ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಿಂದ ಸುಳ್ಳು ಭರವಸೆ: ಗೊಪ್ಪೆ ಆರೋಪ

Last Updated 14 ಮಾರ್ಚ್ 2018, 8:35 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ರಾಜೀವ್ ಗಾಂಧಿ ವಸತಿ ಯೋಜನೆಯಡಿ (ರೇ) ಮಂಜೂರಾಗಿರುವ ಮನೆಗಳು ಫಲಾನುಭವಿಗಳಿಗೆ ದೊರೆಯಲು ಸಾಕಷ್ಟು ಕಾಲಾವಕಾಶ ಬೇಕಾಗಿದೆ. ಈ ಬಗ್ಗೆ ಆಶಯ ಸಮಿತಿ ಅಧ್ಯಕ್ಷರೂ ಆದ ಶಾಸಕ ತಿಪ್ಪಾರೆಡ್ಡಿ ಅವರು ಫಲಾನುಭವಿಗಳಿಗೆ ಸತ್ಯ ಹೇಳದೇ, ಚುನಾವಣೆ ಗಿಮಿಕ್‌ಗಾಗಿ ಪದೇ ಪದೇ ಸಭೆಗಳನ್ನು ನಡಸಿ, ಪ್ರಚಾರ ಪಡೆಯುತ್ತಿದ್ದಾರೆ’ ಎಂದು ನಗರಸಭೆ ಅಧ್ಯಕ್ಷ ಎಚ್.ಎನ್. ಗೊಪ್ಪೆ ಮಂಜುನಾಥ್ ಆರೋಪಿಸಿದ್ದಾರೆ.

‘ಈ ಯೋಜನೆ ಜಾರಿಗೆ ಬಂದು ಎರಡು ವರ್ಷಗಳಾಗಿವೆ. ಈ ಯೋಜನೆಯಡಿ ಜಿ+2 ಮಾದರಿಯಲ್ಲಿ 1800 ಮನೆಗಳನ್ನು ನಿರ್ಮಿಸಲು ಮೇಗಲಹಳ್ಳಿ ಬಳಿ ಸ್ಥಳ ಗುರುತಿಸಲಾಗಿದೆ. 2017ರ ಡಿಸೆಂಬರ್ 4ರಂದು ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ 6,700 ಫಲಾನುಭವಿಗಳ ಪಟ್ಟಿ ಅನುಮೋದಿಸಿ ‘ರೇ’ ನಿಗಮಕ್ಕೆ ಸಲ್ಲಿಸಲಾಗಿದೆ. ಈ ವೇಳೆಗೆ ಫಲಾನುಭವಿಗಳ ಆಯ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಶಾಸಕರು ಫಲಾನುಭವಿ­ಗಳ ಪಟ್ಟಿ ಅಂತಿಮಗೊಳಿಸದೆ, ಪದೇ ಪದೇ ಸಭೆ ಕರೆದು, ಸುಮ್ಮನೆ ಫಲಾನುಭವಿಗಳನ್ನು ಅಲೆದಾಡಿಸುತ್ತಿದ್ದಾರೆ’ ಎಂದು ದೂರಿದ್ದಾರೆ.

‘ರಾಜಕೀಯ ದುರುದ್ದೇಶದಿಂದ ಸಭೆಯನ್ನೂ ನಡೆಸಿಲ್ಲ. ಈಗ ಪ್ರಸ್ತಾವ ಸಲ್ಲಿಸಲು ಕನಿಷ್ಠ 10 ದಿನಗಳ ಕಾಲಾವಕಾಶ ಬೇಕು. ಜಿಲ್ಲಾಧಿಕಾರಿ, ರೇ ನಿಗಮದಿಂದ ಅನುಮೋದನೆ ಪಡೆಯಲು ಸಾಕಷ್ಟು ಕಾಲಾವಕಾಶ ಬೇಕು. ನಂತರ ಜಮೀನು ಲಭ್ಯತೆ ಮೇಲೆ 1800 ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ, ವಿಸ್ತೃತ ಯೋಜನಾ ವರದಿ ತಯಾರಿಸಿ ನಂತರ ನಿರ್ಮಾಣ ಸಂಸ್ಥೆ ಆಯ್ಕೆ ಮಾಡಲಾಗುತ್ತದೆ. ಇಷ್ಟೆಲ್ಲ ಪ್ರಕ್ರಿಯೆ ನಡೆಯುವ ಸಮಯದಲ್ಲಿ ಯಾರು ಶಾಸಕರಾಗಿರುತ್ತಾರೋ ಗೊತ್ತಿಲ್ಲ. ಆದರೆ, ಹಾಲಿ ಶಾಸಕರು ತಾವೇ ಫಲಾನುಭವಿಗಳನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಈ ಯೋಜನೆ ಸಾಕಾರಗೊಳ್ಳಲು ಕನಿಷ್ಠ ಎರಡು ವರ್ಷಗಳು ಬೇಕು. ಶಾಸಕರು ಈ ವಿಷಯವನ್ನು ಸಾರ್ವಜನಿಕರಿಗೆ ಏಕೆ ಹೇಳುತ್ತಿಲ್ಲ’ ಎಂದು ಪ್ರಶ್ನಿಸಿರುವ ಅವರು, ‘ಇಂಥ ಸುಳ್ಳು ಆಶ್ವಾಸನೆ ಕೊಡುವುದನ್ನು ಬಿಟ್ಟು, ನೇರವಾಗಿ ಚುನಾವಣೆ ಎದುರಿಸಲಿ’ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT