ರಾಜಕೀಯ ಕ್ಷೇತ್ರದಲ್ಲಿ ಅನ್ಯಾಯ; ವಿಷಾದ

7
ವೀರಶೈವ– ಲಿಂಗಾಯತ ಹಿತರಕ್ಷಣಾ ವೇದಿಕೆಯಲ್ಲಿ ಚರ್ಚೆ

ರಾಜಕೀಯ ಕ್ಷೇತ್ರದಲ್ಲಿ ಅನ್ಯಾಯ; ವಿಷಾದ

Published:
Updated:
ರಾಜಕೀಯ ಕ್ಷೇತ್ರದಲ್ಲಿ ಅನ್ಯಾಯ; ವಿಷಾದ

ಮೈಸೂರು: ಮೈಸೂರು ಭಾಗದಲ್ಲಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಮತದಾರರ ಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ ಎಂದು ವೀರಶೈವ ಲಿಂಗಾಯತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿ.ಪಿ.ತಮ್ಮಣ್ಣ ವಿಷಾದ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತ ಹಿತರಕ್ಷಣಾ ವೇದಿಕೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮುದಾಯದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

‘ಮೈಸೂರು ಭಾಗದ 8 ಜಿಲ್ಲೆಗಳಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಮೈಸೂರಿನಲ್ಲಿ 3.5 ಲಕ್ಷ, ಚಾಮರಾಜನಗರದಲ್ಲಿ 2.1 ಲಕ್ಷ, ಮಂಡ್ಯ ಜಿಲ್ಲೆಯಲ್ಲಿ 1.6 ಲಕ್ಷ, ಹಾಸನದಲ್ಲಿ 2.3 ಲಕ್ಷ, ಚಿಕ್ಕಮಗಳೂರಿನಲ್ಲಿ 2 ಲಕ್ಷ, ಕೊಡಗಿನಲ್ಲಿ 50 ಸಾವಿರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 60 ಸಾವಿರ ಮತದಾರರಿದ್ದಾರೆ. ಇಷ್ಟು ಸಂಖ್ಯೆ ಇದ್ದರೂ ನಾವು ಟಿಕೆಟ್‌ ಕೊಡಿ ಎಂದು ಅಂಗಲಾಚಬೇಕಾಗಿದೆ’ ಎಂದು ಕಿಡಿಕಾರಿದರು.

ಸಮಾಜದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಬೇಕು ಎನ್ನುವುದು ವೀರಶೈವ– ಲಿಂಗಾಯತ ಮತದ ಆಶಯ. ಎಲ್ಲ ಮಠಗಳು, ಹಿರಿಯರು ಇದನ್ನೇ ಪ್ರತಿಪಾದಿಸುತ್ತಾರೆ. ಈ ನಿಟ್ಟಿನಲ್ಲಿ ಸಮುದಾಯಕ್ಕೆ ಬಲ ಬೇಕು ಎಂದಾದರೆ, ಉಳ್ಳ ಸಮುದಾಯದವರು ಇಲ್ಲದವರಿಗೆ ಸಹಾಯ ಮಾಡಬೇಕು. ಆರ್ಥಿಕವಾಗಿ ಸಮುದಾಯವನ್ನು ಬಲಪಡಿಸಬೇಕು. ಇದಕ್ಕೆ ರಾಜಕೀಯ ಬಲ ಸಿಕ್ಕಲ್ಲಿ ಸಾಕಷ್ಟು ಒಳಿತಾಗುವುದು ಎಂದರು.

‘ಸಮುದಾಯದ ಪ್ರೀತಿ ಗಳಿಸಿರುವ, ನಾಯಕತ್ವದ ಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ಬೆಂಬಲಿಸಲು ವೇದಿಕೆ ನಿರ್ಧರಿಸಿದೆ. ಇದನ್ನು ಎಲ್ಲ ರಾಜಕೀಯ ಪಕ್ಷಗಳ ಗಮನಕ್ಕೆ ತರಲು ನಾವು ಮುಂದಾಗಿದ್ದೇವೆ’ ಎಂದು ತಿಳಿಸಿದರು.

ವೇದಿಕೆಯ ಗೌರವ ಅಧ್ಯಕ್ಷರಾದ ಎಚ್.ಸಿ.ಬಸವರಾಜು, ಸಿದ್ದಪ್ಪ, ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ, ಕಾರ್ಯದರ್ಶಿ ಸಿ.ಎಂ.ಪ್ರಕಾಶ, ಮೈಸೂರು ಗ್ರಾಮಾಂತರ ಅಧ್ಯಕ್ಷ ಶಂಕರಪ್ಪ, ಜಿಲ್ಲಾಧ್ಯಕ್ಷ ರಾಜಣ್ಣ ಹಾಗೂ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry