ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣ ರಸ್ತೆ ನಿರ್ಲಕ್ಷ್ಯ

ಪಕ್ಕಾ ಚರಂಡಿ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ
Last Updated 14 ಮಾರ್ಚ್ 2018, 9:36 IST
ಅಕ್ಷರ ಗಾತ್ರ

ಸಿದ್ದಾಪುರ: ‘ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಗಳಿಗೆ ಅನುದಾನ ಬಂದಿದೆ. ಆದರೆ ಗ್ರಾಮೀಣ ರಸ್ತೆ ಸುಧಾರಣೆಗೆ ಅನುದಾನ ಇಲ್ಲವಾಗಿದೆ’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ರವೀಂದ್ರನಗರದಲ್ಲಿ ಮಂಗಳವಾರ ಪಕ್ಕಾ ಚರಂಡಿ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

‘ಈ ಸರ್ಕಾರದಲ್ಲಿ ಗ್ರಾಮೀಣ ರಸ್ತೆಗಳ ನಿರ್ಲಕ್ಷ್ಯ ಮುಂದುವರಿದಿದೆ. ಪಂಚಾಯತ್‌ರಾಜ್‌ ಇಲಾಖೆಯಿಂದ ಹಣ ಬರುತ್ತಿಲ್ಲ. ಈ ವಿಷಯವನ್ನು ಅಧಿವೇಶನದಲ್ಲಿ ಚರ್ಚೆ ಮಾಡಲಾಗಿದೆ. ಶಿರಸಿಗೆ ಮುಖ್ಯಮಂತ್ರಿಗಳು ಬಂದ ಸಂದರ್ಭದಲ್ಲಿ ಅವರಿಗೂ ತಿಳಿಸಿದ್ದೇನೆ. ಅವರೂ ಗ್ರಾಮೀಣ ರಸ್ತೆಗಳಿಗೆ ಅನುದಾನ ಇಲ್ಲವಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ’ ಎಂದರು.

‘ಲೋಕೋಪಯೋಗಿ ಇಲಾಖೆಯಿಂದ ತಾಲ್ಲೂಕಿನಲ್ಲಿ ರಾಜ್ಯ ಹೆದ್ದಾರಿಗೆ ₹7 ಕೋಟಿ, ಜಿಲ್ಲಾ ಮುಖ್ಯ ರಸ್ತೆಗೆ ₹5.25 ಕೋಟಿ ಅನುದಾನ ಬಂದಿದೆ. ರವೀಂದ್ರ ನಗರದ ಕೋರ್ಟ್ ಹಿಂಭಾಗದ ರಸ್ತೆ ಅಭಿವೃದ್ಧಿಗೆ ಎಸ್‌ಸಿ ನಿಧಿಯಿಂದ ₹15 ಲಕ್ಷ ಹಾಗೂ ಸೊರಬ ರಸ್ತೆಯ ಸಾಯಿನಗರ ಎಸ್‌ಟಿ ಕಾಲೋನಿ ರಸ್ತೆಗೆ ಎಸ್‌ಟಿ ₹3.48 ಲಕ್ಷ ಅನುದಾನ ಬಂದಿದೆ’ ಎಂದರು.

‘ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಗೆ ₹19 ಕೋಟಿ ಮಂಜೂರಾಗಿದ್ದು, ಅದರಲ್ಲಿ ₹12 ಕೋಟಿ ಅನುದಾನ ಬಂದಿದೆ. ಇದರಲ್ಲಿ ಕೆಲವೊಂದು ಗೊಂದಲ ಉಂಟಾಗಿದ್ದು, ಕೆಲವರಿಗೆ ಅರ್ಧ ಪರಿಹಾರ ಬಂದಿದೆ. ನಾನು ಅಧಿವೇಶನದಲ್ಲಿ ಈ ಬಗ್ಗೆ ಆಗ್ರಹ ಮಾಡಿದ ನಂತರ ₹3.50 ಕೋಟಿ ಹಣ ಹೆಚ್ಚುವರಿಯಾಗಿ ಬಂದಿದೆ. ಜಿಲ್ಲೆಯ ಯಾವುದೇ ರೈತರಿಗೆ ಪೂರ್ಣ ಹಣ ಬಾರದಿದ್ದರೆ, ನನ್ನ ಶಿರಸಿ ಕಚೇರಿ ಸಂಪರ್ಕ ಮಾಡಬೇಕು. ನಾವು ಅವರ ಮಾಹಿತಿಯನ್ನು ಅಪ್‌ ಲೋಡ್ ಮಾಡುತ್ತೇವೆ’ ಎಂದರು.

ತಾಳಗುಪ್ಪ ರೈಲು: ‘ತಾಳಗುಪ್ಪ–ಸಿದ್ದಾಪುರ ರೈಲು ಮಾರ್ಗ ರದ್ದಾಗಿಲ್ಲ. ಆ ಮಾರ್ಗದ ಸಮೀಕ್ಷೆ ಮಾಡಿದ್ದಾರೆ. ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ. ಚುನಾವಣೆ ಘೋಷಣೆ ಆಗುವ ಮೊದಲು ಕಾಮಗಾರಿಗೆ ಭೂಮಿ ಪೂಜೆ ಮಾಡುವ ಉದ್ದೇಶವಿದೆ’ ಎಂದರು.

‘ಪಟ್ಟಣ ಪಂಚಾಯ್ತಿಯ ನೀರಿನ ಪೂರೈಕೆ ಸರಿಯಾಗಿಲ್ಲ, 5 ದಿನಗಳಿಗೊಮ್ಮೆ ನೀರು ಕೊಡುತ್ತಾರೆ’ ಎಂದು ಸ್ಥಳೀಯ ಮಹಿಳೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುಮನಾ ಕಾಮತ್, ಸದಸ್ಯರಾದ ಕೆ.ಜಿ.ನಾಯ್ಕ,ಗುರುರಾಜ ಶಾನಭಾಗ, ಮಾರುತಿ ನಾಯ್ಕ, ಸುರೇಶ ನಾಯ್ಕ ಇದ್ದಾರೆ.

ಬಿಜೆಪಿ ಅಭ್ಯರ್ಥಿ: ಗೊಂದಲ ಇಲ್ಲ
‘ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಷಯದಲ್ಲಿ ಗೊಂದಲ ಇಲ್ಲ’ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದರು.

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅಭ್ಯರ್ಥಿಗಳಿಗೆ ಸಂಬಂಧಿಸಿ ಸಮೀಕ್ಷೆ ಕಾರ್ಯ ಮಾಡುತ್ತಿದ್ದಾರೆ. ಈ ವಿಷಯವನ್ನು ರಾಜ್ಯ ಘಟಕದ ಅಧ್ಯಕ್ಷರು ಹೇಳಿದ್ದಾರೆ. ಅಭ್ಯರ್ಥಿಯಾಗುವ ನನ್ನ ಬಯಕೆ ಅಥವಾ ಅಪೇಕ್ಷೆ ವ್ಯಕ್ತಪಡಿಸುವ ಅವಕಾಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆ. ನಾನು ಐದು ಬಾರಿ ಗೆದ್ದವನು. ಆದ್ದರಿಂದ ಈ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದು ವಿಷಯವೇ ಅಲ್ಲ. ಒಂದು ವೇಳೆ ನಾನೇ ಅಭ್ಯರ್ಥಿ ಎಂದರೂ ಅದನ್ನು ಘೋಷಣೆ ಮಾಡುವ ಅಧಿಕಾರ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯ ಅಧ್ಯಕ್ಷರಿಗೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT