ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಗಸೆಯಲ್ಲಿ ತೇಲಿಬಂದ ಮೀನು...

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಆವತ್ತು ಧೋ ಎನ್ನುತ್ತಿದ್ದ ಮುಂಗಾರು. ಕಾಡು ಗುಡ್ಡಗಳನ್ನು ಹಾದು ದೊಡ್ಡ ಸದ್ದಿನೊಂದಿಗೆ ಮನೆಯೆದುರಿನ ಗದ್ದೆಬಯಲಿಗೆ ದಾಳಿಯಿಡುತ್ತಿತ್ತು. ಕೆಸರುಗದ್ದೆಯಲ್ಲಿ ಹೂಟಿ ಮಾಡುತ್ತಾ ಅಜ್ಜನನ್ನು ಹಿಂಬಾಲಿಸುತ್ತಿದ್ದೆ. ಅಜ್ಜ ಗಿಡ್ಡಹೋರಿಗಳೊಂದಿಗೆ ಊಳುತ್ತಿದ್ದರೆ, ನನ್ನದು ಗಾಡಿ ಎತ್ತಿನ ಜೋಡಿ. ಜಾರುವ ಕಂಬಳಿಕೊಪ್ಪೆಯನ್ನು ಸರಿಪಡಿಸಿಕೊಳ್ಳುತ್ತಾ, ಎತ್ತುಗಳನ್ನು ಬೆದರಿಸುತ್ತ ಏ..ಏ..ಏ..ಹೊಯ್, ಓ..ಓ..ಓ.. ಅನ್ನೋ ಅಜ್ಜನ ಆಲಾಪ ಮಾಡುತ್ತ ಮಳೆ ಸದ್ದಿನೊಂದಿಗೆ ಜುಗಲಬಂದಿ ನಡೆಸಿದ್ದೆ. ಕೆಳಗಿನ ಗದ್ದೆಯಲ್ಲಿ ಸಸಿ ಕೀಳುತ್ತಿದ್ದ ಹೆಂಗಸರು ಗೊರಬು ಸರಿಸಿ ‘ಓಯ್..ಬನಿಯಾ., ಚಾ ಬಂದಿತು’ ಅಂತ ಕೂಗಿ ಕರೀತಿದ್ರು. ಕೈಕಾಲು ತೊಳಕೊಂಡು ಹಳ್ಳದ ದಂಡೇಲಿ ಕೂತವರೊಟ್ಟಿಗೆ ಚಹಾ ಹೀರಲು ಶುರುವಿಟ್ಟೆ. ಹೆಚ್ಚು ಮಾತಾಡದೇ ಕಡುಬಿಗೆ ಹಲಸಿನಸೊಳೆ ಪಲ್ಯವನ್ನು ಬೆರೆಸಿ ತಿಂದೆ. ಎಂಟತ್ತು ಹೆಂಗಸರ ಗುಂಪು ಹರಟೆಯಲ್ಲೇ ಮುಳುಗಿತ್ತು. ಕಿಟ್ಟಿ ಅಜ್ಜಿಯ ಚೀಲದಿಂದ ಎಲೆ ಅಡಿಕೆ ತೆಗೆದು ಬಾಯಿಗೆ ಹಾಕ್ಕೊಂಡು ಕತ್ತೆತ್ತುವಾಗ ನೀ, ಗುಲಾಬಿ ಲಂಗದ ಉದ್ದ ಜಡೆಯಳು ಕಮಲಜ್ಜಿ ಮತ್ತು ಪಿಳ್ಳೆಹುಡುಗರೊಟ್ಟಿಗೆ ಕಣ್ಣೆದುರೇ ನಡೆದು ಹೋಗುತ್ತಿದ್ದೆ!.

ಅರೆ, ಗದ್ದೆ ಅಂಚಿನ ಮೇಲೆ ಒಂದುಕೈಲಿ ಬಣ್ಣದಕೊಡೆ ಮತ್ತೊಂದರಲ್ಲಿ ಲಂಗದ ನೆರಿಗೆ ಹಿಡಿದು ಓಲಾಡೋಳು ಇಷ್ಟೊತ್ತು ಬೆನ್ನ ಹಿಂದೆಯೇ ಕುಳಿತಿದ್ದಳಾ..!?

ಅಜ್ಜೀ...

ಹಾಳೆಟೊಪ್ಪಿ ಕೊಟ್ಟು ಕಳಿಸಿ ತಲೆ ಪೂರಾ ಚಂಡಿಚಂಡಿ... ಅಂತ ಸುಳ್ಳೇ ಕಾರಣ ಮಾಡಿ ಕರೆದಾಗ ನೀನೂ ತಿರುಗಿದೆ. ನಿನ್ನ ನೋಡಿಯೇ ನೋಡಿದೆ. ವ್ಹಾವ್! ಕಾಡಿನ ಹಸುರ ಹಿನ್ನೆಲೆಯಲ್ಲಿ ನೀನು ಮಬ್ಬುಮಬ್ಬಿನ ಗುಲಾಬಿಗೊಂಬೆ. ಚೆಂದದ ನಗುವಿನ ಹೊರತು ಜೋರುಮಳೆಯ ಮುಸುಕಲ್ಲಿ ಮತ್ತೇನೂ ಕಾಣಲಿಲ್ಲ. ಜೊತೆಗಿದ್ದರೂ ನೋಡದೇ, ಮಾತಾಡದೇ ನೀ ಹೆಜ್ಜೆಹಾಕಿದ್ದೆ. ನಾನು ಖುಷಿ-ಬೇಜಾರುಗಳೆರಡನ್ನೂ ಒಟ್ಟೊಟ್ಟಿಗೆ ಎದುರಿಸಿದ ಕ್ಷಣವದು. ಇಡೀದಿನ ಅದೆಂಥಾ ಸೆಳೆತ.

ಸಂಜೆ ಮನೆಸೇರುವ ಹೊತ್ತಿಗೆ ಒಡಲೊಳಗೆ ಕಡಲಿನ ಮೊರೆತ. ಕಮಲಜ್ಜಿಯ ಮನೆಗೆ ಬಂದ ಘಟ್ಟದ ಕೆಳಗಿನ ನೆಂಟರ ಹುಡುಗಿ ಅಂತ ಗೊತ್ತಾಯ್ತು. ರಾಣಿ ಅಂತ ಕೂಗಿದ್ದು ಕೇಳಿಸಿತ್ತು. ಪರಿವಾರಕ್ಕೆಲ್ಲಾ ನಾನಂದ್ರೆ ಇಷ್ಟವಂತೆ..

ಮತ್ಯಾವ ವಿವರವೂ ಸಿಗಲಿಲ್ಲ. ಕೇಳಲು ಭಯ, ಮುಜುಗರ. ಎದೆಯೊಳಗೆ ಆಗಷ್ಟೇ ಕುಡಿಯೊಡೆದ ಪ್ರೀತಿಯ ಒರತೆಗೆ ಅದೆಲ್ಲಿದೆ ಸಾವಧಾನ. ‘ಬಾಬೂ.. ಇಷ್ಟೊತ್ತು ಅವಳು ನಿನ್ನ ಹಿಂದೆಕೂತು ನಿನ್ನನ್ನೇ ನೋಡಿಹೋದ್ಲು, ಈಗ ನೀನ್ ಅವಳ ಬೆನ್ನನ್ನೇ ನೋಡ್ತಾ ಕೂತ್ಕಂಡ್ಯಾ..?’ ಕಿಚಾಯಿಸಿದ್ದಳು ವಿನೋದಕ್ಕ. ಅವತ್ತು ಕೆಲಸ ಮುಗಿವಷ್ಟೊತ್ತಿಗೆ ಕತ್ತಲಾಗಿತ್ತು. ಮಾರನೇ ಬೆಳಿಗ್ಗೆ ಗದ್ದೆನಾಟಿ, ಗುದ್ದಲಿ ನೆಪದಲ್ಲಿ ಕಮಲಜ್ಜಿ ಮನೆಯ ಒಳಹೊರಗು ಓಡಾಡಿದರೂ ನಿನ್ನ ಸುಳಿವಿರಲಿಲ್ಲ. ನಳ್ಳಿ, ನೊಗ ಹೇರಿಕೊಂಡು ಬರುತ್ತಿದ್ದ ಅಜ್ಜ ಗಾಡಿನಿಲ್ಲಿಸಿ, ‘ಬಾಬು.. ಬಾ ಬೇಗ.. ಹೊತ್ತಾತ್ತು’ ಅಂತ ಅವಸರಿಸುತ್ತಿದ್ದರಿಂದ ಕಾಫಿ ಬೇಡಾಂತ ಅಜ್ಜಿಗೇಳಿ ಹೊರದಾಟುವಾಗ ಮೆಟ್ಟಿಲ ಕೆಳಗೆ ಮಿಂಚು, ಎದುರಿಗೆ ನೀನಿದ್ದೆ.

ಬೊಗಸೆ ತುಂಬ ಕನಕಾಂಬರಿ, ಮಲ್ಲಿಗೆ... ಘಮ್ಮನೆ ಸುಳಿಗಾಳಿಯೊಂದಿಗೆ ಎದುರಾದವಳು ಚೆಲ್ಲುತ್ತಿದ್ದ ನಗುವಿಗೆ ಹಸಿ ಅಂಗಳವೆಲ್ಲಾ ಮತ್ತಷ್ಟು ತೇವತೇವ... ಅರಳುಗಣ್ಣಲ್ಲಿ ನೋಡಿ ನಾಚಿ, ನಾನು ಶಬ್ದಗಳಿಗಾಗಿ ತಡಕಾಡುವಷ್ಟರಲ್ಲಿ ನೀನು ನಿಶ್ಶಬ್ದವಾಗಿ ಒಳದಾಟಿಬಿಟ್ಟೆ. ಕಂಡೆಕಂಡೆ ಅನ್ನುವಷ್ಟರಲ್ಲಿ ನಡುಮನೆಯ ಕತ್ತಲಲ್ಲಿ ಕಣ್ಮರೆ. ಅಜ್ಜ ಕರೆಯುತ್ತಲೇ ಇದ್ರು. ಓಡೋಗಿ ಗಾಡಿ ಹತ್ತಿದೆ.ಕೆಸರು ಗದ್ದೇಲಿ ನಾಟಿ ಮಾಡುತ್ತಿದ್ದ ಹೆಂಗಸರಿಗೆ ಸಸಿಕಟ್ಟು ಎಸೆಯುತ್ತಿದ್ದಾಗ ಎಲ್ಲರೆದುರು ‘ರಾಣಿ ನಿಂಗ್ ಒಳ್ಳೆ ಜೋಡಿ ಆತ್ಲು ನೋಡಾ...’ ಅಂದುಬಿಟ್ಟಿದ್ದರು ಗಿರಿಜಕ್ಕ. ಹದಗೊಂಡಿದ್ದ ನನ್ನೆದೆಯಲ್ಲಿ ಆಸೆಯ ಸಸಿಯೊಂದರ ನಾಟಿಯಾಗಿ ಹೋಗಿತ್ತು. ಹಳ್ಳದ ಕಲ್ಲುಗಳನ್ನೆತ್ತಿ ಏಳೆಂಟು ಕಾರೇಡಿಗಳನ್ನೂ, ಗಾಳಕ್ಕೆ ಸಿಕ್ಕಿಕೊಂಡ ಮುರಗೋಡು ಮೀನನ್ನೂ ನಿನಗಂತ ಹಿಡಿದು ತಂದಿದ್ದೆ. ಬೇಗ ಕೆಲಸ ಮುಗಿಸಿ ಹೋಗಿ ಮಾತಾಡಿಸಲೇಬೇಕಂತ ನಿರ್ಧರಿಸಿಬಿಟ್ಟೆ.

ಸಂಜೆ ನೇಗಿಲಹೊತ್ತು ಮನೆಸೇರುವಾಗ ಕಮಲಜ್ಜಿಯೇ ಚಡಿಮೇಲೆ ಕೂತಿದ್ರು. ‘ಕೆಲ್ಸ ಮುಗಿತಾ ಗಡೇ.. ನಿನ್ನೆಯಾರೂ ಏಡಿ ಹಿಡ್ದೀರೆ ರಾಣಿಮಗೀಗ್ ತಿಂಬುಕಾದಿದ್ದಿತು. ಅವಳ್ನ ಬಸ್‍ಹತ್ಸಿ ಬಂದುದ್ ನಾನು’ ಅಂದುಬಿಟ್ರು! ಸದ್ಯ, ಮಳೆನೀರಲ್ಲಿ ನನ್ನ ಕಣ್ಣಹನಿಗಳು, ತೊಟ್ಟಿಕ್ಕಿದ ಬೆವರು ಯಾರಿಗೂ ಕಾಣಲೇ ಇಲ್ಲ.

ರಾತ್ರಿ ಬಚ್ಚಲೊಲೆಯ ಮೇಲೆ ಕಂಬಳಿ ಒಣಹಾಕಿ, ಒಂದೊಂದೇ ಗೇರು-ಹಲಸಿನ ಬೀಜಗಳನ್ನು ಸುಟ್ಟು ಮೆಲ್ಲುತ್ತಿದ್ದೆ. ಬೀಜಗಳು ಪಟಪಟ ಸಿಡಿಯುತ್ತಿದ್ದವು ನನ್ನ ತಲೆ ಕೂಡ. ಹುರುಳಿ ಮೇಯುತ್ತಿದ್ದ ಎತ್ತುಗಳು ಕತ್ತೆತ್ತಿ ಹೂಂ... ಬಾ ಅನ್ನುತ್ತಾ ಉಣಗೋಲ ಕಡೆಗೆ ಯಾರದೋ ಬರುವನ್ನು ನಿರೀಕ್ಷಿಸಿದ್ದವು. ಉಂಡು ಮಲಗಿದ ಮೇಲೆ ಮೂರುಮೂರು ಕಂಬಳಿ ಹೊದ್ದರೂ ಬಿಡುತಿರಲಿಲ್ಲ ಚಳಿ. ಪಂಥದ ಕೋಣೆಯೊಳಗೆ ಮೈಮನಸುಗಳೆರಡೂ ಮರಗಟ್ಟುತ್ತಿದ್ದವು. ನಿದ್ದೆಯಿರದ ರಾತ್ರಿಗಳಲ್ಲಿ ಆಲೋಚನೆಗಳ ಮೆರವಣಿಗೆ.

ದೇವರೇ... ಅವಳೊಬ್ಬಳು ನನ್ನಲ್ಲಿಗೆ ಬರಲಿ, ಮಿಕ್ಕಿದೆಲ್ಲವನ್ನೂ ನಾನು ದಕ್ಕಿಸಿಕೊಳ್ಳುತ್ತೇನೆ ಅಂತ ಗೋಗರೆದೆ. ಊರಲ್ಲಿ ಮೂರು ಲ್ಯಾಂಡ್‍ಲೈನ್ ಫೋನ್‍ಗಳಿವೆ. ಅವೂ ಮಳೆಗಾಲಕ್ಕೆ ಮುದುಡಿ ಮಲಗಿರುತ್ತವೆ. ಪತ್ರ ಬರೆಯೋಣವೆಂದರೆ ಕಮಲಜ್ಜಿಗೆ ಗೊತ್ತಿರೋ ವಿಳಾಸ ‘ಕುಂದಾಪುರಕ್ಕೆ ಹತ್ತೇ ರುಪಾಯಿ ಚಾರ್ಜ್ ಕಣಾ... ಸಂದಿಯಂಗ್ ತಿರ್ಗಿ ಹೋರೆ ಮನೆಬುಡುಕ್ಕೇ ಆಟೋ ಹೋತ್ತು’ ಅನ್ನೋದಷ್ಟೇ. ಇನ್ನು ನಮ್ಮೂರಿನ ಪೋಸ್ಟ್‌ಮನ್ ಪುಟ್ಟಾಚಾರಿ ವಾರಕ್ಕೊಮ್ಮೆ ರಸ್ತೆಬದಿ ಅಂಗಡಿಯಲ್ಲೆಲ್ಲೋ ಲೆಟ್ರು ಕೊಟ್ಟು ಹೋಗೋರು. ಊರಿಂದ ಮೈಲಿದೂರದ ನಮ್ಮ ‘ಕಾನುಮನೆ’ಗೆಲ್ಲಿ ಬಂದಾರು..? ಅದೂ ಈ ಮಳೆಗಾಲದಲ್ಲಿ... ರಾತ್ರಿಯೆಲ್ಲಾ ಕಾಡಂಚಲ್ಲಿ ಕಿವಿಗಡಚಿಕ್ಕುವ ಜೀರುಂಡೆ ಸದ್ದು. ಬೆಳಕು ಮೂಡುವ ಹೊತ್ತಲ್ಲಿ ನೆನಪಾಗಿತ್ತು. ಮುಂಬರುವ ಮಹಾಲಯಕ್ಕೆ ಕಮಲಜ್ಜಿ ವರ್ಷಾನೂ ನಿಮ್ಮೂರಿಗೇನೇ ಹೋಗಿಬರೋದಲ್ವಾ?.

ಅದೊಂದೇ ಮಾರ್ಗ, ನಿನಗೊಂದು ಪತ್ರ ಬರೀಬೇಕು. ನಾನು ಎದೆತುಂಬಿಕೊಂಡ ನಿರ್ಮಲ ಪ್ರೀತಿಯನ್ನು ಕಮಲಜ್ಜಿ ಕೈಲಿಟ್ಟು ಕಳಿಸಿಕೊಡಬೇಕು. ಕಳಕೊಂಡ ಹಿರಿಯರ ನೆನೆಯುವ ಮಹಾಲಯದಲ್ಲಿ ಹೊಸ ಚಿಗುರನ್ನು ಊರಿ ಬರಲಿ. ಅಲ್ಲೀವರೆಗೂ ಕಾಯಬೇಕಂತ ತೀರ್ಮಾನಿಸಿಬಿಟ್ಟೆ. ಅವಾಗ ಹುಟ್ಟಿದ ಈ ಒಲವಿನೋಲೆಯನ್ನು ಕಮಲಜ್ಜಿಯ ಕೈಗಿಡಬೇಕೆಂದು ಹೋಗಿದ್ದ ದಿನ ಅವರ ಮನೆತುಂಬ ನೆಂಟರು.. ಓ ಮದುಮಗನೇ ಬಂದ. ಅಂತ ಸುಬ್ಬಣ್ಣ ನನ್ನನ್ನು ತೋರಿಸಿದ್ದು ನಿನ್ನಪ್ಪನಿಗೇ!. ಮದುವೆಗೆ ಹಿರಿಜೀವಗಳು ನಿರ್ಧರಿಸಿಯಾಗಿತ್ತು..!

ಅವಾಗ ನಾ ಬರೆದಿದ್ದ ಓಲೆ ನನ್ನಲ್ಲೇ ಉಳೀತು.. ಇಷ್ಟದ ಜೀವವನ್ನು ಮನೆ ತುಂಬಿಕೊಂಡು ಒಂಬತ್ತು ವರ್ಷಗಳಾಯ್ತು. ನನ್ನ ಸಾಮ್ರಾಜ್ಯದಲ್ಲೀಗ ಆಕೆಯೇ ಪಟ್ಟದರಸಿ. ಸಂಸಾರವೀಗ ಪೂರ್ಣಸುಖೀ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT