ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗ–ದ್ವೇಷಗಳ ಜಾಲ

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ದೇಹದ ಒಳಗಿರುವ ಚೈತನ್ಯವೇ ಆತ್ಮ ಎಂದು ನೋಡಿದೆವು. ಇಲ್ಲೊಂದು ಪ್ರಶ್ನೆ ಹುಟ್ಟುತ್ತದೆ. ಎಲ್ಲೆಲ್ಲೂ ಚೈತನ್ಯವೇ ಇರುವುದು – ಎಂದು ಹೇಳಿದ ಮೇಲೆ ದೇಹದ ಒಳಗಿರುವುದು ಮಾತ್ರವೇ ಆತ್ಮ, ದೇಹವಾಗಿರುವುದು ಆತ್ಮವಲ್ಲ ಎನ್ನುವುದು ಸರಿಯಾದೀತೆ? ಡಿವಿಜಿಯವರು ಈ ಪ್ರಶ್ನೆಗೂ ಉತ್ತರಿಸಿದ್ದಾರೆ:

‘ಜೀವವು ಒಂದು ದೃಷ್ಟಿಯಿಂದ ಆತ್ಮ, ಇನ್ನೊಂದು ದೃಷ್ಟಿಯಿಂದ ದೇಹ. ಜಗತ್ತಿನ ಮೇಲೆ ವಿಶ್ವಚೈತನ್ಯವು ಬೀರುವ ಪ್ರಭಾವದ ಝಳದಿಂದ ಜೀವಾತ್ಮವು ತಾನು ವಿಶ್ವಾತ್ಮದ ಕಣವೆಂಬುದನ್ನು ಮರೆಯುತ್ತದೆ. ತನ್ನನ್ನು ದೇಹದೊಂದಿಗೆ ಏಕ ಮಾಡಿಕೊಳ್ಳುತ್ತದೆ. ಹೀಗೆ ಆತ್ಮವು ತಾನು ದೇಹವೆಂದುಕೊಂಡಾಗ, ಎಲ್ಲ ದೇಹಕ್ರಿಯೆಗಳ ಅನುಭವಗಳೂ ಅದಕ್ಕೆ ತಪ್ಪದೆ ಉಂಟಾಗುತ್ತವೆ. ಹೀಗೆ ಕಷ್ಟ, ಸುಖ, ನಷ್ಟ, ಲಾಭ ಮೊದಲಾದ ಲೋಕವ್ಯಾಪಾರಗಳು ಜೀವಾತ್ಮಕ್ಕೆ ತಗಲುತ್ತವೆ. ಅದರಿಂದ ಜೀವ ಕೆರಳಿ ಪ್ರತಿಕ್ರಿಯೆ ನಡೆಸುತ್ತದೆ. ಹೀಗೆ ಜೀವವು ತನ್ನ ಪ್ರಪಂಚಾನುಭವಗಳಿಗೆ ಕೊಡುವ ಪ್ರತ್ಯುತ್ತರಗಳೇ ರಾಗದ್ವೇಷಗಳು. ರಾಗವೆಂದರೆ ಯಾವುದಾದರೊಂದು ವಸ್ತುವಿನಲ್ಲಿ ಹೆಚ್ಚಿನ ಪ್ರೀತಿ. ದ್ವೇಷವೆಂದರೆ ಯಾವುದಾದರೊಂದು ವಸ್ತುವಿನ ವಿಷಯದಲ್ಲಿ ಹೆಚ್ಚಿನ ಅಸಹನೆ. ಈ ರಾಗದ್ವೇಷಗಳು ಜೀವವನ್ನು ಹಿಡಿದಾಗ ಜೀವವು ತನ್ನ ಒಳಗಿನ ಆತ್ಮವನ್ನು ಮರೆಯುತ್ತದೆ. ಜಗತ್ತಿನ ಹೋರಾಟಕ್ಕೆ ಸಿಕ್ಕಿ ಶಾಂತಿಯನ್ನು ಕಳೆದುಕೊಳ್ಳುತ್ತದೆ. ತಾನು ಇತರ ಜೀವಿಗಳಿಂದ ಬೇರೆಯೆಂದೆಣಿಸಿಕೊಳ್ಳದೆ, ಅದಕ್ಕೆ ಬದಲಾಗಿ ತಾನೂ ವಿಶ್ವದ ಒಂದಂಶ ಎಂಬುದನ್ನು ಅನುಭವಕ್ಕೆ ತಂದುಕೊಂಡಾಗ – ಇತರರಂತೆಯೇ ತಾನು, ತನ್ನಂತೆಯೇ ಇತರರು, ಯಾರೂ ಬೇರೆಯವರಿಲ್ಲ ಎಂದು ನಂಬಿಕೊಂಡಾಗ – ಅದಕ್ಕೆ ಯಾರೊಡನೆಯೂ ಎಲ್ಲಿಯೂ ಹಗೆಯೂ ಹೋರಾಟವೂ ಇರದು. ಅದೇ ಶಾಂತಿ. ಆಗ ಪರಮಾತ್ಮ ಅಥವಾ ಭಗವಂತನ ಸನ್ನಿಧಿಯ ಅನುಭವ.’

ಇಲ್ಲಿ ನಾವು ಗಮನಿಸಬೇಕಾದ್ದು ಎಂದರೆ – ಆತ್ಮವು ಎಲ್ಲೆಲ್ಲೂ ಇದೆ, ಅಥವಾ ಆತ್ಮವೊಂದೇ ಇರುವುದು ಎಂಬುದು ದಿಟವಾದರೂ ನಮಗೆ ‘ನಾವು ಆತ್ಮ’ ಎಂಬ ಅರಿವು ಇಲ್ಲವಾಗಿದೆ. ಇದಕ್ಕೆ ಕಾರಣ ಏನೆಂದರೆ ಅದಕ್ಕೆ ಕೂಡ ‘ಆತ್ಮ’ವೇ ಕಾರಣ. ಆ ವಿಶ್ವಚೈತನ್ಯದ ಪ್ರಭಾವದಿಂದಲೇ ‘ನಾನು’, ‘ನನ್ನದು’ – ಎಂಬಂಥ ಪ್ರತ್ಯೇಕತೆಯ ಭಾವ ಉಂಟಾಗುತ್ತಿದೆ. ಆತ್ಮದ ಮರೆವು ನಮ್ಮನ್ನು ಆವರಿಸಿರುವುದು ಆತ್ಮದ ದೆಸೆಯಿಂದಲೇ ಎನ್ನದೆ ವಿಧಿಯಿಲ್ಲ! ‘ನಾನು ಆತ್ಮ’ ಎಂಬುದು ಮರೆಯಾಗಿ ‘ನಾನು ದೇಹ’ ಎಂಬ ಅಭಿಮಾನ ನಮ್ಮನ್ನು ಆಳಲು ಆರಂಭಿಸಿರುತ್ತದೆ. ಒಮ್ಮೆ ದೇಹಾಭಿಮಾನ ಮೂಡಿತು ಎಂದರೆ ರಾಗ–ದ್ವೇಷಗಳು ಹುಟ್ಟಿಕೊಂಡಿವೆ ಎಂದೇ ಅರ್ಥ. ಒಂದು ವಸ್ತುವನ್ನೋ ಅಥವಾ ಒಬ್ಬ ವ್ಯಕ್ತಿಯನ್ನೋ ಅತಿಯಾಗಿ ಇಷ್ಟಪಡುವುದೇ ‘ರಾಗ’; ಒಂದು ವಸ್ತುವನ್ನೋ ಅಥವಾ ಒಬ್ಬ ವ್ಯಕ್ತಿಯನ್ನೋ ತುಂಬ ಅಸಹನೆಯಿಂದ ಒಪ್ಪದಿರುವಂಥ ಭಾವವೇ ‘ದ್ವೇಷ’. ನಮ್ಮಲ್ಲಿ ರಾಗ–ದ್ವೇಷಗಳು ಕ್ರಿಯಾಶೀಲವಾಗಿವೆ ಎಂದರೆ ಅದರ ಅರ್ಥ ನಾವು ಆತ್ಮಾನುಭವಕ್ಕೆ ದೂರ ಆಗಿದ್ದೇವೆ ಎಂದು. ಇಂಥ ಭಾವ ನಮ್ಮಿಂದ ಎಷ್ಟೆಷ್ಟು ದೂರ ಸರಿಯುತ್ತಿರುತ್ತದೆಯೋ ಅಷ್ಟಷ್ಟು ಆತ್ಮಾನುಭವಕ್ಕೆ ಹತ್ತಿರವಾಗುತ್ತಿರುತ್ತೇವೆ ಎಂದೇ ಆಗುವುದು. ಆದುದರಿಂದ ಆತ್ಮಾನುಭವವೋ ಅಥವಾ  ಬ್ರಹ್ಮಾನುಭವವೋ ಎಂಬುದನ್ನು ಸರಳವಾಗಿ ಹೇಳುವುದಾದರೆ ‘ನಾನು’, ‘ನನ್ನದು’ ಎಂಬ ಸಂಕುಚಿತ ಭಾವ–ಬುದ್ಧಿಗಳು ಇಲ್ಲದ ಸ್ಥಿತಿ. ಇದನ್ನೇ ಡಿವಿಜಿಯವರು ‘ಪರಮಾತ್ಮನ ಅಥವಾ ಭಗವಂತನ ಸನ್ನಿಧಿಯ ಅನುಭವ’ ಎಂದಿರುವುದು. ಇದು ‘ಶಾಂತಿ’ಯ ಅನುಭವ ಎನ್ನುವುದನ್ನಂತೂ ಒಪ್ಪಲೇಬೇಕು.

ನಾನು ಈ ವಿಶ್ವದ ಒಂದು ಅಂಶ; ಜಗತ್ತಿನ ಎಲ್ಲ ವಸ್ತುಗಳೂ ಜೀವಿಗಳೂ ಈ ವಿಶ್ವಚೈತನ್ಯದ ಅಂಶಗಳೇ ಹೌದು – ಎಂಬ ಭಾವ ನಮ್ಮಲ್ಲಿ ಎಲ್ಲರಲ್ಲೂ ಸ್ಥಿರವಾದರೆ ಆಗ ಲೋಕದಲ್ಲಿ ದ್ವೇಷಾಸೂಯೆಗಳಾಗಲೀ ಹೋರಾಟಗಳಾಗಲೀ ಏಕಾದರೂ ನಡೆದೀತು? ಅಧ್ಯಾತ್ಮದ ಚಿಂತನೆ ನಮ್ಮನ್ನು ಇಂಥ ಮಾನಸಿಕತೆಗೆ ಸಿದ್ಧಗೊಳಿಸುತ್ತದೆ. ಆದರೆ ಈ ಚಿಂತನೆ ಎಲ್ಲರಿಗೂ ಸುಲಭವಾಗಿ ಒಗ್ಗುವಂಥದ್ದಲ್ಲ. ಡಿವಿಜಿಯವರ ಮಾತುಗಳನ್ನೇ ಇಲ್ಲೂ ಉಲ್ಲೇಖಿಸಬಹುದು:

‘ಮನುಷ್ಯನು ಪರಮಾತ್ಮನ ಸನ್ನಿಧಿಯನ್ನು ಸೇರಲು ಅರ್ಹನಾಗುವುದಕ್ಕೆ ಬಹುಕಾಲದ ಮತ್ತು ಬಹು ವಿಧದ ಸಂಸ್ಕಾರವಾಗಬೇಕು. ಈ ಸಂಸ್ಕಾರವೇ ಧರ್ಮ. ಈ ಸಂಸ್ಕಾರವು ಎರಡು ವಿಧವಾದದ್ದು.’

ಈ ಎರಡು ವಿಧದ ಸಂಸ್ಕಾರಗಳೇ ಪ್ರವೃತ್ತಿಧರ್ಮ; ಮತ್ತು ನಿವೃತ್ತಿಧರ್ಮ. ಇವುಗಳ ವಿವರಗಳನ್ನು ಮುಂದೆ ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT