸ್‌’ ಪಕ್ಷವೇ ಹೆಚ್ಚು ಹಣ್ಣಾಗಿ, ಗೂಡು ಕಟ್ಟಿದ್ದು ಗೋಚರಿಸುತ್ತದೆ.

1952ರಿಂದ ಇಲ್ಲಿಯವರೆಗೆ ನಡೆದ 14 ಚುನಾವಣೆಗಳ ರಾಜಕೀಯ ಇತಿಹಾಸ ಅವಲೋಕಿಸಿದರೆ 10 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ಮಾಲೆ ಧರಿಸಿದ್ದಾರೆ. ಉಳಿದಂತೆ ಜೆಡಿಎಸ್‌ ಎರಡು ಬಾರಿ, ಜನತಾಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿ ತಲಾ ಒಂದು ಬಾರಿ ಗೆದ್ದಿದ್ದಾರೆ.

ಮೊದಲಿನಿಂದಲೂ ಕಾಂಗ್ರೆಸ್‌ ಹೋರಾಟಕ್ಕೆ ಇದು ಮುಖ್ಯ ‘ಅಖಾಡ’ವಾಗಿದೆ. ಅಬ್ಲೂಡು, ದಿಬ್ಬೂರಹಳ್ಳಿ, ಕಸಬಾ, ಜಂಗಮಕೋಟೆ ಹೋಬಳಿಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಒಕ್ಕಲಿಗರೇ ನಿರ್ಣಾಯಕ ಮತದಾರರು. ಇಲ್ಲಿ ಕೆಳವರ್ಗದವರೆಲ್ಲ ‘ಕೈ’ನ ಸಾಂಪ್ರದಾಯಿಕ ಮತಗಳಾಗಿ ಪರಿವರ್ತನೆಯಾದ್ದದ್ದೇ ಹೆಚ್ಚು.

1952ರಲ್ಲಿ ಚಿಕ್ಕಬಳ್ಳಾಪುರ ದ್ವಿಸದಸ್ಯ ಕ್ಷೇತ್ರದ ಭಾಗವಾಗಿದ್ದ ಇಲ್ಲಿ ಮಳ್ಳೂರಿನ ಸ್ವಾತಂತ್ರ್ಯ ಹೋರಾಟಗಾರ ಜಿ.ಪಾಪಣ್ಣ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ನಂತರದಲ್ಲಿ ಕಮ್ಯುನಿಸ್ಟ್‌ ಸಿದ್ಧಾಂತಗಳತ್ತ ಒಲುವು ತೋರಿದ ಪಾಪಣ್ಣ, ಕಾಲಾಂತರದಲ್ಲಿ ಸಿಪಿಎಂ ಪಾಲಿಟ್ ಬ್ಯೂರೊ ನಾಯಕರೊಂದಿಗೆ ನಂಟು ಹೊಂದಿದ್ದರು.

ಎರಡನೇ ಚುನಾವಣೆಯಲ್ಲಿ ಸಿಪಿಎಂ ಕೆಲ ಮಿತ್ರಪಕ್ಷಗಳೊಂದಿಗೆ ಸೇರಿ ರಚಿಸಿದ್ದ ಸಂಯುಕ್ತ ರಂಗದ ಜೆ. ವೆಂಕಟಪ್ಪ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾದರು. 1972ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಇವರು ಒಮ್ಮೆ ರಾಜ್ಯಸಭಾ ಸದಸ್ಯರಾಗಿದ್ದರು.

1962ರಲ್ಲಿ ಸಾದಲಿಯ ಎಸ್.ಆವಲರೆಡ್ಡಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ನಂತರ ಭಕ್ತರಹಳ್ಳಿ ಬಿ.ವೆಂಕಟರಾಯಪ್ಪ ಅವರು ‘ಕೈ’ ಹುರಿಯಾಳಾಗಿ ಗೆದ್ದು ಶಾಸನಸಭೆಗೆ ಅವಕಾಶ ಪಡೆದರು.

1969ರಲ್ಲಿ ಕಾಂಗ್ರೆಸ್‌ನ ಭಿನ್ನಾಭಿಪ್ರಾಯಗಳಿಂದ ಪಕ್ಷ ಒಡೆದು ಇಬ್ಭಾಗವಾಯಿತು. 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ತುರ್ತು ಪರಿಸ್ಥಿತಿಯ ಅತಿರೇಕಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಧೂಳೀಪಟವಾಯಿತು. ಆದರೆ ರಾಜ್ಯದಲ್ಲಿ ಮಾತ್ರ 1978ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಖಂಡ ಗೆಲುವು ಪಡೆಯಿತು.

ಆಗ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್. ಮುನಿಶಾಮಪ್ಪ ಜನತಾದಳ ಅಭ್ಯರ್ಥಿಯಾಗಿದ್ದ ಇ. ವೆಂಕಟರಾಯಪ್ಪ ಅವರನ್ನು 7,577 ಮತಗಳ ಅಂತರದಿಂದ ಸೋಲಿಸಿದರು. ನಂತರದಲ್ಲಿ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಅವರ ಅನುಯಾಯಿಯಾದ ಮುನಿಶಾಮಪ್ಪ 1985ರ ಚುನಾವಣೆಯಲ್ಲಿ ಜನತಾ ಪಕ್ಷ ಮತ್ತು 2004ರಲ್ಲಿ ಜೆಡಿಎಸ್‌ನಿಂದ ಗೆದ್ದು ಶಾಸಕರಾದರು.

ರಾಜಕೀಯ ಪಲ್ಲಟಗಳ ನಡುವೆ ಮುನಿಶಾಮಪ್ಪ ಜೆಡಿಎಸ್ ತೊರೆದು ಎಂ.ಪಿ.ಪ್ರಕಾಶ್ ಜತೆ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಗುದ್ದಾಡಿ ವಿಫಲರಾಗಿ ಕೊನೆಗೆ ಜೆಡಿಎಸ್‌ನಲ್ಲಿ ಉಳಿದಿದ್ದಾರೆ.

1983ರಲ್ಲಿ ಭಾರತೀಯ ಜನತಾ ಪಕ್ಷದ 18 ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆ ಅಧಿಕಾರದ ಗದ್ದುಗೆ ಹಿಡಿದರು. ಆ ಚುನಾವಣೆಯಲ್ಲಿ ಹಂಡಿಗನಾಳದ ವಿ.ಮುನಿಯಪ್ಪ ಅವರು ಕಾಂಗ್ರೆಸ್‌ ಪಕ್ಷದಿಂದ ವಿಧಾನಸಬೆ ಪ್ರತಿನಿಧಿಸಿದ್ದರು.

ಆದರೆ 1985ರಲ್ಲಿ ನಡೆದ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ಪಕ್ಷದ ಕಳಪೆ ಸಾಧನೆ ಕಂಡು ಹೆಗಡೆ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ಕೊಟ್ಟರು. ಹೀಗಾಗಿ ಮುನಿಯಪ್ಪ ಎರಡು ವರ್ಷವಷ್ಟೇ ಶಾಸಕರಾದರು.

ಅದೇ ವರ್ಷ ನಡೆದ ಚುನಾವಣೆಯಲ್ಲಿ ಹೆಗಡೆ ಪೂರ್ಣ ಬಹುಮತದೊಂದಿಗೆ ಗೆದ್ದು ಮುಖ್ಯಮಂತ್ರಿಯಾದರು. ಆಗ ಇಲ್ಲಿ ಬಿ.ಮುನಿಶಾಮಪ್ಪ ಜನತಾ ಪಕ್ಷದಿಂದ ಕಣಕ್ಕಿಳಿದು ಕಾಂಗ್ರೆಸ್‌ ಅಭ್ಯರ್ಥಿ ವಿ.ಮುನಿಯಪ್ಪ ಅವರನ್ನು 10,201 ಮತಗಳಿಂದ ಸೋಲಿಸಿ ಎರಡನೇ ಬಾರಿ ಶಾಸಕರಾದರು.

ಮರು ಚುನಾವಣೆಯಲ್ಲಿ (1989) ಇಲ್ಲಿ ಕಾಂಗ್ರೆಸ್‌ನ ವಿ. ಮುನಿಯಪ್ಪ ಜನತಾ ಪಕ್ಷದ ಮುನಿಶಾಮಪ್ಪ ಮಣಿಸಿ ಎರಡನೇ ಬಾರಿ ಶಾಸಕರಾದರು. ಅಲ್ಲಿಂದ 16 ವರ್ಷ ಕಾಲ ಗೆಲುವಿನ ಓಟ ಮುಂದುವರಿಸಿದರು.

2004ರ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನಡುವಣ ಮೈತ್ರಿ ಕಾಂಗ್ರೆಸ್‌ನ ಮತ ಪಲ್ಲಟ ಮಾಡಿತು. ಆಗ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮುನಿಶಾಮಪ್ಪ ಅವರಿಗೆ ಬಿಎಸ್‌ಪಿ ಮತಗಳೊಂದಿಗೆ ಗೆದ್ದು, ಕಾಂಗ್ರೆಸ್‌ನ ಹಳೆ ಹುಲಿ ಮುನಿಯಪ್ಪ ಅವರ ಓಟವನ್ನು ತಡೆದರು.

ಈ ವೇಳೆಗಾಗಲೇ ಮಾವ ಮುನಿಶಾಮಪ್ಪ ಅವರ ನೆರಳಿನಲ್ಲೇ ರಾಜಕೀಯ ಪಟ್ಟು ಕರಗತ ಮಾಡಿಕೊಂಡ ಎಂ.ರಾಜಣ್ಣ 2008ರಲ್ಲಿ ವಿ.ಮುನಿಯಪ್ಪ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ತೊಡೆ ತಟ್ಟಿದರು. ಆದರೆ 6,502 ಮತಗಳ ಅಂತರದಿಂದ ಪರಾಭವಗೊಂಡರು.

2013ರ ಚುನಾವಣೆಯಲ್ಲಿ ‘ಓಟು, ನೋಟು ನೀವೆ ನೀಡಿ’ ಎಂಬ ವಿಭಿನ್ನ ರೀತಿಯ ಘೋಷಣೆಯೊಂದಿಗೆ ಕಣಕ್ಕಿಳಿದ ರಾಜಣ್ಣ ಅವರಿಗೆ ಮತದಾರರು ಕೈಹಿಡಿದರು. ಒಂದೆಡೆ ಮುನಿಶಾಮಪ್ಪ ಸಾವು, ಮೊದಲ ಚುನಾವಣೆಯಲ್ಲಿ ಸೋತಿದ್ದ ಅನುಕಂಪ ಕೆಲಸ ಮಾಡಿತು.

ಈ ಕ್ಷೇತ್ರದಲ್ಲಿ ಸಿಪಿಎಂ ಕಾವು ಕಳೆದುಕೊಂಡು ದಶಕಗಳೇ ಕಳೆದಿವೆ. ಬಿಜೆಪಿ ಸಂಘಟನೆ ಇದೆಯಾದರೂ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವಂತಿದೆ.

ಎಲ್‌ಟಿಎಂಗೆ ಅರಸು ಅಚ್ಚರಿ!
ಆನೆಮಡಗು ಎಂಬ ಪುಟ್ಟ ಹಳ್ಳಿಯ ಅವಿದ್ಯಾವಂತ ಎಸ್.ಮುನಿಶಾಮಪ್ಪ ಅವರು ಮೂರು ಬಾರಿ ಶಾಸಕರಾಗುವ ಮಟ್ಟಿಗೆ ರಾಜಕೀಯವಾಗಿ ಬೆಳೆದದ್ದೇ ರೋಚಕ ಕಥೆ. ಗ್ರಾಮ ಪಂಚಾಯಿತಿ ಚುನಾವಣೆಯಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಅವರಿಗೆ ಸಹಿ ಮಾಡಲೂ ಬರುತ್ತಿರಲಿಲ್ಲ ಎನ್ನುವುದು ಅನೇಕರಲ್ಲಿ ಸೋಜಿಗ ಮೂಡಿಸಿತ್ತು.

1978ರಿಂದ 2004ರ ವರೆಗೆ ಸತತ 26 ವರ್ಷಗಳಲ್ಲಿ 7 ಚುನಾವಣೆ ಎದುರಿಸಿದ ಮುನಿಶಾಮಪ್ಪ ಅವರು ರಾಜಕೀಯದ ಏಳು ಬೀಳಿನ ನಡುವೆ ತಮ್ಮದೇ ವರ್ಚಸ್ಸು ಕಾಯ್ದುಕೊಂಡು ಬಂದಿದ್ದರು. ಅವರು ಎಲ್ಲಿ ಹೋದರೂ ನಾನು ‘ಎಲ್‌ಟಿಎಂ’ (ಎಡಗೈ ಹೆಬ್ಬೆಟ್ಟು ಒತ್ತುವವನು) ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದರು.

ಒಂದು ಬಾರಿ ಅವರು ದೇವರಾಜ ಅರಸು ಅವರಿಗೆ ‘ನಮ್ಮ ಜಾತಿಯವರಿಗೆ (ಎಲ್‌ಟಿಎಂ) ಮಂತ್ರಿ ಪದವಿಯನ್ನೇ ಕೊಡಲಿಲ್ಲ’ ಎಂದು ಕಾಲೆಳೆದಾಗ, ಅರಸು ತಕ್ಷಣ ಯಾವ ಜಾತಿ? ಏನು ಹೇಳುತ್ತಿದ್ದಾರೆ? ಎಂದು ಅರ್ಥೈಸಿಕೊಳ್ಳಲಾಗದೆ ಹುಬ್ಬೇರಿಸಿದ್ದರಂತೆ. ಕೊನೆಗೆ ಮುನಿಶಾಮಪ್ಪ ಅವರ ಎಲ್‌ಟಿಎಂ ಕಥೆ ಕೇಳಿ ಅರಸು ಅವರು ಕೂಡ ನಕ್ಕಿದ್ದರಂತೆ.

ಗೆಲುವಿನ ಸರದಾರ ಮುನಿಯಪ್ಪ
1983ರಿಂದ ಕಳೆದ ಚುನಾವಣೆ ವರೆಗೆ ಸತತ 8 ಚುನಾವಣೆಗಳನ್ನು ಎದುರಿಸಿರುವ ವಿ.ಮುನಿಯಪ್ಪ ಅವರು ಈ ಕ್ಷೇತ್ರದಲ್ಲಿ ಗೆಲುವಿನ ಸರದಾರರು. ಮೂರು ದಶಕಗಳ ತಮ್ಮ ರಾಜಕೀಯ ಜೀವನದಲ್ಲಿ 5 ಬಾರಿ ಶಾಸಕರಾಗಿ ಕೆಲಸ ಮಾಡಿದ ಅನುಭವಿ.

1989, 1994, 1999ರ ಚುನಾವಣೆಗಳಲ್ಲಿ ಹ್ಯಾಟ್ರಿಕ್ ಸಾಧಿಸಿದ ಮುನಿಯಪ್ಪ, ಮೊದಲ ಎರಡು ಅವಧಿಗಳಲ್ಲಿ ರೇಷ್ಮೆ ಮತ್ತು ಇಂಧನ ಸಚಿವರಾಗಿ ಕೆಲಸ ಮಾಡಿದರು.

1999ರಲ್ಲಿ ಗೆದ್ದಾಗ ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಈ ಬಾರಿ ಕೂಡ ಚುನಾವಣಾ ‘ಅಖಾಡ’ದಲ್ಲಿ ತೊಡೆ ತಟ್ಟಲು ಮುನಿಯಪ್ಪ ಸಿದ್ಧರಾಗಿದ್ದಾರೆ.

ಗೆಳೆಯರ ಮನಸ್ತಾಪ, ಗದ್ದುಗೆ ಯಾರಿಗೆ?
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುವ ವಿಚಾರದಲ್ಲಿ ‘ಗಳಸ್ಯ- ಗಂಠಸ್ಯ’ ಸ್ನೇಹಿತರಾಗಿದ್ದ ಶಾಸಕ ಎಂ.ರಾಜಣ್ಣ, ಮುಖಂಡ ಮೇಲೂರು ಬಿ.ಎನ್‌. ರವಿಕುಮಾರ್‌ ನಡುವೆ ತೀವ್ರ ಪೈಪೋಟಿ ನಡೆಯಿತು. ತೆರೆಮರೆಯ ಮುಸುಕಿನ ಗುದ್ದಾಟ ತೀವ್ರ ಸ್ವರೂಪ ಪಡೆದು ಜೆಡಿಎಸ್‌ ಪಾಳೆಯದೊಳಗಿನ ‘ಬಣ’ ರಾಜಕೀಯ ಬೀದಿಗೆ ಬಂತು.

ಇದೀಗ ಇಲ್ಲಿ ರಾಜಣ್ಣ ತಮ್ಮ ಅಧಿಕೃತ ಅಭ್ಯರ್ಥಿ ಎಂದು ಜೆಡಿಎಸ್ ಘೋಷಣೆ ಮಾಡಿದೆ. ಪರಿಣಾಮ, ಕಳೆದ ಚುನಾವಣೆಯಲ್ಲಿ ಗೆಳೆಯನ ಗೆಲುವಿಗೆ ಹೆಗಲು ನೀಡಿದ್ದ ರವಿ ಇದೀಗ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಕಣಕ್ಕೆ ಇಳಿಯುವುದಾಗಿ ಹೇಳಿಕೊಂಡಿದ್ದಾರೆ.

ರಿಯಲ್ ಎಸ್ಟೆಟ್‌ ಉದ್ಯಮಿ ರವಿಕುಮಾರ್, ‘ಎಚ್‌.ಡಿ.ದೇವೇಗೌಡ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌’ ಮೂಲಕ ಕೋಟಿಗಟ್ಟಲೆ ಖರ್ಚು ಮಾಡಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಇದೀಗ ದೇವೇಗೌಡರ ಫೋಟೊ ಹಿಡಿದು ಓಟು ಕೇಳಲು ಮುಂದಾಗಿದ್ದರೆ.

ಗೆಳೆಯರಿಬ್ಬರಿಂದಾಗಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲೇ ಪಂಗಡಗಳು ಸೃಷ್ಟಿಯಾಗಿವೆ. ಈ ಒಡಕಿನ ‘ಲಾಭ’ ಪಡೆಯಲು ಮುನಿಯಪ್ಪ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಅದೃಷ್ಟ ಯಾರಿಗೆ ಒಲಿಯುತ್ತದೆ ಎಂಬುದು ಕುತೂಹಲದ ಸಂಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT