ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಹಪ್ಪಳ, ಸಂಡಿಗೆಯದ್ದೇ ಸಪ್ಪಳ

ತುರುವನೂರು: ಕುರುಕಲು ತಿಂಡಿ ಸಿದ್ಧತೆಯಲ್ಲಿ ತೊಡಗಿರುವ ಮಹಿಳೆಯರು
Last Updated 14 ಮಾರ್ಚ್ 2018, 8:44 IST
ಅಕ್ಷರ ಗಾತ್ರ

ತುರುವನೂರು: ಬೇಸಿಗೆಗೂ ಹಾಗೂ ಹಪ್ಪಳ, ಸಂಡಿಗೆಗೂ ಅವಿನಾಭಾವ ಸಂಬಂಧ. ಈಗ ಎಲ್ಲರ ಮನೆ ಮನೆಗಳಲ್ಲೂ ಹಪ್ಪಳ, ಸಂಡಿಗೆ, ಚಕ್ಕುಲಿ, ಮಜ್ಜಿಗೆ ಮೆಣಸಿನಕಾಯಿಯದೇ ಘಮಲು...!

ಮನೆ ಅಂಗಳದಲ್ಲಿ, ಚಾವಣಿಗಳಲ್ಲಿ ಹಾಸಿದ ತೆಳುವಾದ ಬಟ್ಟೆಯಲ್ಲಿ ಈ ತಿನಿಸುಗಳು ಹಾಯಾಗಿ ಒಣಗುತ್ತಿವೆ. ಇವೇನೂ ಒಂದೆರಡು ದಿನಕ್ಕೆಂದು ತಯಾರಾಗುತ್ತಿಲ್ಲ. ಬಹುತೇಕರು ಇಡೀ ವರ್ಷ ಬಳಸಲು ಬೇಕಾಗುವಷ್ಟು ತಿನಿಸುಗಳನ್ನು ತಯಾರಿಸಿಟ್ಟು ಕೊಳ್ಳುತ್ತಿದ್ದಾರೆ.

ಬಿಸಿಲಿನ ಬೇಗೆಗೆ ಒಣಗಿ ಗರಿಗರಿಯಾಗುವ ಇವು ವರ್ಷವಿಡೀ ಪ್ರತಿದಿನವೂ ಎಣ್ಣೆಯ ಬಾಣಲೆಯಲ್ಲಿ ತೇಲಿ ಉಬ್ಬಿ, ಮನೆ ತುಂಬಾ ಪರಿಮಳ ಬೀರುತ್ತವೆ. ಊಟದ ಜತೆ ನಂಚಿಕೆಯಾಗಿ ಬಳಸಲಾಗುವ ಈ ತಿನಿಸುಗಳು ನಾಲಿಗೆಯ ಸವಿರುಚಿಯನ್ನು ಹೆಚ್ಚಿಸುತ್ತವೆ. ಕೆಲವರು ಚಪ್ಪರಿಸಿಕೊಂಡೇ ಇವುಗಳನ್ನು ಸವಿಯಲು ಮುಂದಾಗುವುದು ಉಂಟು.

ಇವುಗಳ ತಯಾರಿಕೆಗೆ ಬೇಸಿಗೆಯೇ ಸರಿಯಾದ ಕಾಲ ಎಂಬುದು ಜನರ ಲೆಕ್ಕಾಚಾರ. ಹೀಗಾಗಿ ಅಕ್ಕಿ, ಉದ್ದು ಮತ್ತು ಗೋಧಿ ಹಿಟ್ಟಿಗೂ ಈಗ ಬೇಡಿಕೆ ಹೆಚ್ಚಾಗಿದೆ. ಹಪ್ಪಳ, ಸಂಡಿಗೆ ತಯಾರಿಸಿ ಅವುಗಳನ್ನು ಬಿರುಬಿಸಿಲಿನಲ್ಲಿ ಒಣಗಿಸುವುದು ಈಗ ಮನೆಗಳಲ್ಲಿ ನಿತ್ಯದ ಕಾಯಕವೂ ಆಗಿದೆ.

‘ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು, ನುಣ್ಣಗೆ ರುಬ್ಬಿದ ಅಕ್ಕಿಯನ್ನು ದೊಡ್ಡ ತಪ್ಪಲೆಯಲ್ಲಿ ನೀರಿನೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಪಾತ್ರೆಯಲ್ಲಿ ಬೇಯಿಸುತ್ತೇವೆ. ಗಟ್ಟಿಯಾದ ನಂತರ ತೊಳೆದು ಹಾಕಿದ ಸೀರೆಗಳ ಮೇಲೆ ಚಿಕ್ಕ ಚಿಕ್ಕದಾಗಿ ಹಾಕಿ, ಚೆನ್ನಾಗಿ ಒಣಗಿಸಿ ನಂತರ ಬಿಡಿಸಿಡುತ್ತೇವೆ’ ಎನ್ನುತ್ತಾರೆ ಬೋರಮ್ಮ.

‘ಉಪ್ಪು, ಖಾರ ಹಾಕಿದ ಹಸಿ ಮೆಣಸಿನಕಾಯನ್ನು ಮಜ್ಜಿಗೆಯಲ್ಲಿ ನೆನೆಸಿಟ್ಟ ಬಳಿಕ ಅದನ್ನು ಚೆನ್ನಾಗಿ ಒಣಗಿಸಿ, ನಂತರ ಕರಿದು ತಿಂದರೆ ಅದರ ಹದವಾದ ರುಚಿ ಹೇಳತೀರದು. ಬೇಸಿಗೆ ಕಾಲದಲ್ಲಿ ಇವುಗಳನ್ನು ಒಣಗಿಸಿದರೆ, ವರ್ಷವಿಡೀ ಅವು ಕೆಡುವುದಿಲ್ಲ. ನಿರಾತಂಕವಾಗಿ ಬಳಸಬಹುದು. ಹಾಗಾಗಿ ಮನೆಯಲ್ಲಿ ಕೆಲವು ದಿನಗಳಿಂದ ಇಡೀ ವರ್ಷಕ್ಕೆ ಆಗುವಷ್ಟು ಪದಾರ್ಥಗಳನ್ನು ತಯಾರಿಸಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಮಮತಾ.

ಪ್ರತಿ ವರ್ಷಕ್ಕೊಮ್ಮೆ ಹೀಗೆ ಆಹಾರ ಪದಾರ್ಥಗಳನ್ನು ತಯಾರಿಸಿಟ್ಟು ಕೊಳ್ಳುವ ಪದ್ಧತಿ ಪೀಳಿಗೆಗಳಿಂದ ಜಾರಿಯಲ್ಲಿದೆ. ಸುಡುವ ನೆಲದಲ್ಲಿ ಕುಳಿತು ಕೆಲಸ ಮಾಡದ ಕೆಲ ಮಹಿಳೆಯರು ರೆಡಿಮೇಡ್ (ತಯಾರಿಸಲ್ಪಟ್ಟ) ಪದಾರ್ಥಗಳನ್ನು ಖರೀದಿಸುತ್ತಾರೆ ಎನ್ನುತ್ತಾರೆ ಸಾಕಮ್ಮ.

ಸುಗ್ಗಿಕಾಲ ಮುಗಿದು ಬೇಸಿಗೆ ಕಾಲ ಆರಂಭಗೊಳ್ಳುತ್ತಿದ್ದಂತೆ ಗ್ರಾಮೀಣ ಮಹಿಳೆಯರ ಚಟುವಟಿಕೆಗಳು ಹೆಚ್ಚುತ್ತವೆ. ದೈನಂದಿನ ಬದುಕಿನೊಂದಿಗೆ ಹೆಚ್ಚುವರಿಯಾಗಿ ಅಗತ್ಯ ವಸ್ತುಗಳ ಸಿದ್ಧತೆಯಲ್ಲಿ ನಿರತರಾಗುವುದೂ ಸಾಮಾನ್ಯವಾಗಿದೆ.

ಸಾಲು ಸಾಲು ಜಾತ್ರೆಗಳಿಗೂ ಬೇಕು
ಯುಗಾದಿ ಹಬ್ಬಕ್ಕೂ ಮುನ್ನ ಹಾಗೂ ನಂತರ ಸಾಲು ಸಾಲು ಜಾತ್ರೆಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ಬಂಧುಗಳು, ನೆರೆಹೊರೆಯವರನ್ನು, ಸ್ನೇಹಿತರನ್ನು ಊಟಕ್ಕೆ ಆಹ್ವಾನಿಸುವುದು ಸಾಮಾನ್ಯ. ಅದರ ಜತೆಗೆ ನಂಚಿಕೆಗಾಗಿ ತಯಾರಿಸುವ ತಿನಿಸುಗಳು ಊಟದೆಲೆಯ ಅಲಂಕಾರವನ್ನೂ ಹೆಚ್ಚಿಸುತ್ತದೆ. ಇದನ್ನು ನೋಡಿದೊಡನೆ ಸವಿಯಲು ಕೂಡ ಸಿದ್ಧರಾಗುತ್ತಾರೆ ಎನ್ನುತ್ತಾರೆ ಗ್ರಾಮದ ಮಹಿಳೆಯರು.
-ಬೋರೇಶ ಎಂ.ಜೆ. ಬಚ್ಚಬೋರನಹಟ್ಟಿ

*
ರುಚಿ, ಶುಚಿಯಾದ ಕುರುಕಲು ತಿನಿಸುಗಳು ಎಲ್ಲರಿಗೂ ಇಷ್ಟ. ನಮ್ಮ ಮನೆಯಲ್ಲೂ ಪ್ರತಿ ವರ್ಷ ಇದನ್ನು ತಯಾರಿಸಿಟ್ಟುಕೊಳ್ಳುತ್ತೇವೆ.
– ಪಾಲಮ್ಮ, ಗೃಹಿಣಿ


-ಹುಣಸೆಹಣ್ಣಿನ ತೊಕ್ಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT