ಯುಗಾದಿಗೆ ಬಗೆಬಗೆ ಒಬ್ಬಟ್ಟು

7

ಯುಗಾದಿಗೆ ಬಗೆಬಗೆ ಒಬ್ಬಟ್ಟು

Published:
Updated:
ಯುಗಾದಿಗೆ ಬಗೆಬಗೆ ಒಬ್ಬಟ್ಟು

ಖೋವಾ ಒಬ್ಬಟ್ಟು

ಬೇಕಾಗುವ ಸಾಮಗ್ರಿ: ಖೋವಾ 200 ಗ್ರಾಂ, ಬಾದಾಮಿ 100 ಗ್ರಾಂ, ಸಕ್ಕರೆ ಪುಡಿ 200 ಗ್ರಾಂ (ರುಚಿಗೆ ತಕ್ಕಷ್ಟು), ಏಲಕ್ಕಿ ಪುಡಿ ಸ್ವಲ್ಪ, ಕಣಕಕ್ಕೆ ಮೈದಾ ಅಥವಾ ಗೋಧಿಹಿಟ್ಟು, ಬೇಯಿಸಲು ಎಣ್ಣೆ

ಮಾಡುವ ವಿಧಾನ:- ಮೊದಲು ಬಾದಾಮಿಯನ್ನು ಸಣ್ಣಗೆ ಪುಡಿ ಮಾಡಿ. ಖೋವಾ ಜೊತೆ ಸೇರಿಸಿ ಸಕ್ಕರೆ ಪುಡಿ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಉಂಡೆ ಮಾಡಿಕೊಳ್ಳಿ. ಗೋಧಿಹಿಟ್ಟಿಗೆ ಚಿಟಿಕೆ ಉಪ್ಪು, ಅರಿಶಿನ, ಸ್ವಲ್ಪ ಎಣ್ಣೆ ಹಾಕಿ ಕಲಸಿ ಒಂದರ್ಧ ಗಂಟೆ ಮುಚ್ಚಿಡಿ, ಕಣಕದಲ್ಲಿ ಹೂರಣದ ಉಂಡೆಯನ್ನು ಇಟ್ಟು ಸುತ್ತ ಮಡಿಸಿ ಚಪಾತಿಯಂತೆ ಒತ್ತಿ ಕಾದ ತವಾದ ಮೇಲೆ ಹಾಕಿ ಸಣ್ಣ ಉರಿಯಲ್ಲಿ ಎಣ್ಣೆ ಹಾಕಿ ಎರಡು ಕಡೆ ಬೇಯಿಸಿ, ಬಿಸಿ ಬಿಸಿ ಒಬ್ಬಟ್ಟು, ತುಪ್ಪದ ಜೊತೆ ಸವಿಯಲು ಬಲು ರುಚಿ.

ಗೆಣಸಿನ ಒಬ್ಬಟ್ಟು

ಬೇಕಾಗುವ ಸಾಮಗ್ರಿ: ಗೆಣಸು ಅರ್ಧ ಕೆ.ಜಿ, ಬೆಲ್ಲ 300 ಗ್ರಾಂ (ರುಚಿಗೆ ತಕ್ಕಷ್ಟು) ಕಾಯಿತುರಿ ಒಂದು ಕಪ್, ಏಲಕ್ಕಿಪುಡಿ, ಕಣಕಕ್ಕೆ ಮೈದಾಹಿಟ್ಟು, ಎಣ್ಣೆ, ಸ್ವಲ್ಪ ಗಸಗಸೆ

ಮಾಡುವ ವಿಧಾನ: ಮೊದಲು ಗೆಣಸನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಿ, ಕಾಯಿ, ಬೆಲ್ಲದಪುಡಿ ಮಿಕ್ಸಿ ಮಾಡಿ ಬಾಣಲೆಗೆ ಹಾಕಿ ಬೆಂದಿರುವ ಗೆಣಸನ್ನು ಹಾಕಿ ಸಣ್ಣ ಉರಿಯಲ್ಲಿಟ್ಟು ಕೈಯಾಡಿಸಿ. ಈ ಮಿಶ್ರಣ ಕೈಗೆ ಅಂಟದಂತಿರಬೇಕು. ಆ ಹದಕ್ಕೆ ಬಂದಾಗ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೆಳಗಿಟ್ಟು ಉಂಡೆ ಮಾಡಿ.

ಮೈದಾ ಹಿಟ್ಟಿಗೆ ಸ್ವಲ್ಪ ಎಣ್ಣೆ, ಚಿಟಿಕೆ ಅರಿಶಿನ, ಉಪ್ಪು ಹಾಕಿ ಕಲಸಿ ನೆನೆಸಿಡಿ, ನೆಂದಿರುವ ಕಣಕವನ್ನು ಚೆನ್ನಾಗಿ ನಾದಿ, ಕಣಕದಲ್ಲಿ ಹೂರಣ ಇಟ್ಟು ಮಡಿಸಿ, ಪೇಪರ್ ಮೇಲೆ ತೆಳ್ಳಗೆ ಒತ್ತಿ. ಕಾದ ತವಾದ ಮೇಲೆ ಸಣ್ಣ ಉರಿಯಲ್ಲಿ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿ. ಬಿಸಿ ಬಿಸಿ ಗೆಣಸಿನ ಒಬ್ಬಟ್ಟು ರೆಡಿ. ಇದಕ್ಕೆ ಹಾಲು ಹಾಕಿಕೊಂಡು ತಿನ್ನಲು ರುಚಿ, ತುಪ್ಪದ ಜೊತೆಯಲ್ಲೂ ಸವಿಯಬಹುದು.

ಅಂಜೂರದ ಒಬ್ಬಟ್ಟು

ಸಾಮಗ್ರಿ: ಮೈದಾ ಹಿಟ್ಟು 100 ಗ್ರಾಂ, 50 ಗ್ರಾಂ ಚಿರೋಟಿ ರವೆ, 200 ಗ್ರಾಂ ಅಂಜೂರ ಬೆಲ್ಲ, 100 ಗ್ರಾಂ ಏಲಕ್ಕಿಪುಡಿ, ಸ್ವಲ್ಪ ಎಣ್ಣೆ

ವಿಧಾನ: ಮೈದಾ ರವೆಗೆ ಸ್ವಲ್ಪ ಎಣ್ಣೆ, ಅರಿಶಿನ ಹಾಕಿ ಕಣಕ ಕಲಸಿ ಮುಚ್ಚಿ ನೆನೆಯಲು ಬಿಡಿ. ಬಾಣಲೆಗೆ ನೀರು ಹಾಕಿ ಅಂಜೂರವನ್ನು ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ, ಬೆಲ್ಲವನ್ನೂ ಸೇರಿಸಿ. ಬೆಲ್ಲದ ಜೊತೆ ಬೆಂದಿರುವ ಅಂಜೂರ ಹಾಕಿ ಮಿಕ್ಸಿ ಮಾಡಿ (ನೀರು ಹಾಕಬೇಡಿ). ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸಿ. ಹೂರಣ ಆದಮೇಲೆ ಏಲಕ್ಕಿ ಪುಡಿ ಹಾಕಿ ಕೆಳಗಿಡಿ. ನಂತರ ಉಂಡೆ ಮಾಡಿ ಕಣಕದೊಳಗೆ ಹೂರಣ ಇಟ್ಟು ಮಡಿಸಿ ತೆಳ್ಳಗೆ ಒತ್ತಿ. ಕಾದ ತವಾದ ಮೇಲೆ ಸಣ್ಣ ಉರಿಯಲ್ಲಿ ಎರಡು ಕಡೆ ಬೇಯಿಸಿ, ಬಿಸಿ ಬಿಸಿ ಒಬ್ಬಟ್ಟು ಸವಿಯಲು ಬಲು ರುಚಿ.

ಕ್ಯಾರೆಟ್ ಒಬ್ಬಟ್ಟು

ಸಾಮಗ್ರಿ: ಕ್ಯಾರೆಟ್ ಒಂದು ಕಪ್, ಕಾಯಿ ತುರಿ ಒಂದು ಕಪ್, ಬೆಲ್ಲ ಎರಡು ಕಪ್, ಏಲಕ್ಕಿ ಪುಡಿ ಸ್ವಲ್ಪ, ಕಣಕಕ್ಕೆ ಮೈದಾ, ಎಣ್ಣೆ ಚಿಟಿಕೆ ಅರಿಶಿನ

ಮಾಡುವ ವಿಧಾನ: ಕ್ಯಾರೆಟ್ ಚೆನ್ನಾಗಿ ತೊಳೆದು ತುರಿದುಕೊಳ್ಳಿ. ಕಾಯಿತುರಿ, ಪುಡಿಬೆಲ್ಲ ಎಲ್ಲ ಸೇರಿಸಿ, ಮಿಕ್ಸಿ ಮಾಡಿ ಬಾಣಲೆಗೆ ಹಾಕಿ ಕೈಯಾಡಿಸಿ. ನಂತರ ಹೂರಣ ಮಾಡಿಕೊಂಡು ಉಂಡೆ ಮಾಡಿ. ಮೈದಾಹಿಟ್ಟಿಗೆ ಎಣ್ಣೆ, ಚೂರು ಅರಿಶಿನ ಹಾಕಿ, ಕಣಕ ಕಲಸಿ ನೆನೆಸಿಟ್ಟು ನಂತರ ಕಣಕಕ್ಕೆ ಹೂರಣ ತುಂಬಿ ತೆಳ್ಳಗೆ ಲಟ್ಟಿಸಿ ಕಾದ ತವಾದ ಮೇಲೆ ಎಣ್ಣೆ ಹಾಕಿ ಎರಡೂಕಡೆ ಸಣ್ಣ ಉರಿಯಲ್ಲಿ ಬೇಯಿಸಿ.

–ಉಮಾ ಸರ್ವೇಶ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry