4
ಕಳಂಕಿತರು, ಜನರ ವಿಶ್ವಾಸ ಕಳೆದುಕೊಂಡವರಿಗೆ ಬಿ ಫಾರಂ ಇಲ್ಲ

50 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್‌

Published:
Updated:
50 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್‌

ಬೆಂಗಳೂರು: ವಿಧಾನಸಭೆಯ 50 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್‌ ನೀಡಿ, ಗೆಲ್ಲಿಸಿಕೊಂಡು ಬರಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ.‌

ಹೊರಗಿನಿಂದ ಬಂದು ಪಕ್ಷ ಸೇರಿಕೊಂಡವರು ಸೇರಿದಂತೆ 46 ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಹಾಗೂ ಪಕ್ಷೇತರರಾಗಿ ಆಯ್ಕೆಯಾಗಿ, ಇತ್ತೀಚೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಒಬ್ಬರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲದೆ, 2008ರಲ್ಲಿ ಗೆದ್ದು 2013ರ ಚುನಾವಣೆಯಲ್ಲಿ ಸೋತಿದ್ದ 57ಕ್ಕೂ ಹೆಚ್ಚು ಮಾಜಿ ಶಾಸಕರು ಕಣಕ್ಕೆ ಇಳಿಯುವ ತಯಾರಿ ನಡೆಸಿದ್ದಾರೆ.

ಹಾಲಿ ಶಾಸಕರೂ ಸೇರಿದಂತೆ ಎಲ್ಲ ಆಕಾಂಕ್ಷಿಗಳ ಪೈಕಿ ಭ್ರಷ್ಟಾಚಾರದ ಕಳಂಕ ಹೊತ್ತವರು ಹಾಗೂ ಜನರ ವಿಶ್ವಾಸವನ್ನು ಕಳೆದುಕೊಂಡವರಿಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕಳಂಕಿತರಿಗೆ ಟಿಕೆಟ್ ನೀಡಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಜನರ ವಿಶ್ವಾಸ ಕಳೆದುಕೊಂಡವರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವುದು ಕಷ್ಟ.  ಟಿಕೆಟ್‌ ನೀಡುವ ಮುನ್ನ ಈ ಎರಡು ಅಂಶಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಎಷ್ಟೇ ಪ್ರಭಾವಿ ಆಗಿದ್ದು, ಎರಡು ಅಥವಾ ಮೂರು ಬಾರಿ ಗೆದ್ದಿರುವುದು ಟಿಕೆಟ್ ಪಡೆಯಲು ಅರ್ಹತೆಯಾಗುವುದಿಲ್ಲ. ಗೆಲ್ಲಲು ಸಾಧ್ಯವೇ ಇಲ್ಲದಷ್ಟು ಆಡಳಿತ ವಿರೋಧಿ ಅಲೆ ಹೊಂದಿರುವ ಹಾಲಿ ಶಾಸಕರಲ್ಲಿ 10ಕ್ಕಿಂತ ಹೆಚ್ಚಿನವರನ್ನು ಗುರುತಿಸಲಾಗಿದೆ. ಇಂತಹ ಕ್ಷೇತ್ರಗಳಲ್ಲಿ, ಸಂಘ ಪರಿವಾರದಲ್ಲಿ ದಶಕಗಳ ಕಾಲ ನಿಷ್ಠಾವಂತರಾಗಿ ಕೆಲಸ ಮಾಡಿದ, ಕ್ಷೇತ್ರ ಮಟ್ಟದಲ್ಲಿ ತಮ್ಮದೇ ಪ್ರಭಾವ ಬೆಳೆಸಿಕೊಂಡವರಿಗೆ ಟಿಕೆಟ್ ನೀಡುವ ಆಲೋಚನೆ ವರಿಷ್ಠರದ್ದಾಗಿದೆ ಎಂದು ಮೂಲಗಳು ಹೇಳಿವೆ.

ಹೀಗೆ ಮಾಡುವುದರಿಂದ ನಿಷ್ಠಾವಂತರಿಗೆ ಹಾಗೂ ಪರಿಶುದ್ಧರಿಗೆ ಟಿಕೆಟ್‌ ಕೊಟ್ಟಂತಾಗುತ್ತದೆ. ಅದರ ಜತೆಗೆ, ಆರ್‌ಎಸ್‌ಎಸ್‌ ಕಾರ್ಯಕರ್ತರು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ. ಪಕ್ಷ ಅಧಿಕಾರಕ್ಕೆ ಬಂದ ಬಳಿಕವೂ ಕಳಂಕ ರಹಿತ, ಪಾರದರ್ಶಕ ಆಡಳಿತ ನೀಡಲು ಇದು ನೆರವಾಗಬಹುದು ಎಂಬ ಲೆಕ್ಕಾಚಾರ ಕೂಡ ಇದರ ಹಿಂದಿದೆ.

2008ರಿಂದ 2013ರ ಅವಧಿಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಅನೇಕ ಸಚಿವರು, ಶಾಸಕರು ಭ್ರಷ್ಟಾಚಾರ ಹಾಗೂ ಲೈಂಗಿಕ ಹಗರಣದ ಆರೋಪಕ್ಕೆ ಗುರಿಯಾಗಿ, ಜೈಲಿಗೂ ಹೋಗಿದ್ದರು. ಈ ಕಾರಣದಿಂದಾಗಿ 2013ರಲ್ಲಿ ನಡೆದ ಚುನಾವಣೆಯಲ್ಲಿಯೇ ಕೆಲವರಿಗೆ ಪಕ್ಷ

ದಿಂದ ಟಿಕೆಟ್ ನಿರಾಕರಿಸಲಾಗಿತ್ತು. ಕೆಲವರು ಬಿಜೆಪಿ ತೊರೆದು ಕೆಜೆಪಿ, ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿ

ದಿದ್ದರು. ಈ ಪೈಕಿ ಕೆಲವರು ಗೆದ್ದಿದ್ದರು.

ಕಳಂಕದ ಆರೋಪಕ್ಕೆ ಗುರಿಯಾಗಿದ್ದ ಕೆಲವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆಯನ್ನೂ ನಡೆಸಿದ್ದಾರೆ. ಮಾಜಿ ಶಾಸಕರಾದ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಮಾಲೂರು ಕೃಷ್ಣಯ್ಯ ಶೆಟ್ಟಿ, ಹರತಾಳು ಹಾಲಪ್ಪ, ರಘುಪತಿ ಭಟ್‌ ಗುರುತರ ಆರೋಪಕ್ಕೆ ಗುರಿಯಾಗಿದ್ದರು. ಇವರೆಲ್ಲರೂ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇನ್ನೂ 15ಕ್ಕೂ ಹೆಚ್ಚು ಹಾಲಿ ಶಾಸಕರ ವಿರುದ್ಧ ಆಗ ಲೋಕಾಯುಕ್ತ ತನಿಖೆ ನಡೆದಿತ್ತು. ಹೀಗೆ ಕಳಂಕ ಹೊತ್ತವರು ಈಗ ಆರೋಪದಿಂದ ಮುಕ್ತರಾಗಿದ್ದರೆ ಮತ್ತು ಕ್ಷೇತ್ರದ ಜನರ ವಿಶ್ವಾಸ ಗಳಿಸಿಕೊಂಡು, ಗೆಲ್ಲುವ ಸಾಧ್ಯತೆ ಇದ್ದರೆ ಮಾತ್ರ ಟಿಕೆಟ್ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಇಬ್ಬರು ಸಂಸದರಿಗೆ ಮಾತ್ರ ಟಿಕೆಟ್?

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ, ಶಿವಮೊಗ್ಗ ಸಂಸದ ಬಿ.ಎಸ್. ಯಡಿಯೂರಪ್ಪ ಮತ್ತು ಬಳ್ಳಾರಿ ಸಂಸದ ಶ್ರೀರಾಮುಲುಗೆ ಮಾತ್ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಇದೆ.

ಯಾವ ಸಂಸದರಿಗೂ ಟಿಕೆಟ್‌ ನೀಡದೇ ಇರಲು ಪಕ್ಷ ಮೊದಲು ನಿರ್ಧರಿಸಿತ್ತು. ಆದರೆ, ಮುಖ್ಯಮಂತ್ರಿ ಅಭ್ಯರ್ಥಿಗೆ ಟಿಕೆಟ್ ನೀಡದೇ ಇದ್ದರೆ, ಪಕ್ಷ ಅಧಿಕಾರಕ್ಕೆ ಬಂದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂಬ ಅಪಪ್ರಚಾರವನ್ನು ಎದುರಿಸಬೇಕಾಗುತ್ತದೆ. ಹೀಗಾದಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಯಡಿಯೂರಪ್ಪಗೆ ಟಿಕೆಟ್‌ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರನ್ನು ಬಿಟ್ಟು ಯಾವುದೇ ಸಂಸದರಿಗೂ ಟಿಕೆಟ್ ಇಲ್ಲ ಎಂಬ ನಿಶ್ಚಯಕ್ಕೆ ಬರಲಾಗಿತ್ತು. ಬಳ್ಳಾರಿ ಜಿಲ್ಲೆಯ ಆನಂದ್ ಸಿಂಗ್‌ ಹಾಗೂ ನಾಗೇಂದ್ರ ಇತ್ತೀಚೆಗೆ ಕಾಂಗ್ರೆಸ್‌ ಸೇರಿದ್ದಾರೆ. ಒಂದು ವೇಳೆ ರಾಮುಲು ಅವರನ್ನು ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಸದೇ ಇದ್ದರೆ ಆ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಕಷ್ಟವಾಗಬಹುದು. ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಶ್ರೀರಾಮುಲು ಸ್ಪರ್ಧಿಸಿದರೆ ಬಳ್ಳಾರಿ ಮಾತ್ರವಲ್ಲದೆ, ಈ ಸಮುದಾಯ ಪ್ರಬಲವಾಗಿರುವ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿಗೆ ಅನುಕೂಲವಾಗಬಹುದು ಎಂಬ ತರ್ಕವೂ ಇದರ ಹಿಂದೆ ಇದೆ ಎಂದೂ ಮೂಲಗಳು ಹೇಳಿವೆ.

ಟಿಕೆಟ್‌ ಆಕಾಂಕ್ಷಿಗಳು ...

ಸದ್ಯ ಮುಕ್ತಾಯದ ಅಂಚಿನಲ್ಲಿರುವ 14ನೇ ವಿಧಾನಸಭೆಯ ಅವಧಿಯಲ್ಲಿ 42 ವಿಧಾನಸಭಾ ಕ್ಷೇತ್ರಗಳಲ್ಲಿ ಸದ್ಯ ಬಿಜೆಪಿ ಪ್ರಾತಿನಿಧ್ಯವಿದೆ. ಕೆಜೆಪಿಯಿಂದ ಗೆದ್ದಿದ್ದ ಗುರು ಪಾಟೀಲ ಶಿರವಾಳ, ಬಿಎಸ್‌ಆರ್ ಕಾಂಗ್ರೆಸ್‌ನ ಪಿ. ರಾಜೀವ್‌, ಸುರೇಶಬಾಬು, ಕಾಂಗ್ರೆಸ್ ಸಹ ಸದಸ್ಯರಾಗಿದ್ದ ಸಿ.ಪಿ. ಯೋಗೇಶ್ವರ್ ಹಾಗೂ ಪಕ್ಷೇತರರಾಗಿ ಗೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಇವರೆಲ್ಲರೂ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಮೊಳಕಾಲ್ಮುರು ಕ್ಷೇತ್ರದ ಬಿಎಸ್ಆರ್‌ ಕಾಂಗ್ರೆಸ್‌ ಸದಸ್ಯ ತಿಪ್ಪೇಸ್ವಾಮಿ ಮಾತ್ರ ಸದ್ಯ ಎಲ್ಲಿಯೂ ಗುರುತಿಸಿಕೊಂಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry