ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಹೋರಾಟದ ಅನುಕರಣೀಯ ಮಾದರಿ

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ರೈತರು ಚಳವಳಿಯ ಹೊಸ ಆಯಾಮವೊಂದನ್ನು ದೇಶದ ಮುಂದೆ ತೆರೆದಿಟ್ಟಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ನಾಸಿಕ್‌ನಿಂದ 30 ಸಾವಿರಕ್ಕೂ ಹೆಚ್ಚು ರೈತರು ಮುಂಬೈವರೆಗೆ ಸುಮಾರು 180 ಕಿ.ಮೀ. ದೂರ ಬರಿಗಾಲಿನಲ್ಲಿ ನಡೆದುಬಂದು ಮಹಾರಾಷ್ಟ್ರದ ವಿಧಾನಭವನದ ಮುಂದೆ ಧರಣಿ ನಡೆಸಿದ್ದಾರೆ. ದಾರಿಯುದ್ದಕ್ಕೂ ಯಾರಿಗೂ ತೊಂದರೆ ಕೊಡದೆ, ಶಾಂತಿಯುತವಾಗಿ ಬಂದು, ಮುಂಬೈ ಮಹಾನಗರಿಯಲ್ಲೂ ಸಂಚಾರ ದಟ್ಟಣೆ ಉಂಟು ಮಾಡದೆ ಅವರು ನಡೆಸಿರುವ ಹೋರಾಟ ಎಲ್ಲ ಜನವರ್ಗದ ಮೆಚ್ಚುಗೆಗೆ ಪಾತ್ರವಾಗಿದೆ. ಬುಡಕಟ್ಟು ಜನರು, ಕೃಷಿ ಕಾರ್ಮಿಕರು ಮತ್ತು ರೈತರು ಜತೆಯಾಗಿ ನಡೆಸಿದ ಈ ಹೋರಾಟ ರಾಜ್ಯ ಸರ್ಕಾರದ ಕಣ್ಣು ತೆರೆಸಿದ್ದೇ ಅಲ್ಲದೆ, ಚಳವಳಿಯೊಂದು ಹೇಗೆ ಇತರರಿಗೆ ಮಾದರಿಯಾಗಿರಬೇಕು ಎನ್ನುವುದನ್ನೂ ತೋರಿಸಿಕೊಟ್ಟಿದೆ. ಈ ರೈತರ ಬೇಡಿಕೆಗಳು ಹೊಸದೇನಲ್ಲ. ಬರಗಾಲ, ಕೀಟಬಾಧೆ, ಬೆಳೆನಾಶದಿಂದ ಕಂಗೆಟ್ಟು ಕಳೆದ ಮೂರು ವರ್ಷಗಳಿಂದಲೂ ತಮ್ಮ ಬೇಡಿಕೆಗಳನ್ನು ಈಡೇರಿಸಲು ಅವರ ಧರಣಿ, ಹೋರಾಟ ನಾಸಿಕ್‌ನಲ್ಲಿ ನಡೆದೇ ಇತ್ತು. ಆದರೆ ಈ ಸಲ ನೇರವಾಗಿ ರಾಜಧಾನಿ ಮುಂಬೈಗೆ ಮುತ್ತಿಗೆ ಹಾಕಿದ್ದು ವಿಶೇಷ. ಮುಂಬೈಯಲ್ಲಿ ಬೆಳಿಗ್ಗೆ ಶಾಲಾ ಕಾಲೇಜುಗಳಿಗೆ, ಉದ್ಯೋಗಕ್ಕೆ ತೆರಳುವ ಜನರಿಗೆ ಸಂಚಾರ ದಟ್ಟಣೆ ಉಂಟು ಮಾಡಿ ತೊಂದರೆ ಆಗಬಾರದೆಂದು ಈ ರೈತರು ನಗರದ ಹೊರಗೆ ರಾತ್ರಿ ಬೀಡುಬಿಟ್ಟು ಬೆಳಿಗ್ಗೆ 5 ಗಂಟೆಗೆ ಮುನ್ನವೇ ನಗರ ಪ್ರವೇಶಿಸಿದ್ದೂ ಒಂದು ಮಾದರಿ ನಡೆ.

ಮಹಾನಗರಿಗೆ ಬಂದ ಸಾವಿರಾರು ರೈತರಿಗೆ ನೀರು, ಮಜ್ಜಿಗೆ, ಆಹಾರ ಕೊಟ್ಟು ನಗರದ ಜನರೂ ಅಂತಃಕರಣವನ್ನು ಮೆರೆದಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರಕ್ಕೆ ಮುತ್ತಿಗೆ ಹಾಕಿ ಸಂಚಾರ ಅಸ್ತವ್ಯಸ್ತಗೊಳಿಸಿ ಜನಜೀವನ ಸ್ತಬ್ಧಗೊಳಿಸುವ ಎಲ್ಲ ಹೋರಾಟಗಾರರೂ ಈ ರೈತ ಹೋರಾಟದಿಂದ ಕಲಿಯಬೇಕಾದದ್ದು ಸಾಕಷ್ಟಿದೆ. ಸಾಮಾಜಿಕ ಜಾಲತಾಣಗಳಲ್ಲೂ ದೇಶದ ಇತರ ಭಾಗದ ಜನರು ರೈತರ ಈ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದರ ಹೊರತಾಗಿಯೂ ಆಳುವ ಪಕ್ಷದ ಪರ ಇರುವ ಕೆಲವರು ಈ ಹೋರಾಟದ ಬಗ್ಗೆ ಕ್ಷುಲ್ಲಕ ಟೀಕೆಗಳನ್ನು ನಡೆಸಿರುವುದು ಸರಿಯಲ್ಲ. ರೈತ ಕಾರ್ಮಿಕರು ಲೆನಿನ್‌ ಅವರ ಭಾವಚಿತ್ರವಿರುವ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದಾಗಲೀ, ಅದಕ್ಕೆ ಮಾವೊ ಹೋರಾಟವನ್ನು ನೆನಪಿಸುವ ಲಾಂಗ್‌ಮಾರ್ಚ್‌ ಎಂಬ ಹೆಸರು ಕೊಟ್ಟದ್ದಾಗಲೀ ಅಥವಾ ಸಿಪಿಎಂ ಪಕ್ಷದ ಅಂಗಸಂಸ್ಥೆಯಾದ ಕಿಸಾನ್‌ ಸಭಾದ ನೇತೃತ್ವದಲ್ಲಿ ಧರಣಿ ನಡೆಸಿದ್ದಾಗಲೀ ಟೀಕೆಗಳಿಗೆ ಕಾರಣವಾಗಬೇಕಾದುದು ಅಗತ್ಯವಿಲ್ಲ. ಇಷ್ಟೊಂದು ಶಾಂತಿಯುತವಾಗಿ, ಪೂರ್ಣ ಬದ್ಧತೆಯಿಂದ ಹೋರಾಟ ನಡೆಸುವಂತೆ ರೈತರನ್ನು ಸಂಘಟಿಸಿದ ಕಿಸಾನ್‌ ಸಭಾದ ಪದಾಧಿಕಾರಿಗಳು ಅಭಿನಂದನೆಗೆ ಅರ್ಹರು.

ರೈತರ ಪೂರ್ಣ ಸಾಲ ಮನ್ನಾ, ಸಾಗುವಳಿ ಮಾಡುತ್ತಿರುವ ಅರಣ್ಯಭೂಮಿಯ ಹಕ್ಕು ನೀಡುವುದು, ಹೊಸ ಪಡಿತರ ಕಾರ್ಡ್‌ಗಳನ್ನು ವಿತರಿಸುವುದು ಮತ್ತು ಸ್ವಾಮಿನಾಥನ್‌ ವರದಿಯ ಜಾರಿ– ಈ ಎಲ್ಲ ಬೇಡಿಕೆಗಳನ್ನೂ ಈಡೇರಿಸಲು ಮಹಾರಾಷ್ಟ್ರ ಸರ್ಕಾರ ಲಿಖಿತ ರೂಪದಲ್ಲಿ ಒಪ್ಪಿಗೆ ನೀಡಿದೆ. ಹೀಗಾಗಿ ರೈತರ ಹೋರಾಟ ಯಶಸ್ವಿಯಾಗಿದೆ ಎನ್ನಬಹುದು. ಆದರೆ ಸರ್ಕಾರದ ಭರವಸೆ ಕಾಲಬದ್ಧವಾಗಿ ಪೂರ್ಣರೂಪದಲ್ಲಿ ಜಾರಿಗೆ ಬರುವುದು ಮುಖ್ಯ. ರೈತರ ಸಾಲ ಮನ್ನಾದ ಬೇಡಿಕೆಯನ್ನು ರಾಜ್ಯ ಸರ್ಕಾರ ಕಳೆದ ವರ್ಷವೇ ಒಪ್ಪಿಕೊಂಡಿತ್ತು. ಆದರೆ ಜಾರಿಯ ಹೊತ್ತಿಗೆ ಅದರಲ್ಲಿ ತಾರತಮ್ಯ ಎಸಗಲಾಗಿತ್ತು. ಸರ್ಕಾರದ ಹೇಳಿಕೆಯ ಪ್ರಕಾರವೇ 46.2 ಲಕ್ಷ ರೈತರ ಪೈಕಿ 35.5 ಲಕ್ಷ ರೈತರಿಗೆ ಮಾತ್ರವೇ ಸಾಲ ಮನ್ನಾದ ಲಾಭ ಸಿಕ್ಕಿದೆ. ಅದರಲ್ಲೂ ಸರ್ಕಾರ ಭರವಸೆ ನೀಡಿದಂತೆ ₹ 1.5 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದರ ಬದಲು ₹ 40 ಸಾವಿರದವರೆಗಿನ ಸಾಲಗಳನ್ನು ಮಾತ್ರ ಮನ್ನಾ ಮಾಡಲಾಗಿತ್ತು. ಕೀಟಬಾಧೆ, ಅಕಾಲಿಕ ಮಳೆ ಮತ್ತು ಶೀತಗಾಳಿಯಿಂದಾಗಿ ರೈತರ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು ಅದಕ್ಕೆ ಪರಿಹಾರವನ್ನೂ ಸರ್ಕಾರ ಕೊಟ್ಟಿರಲಿಲ್ಲ. ರೈತರ ಮೊಣಕೈಗೆ ತುಪ್ಪ ಸವರುವ ನೀತಿಯನ್ನು ಸರ್ಕಾರ ಈಗಲಾದರೂ ಕೈಬಿಟ್ಟು ಮಾತಿಗೆ ತಪ್ಪದಂತೆ ನಡೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT