ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇವಾಲಾಲರ ಸಂದೇಶ ಸಾರ್ವಕಾಲಿಕ’

ಸಂತ ಸೇವಾಲಾಲರ 279ನೇ ಜಯಂತ್ಯುತ್ಸವ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
Last Updated 14 ಮಾರ್ಚ್ 2018, 9:07 IST
ಅಕ್ಷರ ಗಾತ್ರ

ಸಿಂಧನೂರು: ‘ಸಂತ ಸೇವಾಲಾಲ ಮಹಾರಾಜರ ಆಚಾರ, ವಿಚಾರಗಳು ಕೇವಲ ಬಂಜಾರ ಸಮುದಾಯಕ್ಕೆ ಸೀಮಿತವಾಗಿರದೆ ಮನುಕುಲದ ಉದ್ಧಾರದ ಸದಾಶಯ ಒಳಗೊಂಡಿದೆ. ವಿಶಾಲ ಮನೋಭಾವದಿಂದ ಕೂಡಿದ ಸೇವಾಲಾಲ ಮಹಾರಾಜರ ಸಂದೇಶ ಸಾರ್ವಕಾಲಿಕ’ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅಭಿಪ್ರಾಯಪಟ್ಟರು.

ಸ್ಥಳೀಯ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಬಂಜಾರ ಸೇವಾ ಸಂಘ ಹಾಗೂ ಅಖಿಲ ಭಾರತ ಸೇವಾ ಸಂಘ ತಾಲ್ಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಮಹಾರಾಜರ 279ನೇ ಜಯಂತ್ಯುತ್ಸವ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಂಜಾರ ಸಮಾಜಕ್ಕೆ ಇತಿ ಹಾಸ ಬರೆದವರು ಸೇವಾಲಾಲ ಮಹಾ ರಾಜರು. ಬಂಜಾರ ಸಮುದಾಯ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಅತ್ಯಂತ ಶ್ರೀಮಂತವಾಗಿದೆ. ಶ್ರಮಿಕ ಸಮಾಜ ಎನಿಸಿದ ಬಂಜಾರರು ಭೂಮಿಯನ್ನು ತಾಯಿಯೆಂದು, ನಿಸರ್ಗವನ್ನು ದೇವರೆಂದು ಆರಾಧಿಸುವುದು ವಿಶೇಷ. ಈ ನಿಟ್ಟಿನಲ್ಲಿ ಆಧುನಿಕತೆಯ ನಡುವೆಯೂ ನಮ್ಮತನ ಕಳೆದುಕೊಳ್ಳದೇ ಸಮಾಜದ ಹಿರಿಮೆ ಎತ್ತಿ ಹಿಡಿಯಬೇಕಿದೆ’ ಎಂದು ಹೇಳಿದರು.

ಜೆಡಿಎಸ್ ವಕ್ತಾರ ನಾಡಗೌಡ ಮಾತನಾಡಿ, ‘ಬಂಜಾರ ಸಮುದಾಯದ ಧರ್ಮಗುರು ಸೇವಾಲಾಲ ಮಹಾರಾಜರ ತತ್ವಾದರ್ಶ ಇಂದಿಗೂ ಸಮಾಜಕ್ಕೆ ದಾರಿದೀಪ. ಬಂಜಾರ ಸಮಾಜದ ಜನರು ಸಂಘಟಿತರಾಗುವ ಮೂಲಕ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಬೇಕು. 7 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಬಂಜಾರ ಸಮಾಜದ ಜನರು ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದರು.

ಗಬ್ಬೂರವಾಡಿ ಶಾಖಾಮಠದ ಬಳಿಗಾರ ಮಹಾರಾಜರು, ನೀಲಾನಗರ ಬಂಜಾರ ಶಕ್ತಿಪೀಠದ ಕುಮಾರ ಮಹಾರಾಜರು ಸಾನಿಧ್ಯ ವಹಿಸಿದ್ದರು. ಕೆಪಿಸಿಸಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಕರಿಯಪ್ಪ, ಕನಕ ಯುವಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಶ ಬಾಗೋಡಿ, ಬಂಜಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಗೌರವಾಧ್ಯಕ್ಷ ಕೃಷ್ಣಪ್ಪ ಚವ್ಹಾಣ್, ಅಧ್ಯಕ್ಷ ಚಂದಪ್ಪ ಚವ್ಹಾಣ್, ಕೃಷ್ಣಪ್ಪ ರಾಠೋಡ್, ಪ್ರಧಾನ ಕಾರ್ಯದರ್ಶಿ ರವಿ ರಾಠೋಡ್, ಮುಖಂಡರಾದ ಮೂರ್ತಿ ನಾಯಕ, ಈಶಪ್ಪ ಜಾದವ್, ಅಮರೇಶ, ರಾಜು ಚವ್ಹಾಣ್ ಇದ್ದರು. ಗೀತಾ ನಿರೂಪಿಸಿದರು. ಬಂಜಾರ ಸಮಾಜದ ಪ್ರತಿಭಾವಂತ ವಿದ್ಯಾಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಭವ್ಯ ಮೆರವಣಿಗೆ: ಇದಕ್ಕೂ ಮುನ್ನ ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಆರಂಭಗೊಂಡ ಸಂತ ಸೇವಾಲಾಲ ಮಹಾರಾಜರ ಭಾವಚಿತ್ರವನ್ನು ಮೆರವಣಿಗೆಯು ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ಮಹಾತ್ಮಗಾಂಧಿ ವೃತ್ತ, ಕನಕದಾಸ ವೃತ್ತ, ರಾಣಿಚೆನ್ನಮ್ಮ ವೃತ್ತದ ಮೂಲಕ ಕೋಟೆ ಈರಣ್ಣ ಕಲ್ಯಾಣ ಮಂಟಪ ತಲುಪಿತು. ಮೆರವಣಿಗೆಯುದ್ಧಕ್ಕೂ ಸುಮಂಗಲೆಯರು ಕುಂಭ-ಕಳಸ ಹಿಡಿದಿದ್ದರು. ಮಹಿಳೆಯರ ಲಂಬಾಣಿ ನೃತ್ಯ ಆಕರ್ಷಕವಾಗಿತ್ತು.

*
ಸಂತ ಸೇವಾಲಾಲ್ ಅವರು ಸಮಾಜ ಸುಧಾರಣೆಗಾಗಿ ಅನೇಕ ಜನಪರ ಕಾರ್ಯ ಮಾಡಿದ್ದಾರೆ. ಸಮಾಜದ ಕೆಲ ವರ್ಗದವರ ವಿರೋಧ ಕಟ್ಟಿಕೊಂಡು ಹಿಂದುಳಿದ ಜನರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
–ಕೆ.ವಿರೂಪಾಕ್ಷಪ್ಪ, ಮಾಜಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT