ನನ್ನ ವಿರುದ್ಧ ಷಡ್ಯಂತ್ರ: ಶಿರೂರು ಶ್ರೀ

ಮಂಗಳವಾರ, ಮಾರ್ಚ್ 26, 2019
33 °C

ನನ್ನ ವಿರುದ್ಧ ಷಡ್ಯಂತ್ರ: ಶಿರೂರು ಶ್ರೀ

Published:
Updated:
ನನ್ನ ವಿರುದ್ಧ ಷಡ್ಯಂತ್ರ: ಶಿರೂರು ಶ್ರೀ

ಉಡುಪಿ: ‘ತಿರುಚಿದ ವಿಡಿಯೊ ಹಾಗೂ ಫೋನ್ ಸಂಭಾಷಣೆಯನ್ನು ಸೃಷ್ಟಿಸಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಎಲ್ಲರನ್ನೂ ನನ್ನ ಮೇಲೆ ಎತ್ತಿಕಟ್ಟುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ’ ಎಂದು ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಪೇಜಾವರ ಸ್ವಾಮೀಜಿ ಅವರು ಅಷ್ಟ ಮಠದ ಯತಿಗಳಲ್ಲೇ ಹಿರಿಯರು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಒಂದು ಮಾತನ್ನೂ ಈ ವರೆಗೆ ನಾನು ಮೀರಿಲ್ಲ. ಬೇಕಾದರೆ ಅವರನ್ನೇ ಕೇಳೀ. ಹೀಗಿರುವಾಗ ಅವರನ್ನು ಕೊಲೆ ಮಾಡುತ್ತೇನೆ ಎಂದು ಹೇಳಲು ಸಾಧ್ಯವೆ. ಪೇಜಾವರ ಮಠದ ಹಿಂದಿನ ಕಿರಿಯ ಯತಿ ವಿಶ್ವವಿಜಯ ಅವರೊಂದಿಗೆ ಮಾತನಾಡಿದ್ದೇನೆ ಎಂಬ ಆರೋಪವೂ ಶುದ್ಧ ಸುಳ್ಳು. ರಾಜಕೀಯ ಅಂದರೇನು ಎಂದು ನನಗೆ ಗೊತ್ತಿದೆ. ಸ್ಪರ್ಧೆ ಮಾಡುವುದು ಖಚಿತ’ ಎಂದು ಅವರು ಹೇಳಿದರು.

‘ಕೆಲವು ದೇಶಗಳಲ್ಲಿ ಒಬ್ಬ ವ್ಯಕ್ತಿ ಎರಡಕ್ಕಿಂತ ಅಧಿಕ ಬಾರಿ ಚುನಾವಣೆಗೆ ನಿಲ್ಲುವಂತಿಲ್ಲ. ನಮ್ಮಲ್ಲಿ ಮಾತ್ರ ಅದಕ್ಕೆ ಮಿತಿ ಇಲ್ಲ. ಒಬ್ಬನೇ ವ್ಯಕ್ತಿ ಹಲವು ಬಾರಿ

ಸ್ಪರ್ಧಿಸುತ್ತಾನೆ, ಸ್ಪರ್ಧಿಸುತ್ತಲೇ ಇರುತ್ತಾನೆ. ಇದು ಸರಿಯಲ್ಲ. ಅದಕ್ಕೇ ಈ ಬಾರಿ ನಾನೂ ಚುನಾವಣೆಗೆ ನಿಲ್ಲುತ್ತೇನೆ. ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ’ ಎನ್ನುವ ಮೂಲಕ ಎರಡು ಬಾರಿ ಶಾಸಕರಾಗಿದ್ದ ಕೆ. ರಘುಪತಿ ಭಟ್ ಅವರಿಗೆ ಟಾಂಗ್ ನೀಡಿದರು.

ಈ ಪ್ರಕರಣದ ನಂತರ ಉಡುಪಿ ಮಠಾಧೀಶರು ನಿಮ್ಮನ್ನು ಸಂಪರ್ಕಿಸಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದೆಲ್ಲ ಸುಳ್ಳು ಆರೋಪ, ನಕಲಿ ಸಂಭಾಷಣೆ ಎಂದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಅವರು ಸಂಪರ್ಕಿಸಿ ವಿವರಣೆ ಕೇಳುವ ಅಗತ್ಯವೇ ಇಲ್ಲವಲ್ಲ’ ಎಂದರು.

ಲಕ್ಷ್ಮೀವರತೀರ್ಥ ಸ್ವಾಮೀಜಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದಕ್ಕೆ ಮಾಧ್ವ ಬ್ರಾಹ್ಮಣ ಸಮುದಾಯದಿಂದ ಆಕ್ಷೇಪ ವ್ಯಕ್ತವಾಗಿದೆ. ‘ಮಾಧ್ಯಮಗಳಿಗೆ ಮಾಧ್ವ ಬ್ರಾಹ್ಮಣನ ಪ್ರಶ್ನೆಗಳು, ಉತ್ತರಿಸಿ...’ ಎಂಬ ಶೀರ್ಷಿಕೆಯಡಿ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬರು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಸಂದೇಶ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿಯೂ ಹರಿದಾಡುತ್ತಿದೆ.

* ತಿರುಚಲಾಗಿದೆಯೇ?

ವಿಡಿಯೊದ ಸಾಚಾತನ ಪರಿಶೀಲಿಸಿದ್ದೀರಾ? ಧ್ವನಿ ಹಾಗೂ ಶಿರೂರು ಶ್ರೀಗಳು ಎನ್ನಲಾದ ವ್ಯಕ್ತಿಯ ಚಿತ್ರವನ್ನು ನಕಲಿ ಮಾಡಲಾಗಿದೆಯೇ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಿದ ನಂತರವೇ ಪ್ರಸಾರ ಮಾಡಲಾಯಿತೇ?

* ಎಂಟು ಮಠಗಳಲ್ಲಿ ಒಂದಾಗಿರುವ ಶಿರೂರು ಮಠಕ್ಕೆ ಮಾತ್ರ ಲಕ್ಷ್ಮೀವರತೀರ್ಥ ಸ್ವಾಮೀಜಿ ಮಠಾಧೀಶರು.

ಎಲ್ಲ ಮಠಗಳಿಗೂ ಪ್ರತ್ಯೇಕ ಅಸ್ತಿತ್ವ ಇದೆ. ಅಂಥದ್ದರಲ್ಲಿ ಶಿರೂರು ಮಠದ ಸ್ವಾಮಿಗಳು ಎಂಬುದನ್ನು ಅಷ್ಟ ಮಠದ ಯತಿ ಅಂತ ಏಕೆ ಪ್ರಸಾರ ಮಾಡುತ್ತಿದ್ದೀರಿ?

* ‘ಮಾಧ್ವ ಯತಿಗಳು ಹೀಗೆಯೇ ಇರ್ತಾರೆ’ ಎಂಬ ಮಾತನ್ನು ಅನ್ವಯಿಸಿ ಕನ್ನಡ ಪತ್ರಿಕೋದ್ಯಮವೇ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪ ಅನ್ನಬಹುದಾ?

ಇನ್ನು ವಿಡಿಯೋದಲ್ಲಿ ಸ್ವಾಮಿಗಳು ಹೇಳಿದರು ಎನ್ನಲಾದ, ‘ಅಷ್ಟ ಮಠದ ಎಲ್ಲ ಯತಿಗಳು ಹೀಗೆ’ ಎಂಬ ಮಾತನ್ನು ಪತ್ರಿಕೋದ್ಯಮಕ್ಕೂ ಅನ್ವಯಿಸಿ, ಯಾವುದೋ ಒಂದು ಚಾನೆಲ್ ಅಥವಾ ಪತ್ರಿಕೆಯ ಸಂಪಾದಕ, ‘ಎಲ್ಲ ಚಾನೆಲ್- ಪತ್ರಿಕೆ ಹೀಗೆ ಭ್ರಷ್ಟಾಚಾರಿಗಳು’ ಅಂದರು ಅಂತ ಇಟ್ಟುಕೊಳ್ಳಿ, ಆಗ ಕನ್ನಡ ಪತ್ರಿಕೋದ್ಯಮವೇ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪ ಎಂದು ಆಗ ಕರೆಯಬಹುದೇ, ಪ್ರಚಾರ ಮಾಡಬಹುದೇ?

* ಪೇಜಾವರರ ಅಭಿಪ್ರಾಯ ಏಕೆ ಬೇಕು?

ಶಿರೂರು ಮಠದ ಸ್ವಾಮಿಗಳ ಹೇಳಿಕೆಗೆ ಅಥವಾ ವಿಡಿಯೊಗೆ ಪೇಜಾವರ ಸ್ವಾಮೀಜಿ ಅಭಿಪ್ರಾಯ ಏಕೆ ಬೇಕು? ಅವರು ಅಷ್ಟಮಠಗಳ ಯತಿಗಳಲ್ಲಿ ಹಿರಿಯರು ಎಂಬುದು ನಿಮ್ಮ ವಾದ. ಹಾಗಾದರೆ ಒಂದು ಚಾನೆಲ್‌ನಲ್ಲಿ ಏನೋ ದೊಡ್ಡ ತಪ್ಪಾದರೆ, ಚಾನೆಲ್‌ಗಳ ಪೈಕಿಯೇ ಹಳೆಯದಾದ ಚಾನೆಲ್‌ನ ಮುಖ್ಯಸ್ಥರನ್ನು ಕರೆಸಿ, ಅವರ ಅಭಿಪ್ರಾಯ, ಅಪ್ಪಣೆ, ತೀರ್ಮಾನ ಕೇಳಿ ಮುಂದಿನ ಕ್ರಮ ಕೈಗೊಳ್ಳುತ್ತೀರಾ?

* ಚುನಾವಣೆಗೆ ನಿಲ್ತೀನಿ ಅಂದಾಗಲೇ ಆ ವಿಡಿಯೋ ಏಕೆ ಬಂತು?

ವಿಡಿಯೊದಲ್ಲಿ ಇರುವಂತೆಯೇ ತಪ್ಪು ಮಾಡಿದ್ದರೆ ಆ ಮಠದ (ಶಿರೂರು ಮಠ) ಪರಂಪರಾಗತ ಶಿಷ್ಟಾಚಾರಗಳು, ನಮ್ಮ ದೇಶದ ಕಾನೂನುಬದ್ಧ ಸಂಸ್ಥೆಗಳು ಕ್ರಮ ತೆಗೆದುಕೊಳ್ಳಬೇಕು. ಆ ಬಗ್ಗೆ ಭಕ್ತರು ದೂರು ದಾಖಲಿಸಲಿ. ಸ್ವಾಮೀಜಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಘೋಷಿಸಿದ ಹೊತ್ತಲ್ಲೇ ಇಂಥ ವಿಡಿಯೊ ಹೇಗೆ ಬಿಡುಗಡೆ ಆಯಿತು? ಆ ವಿಡಿಯೊ ರೆಕಾರ್ಡ್ ಆಗಿರುವ ದಿನ ಯಾವುದು? ಹಳೆಯದಾಗಿದ್ದರೆ ಈವರೆಗೆ ಏಕೆ ಪ್ರಸಾರವಾಗಲಿಲ್ಲ? ಉತ್ತರಿಸಿ ಅಥವಾ ಬ್ರಾಹ್ಮಣರ ಹೋರಾಟ ಎದುರಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry