ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೀರ ಮಹಿಳೆಯರ ಆದರ್ಶ ಅನುಕರಣೀಯ’

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
Last Updated 14 ಮಾರ್ಚ್ 2018, 9:29 IST
ಅಕ್ಷರ ಗಾತ್ರ

ಯಾದಗಿರಿ: ‘ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಅವರಂತಹ ವೀರ ಮಹಿಳೆಯರ ಆದರ್ಶವನ್ನು ಮಹಿಳೆಯರು ಮೈಗೂಡಿಸಿಕೊಳ್ಳಬೇಕು’ ಎಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ನಿರ್ಮಲಾ ಸಿನ್ನೂರು ತಿಳಿಸಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚರಿತ್ರೆಯಲ್ಲಿ ದೇಶಕ್ಕಾಗಿ ಹೋರಾಡಿದ ಧೀರ ಮಹಿಳೆಯರ ಹೋರಾಟ, ಚಿಂತನೆ, ಜನಪರ ಕಾಳಜಿ, ನಾಡಿನ ಮೇಲಿನ ಪ್ರೀತಿ ಮೆಚ್ಚುವಂತಹದ್ದು. ಅಲ್ಲದೇ ಬ್ರಿಟಿಷರ ಜನ ವಿರೋಧಿ ನಿಲುಗಳ ವಿರುದ್ಧ ಹೋರಾಡಿ ಪ್ರಾಣ ತ್ಯಜಿಸುವ ಮೂಲಕ ಹುತಾತ್ಮರಾದರು. ಇಂದು ಅವರ ಸಾಹಸ, ಧೈರ್ಯ ಶಾಶ್ವತವಾಗಿ ಜನಮಾನಸಲ್ಲಿ ಉಳಿದಿದೆ. ಅಂತಹ ಶಾಶ್ವತ ಸಾಧನೆ, ಸಾಹಸವನ್ನು ಮಹಿಳೆಯರು ಸಾಧಿಸಬೇಕು’ ಎಂದರು.

‘ಮಹಿಳೆಯರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಸಮಗ್ರ ಸಮಾಜದ ಅಭಿವೃದ್ಧಿ ಸಾಧ್ಯ. ಭಾರತ ದೇಶದಲ್ಲಿ ಮಹಿಳೆಯರಿಗೆ ಇರುವ ಗೌರವ ಜಗತ್ತಿನ ಬೇರೆ ಯಾವುದೇ ದೇಶದಲ್ಲಿ ಇಲ್ಲ. ಆದರೂ, ದೇಶದಲ್ಲಿ ಕೆಲ ದುಷ್ಕರ್ಮಿಗಳು ಮಹಿಳೆಯರ ಮೇಲೆ ನಡೆಸುತ್ತಿರುವ ಕೃತ್ಯಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತಿವೆ’ ಎಂದು ವಿಷಾದಿಸಿದರು.

‘ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಪುರುಷರಷ್ಟೇ ಸಮಾನ ಅವಕಾಶ ಇದೆ. ಕುಟುಂಬ, ಸಮಾಜ, ಸರ್ಕಾರಗಳು ಮಹಿಳೆಯರ ಸಾಧನೆಗೆ, ಅವರ ಅಭಿವೃದ್ಧಿ ಪ್ರಗತಿಗೆ ವೇದಿಕೆ ಒದಗಿಸಿಕೊಬೇಕು. ಮಹಿಳೆಯರು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದರು.

ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕಿ ಕೆ. ನಾಗೇಶ್ವರಿ ಮಾತನಾಡಿ, ‘ಮಹಿಳೆಯರಿಗೆ ಆರ್ಥಿಕ, ರಾಜಕೀಯ, ಸಾಮಾಜಿಕ, ಔದ್ಯೋಗಿಕ ಸೇವಾ ಕ್ಷೇತ್ರಗಳಲ್ಲೂ ಅವಕಾಶ ಒದಗಿಸಬೇಕು. ವಿದ್ಯಾರ್ಥಿನಿಯರು ಇಂದಿನ ಕಾಲಘಟಕ್ಕೆ ಅನುಗುಣವಾಗಿ ತಮ್ಮನ್ನು ತಾವೇ ರೂಪಿಸಿಕೊಂಡು ಸಬಲೀಕರಣಗೊಂಡು ಉತ್ತಮ ಸಮಾಜ ಕಟ್ಟಲು ಪ್ರಯತ್ನಿಸಬೇಕು’ ಎಂದರು.

ಕಾಲೇಜು ಪ್ರಾಂಶುಪಾಲ ಡಾ.ದೊಡ್ಡಮನಿ ಶ್ರೀನಿವಾಸರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಅನಸೂಯಾ ಪಾಟೀಲ, ಹರೀಶ ರಾಠೋಡ, ವಿದ್ಯಾಸಾಗರ ಹೂಗಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT