ನಾಗರಿಕ ಸೇವೆ: ಬೆಂಗಳೂರಿಗೆ ಕೊನೆಯ ಸ್ಥಾನ

ಶುಕ್ರವಾರ, ಮಾರ್ಚ್ 22, 2019
29 °C
ಸ್ಥಳೀಯ ಸಂಸ್ಥೆ ಆಡಳಿತ ಬಗ್ಗೆ ದೇಶದ ಪ್ರಮುಖ 23 ನಗರಗಳಲ್ಲಿ ಜನಾಗ್ರಹ ಸಂಸ್ಥೆ ಸಮೀಕ್ಷೆ: ಅಗ್ರ ಸ್ಥಾನದಲ್ಲಿ ಪುಣೆ

ನಾಗರಿಕ ಸೇವೆ: ಬೆಂಗಳೂರಿಗೆ ಕೊನೆಯ ಸ್ಥಾನ

Published:
Updated:
ನಾಗರಿಕ ಸೇವೆ: ಬೆಂಗಳೂರಿಗೆ ಕೊನೆಯ ಸ್ಥಾನ

ನವದೆಹಲಿ: ಸ್ಥಳೀಯ ಸಂಸ್ಥೆ ಆಡಳಿತ ಮತ್ತು ನಾಗರಿಕ ಸೇವೆಗೆ ಸಂಬಂಧಿಸಿದಂತೆ ದೇಶದ ಪ್ರಮುಖ 23 ನಗರಗಳಲ್ಲಿಯೇ ರಾಜ್ಯದ ರಾಜಧಾನಿ ಬೆಂಗಳೂರು ಅತ್ಯಂತ ಕಳಪೆ ಸಾಧನೆ ಮಾಡಿರುವ ನಗರವಾಗಿದೆ.

ಬೆಂಗಳೂರು ಮೂಲದ ಜನಾಗ್ರಹ ಸಂಸ್ಥೆಯು ಬುಧವಾರ ಇಲ್ಲಿ ಬಿಡುಗಡೆ ಮಾಡಿರುವ ‘ಭಾರತದ ನಗರ ವ್ಯವಸ್ಥೆಯ ವಾರ್ಷಿಕ ಸಮೀಕ್ಷೆ’ಯ (ಎಎಸ್‌ಐಸಿಎಸ್) ಐದನೇ ವರದಿಯ ಪ್ರಕಾರ, ಬೆಂಗಳೂರಿನ ನಾಗರಿಕರಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ ದೊರೆಯುತ್ತಿರುವ ಸೇವೆಯು ತೃಪ್ತಿದಾಯಕವಾಗಿಲ್ಲ.

‘ಉತ್ತಮ ಆಡಳಿತಕ್ಕೆ ಜಾಗತಿಕವಾಗಿ ಹೆಸರಾಗಿರುವ ಲಂಡನ್‌ (10ಕ್ಕೆ 8.8 ಅಂಕ), ನ್ಯೂಯಾರ್ಕ್‌ (8.8 ಅಂಕ) ಮತ್ತು ಜೋಹಾನ್ಸ್‌ಬರ್ಗ್‌ (7.6 ಅಂಕ) ನಗರಗಳು ಅನುಸರಿಸುತ್ತಿರುವ ಮಾನದಂಡವನ್ನು ಆಧಾರವಾಗಿ ಇರಿಸಿಕೊಂಡು, ಆಡಳಿತ ಮತ್ತು ನಾಗರಿಕ ಸೇವೆಗೆ ಸಂಬಂಧಿಸಿದಂತೆ ದೇಶದ 23 ನಗರಗಳ ನಿವಾಸಿಗಳಿಗೆ 89 ಪ್ರಶ್ನೆಗಳನ್ನು ಕೇಳುವ ಮೂಲಕ ಪ್ರತಿ ನಗರಕ್ಕೂ ಅಂಕ ನೀಡಲಾಗಿದೆ ಎಂದು ಸಂಸ್ಥೆಯ ಅನಿಲ್‌ ನಾಯರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2013ರಿಂದ ಸಂಸ್ಥೆಯು ಸಮೀಕ್ಷೆ ನಡೆಸುತ್ತಿದೆ. ಕಳೆದ ವರ್ಷ ಬಿಡುಗಡೆ ಮಾಡಲಾದ ವರದಿಯಲ್ಲಿ 16ನೇ ಸ್ಥಾನದಲ್ಲಿದ್ದ ಬೆಂಗಳೂರು ನಗರ ಈ ಬಾರಿ 3.0 ಅಂಕ ಗಳಿಸುವ ಮೂಲಕ 23ನೇ ಸ್ಥಾನಕ್ಕೆ ಕುಸಿದಿದೆ. 5.1 ಅಂಕ ಗಳಿಸಿರುವ ಮಹಾರಾಷ್ಟ್ರದ ಪುಣೆ ನಗರವು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕಡಿಮೆ ಅಂಕ ಗಳಿಸಿರುವ ನಗರಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಸೇವಾ ಗುಣಮಟ್ಟ ಕುಸಿದಿದೆ ಎಂದು ಭಾವಿಸಬೇಕಿಲ್ಲ. ಬದಲಿಗೆ, ಸಮೀಕ್ಷೆಗೆ ಒಳಪಡಿಸಿದ ಇನ್ನುಳಿದ ನಗರಗಳಲ್ಲಿನ ಗುಣಮಟ್ಟ ಸುಧಾರಿಸಿದೆ ಎಂದು ಅವರು ವಿವರಿಸಿದರು.

ನಗರ ಯೋಜನೆ ಮತ್ತು ವಿನ್ಯಾಸ ರೂಪಿಸುವಿಕೆ, ಜನಸಂಖ್ಯೆ ಮತ್ತು ಸಂಪನ್ಮೂಲ, ಅಧಿಕಾರ ಮತ್ತು ಕಾನೂನುಬದ್ಧ ರಾಜಕೀಯ ಪ್ರಾತಿನಿಧ್ಯ, ಪಾರದರ್ಶಕತೆ, ಜವಾಬ್ದಾರಿ ಮತ್ತು ಜನರ ಪಾಲ್ಗೊಳ್ಳುವಿಕೆಯ ಅಂಶಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ. ಪಾರದರ್ಶಕತೆ, ಜವಾಬ್ದಾರಿಮತ್ತು ಜನರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಮುಂಬೈ, ಚಂಡೀಗಡ, ಡೆಹ್ರಾಡೂನ್‌, ಪಟ್ನಾ, ಚೆನ್ನೈ ಮತ್ತು ಜೈಪುರ ನಗರಗಳಿಗಿಂತ ಉತ್ತಮ ಸ್ಥಾನದಲ್ಲಿರುವ ಬೆಂಗಳೂರು, ಮಿಕ್ಕ ಅಂಶಗಳಲ್ಲಿ ಎಲ್ಲ ನಗರಗಳಿಗಿಂತಲೂ ಹಿಂದಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ಸ್ಥಳೀಯ ಸಂಸ್ಥೆಯು ಕೇಂದ್ರ ಸರ್ಕಾರದ ಅಮೃತ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಮಾನದಂಡಗಳನ್ನು ಅನುಸರಿಸದೇ ಇರುವುದೂ ಹಿಂದುಳಿಯುವಿಕೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.

ಮೇಯರ್‌ಗೆ ಇಲ್ಲ ಅಧಿಕಾರ:

ಜನಸಂಖ್ಯೆಗೆ ಅನುಗುಣವಾಗಿ 23 ನಗರಗಳನ್ನು ಬೃಹತ್‌ ನಗರ, ದೊಡ್ಡ ನಗರ ಮತ್ತು ಮಧ್ಯಮ ನಗರ ಎಂದು ವರ್ಗೀಕರಿಸಲಾಗಿದ್ದು, ನಗರದ ಪ್ರಥಮ ಪ್ರಜೆಯಾಗಿರುವ ಮೇಯರ್‌ಗಳಿಗೆ, ಆಯಾ ಸ್ಥಳೀಯ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರವನ್ನೇ ನೀಡದಿರುವುದು, ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಅನುಭವಿ ಅಧಿಕಾರಿ (ಆಯುಕ್ತ) ಆಯ್ಕೆಯ ವಿಷಯದಲ್ಲೂ ಮೇಯರ್‌ಗೆ ಯಾವುದೇ ಅಧಿಕಾರ ಇಲ್ಲದಿರುವುದು ಎಲ್ಲ ನಗರಗಳಲ್ಲೂ ಕಂಡುಬಂದಿದೆ. ಕೆಲವೆಡೆ ಮೇಯರ್‌ ಅಧಿಕಾರಾವಧಿ 5 ವರ್ಷ ಇದ್ದರೆ, ಬೆಂಗಳೂರು ಮೇಯರ್‌ಗೆ ಕೇವಲ 1 ವರ್ಷದ ಅಧಿಕಾರಾವಧಿ ನೀಡಿರುವುದು ವ್ಯವಸ್ಥೆಯನ್ನು ಅರಿಯುವ ನಿಟ್ಟಿನಲ್ಲಿ ತೊಡಕಾಗಿದೆ ಎಂದು ಅವರು ಕಾರಣ ನೀಡಿದರು.

ನಗರ ಯೋಜನೆ ಅನುಷ್ಠಾನದಲ್ಲಿ ನಿರ್ದಿಷ್ಟ ವಿನ್ಯಾಸದ ಕೊರತೆ, ಸ್ವಯಂ ಆದಾಯ ಹೆಚ್ಚಳ ಕುರಿತೂ ಅನೇಕ ನಗರಗಳು ಯತ್ನಿಸಿಲ್ಲ. ಪುಣೆ, ಮುಂಬೈ ಮತ್ತು ಹೈದರಾಬಾದ್‌ನ ಸ್ಥಳೀಯ ಸಂಸ್ಥೆಗಳು ಸ್ವಯಂ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಿದ್ದು, ಬಜೆಟ್‌ ನಿರ್ವಹಣೆ ವಿಷಯದಲ್ಲಿ ಬಹುತೇಕ ನಗರಗಳ ಸಾಧನೆ ತೃಪ್ತಿದಾಯಕವಾಗಿಲ್ಲ. ಯಾವುದೇ ಸ್ಥಳೀಯ ಆಡಳಿತವೂ ವಾರ್ಷಿಕ ಖರ್ಚು, ವೆಚ್ಚಗಳ ಲೆಕ್ಕ ಪರಿಶೋಧನೆಗೂ ಗಮನ ಹರಿಸದೆ ನಿಷ್ಕಾಳಜಿ ವಹಿಸಿವೆ.

ಆಯುಕ್ತರನ್ನು ಸರಾಸರಿ 12ರಿಂದ 15 ತಿಂಗಳುಗಳಿಗೆ ವರ್ಗಾವಣೆ ಮಾಡಲಾಗುತ್ತಿದ್ದು, ನಗರ ಯೋಜನೆ, ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ಅನುಭವಕ್ಕೆ ಅವಕಾಶವೇ ದೊರೆಯದಿರುವುದು ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ. ಕೌಶಲಪೂರ್ಣ ಮಾನವ ಸಂಪನ್ಮೂಲದ ಕೊರತೆಯೂ ಎಲ್ಲೆಡೆ ಕಂಡುಬಂದಿದೆ. ಸ್ಥಳೀಯ ಸಂಸ್ಥೆಯ ಮೇಯರ್‌ ಹಾಗೂ ಸದಸ್ಯರಿಗೆ ಅಗತ್ಯ ಸಿಬ್ಬಂದಿ ನೇಮಕದ ಅಧಿಕಾರವನ್ನೂ ನೀಡಲಾಗಿಲ್ಲ.

ಮತದಾರರ ನಿರಾಸಕ್ತಿ

ವಿಧಾನಸಭೆ ಚುನಾವಣೆಗಳಿಗೆ ಹೋಲಿಸಿದರೆ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಸ್ಥಳೀಯ ನಿವಾಸಿಗಳ ಆಸಕ್ತಿಯೂ ಕಡಿಮೆಯಾಗಿದೆ. ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸರಾಸರಿ ಶೇ 45ರಷ್ಟು ನಿವಾಸಿಗಳು ಭಾಗವಹಿಸಿದ್ದರೆ, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿನ ಪಾಲ್ಗೊಳ್ಳುವಿಕೆಯ ಪ್ರಮಾಣ ಶೇ 55 ಎಂಬುದು ವಿಶೇಷ.

ನಗರಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಜನರ ಸಹಭಾಗಿತ್ವಕ್ಕೆ ಅವಕಾಶವೇ ಇಲ್ಲ. ಕೇವಲ 15 ನಗರಗಳಲ್ಲಿ ವಾರ್ಡ್‌ ಸಭೆ ನಡೆಸಲಾಗಿದ್ದು, ಎರಡೇ ನಗರಗಳಲ್ಲಿ ಪ್ರದೇಶವಾರು ಸಭೆ ಆಯೋಜಿಸುವ ಮೂಲಕ ಜನರ ಸಮಸ್ಯೆಗಳನ್ನು ತಿಳಿಯಲಾಗಿದೆ ಎಂದು ಅನಿಲ್‌ ವಿವರ ನೀಡಿದರು. ಸಂಸ್ಥೆಯ ವಿವೇಕ್‌ ಹಾಗೂ ವಚನಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry