ಹಬ್ಬವೆಂದರೆ ಲಡ್ಡು, ಒಬ್ಬಟ್ಟು, ಹೊಸ ಬಟ್ಟೆ...

7

ಹಬ್ಬವೆಂದರೆ ಲಡ್ಡು, ಒಬ್ಬಟ್ಟು, ಹೊಸ ಬಟ್ಟೆ...

Published:
Updated:
ಹಬ್ಬವೆಂದರೆ ಲಡ್ಡು, ಒಬ್ಬಟ್ಟು, ಹೊಸ ಬಟ್ಟೆ...

ಹಬ್ಬದ ಆಚರಣೆ, ಸಂಪ್ರದಾಯ ಏನೇ ಇದ್ದರೂ ಮಕ್ಕಳ ಪಾಲಿಗೆ ಸಂಭ್ರಮ ಮತ್ತು ಸಡಗರಕ್ಕೆ ಅದೊಂದು ನೆಪ ಅಷ್ಟೇ. ‘ನಿಮ್ಮ ಪ್ರಕಾರ ಹಬ್ಬವೆಂದರೇನು?’ ಎಂಬ ಪ್ರಶ್ನೆಯನ್ನು ಮಕ್ಕಳ ಮುಂದಿಟ್ಟರೆ ಸಿಗುವ ಉತ್ತರಗಳಲ್ಲೂ ಸಡಗರವಷ್ಟೇ ತುಂಬಿರುತ್ತದೆ. ‘ಹಬ್ಬಕ್ಕೆ ಉಳಿದರೋದು ಮೂರೇ ದಿನ, ಆಗಬೇಕಾದ ಕೆಲಸ ಎಷ್ಟೊಂದು ಇದೆ’ ಎಂದು ಅಪ್ಪ ಅಮ್ಮನ ಒದ್ದಾಡುತ್ತಿದ್ದರೆ, ಹಬ್ಬದ ದಿನ ಹೇಗೆ ಕಳೆಯಬೇಕು ಎಂಬ ಲೆಕ್ಕಾಚಾರದಲ್ಲಿ ಮಕ್ಕಳು ತೊಡಗಿರುತ್ತಾರೆ! ಮಗು ಮನಸ್ಸು, ಮಕ್ಕಳಾಟದ ವಯಸ್ಸು ಹಾಗೇ...

ಮತ್ತೀಕೆರೆಯ ಆನಿಮ್‌ ಹಿಮಾನಿ, ಜಾಲಹಳ್ಳಿಯ ಆರ್ಕಿಡ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಐದನೇ ತರಗತಿ ವಿದ್ಯಾರ್ಥಿನಿ. ಮತ್ತೀಕೆರೆಯ ತಮ್ಮ ಮನೆಯಲ್ಲಿ ಯುಗಾದಿ ದಿನ ಮಾವಿನ ಸೊಪ್ಪುಗಳಿಂದ ತೋರಣ ಕಟ್ಟುವುದು ಅವಳಿಗೆ ತುಂಬಾ ಇಷ್ಟದ ಕೆಲಸವಂತೆ. ಅವಳಿಷ್ಟದ ಲಡ್ಡು ಮತ್ತು ಹೋಳಿಗೆ ಮನೆಯಲ್ಲೇ ಮಾಡ್ತಾರಂತೆ!

‘ಹಬ್ಬದ ದಿನ ನನ್ನ ಅಮ್ಮ ಮತ್ತು ಚಿಕ್ಕಮ್ಮ ತುಂಬಾ ಚೆನ್ನಾಗಿ ಅಡುಗೆ ಮಾಡ್ತಾರೆ, ನಂಗಿಷ್ಟದ ಪಾಯಸ ಮಾಡ್ತಾರೆ. ಯುಗಾದಿ, ವರ್ಷದ ಮೊದಲ ಹಬ್ಬ ಅಲ್ವಾ ಅದಕ್ಕೆ ತುಂಬಾ ಖುಷಿಯಾಗಿ ಈ ಹಬ್ಬವನ್ನು ಮಾಡ್ತೀವಿ. ಯಾಕೆಂದರೆ ಯುಗಾದಿ ಹಬ್ಬವನ್ನು ಹೇಗೆ ಮಾಡ್ತೀವೋ ಅಷ್ಟೇ ಖುಷಿಯಾಗಿ ವರ್ಷವಿಡೀ ಇರ್ತೀವಂತೆ. ಮತ್ತೆ, ನಂಗೆ ಹೊಸ ಬಟ್ಟೆ ಕೊಡಿಸ್ತಾರೆ. ಫ್ರೆಂಡ್ಸ್‌ ಮನೆಗೆ ಹೋಗ್ತೀನಿ... ಹೀಗೆ ಯುಗಾದಿಗಾಗಿ ನಾನು ಕಾಯ್ತಾ ಇದ್ದೀನಿ’ ಎಂದು ಅರಳು ಹುರಿದಂತೆ ಹೇಳಿದಳು ಹಿಮಾನಿ.

ಸಂಜಯನಗರದ ಡಿಫೊಡಿಲ್ಸ್‌ ಇಂಗ್ಲಿಷ್‌ ಸ್ಕೂಲ್‌ನಲ್ಲಿ ಯುಕೆಜಿ ಓದುತ್ತಿರುವ ಸುಪ್ರಭಮ್‌ ರೈಗೆ ಹಬ್ಬವೆಂದರೆ ಸಿಹಿತಿಂಡಿ ಅಂತೆ! ಅಮ್ಮ (ನಟಿ) ಭವ್ಯಶ್ರೀ ರೈ ಅವತ್ತು ಶೂಟಿಂಗ್‌ಗೆ ಹೋಗದೆ ಮನೆಯಲ್ಲೇ ತನ್ನಿಷ್ಟದ ಅಡುಗೆ ಮಾಡಿಕೊಡ್ತಾರೆ ಅನ್ನೋದು ಇನ್ನೊಂದು ಖುಷಿ ಅಂತೆ!

‘ನಾನು ಗ್ಯಾನ್ ಶೆಟ್ಟಿ. ನಮ್ಮ ಮನೆ ಮಲ್ಲತ್ತಹಳ್ಳಿಯಲ್ಲಿ. ನಾನು ವಿಜಯನಗರದ ಆರ್.ಎನ್.ಎಸ್. ವಿದ್ಯಾನಿಕೇತನ್‌ನಲ್ಲಿ ಎಲ್‌.ಕೆ.ಜಿ. ಓದ್ತಿದ್ದೀನಿ. ಯುಗಾದಿ ಹಬ್ಬವೆಂದರೆ ಹೊಸ ಬಟ್ಟೆ ಮತ್ತು ಸಿಹಿತಿನಿಸು ನೆನಪಾಗುತ್ತದೆ. ಒಂದು ದಿನ ರಜೆ ಸಿಗುತ್ತದೆ ಅಂತಲ್ಲ. ಹಬ್ಬದ ದಿನ ಪಪ್ಪ, ಅಮ್ಮ, ನನ್ನ ಸಹೋದರನೊಂದಿಗೆ ಒಟ್ಟಾಗಿ ಊಟ ಮಾಡುವುದೂ ಖುಷಿಯಾಗುತ್ತದೆ. ವರ್ಷದ ಮೊದಲ ಹಬ್ಬವಾದ್ದರಿಂದ ಯುಗಾದಿ ಎಂದರೆ ನಮ್ಮ ಮನೆಯಲ್ಲಿ ವಿಶೇಷ ಸಂಭ್ರಮವಿರುತ್ತದೆ.

‘ನಾನೂ ಆರ್.ಎನ್.ಎಸ್. ವಿದ್ಯಾನಿಕೇತನ್‌ನಲ್ಲಿ ಯು.ಕೆ.ಜಿ. ಓದುತ್ತಿದ್ದೇನೆ. ನನ್ನ ಹೆಸರು ದಿಶಾ ಇ.ಶೆಟ್ಟಿ ಅಂತ. ಯುಗಾದಿ ದಿನ ಬೆಳಿಗ್ಗೆ ಬೇಗನೆ ಏಳುತ್ತೇವೆ. ಸ್ನಾನ ಮಾಡಿ ಹೊಸ ಬಟ್ಟೆ ಹಾಕ್ಕೊಂಡು ಪೂಜೆ ಮಾಡುತ್ತೇವೆ. ರಜ ಇರುತ್ತಲ್ಲ? ಮಜಾವಾಗಿ ಕಳೆಯುತ್ತೇವೆ. ಹಬ್ಬದ ಊಟ ಅಂತೂ ಸಖತ್ತಾಗಿರುತ್ತದೆ. ನಂಗಿಷ್ಟ ಅಂತ ನಮ್ಮಮ್ಮ ಲಡ್ಡೂ ಮತ್ತು ಹೋಳಿಗೆ ಮಾಡ್ತಾರೆ. ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಫ್ರೆಂಡ್ಸ್‌ಗೆಲ್ಲಾ ಸಿಹಿತಿಂಡಿ ಹಂಚುತ್ತೇವೆ.ಇಡೀ ದಿನ ಹೋಳಿಗೆ ತಿನ್ನೋದೇ!

‘ನಾನು ಮತ್ತು ನಮ್ಮಣ್ಣ ರಾಜಾಜಿನಗರ ಐದನೇ ಬ್ಲಾಕ್‌ನ ಆರ್.ಪಿ.ಇ.ಎಸ್. ಶಾಲೆಯಲ್ಲಿ ಓದ್ತೀವಿ. ನಾನು ವೈಷ್ಣವಿ, ಅಣ್ಣ ವಿನ್ಯಾಸ್‌. ನಮಗೆ ಯುಗಾದಿಗೆ ಶಾಲೆಗೆ ರಜಾ ಇರ್ತದೆ. ರಜೆಯ ದಿನ ನಾವಿಬ್ಬರೂ ತುಂಬಾ ಆಟವಾಡ್ತೀವಿ. ಹಬ್ಬಕ್ಕೆ ರಜೆ ಬಂದ್ರೆ ನಮಗೆ ಇನ್ನೂ ಖುಷಿ. ಬೆಳಿಗ್ಗೆಯೇ ಬೇವಿನ ಎಲೆ ಹಾಕಿದ ಬಿಸಿ ನೀರಿನಲ್ಲಿ ಅಮ್ಮ ಸ್ನಾನ ಮಾಡಿಸುತ್ತಾರೆ. ಹೊಸ ಬಟ್ಟೆ ಹಾಕ್ಕೋತೀವಿ. ಬೇವು ಬೆಲ್ಲ ಹಂಚೋದು ನಮ್ಮಿಬ್ಬರ ಕೆಲಸ. ಮಧ್ಯಾಹ್ನ‌ ಊಟಕ್ಕೂ ಮೊದಲೇ ಅಮ್ಮ ಹೋಳಿಗೆ ರೆಡಿ ಮಾಡ್ತಾರೆ. ರಾತ್ರಿವರೆಗೂ ಬೇಕು ಅನಿಸಿದಾಗಲೆಲ್ಲ ಹೋಳಿಗೆ ತಿನ್ತಾನೇ ಇರ್ತೀವಿ. ಹಬ್ಬದ ದಿನ ನಾವಿಬ್ರೂ ಖುಷಿಯಾಗಿರ್ಬೇಕು ಅಂತ ಎಷ್ಟು ಹೋಳಿಗೆ ತಿಂದ್ರೂ ಅಪ್ಪ, ಅಮ್ಮ ಏನೂ ಅನ್ನಲ್ಲ’.

ಹಬ್ಬ ಅಂದ್ರೆ ಹೊಸ ಬಟ್ಟೆ!

ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸ್ತಾರೆ, ಇಡೀ ದಿನ ಸಿಹಿತಿಂಡಿ, ಊಟ ಮಾಡ್ತೀವಿ. ರಜೆಯೂ ಇರ್ತದೆ. ನಮ್ಮ ಅಜ್ಜಿ ನಂಗಿಷ್ಟ ಅಂತ ಜಾಸ್ತಿ ಬೆಲ್ಲ ಹಾಕಿ ಒಬ್ಬಟ್ಟು ಮಾಡ್ತಾರೆ. ಎಷ್ಟು ತಿನ್ತೀನಿ ಅಂತ ಲೆಕ್ಕ ಇಡೋದಿಲ್ಲ. ನಾನು, ಪಪ್ಪ, ಅಮ್ಮ, ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅಕ್ಕ ಹೀಗೆ ಎಲ್ಲರೂ ಸೇರ್ಕೊಂಡು ಹಬ್ಬದೂಟ ಮಾಡೋದು ಇನ್ನೂ ಖುಷಿ ಕೊಡುತ್ತೆ. ಹಬ್ಬ ಕಳೆದು ಸ್ವಲ್ಪ ದಿನಕ್ಕೆ ಬೇಸಿಗೆ ರಜೆನೂ ಬರುತ್ತೆ. ಆಹಾ... ನನಗಂತೂ ಹಬ್ಬ ಅಂದ್ರೆ ಸಖತ್‌ ಇಷ್ಟ.

–ಅವನೀಶ್‌ ಹೇರ್ಳೆ,

ಒಂದನೇ ತರಗತಿ, ಕ್ಯಾಪಿಟಲ್‌ ಪಬ್ಲಿಕ್ ಸ್ಕೂಲ್‌,

ಆರ್.ಬಿ.ಐ. ಲೇಔಟ್‌, ಜೆ.ಪಿ.ನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry