ಆನ್‌ಲೈನ್ ವ್ಯವಸ್ಥೆಗೆ ನೀತಿ ಆಯೋಗ ಪ್ರಶಂಸೆ

7
ಎಪಿಎಂಸಿಯಲ್ಲಿ ರೈತರ ಬೆಳೆ ಮಾರಾಟಕ್ಕೆ ಅವಕಾಶ: ಮುಖ್ಯಮಂತ್ರಿ ಸಿದ್ದರಾಮಯ್ಯ

ಆನ್‌ಲೈನ್ ವ್ಯವಸ್ಥೆಗೆ ನೀತಿ ಆಯೋಗ ಪ್ರಶಂಸೆ

Published:
Updated:
ಆನ್‌ಲೈನ್ ವ್ಯವಸ್ಥೆಗೆ ನೀತಿ ಆಯೋಗ ಪ್ರಶಂಸೆ

ದಾವಣಗೆರೆ: ರಾಜ್ಯದಲ್ಲಿ ರೈತರು ಬೆಳೆದ ಬೆಳೆಗೆ ಆನ್‌ಲೈನ್‌ನಲ್ಲಿ ಮಾರಾಟ ವ್ಯವಸ್ಥೆ ಕಲ್ಪಿಸಿದ್ದರಿಂದ ರೈತರ ಆದಾಯ ಶೇ 38 ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಹೈಸ್ಕೂಲ್‌ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ 162 ಎಪಿಎಂಸಿಗಳಿದ್ದು, 159ರಲ್ಲಿ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ಬಂದಿದೆ. ಈ ವ್ಯವಸ್ಥೆಯನ್ನೇ ಇಡೀ ದೇಶದಲ್ಲಿ ಆಳವಡಿಸಿಕೊಳ್ಳಲಾಗಿದೆ. ಇದರಿಂದ ರೈತರ ಆದಾಯ ಹೆಚ್ಚಾಗಿದೆ ಎಂದು ನೀತಿ ಆಯೋಗ ಪ್ರಶಂಸಿಸಿದೆ. ಇದು ಜಾರಿಗೆ ಬಂದಿದ್ದು ಶಾಮನೂರು ಶಿವಶಂಕರಪ್ಪ ಅವರ ಅಧಿಕಾರಾವಧಿಯಲ್ಲಿ. ಇದರ ಎಲ್ಲಾ ಶ್ರೇಯಸ್ಸು ಶಾಮನೂರು ಅವರಿಗೇ ಸಲ್ಲಬೇಕು ಎಂದು ಹೇಳಿದರು.

‘ಅಧಿಕಾರಕ್ಕೆ ಬಂದರೆ ನೀರಾವರಿಗೆ ₹ 1 ಲಕ್ಷ ಕೋಟಿ ಅನುದಾನ ನೀಡುತ್ತೇವೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಆದರೆ, ಅಧಿಕಾರ ಇದ್ದಾಗ ಏಕೆ ಮಾಡಲಿಲ್ಲ? ಕೊಟ್ಟ ಕುದುರೆಯನ್ನು ಏರದವನು ಶೂರನೂ ಅಲ್ಲ, ಧೀರನೂ ಅಲ್ಲ. ಪ್ರತಿ ಸಲ ಸೈಕಲ್ ಕೊಟ್ಟೆ, ಸೀರೆ ಕೊಟ್ಟೆ ಎನ್ನುತ್ತಾರೆ. ಇದನ್ನು ಬಿಟ್ಟರೆ ನಾವು ಐದಾರು ಜನ ಜೈಲಿಗೆ ಹೋಗಿದ್ದೇವೆ ಎಂದು ಹೇಳಬಹುದೇನೊ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ಅವರ ಅನ್ನಭಾಗ್ಯ ಕೇಂದ್ರ ಸರ್ಕಾರದ್ದು ಎಂದು ಬಿಜೆಪಿ ಮುಖಂಡರು ಟೀಕೆ ಮಾಡುತ್ತಾರೆ. ಆದರೆ, ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದು ಮನಮೋಹನ ಸಿಂಗ್‌ ಅವರು. ಅದನ್ನು ನರೇಂದ್ರ ಮೋದಿ ಮಾಡಿಲ್ಲ ಮಿಸ್ಟರ್‌ ಸಿದ್ದೇಶ್‌’ ಎಂದು ಮುಖ್ಯಮಂತ್ರಿ, ಜಿಲ್ಲಾ ಸಂಸದರ ಹೆಸರು ಹೇಳಿದರು.

‘ಈ ಯೋಜನೆ ಕೇಂದ್ರ ಸರ್ಕಾರದ್ದೇ ಆಗಿದ್ದರೆ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ಏಕೆ ಕೊಡುತ್ತಿಲ್ಲ. ಸುಳ್ಳು ಹೇಳುವುದಕ್ಕೆ ನಿಮಗೆ ನಾಚಿಕೆ ಆಗಬೇಕು’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮತ್ತೊಮ್ಮೆ ಬರುವೆ: ‘ಚುನಾವಣೆ ವೇಳೆಯಲ್ಲಿ ಮತ್ತೊಮ್ಮೆ ಬರುವೆ. ಕಳೆದ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ 7ರಲ್ಲಿ ಕಾಂಗ್ರೆಸ್ ಬಂದಿದ್ದು, ಈ ಬಾರಿ ಅಷ್ಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಬೇಕು. ಇದಕ್ಕಾಗಿ ನೀವು ಶ್ರಮಪಡಬೇಕು’ ಎಂದು ಮನವಿ ಮಾಡಿದರು.

ಸ್ಮಾರ್ಟ್‌ಸಿಟಿ ಅನುದಾನ ಪೈಸೆನೂ ಬಂದಿಲ್ಲ: ಸ್ಮಾರ್ಟ್‌ಸಿಟಿ ಅನುದಾನ ಒಂದು ಪೈಸೆನೂ ಬಂದಿಲ್ಲ. ದಾವಣಗೆರೆ ನಗರದ ಅಭಿವೃದ್ಧಿಗೆ ಅದರ ಅನುದಾನ ಬಳಸಿಕೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ಹೇಳಿದರು.

ರಾಜ್ಯ ಸರ್ಕಾರದಿಂದ ಈ ಐದು ವರ್ಷಗಳಲ್ಲಿ ₹ 2,500 ಕೋಟಿಗಿಂತಲೂ ಹೆಚ್ಚು ಹಣ ಬಂದಿರುವುದು ದಾವಣಗೆರೆ ಇತಿಹಾಸದಲ್ಲೇ ಪ್ರಥಮ. ಈ ಶರವೇಗದ ಹಾಗೂ ಗುಣಮಟ್ಟದ ಶಾಶ್ವತ ಕಾಮಗಾರಿಗಳ ಅಂಕಿ- ಅಂಶಗಳನ್ನು ಮನಗಂಡ ಕೇಂದ್ರ ಸರ್ಕಾರವೇ ದಾವಣಗೆರೆ ನಗರವನ್ನು ಪ್ರಥಮ ಹಂತದಲ್ಲೇ ಸ್ಮಾರ್ಟ್‌ಸಿಟಿ ಪಟ್ಟಿಯಲ್ಲಿ ಆಯ್ಕೆ ಮಾಡಿತು ಎಂಬುದು ಹೆಮ್ಮೆಪಡುವ ಸಂಗತಿ. ಆದರೆ, ಸ್ಮಾರ್ಟ್‌ಸಿಟಿಯ ನಿಯಮಾವಳಿಯ ಪ್ರಕಾರ ಯಾವುದೇ ಕಾಮಗಾರಿಯೂ ಪ್ರಾರಂಭವಾಗದೇ ಇರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ವಹಿಸಿದ್ದರು. ಸಮಾರಂಭದಲ್ಲಿ ಶಾಸಕರಾದ ಕೆ.ಶಿವಮೂರ್ತಿ, ಎಚ್‌.ಪಿ.ರಾಜೇಶ್, ವಿಧಾನ ಪರಿಷತ್ತು ಸದಸ್ಯ ಅಬ್ದುಲ್ ಜಬ್ಬಾರ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಎಚ್.ಪಿ.ಮಂಜಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಅಶ್ವಿನಿ ಪ್ರಶಾಂತ್, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್ ಇದ್ದರು.

ಸಿ.ಎಂಗೆ ‘ಟಗರು’ ಹಾಡಿನ ಸ್ವಾಗತ

ಕಾರ್ಯಕ್ರಮ ತಡವಾಗಿದ್ದಕ್ಕೆ ಜನ ಸುಗಮ ಸಂಗೀತ ಹಾಡುತ್ತಿದ್ದವರನ್ನು ನಿಲ್ಲಿಸುವಂತೆ ಒತ್ತಾಯಿಸಿದ ಪ್ರಸಂಗ ನಡೆಯಿತು. ಕಾರ್ಯಕ್ರಮ ಮಧ್ಯಾಹ್ನ 2.30ಕ್ಕೆ ಆರಂಭವಾಗಬೇಕಿತ್ತು. ಆದರೆ, 4 ಗಂಟೆಯಾದರೂ ಆರಂಭವಾಗದಿದ್ದಕ್ಕೆ ಹೋ ಎಂದು ಕೂಗಿ ಎಂದರು. ಸಂಘಟಕರು ‘ಎಣ್ಣೆ ಹಾಡು ಹಾಕೋಣವೇ’ ಎಂದು ಹೇಳಿದರೂ ಜನ ಸಮಾಧಾನಗೊಳ್ಳಲಿಲ್ಲ. ಕೊನೆಗೆ ‘ನೀನೇ ರಾಜಕುಮಾರ’ ಹಾಡು ಹಾಕಿದ ತಕ್ಷಣ ಜನ ಸ್ವಲ್ಪ ಸಮಾಧಾನಗೊಂಡರು.

ಮುಖ್ಯಮಂತ್ರಿ ವೇದಿಕೆಗೆ ನಡೆದು ಬರುತ್ತಿದ್ದಂತೆ ‘ಟಗರು’ ಚಿತ್ರದ ‘ಟಗರು, ಪೊಗರು’ ಹಾಡು ಹಾಕಲಾಯಿತು. ಅವರು ಹೊರಡುವಾಗಲೂ ಇದೇ ಹಾಡು ಪ್ರಸಾರ ಮಾಡಲಾಯಿತು. ಸರ್ಕಾರಿ ಕಾರ್ಯಕ್ರಮದಲ್ಲಿ ಈ ಹಾಡಾ ಎಂದು ಪ್ರೇಕ್ಷಕರು ಕುಳಿತಲ್ಲೇ ಗೊಣಗಿಕೊಂಡರು.

ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು

* ಕಳೆದ ಐದು ವರ್ಷಗಳಲ್ಲಿ ದಾವಣಗೆರೆ ನಗರಕ್ಕೆ ಸುಮಾರು ₹ 2 ಸಾವಿರ ಕೋಟಿ ಅನುದಾನ ಬಂದಿದೆ.

* ದಾವಣಗೆರೆಗೆ ಅನುದಾನ ಹರಿದು ಬರುವುದಕ್ಕೆ, ಅಭಿವೃದ್ಧಿ ಆಗುವುದಕ್ಕೆ, ಇಲ್ಲಿನ ಚಿತ್ರಣ ಬದಲಾವಣೆಗೆ ಶಾಮನೂರು ಶಿವಶಂಕರಪ್ಪ, ಎಸ್.ಎಸ್‌.ಮಲ್ಲಿಕಾರ್ಜುನ ಕಾರಣರು.

* ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ 250 ಇಂದಿರಾ ಕ್ಯಾಂಟೀನ್ ಸ್ಥಾಪಿಸುವುದು ಗುರಿ

* ಒಬ್ಬ ರೈತ ಪ್ರತಿ ದಿವಸ 10 ಲೀಟರ್‌ ಹಾಲು ಮಾರಿದರೆ ಅವನ ಖಾತೆಗೆ ಸರ್ಕಾರ ನೇರವಾಗಿ ₹ 50 ಹಾಕುತ್ತದೆ

* ಕೃಷಿ ಹೊಂಡಕ್ಕೆ ₹ 3 ಲಕ್ಷದವರೆಗೂ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ

* ನೀರಾವರಿಗೆ ಐದು ವರ್ಷಗಳಲ್ಲಿ ₹ 58 ಸಾವಿರ ಕೋಟಿ ಮಂಜೂರು ಮಾಡಲಾಗಿತ್ತು. ಆದರೆ, ಬಿಜೆಪಿ ಮಾಡಿದ್ದು ₹ 18 ಸಾವಿರ ಕೋಟಿ

* ಒಣ ಬೇಸಾಯ ಮಾಡುವ ರೈತರಿಗೆ ಒಂದು ಹೆಕ್ಟೇರ್‌ಗೆ ₹ 5 ಸಾವಿರದಿಂದ ₹ 10 ಸಾವಿರ ಹಣ ನೀಡಲಾಗುತ್ತದೆ. ಬಜೆಟ್‌ನಲ್ಲಿ ₹ 3,500 ಕೋಟಿ ಹಣ ಮೀಸಲಿಡಲಾಗಿದೆ. ಇದರಿಂದ 70 ಲಕ್ಷ ರೈತರಿಗೆ ಅನುಕೂಲವಾಗಲಿದೆ

* ಹೆಣ್ಣುಮಕ್ಕಳಿಗೆ ಪಿಜಿ ಕೋರ್ಸ್‌ವರೆಗೆ ಉಚಿತ ಶಿಕ್ಷಣ. ಬಸ್‌ನಲ್ಲಿ ಓಡಾಡುವವರಿಗೆ ಉಚಿತ ಪಾಸ್.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry