ಶಕ್ತಿಶಾಲಿ ಹಾಗೂ ವೇಗಿ ಈ ಬೆಂಜ್ ಕೂಪ್

7

ಶಕ್ತಿಶಾಲಿ ಹಾಗೂ ವೇಗಿ ಈ ಬೆಂಜ್ ಕೂಪ್

Published:
Updated:
ಶಕ್ತಿಶಾಲಿ ಹಾಗೂ ವೇಗಿ ಈ ಬೆಂಜ್ ಕೂಪ್

ಮರ್ಸಿಡಿಸ್ ಬೆಂಜ್ ತನ್ನ ಸ್ಪೋರ್ಟ್ಸ್ ಕಾರ್‌ಗಳಿಗೆಂದೇ ಪ್ರತ್ಯೇಕ ‘ಎಎಂಜಿ’ ಎಂಬ ವಿಭಾಗಗಳನ್ನು ಹೊಂದಿದೆ. ಎಎಂಜಿ ಬ್ಯಾಡ್ಜ್‌ನ ಅಡಿ ಸಂಪೂರ್ಣ ಹೊಸ ಕಾರ್‌ ಗಳೂ ತಯಾರಾಗುತ್ತವೆ ಮತ್ತು ಸಾಮಾನ್ಯ ಬೆಂಜ್ ಕಾರ್‌ಗಳ ಪರ್ಫಾರ್ಮೆನ್ಸ್ ಅವತರಣಿಕೆಗಳೂ ತಯಾರಾಗುತ್ತವೆ.

ಇಲ್ಲಿ ಎರಡನೇ ವರ್ಗಕ್ಕೆ ಸೇರಿದ ಜಿಎಲ್‌ಸಿ ಕೂಪ್‌ನ ‘ಜಿಎಲ್‌ಸಿ 43 ಎಎಂಜಿ’ ಅವತರಣಿಕೆಯನ್ನು ಮರ್ಸಿಡಿಸ್ ಬೆಂಜ್ ಕೆಲವು ದಿನಗಳ ಹಿಂದೆಯಷ್ಟೇ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಂಪನಿಯು ‘ಪ್ರಜಾವಾಣಿ’ಗೆ ನೀಡಿದ್ದ ಆಹ್ವಾನದ ಮೇರೆಗೆ ಈ ಕೂಪ್‌ ಅನ್ನು ಚಲಾಯಿಸಲಾಯಿತು.

ಮೊದಲೇ ಹೇಳಿದಂತೆ ಇದು ಸ್ಪೋರ್ಟ್ಸ್‌ ಅರ್ಥಾತ್ ಪರ್ಫಾರ್ಮೆನ್ಸ್ ಕಾರು. ಇದು ಎಸ್‌ಯುವಿ, ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್‌ಗಳ ದೇಹ ವಿನ್ಯಾಸದ ಮಿಶ್ರಣವುಳ್ಳ ಮತ್ತೊಂದು ವರ್ಗ–ಕೂಪ್. ಕೂಪ್‌ಗಳ ದೇಹವಿನ್ಯಾಸ ಗಾಳಿಯನ್ನು ಸೀಳಿಕೊಂಡು ಮುನ್ನುಗ್ಗುವಂತೆ ಇರುತ್ತದೆ. ಹೀಗಾಗಿ ಇವು ನೋಡಲು ಸ್ವಲ್ಪ ವಿಶಿಷ್ಟವಾಗಿ ಕಾಣುತ್ತವೆ.

ಜಿಎಲ್‌ಸಿ 43 ಎಎಂಜಿಯಲ್ಲಿ ಎರಡು ಟರ್ಬೊ ಚಾರ್ಜರ್‌ನ ಪೆಟ್ರೋಲ್ ಎಂಜಿನ್ ಇದೆ. ಇದು 3,000 ಸಿ.ಸಿ. ಸಾಮರ್ಥ್ಯದ ವಿ6 ( ವಿ– ಆಕಾರದಲ್ಲಿ ಜೋಡಿಸಲಾದ ಆರು ಸಿಲಿಂಡರ್‌) ಎಂಜಿನ್. ಜತೆಗೆ ಎರಡು ಟರ್ಬೊ ಚಾರ್ಜರ್ (ಇದನ್ನು ಬೈಟರ್ಬೊ ಎಂದು ಕರೆಯಲಾಗುತ್ತದೆ) ಇರುವುದರಿಂದ ಅಪಾರ ಶಕ್ತಿ ಉತ್ಪಾದಿಸುತ್ತದೆ. ಅಪಾರ ಶಕ್ತಿ ಎಂದರೆ ಬರೋಬ್ಬರಿ 362 ಬಿಎಚ್‌ಪಿ ಶಕ್ತಿಯನ್ನು ಈ ಎಂಜಿನ್‌, ಕಾರಿನ ನಾಲ್ಕೂ ಚಕ್ರಗಳಿಗೆ ರವಾನಿಸುತ್ತದೆ.

ನಿಂತಲ್ಲಿಂದ ಹೊರಟು ಪ್ರತಿ ಗಂಟೆಗೆ 100 ಕಿ.ಮೀ ವೇಗ ತಲುಪಲು ಈ ಕಾರು ಕೇವಲ 4.81 ಸೆಕೆಂಡ್ ತೆಗೆದುಕೊಳ್ಳುತ್ತದೆ ಎಂದರೆ 362 ಬಿಎಚ್‌ಪಿಯ ಶಕ್ತಿ ಅನುಭವಕ್ಕೆ ಬರಬಹುದು. ಈ ಕಾರಿನ ಗರಿಷ್ಠ ವೇಗವನ್ನು ಪ್ರತಿಗಂಟೆಗೆ 250 ಕಿ.ಮೀ.ಗೆ ಮಿತಿಗೊಳಿಸಲಾಗಿದೆ. ಇಷ್ಟು ವೇಗದ ಚಾಲನೆಯನ್ನು ನಿಯಂತ್ರಿಸಲು ಪ್ರಚಂಡ ಬ್ರೇಕ್ ವ್ಯವಸ್ಥೆಯನ್ನೂ (ಹೈಡ್ರಾಲಿಕ್ ಅಸಿಸ್ಟೆಡ್) ನೀಡಲಾಗಿದೆ. ಜತೆಗೆ ಡೈನಮಿಕ್ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಇರುವುದರಿಂದ ಭಾರಿ ವೇಗದಲ್ಲೂ ಚಾಲನೆ ಮತ್ತು ನಿಯಂತ್ರಣ ಸುಲಭ.

ಇದು ವೇಗದ ಕಾರಾಗಿದ್ದರಿಂದ ಹೆದ್ದಾರಿ ಚಾಲನೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ರಾಜ್ಯದ ಒಂದು ಎಕ್ಸ್‌ಪ್ರೆಸ್‌ವೇಯಲ್ಲಿ ಮಾತ್ರ ವೇಗ ಮಿತಿ ಪ್ರತಿಗಂಟೆಗೆ 120 ಕಿ.ಮೀ. ಇದೆ. ಉಳಿದ ಹೆದ್ದಾರಿಗಳಲ್ಲಿ ಗರಿಷ್ಠ ವೇಗ ಮಿತಿ ಪ್ರತಿಗಂಟೆಗೆ 80 ಕಿ.ಮೀ. ಮಾತ್ರ. ಹೀಗಾಗಿ ಕೂಪ್‌ನ ಗರಿಷ್ಠ ವೇಗವನ್ನು ಪರೀಕ್ಷಿಸ ಲಾಗಿಲ್ಲ. ಆದರೆ ವಿ6 ಬೈ ಟರ್ಬೊ ಎಂಜಿನ್‌ನ ಶಕ್ತಿಯನ್ನು ಅನುಭವಿಸಲು ಯಾವುದೇ ಅಡ್ಡಿ ಇರಲಿಲ್ಲ. ಈ ಕೂಪ್‌ನಲ್ಲಿ ಇದ್ದದ್ದು 9 ಗಿಯರ್‌ಗಳ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್. ಜತೆಗೆ ಎಂಜಿನ್‌ ಶಕ್ತಿ ರವಾನೆ ವಿನ್ಯಾಸ–ಇಸಿಯು ಮ್ಯಾಪಿಂಗ್ ಬದಲಿಸಿಕೊಳ್ಳುವ ಆಯ್ಕೆಗಳಿದ್ದವು. ಅದರಲ್ಲಿ ಇಕೊ, ಸ್ಪೋರ್ಟ್ಸ್, ಸ್ಪೋರ್ಟ್ಸ್+, ಕಂಫರ್ಟ್ ಮತ್ತು ಇಂಡಿವಿಷುಯಲ್ ಎಂಬ ಮ್ಯಾಪಿಂಗ್ ಆಯ್ಕೆಗಳಿದ್ದವು.

ಅಪಾರ ಶಕ್ತಿ ಇದ್ದ ಕಾರಣ ಹೆದ್ದಾರಿಯಲ್ಲಿ ಬಹುತೇಕ ವೇಳೆ ಇಕೊ ಆಯ್ಕೆಯಲ್ಲೇ ಕೂಪ್‌ ಅನ್ನು ಚಲಾಯಿಸಲಾಯಿತು. ಈ ಆಯ್ಕೆಯ ಹೆಗ್ಗಳಿಕೆಯೆಂದರೆ, ಪ್ರತಿಗಂಟೆಗೆ 100 ಕಿ.ಮೀ. ವೇಗದಲ್ಲೂ 9ನೇ ಗಿಯರ್ ಆಯ್ಕೆಯಾಗುತ್ತಿತ್ತು. ಆಗ ಥ್ರೋಟಲ್ (ಅಕ್ಸಲರೇಟರ್) ಒತ್ತದಿದ್ದರೂ ಕೂಪ್ ಅದೇ ವೇಗದಲ್ಲಿ ಓಡುತ್ತಿತ್ತು. ಎಂಜಿನ್ ವೇಗ 1,500 ಆರ್‌ಪಿಎಂನಲ್ಲಿದ್ದಾಗಲೂ ಅದೇ ವೇಗದಲ್ಲಿ ಕೂಪ್ ಓಡುತ್ತಿತ್ತು.

ಇದರ ಜತೆಯಲ್ಲಿ ಸ್ಪೋರ್ಟ್ಸ್‌+ ಆಯ್ಕೆಯನ್ನು ಪರೀಕ್ಷಿಸಲಾಯಿತು. ಈ ಆಯ್ಕೆಯಲ್ಲಿ ಕೂಪ್ ಪ್ರತಿಗಂಟೆಗೆ 100 ಕಿ.ಮೀ. ವೇಗದಲ್ಲಿ ಓಡುತ್ತಿದ್ದರೂ ನಾಲ್ಕನೇ ಗಿಯರ್‌ನಲ್ಲೇ ಇರುತ್ತಿತ್ತು. ಹೀಗಾಗಿ ನಮ್ಮ ಹೆದ್ದಾರಿಯಲ್ಲಿ 5ನೇ ಗಿಯರ್‌ಗೆ ಶಿಫ್ಟ್ ಆಗಲು ಸಾಧ್ಯವೇ ಆಗಲಿಲ್ಲ. ಈ ಮೋಡ್‌ನಲ್ಲಿ ಕೂಪ್‌ನ ಸಸ್ಪೆನ್ಷನ್‌ ಸ್ವಯಂಚಾಲಿತವಾಗಿ ಗಡಸಾಗುತ್ತದೆ. ಅಂದರೆ ಸ್ಟಿಫ್ ಆಗುತ್ತದೆ. ಸ್ಟಿಫ್ ಆಗುವುದರಿಂದ ಕೂಪ್‌ನ ಓಲಾಟ ಕಡಿಮೆಯಾಗುತ್ತದೆ. ವೇಗವಾಗಿ ಜಿಗ್‌ಜಾಗ್ ಮಾಡಿದರೂ, ತಿರುವಿನಲ್ಲಿ ವೇಗವಾಗಿ ತಿರುಗಿಸಿದರೂ ಕೂಪ್ ಒಂದಿನಿತೂ ಓಲಾಡುವುದಿಲ್ಲ ಮತ್ತು ವಾಲುವುದಿಲ್ಲ. ಹೀಗಾಗಿ ನಿಯಂತ್ರಣ ತಪ್ಪುವ ಸಾಧ್ಯತೆ ತೀರಾ ಕಡಿಮೆ. ಬೇರೆ ಆಯ್ಕೆಗಳಲ್ಲಿ ಚಾಲನೆ ಮಾಡುತ್ತಿದ್ದಾಗಲೂ ಸಸ್ಪೆನ್ಷನ್ ಅನ್ನು ಗಡಸು ಮಾಡಲು ಒಂದು ಗುಂಡಿ ನೀಡಲಾಗಿದೆ. ಬೇಡವೆಂದಾಗ ಆ ಗುಂಡಿಯನ್ನು ಒತ್ತಿ, ಸಸ್ಪೆನ್ಷನ್‌ನ ಗಡಸನ್ನು ಕಡಿಮೆ ಮಾಡಬಹುದು. ಇದು ಹೆಚ್ಚು ಉಪಯೋಗಕ್ಕೆ ಬರುವ ಸವಲತ್ತು.

ಬಹುತೇಕ ಎಲ್ಲಾ ವೇಗದ ಕಾರ್‌ಗಳಲ್ಲಿ ಆಲ್‌ವ್ಹೀಲ್‌ ಡ್ರೈವ್ ಸವಲತ್ತು ಇರುತ್ತದೆ. ಇದರಲ್ಲಿ ಮರ್ಸಿಡಿಸ್ ಬೆಂಜ್‌ನವರದ್ದೇ ಆಲ್‌ವ್ಹೀಲ್‌ಡ್ರೈವ್ ತಂತ್ರಜ್ಞಾನ–4 ಮ್ಯಾಟಿಕ್ ಇತ್ತು.

ಜಿಎಲ್‌ಸಿ 43 ಎಎಂಜಿ ಮೂಲತಃ ರೇರ್‌ವ್ಹೀಲ್‌ ಡ್ರೈವ್ ಕೂಪ್. ಹೀಗಾಗಿ ಅಗತ್ಯಬಿದ್ದಾಗ ಮಾತ್ರ ಮುಂದಿನ ಚಕ್ರಗಳಿಗೆ ಶಕ್ತಿ ರವಾನೆಯಾಗುತ್ತದೆ. ಅಗತ್ಯ ಸಂದರ್ಭದಲ್ಲಿ ಹೀಗೆ ಶಕ್ತಿ ರವಾನೆಯಾಗಲು ಒಂದು ಸೆಕೆಂಡ್‌ನಷ್ಟು ಸಮಯ ತೆಗೆದುಕೊಳ್ಳುತ್ತದೆ. ಆ ಸಂದರ್ಭದಲ್ಲಿ ಕಾರು ಮಣ್ಣಿನ ರಸ್ತೆಯಲ್ಲಿದ್ದರೆ ಸ್ವಲ್ಪ ಅತ್ತಿತ್ತ ಎಳೆದಾಡುತ್ತದೆ (ಡ್ರಿಫ್ಟ್‌ ಆಗುತ್ತದೆ). ಅದರ ಮರು ಕ್ಷಣವೇ ಟ್ರಾಕ್ಷನ್ ಕಂಟ್ರೋಲ್, ಡೈನಮಿಕ್ ಕಂಟ್ರೋಲ್‌ಗಳು ಜೀವಪಡೆದು ಕೂಪ್ ಸ್ವಯಂನಿಯಂತ್ರಣಕ್ಕೆ ಬರುತ್ತದೆ. ಆದರೆ ಡ್ರಿಫ್ಟ್ ಆಗುವಾಗ ಮಾತ್ರ ರೋಮಾಂಚನ ಅನುಭವಿಸಬಹುದು.

4 ಮ್ಯಾಟಿಕ್ ಇರುವುದರಿಂದ ಈ ಕೂಪ್‌ ಅನ್ನು ಲಘು ಆಫ್‌ರೋಡಿಂಗ್‌ಗೆ (ಕಚ್ಚಾರಸ್ತೆಯ ಚಾಲನೆ) ಬಳಸಬಹುದು. ಆ ಸಂದರ್ಭದಲ್ಲಿ ಕೂಪ್‌ನ ತಳಭಾಗ ನೆಲಕ್ಕೆ ಕಲ್ಲು–ಗುಂಡುಗಳಿಗೆ ತಾಗದಂತೆ ಗ್ರೌಂಡ್ ಕ್ಲಿಯರೆನ್ಸ್ ಅನ್ನು 40 ಎಂ.ಎಂ.ನಷ್ಟು ಹೆಚ್ಚಿಸಿಕೊಳ್ಳಬಹುದು. ಇದರ ಜತೆಯಲ್ಲಿ ಹಿಂಬದಿಯಲ್ಲಿ ಗ್ರೌಂಡ್‌ ಕ್ಲಿಯರೆನ್ಸ್‌ ಅನ್ನು ಹೆಚ್ಚುವರಿಯಾಗಿ 25 ಎಂ.ಎಂ.ನಷ್ಟು ಹೆಚ್ಚಿಸಿಕೊಳ್ಳಬಹುದು. ಇವೆರಡನ್ನೂ ಆಯ್ಕೆ ಮಾಡಿಕೊಳ್ಳಲು ಪ್ರತ್ಯೇಕ ಗುಂಡಿಗಳನ್ನು ನೀಡಲಾಗಿದೆ. ಹೆದ್ದಾರಿಗಿಳಿದು ಕೂಪ್‌ನ ವೇಗ ಪ್ರತಿಗಂಟೆಗೆ 80 ಕಿ.ಮೀ. ಮೀರುತ್ತಿದ್ದಂತೆ ಗ್ರೌಂಡ್ ಕ್ಲಿಯರೆನ್ಸ್ ಸಾಮಾನ್ಯ ಸ್ಥಿತಿಗೆ ಹಿಂದಿರುಗುತ್ತದೆ.

ಎಎಂಜಿ ಅವತರಣಿಕೆ ಆಗಿರುವುದರಿಂದ ಈ ಕೂಪ್‌ನ ಇಂಟೀರಿಯರ್ ವಿನ್ಯಾಸದಲ್ಲಿ ತುಸು ಬದಲಾವಣೆ ಇದೆ. ಸ್ಟೀರಿಂಗ್‌ ವ್ಹೀಲ್‌ನ ತಳಭಾಗ ಚಪ್ಪಟೆಯಾಗಿದೆ. ಕಪ್ಪು ಲೆದರ್ ಸೀಟ್, ಡ್ಯಾಶ್‌ಬೋರ್ಡ್‌ನ ಲೆದರ್ ಟ್ರಿಮ್‌ಗಳ ಹೊಲಿಗೆಗೆ ಕೆಂಪು ಬಣ್ಣದ ದಾರ ಬಳಸಲಾಗಿದೆ. ಇನ್ನು ಸೀಟ್‌ಬೆಲ್ಟ್‌ಗಳೂ ಕೆಂಪು ಬಣ್ಣದ್ದೇ ಆಗಿವೆ. ಈ ಕಪ್ಪು–ಕೆಂಪು ಸಂಯೋಜನೆಯ ಇಂಟೀರಿಯರ್ ವಿಶಿಷ್ಟ ಅನುಭವ ನೀಡುತ್ತದೆ.⇒v

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry