‘ತಾಲ್ಲೂಕು ಸಮಗ್ರ ಅಭಿವೃದ್ಧಿ ಯೋಜನೆ’

7
ಎಚ್‌ಕೆಆರ್‌ಡಿಬಿ ಅಧ್ಯಕ್ಷರಾಗಿ ಸಚಿವ ರಾಯರಡ್ಡಿ ಅಧಿಕಾರ ಸ್ವೀಕಾರ

‘ತಾಲ್ಲೂಕು ಸಮಗ್ರ ಅಭಿವೃದ್ಧಿ ಯೋಜನೆ’

Published:
Updated:
‘ತಾಲ್ಲೂಕು ಸಮಗ್ರ ಅಭಿವೃದ್ಧಿ ಯೋಜನೆ’

ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕದ ತಾಲ್ಲೂಕುಗಳಲ್ಲಿ ಮುಂದಿನ 10 ವರ್ಷಗಳಲ್ಲಿ ಕೈಗೊಳ್ಳ ಬಹುದಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮಗ್ರ ಯೋಜನೆ ಸಿದ್ಧಪಡಿಸಲಾಗುವುದು. ಅದಕ್ಕೆ ಸಮಿತಿಯೊಂದನ್ನು ರಚಿಸಲಾಗುವುದು’ ಎಂದು ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಅಧ್ಯಕ್ಷ, ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಮಂಗಳವಾರ ಎಚ್‌ಕೆಆರ್‌ಡಿಬಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದರು.

‘ಶಿಕ್ಷಣ, ಆರೋಗ್ಯ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತಿತರ ಅಂಶಗಳನ್ನು ಈ ಯೋಜನೆ ಒಳಗೊಳ್ಳಲಿದೆ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಮಂಡಳಿಯಿಂದ ಎಷ್ಟು ಹಣ ವಿನಿಯೋಗಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು’ ಎಂದರು.

ಸಂಕೇಶ್ವರ ಬಂದರೆ ಸ್ವಾಗತ: ‘ಉದ್ಯಮಿ ವಿಜಯ ಸಂಕೇಶ್ವರ ಕಾಂಗ್ರೆಸ್‌ಗೆ ಬರುವುದಾದರೆ ನಾನು ಸ್ವಾಗತಿಸುವೆ. ಆದರೆ, ಅವರನ್ನು ಸೇರಿಸಿಕೊಳ್ಳುವುದು–ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ’ ಎಂದು ಹೇಳಿದರು.

‘ಸಂಕೇಶ್ವರ ಅವರು ಪತ್ರಿಕೆ ಸೇರಿದಂತೆ ಹಲವು ರಂಗದಲ್ಲಿ ತೊಡಗಿಸಿಕೊಂಡಿರುವ ಗಣ್ಯರು. ಬಿಜೆಪಿ ಯಲ್ಲಿ ಈಗ ವ್ಯಾಪಾರಿ ಮನೋಭಾವ ಹೆಚ್ಚಾಗಿದೆ. ರಾಜೀವ್‌ ಚಂದ್ರಶೇಖರ್‌ ಅವರು ಹಿಂದೆ ಜೆಡಿಎಸ್‌ನೊಂದಿಗೆ ವ್ಯಾಪಾರ ಕುದುರಿಸಿ ಕೊಂಡಿದ್ದರು. ಈಗ ಬಿಜೆಪಿಯೊಂದಿಗೆ ಕುದುರಿಸಿ ಕೊಂಡಿದ್ದಾರೆ’ ಎಂದು ಹೇಳಿದರು.

ಅರ್ಧಗಂಟೆ ಮೊದಲೇ ಅಧಿಕಾರ ಸ್ವೀಕಾರ: ರಾಯರಡ್ಡಿ ಅವರ ಅಧಿಕಾರ ಸ್ವೀಕಾರ ಸಮಾರಂಭ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಆದರೆ, ಅವರು 10.30ಕ್ಕೇ ಅಧಿಕಾರ ಸ್ವೀಕರಿಸಿದರು.

‘ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಗೊಂದಲಕ್ಕೆ ಅವಕಾಶ ನೀಡುವುದು ಬೇಡ ಎಂಬ ಕಾರಣಕ್ಕೆ ಅರ್ಧಗಂಟೆ ಮೊದಲೇ ಅಧಿಕಾರ ಸ್ವೀಕರಿಸಿದ್ದೇನೆ’ ಎಂದು ಹೇಳಿದರು.

ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕರಾದ ಬಿ.ಆರ್‌. ಪಾಟೀಲ, ಡಾ.ಉಮೇಶ ಜಾಧವ, ಮಂಡಳಿಯ ಕಾರ್ಯದರ್ಶಿ ಹರ್ಷ ಗುಪ್ತ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry