ಕೇಳಿದ್ದು ನೋಡಿದ್ದು: ಜಾತಿ– ಪಟೇಲರ ದೃಷ್ಟಿ

ಮಂಗಳವಾರ, ಮಾರ್ಚ್ 26, 2019
33 °C

ಕೇಳಿದ್ದು ನೋಡಿದ್ದು: ಜಾತಿ– ಪಟೇಲರ ದೃಷ್ಟಿ

Published:
Updated:
ಕೇಳಿದ್ದು ನೋಡಿದ್ದು: ಜಾತಿ– ಪಟೇಲರ ದೃಷ್ಟಿ

ಜೆ.ಎಚ್‌.ಪಟೇಲರು ಆಗಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ದಲಿತನಾದ ನನ್ನನ್ನು ಪ್ರಭಾವಶಾಲಿ ಖಾತೆಯಾದ ಕಂದಾಯ ಮಂತ್ರಿಯನ್ನಾಗಿ ಮಾಡಿದ್ದರು. ಇದು ಹಲವು ಜಾತಿ ಮತ್ತು ಕೋಮುಗಳ ನಾಯಕರಿಗೆ ಅಸಾಧ್ಯ ಕೋಪ ತರಿಸಿತ್ತು. ನನ್ನನ್ನು ಈ ಇಲಾಖೆಗೆ ತಂದಿದ್ದರಿಂದ ಪಟೇಲರಿಗೆ ರಾಜಕೀಯವಾಗಿ ನಷ್ಟ ಆಗಿದೆಯೇ ವಿನಾ ಲಾಭವಾಗಿಲ್ಲ ಎಂದು ಮಾಧ್ಯಮಗಳು ಬಣ್ಣಿಸಿದ್ದವು. ಹೀಗಾಗಿ ನನ್ನ ಮನಸ್ಸಿನಲ್ಲಿ ವ್ಯಾಕುಲ, ಆತಂಕ ತುಂಬಿತ್ತು.

ಇಲಾಖೆಯ ಪ್ರಮುಖ ಕಡತಗಳೊಂದಿಗೆ, ಮಂತ್ರಿಯಾದ ಮರುದಿನ ಪಟೇಲರ ನಿವಾಸಕ್ಕೆ ಹೋದೆ. ಮುಖ್ಯಮಂತ್ರಿ ನಿವಾಸದ ಮುಂದೆ ಜನ

ಸಂದಣಿ ಇತ್ತು. ಒಳಗಿನಿಂದ ಏರಿದ ಧ್ವನಿಯಲ್ಲಿ ಮಾತುಕತೆ ನಡೆದಿತ್ತು. ಬೇರೆ ಯಾವ ಜಾತಿಯೂ ನಿಮ್ಮ ಕಣ್ಣಿಗೆ ಬೀಳಲಿಲ್ಲವೇನು– ಹೀಗೆಂದು ಒಳಗಿದ್ದ ಮಹನೀಯರೊಬ್ಬರು ದಪ್ಪ ಧ್ವನಿಯಲ್ಲಿ ಸವಾಲು ಹಾಕಿದ್ದು, ಕೂಡಲೇ ಇಬ್ಬರು ಮೂವರು ಇದೇ ಅಭಿಪ್ರಾಯಕ್ಕೆ ನೇಪಥ್ಯದಲ್ಲಿ ಧ್ವನಿ ಕೂಡಿಸಿದ್ದೂ ಸ್ಪಷ್ಟವಾಗಿ ಕೇಳಿಸಿತು.‌

ಒಳಗಿದ್ದವರು ಯಾರು ಎಂದು ತಿಳಿದುಕೊಳ್ಳುವ ಅವಶ್ಯಕತೆ ನನಗಿರಲಿಲ್ಲ. ನನ್ನಿಂದಾಗಿ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡ ಪಟೇಲರನ್ನು ಅವರ ವಿರೋಧಿ

ಗಳ ಮುಂದೆ ಹೇಗೆ ಭೇಟಿಯಾಗಲಿ ಎಂಬ ಸಂದಿಗ್ಧದಲ್ಲಿ ಬಿದ್ದೆ. ಸಹಜವಾಗಿ ಮುಖ್ಯಮಂತ್ರಿಗಳ ಆಪ್ತ ಸಹಾಯಕ ನನ್ನನ್ನು ನೇರವಾಗಿ ಒಳಗೆ ಕರೆದೊಯ್ದ. ಇದರಿಂದ ಮತ್ತಷ್ಟು ಮುಜುಗರವಾಯಿತು. ಸಮಾಜದ ದೃಷ್ಟಿಯಿಂದ ಈಗಾಗಲೇ ನೊಂದಿದ್ದ ನಾನು, ತಪ್ಪಿತಸ್ಥ ಎಂದು ನನ್ನ ಬಗೆಗೆ ಷರಾ ಬರೆದುಕೊಂಡು ನಿಂತೆ.

ಆಗ ಪರಿಚಯವಾಯ್ತು ಪಟೇಲರ ವ್ಯಕ್ತಿತ್ವ: ಬಾರೋ ರಮೇಶಣ್ಣ... (ಪಟೇಲರು ಜೀವ ಇರುವವರೆಗೂ ನನ್ನನ್ನು ಪ್ರೀತಿಯಿಂದ ಕರೆಯುತ್ತಿದ್ದದ್ದು ಹೀಗೆಯೇ) ಸರಿಯಾದ ಸಮಯಕ್ಕೆ ಬಂದೀ... ಬಾ ಇಲ್ಲೇ ಕೂಡು... ಪಕ್ಕದಲ್ಲಿಯೇ ಇದ್ದ ಟೀಪಾಯಿಯ ಮೇಲೆ ಕೂಡಿಸಿದರು. ಎದುರಿಗೆ ಇದ್ದವರನ್ನು ನೋಡಲು ಭಯ ನನಗೆ. ಸಮಾಜದ ಮೇಲ್ವರ್ಗಗಳ ಈ ನಾಯಕರೆಲ್ಲಿ? ನಾನೆಲ್ಲಿ? ಎತ್ತಣ ಮಾಮರ... ದಲಿತ ಯಜ್ಞಪಶು ನಾನು. ನರಬಲಿಗೆ ಸಿದ್ಧವಾಗಬೇಕಾಗಿದ್ದ ಹರಿಜನ.

ನೀನು ಸರಿಯಾದ ಸಮಯಕ್ಕೇ ಬಂದಿದ್ದೀ, ಎಂದರೆ ನಿನ್ನ ಬಗೆಗೇ ಈಗ ಚರ್ಚೆ ಬಂದಿತ್ತು. ನಿನ್ನ ಬಗ್ಗೆ ಅಂದರೆ ಹರಿಜನರ ಬಗ್ಗೆ, ಪಟೇಲರು ನನ್ನ ಭುಜಮುಟ್ಟಿ ಹೇಳಿದರು. ನಾನು ಸಂಕೋಚದಿಂದ ಮತ್ತಷ್ಟು ಮುದುರಿಕೊಂಡೆ.

ಇಷ್ಟು ಮಂದಿ ಬೇರೆ ಬೇರೆ ಜಾತಿಯ ಎಂಎಲ್‌ಎಗಳು ಪಕ್ಷದಲ್ಲಿ ಇರುವಾಗ ಆ ಎಲ್ಲ ಜಾತಿಗಳನ್ನು ಬಿಟ್ಟು ಹರಿಜನನೊಬ್ಬನನ್ನು ನಂಬರ್‌ ಟೂ ಖಾತೆಗೆ ಆರಿಸಲು ಕಾರಣವೇನು ಎನ್ನುತ್ತಾರೆ ಈ ಜನ. ಶತಶತಮಾನಗಳಿಂದ ತುಳಿಸಿಕೊಂಡ ದಲಿತರನ್ನು ಒಮ್ಮೆಲೇ ಪಕ್ಕಕ್ಕೆ ಕೂಡಿಸಿಕೊಳ್ಳುವ ನನ್ನಂಥ ರಾಜಕಾರಣಿಯನ್ನು ಮುಂದುವರಿದ ಸಮಾಜ ಕ್ಷಮಿಸಲಾರದು. ಕ್ಯಾಕರಿಸಿ ಉಗುಳಿದರೂ ಹೆಚ್ಚಲ್ಲ. ಈ ಪಟೇಲ ಹುಚ್ಚ, ಮೂರ್ಖ ಎಂದರೆ ಆಶ್ಚರ್ಯವಿಲ್ಲ. ಗಾಂಧೀಜಿ ಬಗ್ಗೆ ಉದ್ದುದ್ದ ವ್ಯಾಖ್ಯಾನ ಮಾಡುವುದು ಸುಲಭ. ಬಸವಣ್ಣನವರನ್ನೂ ರಾಗವಾಗಿ ಉಲ್ಲೇಖಿಸುವುದು ಮತ್ತಷ್ಟು ಹಗುರ...

ಪಟೇಲರಿಗೆ ಏನು ತೋಚಿತೋ ಏನೋ ಒಂದು ನಿಮಿಷ ಮಾತು ಹಾಗೂ ವಿಚಾರಧಾರೆಯನ್ನು ನಿಲ್ಲಿಸಿದರು. ದಾರಿಜಗಳ ನಡೆಯುವಾಗ ಎದು

ರಾಳಿಯ ಕತ್ತಿನಪಟ್ಟಿ ಹಿಡಿಯುವ ರೀತಿಯಲ್ಲಿ ಹೇಳಿದರು. ‘ರೀ ಸಾವಿರಾರು ವರ್ಷ ಸಮಾಜದ ಗಂಜಳ ವರೆಸಿದ್ದಾರೆ ಈ ಜನ. ಸತ್ತ ದನಗಳನ್ನು ಎಳೆದೊಯ್ದು ನಿಮ್ಮ ಪಾಯಖಾನೆಯನ್ನೂ ತಲೆ ಮೇಲೆ ಎತ್ತಿ ಒಯ್ದಿದ್ದಾರೆ’.

ನನಗೆ ಮುಂದೇನೂ ಕಾಣಿಸಲೇ ಇಲ್ಲ. ಕಣ್ಣಿನಲ್ಲಿ ನೀರು ಮಡುಗಟ್ಟಿತ್ತು. ಎಷ್ಟೇ ನಿಯಂತ್ರಿಸಬೇಕೆಂದರೂ ಆಗಲಿಲ್ಲ. ಕಣ್ಣೀರ ಹನಿ ನಾನು ತಂದಿದ್ದ ಫೈಲಿನ ಮೇಲೆ ಟಪ್ಪೆಂದು ಬಿತ್ತು.

ಮೇಲೆ ನಿಂತಿದ್ದ ನಾಯಕರುಗಳ ಸ್ಥಿತಿಯೂ ನನ್ನಷ್ಟೇ ದಾರುಣವಾಗಿತ್ತು. ಸಮಾಧಾನ ನಿರೀಕ್ಷಿಸಿ ಬಂದಿದ್ದ ಈ ನಾಯಕ ವರ್ಗ, ಪಟೇಲರ ರಾಜ

ಕೀಯ ಸಿದ್ಧಾಂತದ ಭೋರ್ಗರೆತದ ಮುಂದೆ ತತ್ತರಿಸಿತ್ತು. ಹೀಗೆ ಬಂದಿದ್ದ ನಿಯೋಗದಲ್ಲಿ ಓರ್ವರು ಧರ್ಮಗುರುಗಳೂ ಇದ್ದಂತೆ ನನಗೆ ನೆನಪು. ನಾನಂತೂ ಈ ಮಹನೀಯರನ್ನು ಎಂದೆಂದಿಗೂ ದೂಷಿಸುವುದಿಲ್ಲ. ಬದಲಾಗಿ ಇವರನ್ನು ಸ್ಮರಿಸುತ್ತೇನೆ. ಇವರಿಂದಾಗಿ ನನಗೆ ಪಟೇಲರ ಜೀವನ ದರ್ಶನ ದೊರೆತಿತ್ತು.

–ರಮೇಶ್‌ ಜಿಗಜಿಣಗಿ (‘ಬಂಗಾರದ ಮನಸ್ಸು– ಧೀಮಂತ ವ್ಯಕ್ತಿತ್ವ’ ಲೇಖನದಲ್ಲಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry